ದರ್ಶನ್ ಹುಟ್ಟುಹಬ್ಬ; ʻಡಿ ಬಾಸ್ʼ ಅನುಪಸ್ಥಿತಿಯಲ್ಲೂ ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಲು ʻಸೆಲೆಬ್ರಿಟೀಸ್ʼ ರೆಡಿ
Darshan Birthday Celebration: ನಟ ದರ್ಶನ್ ಜೈಲಿನಲ್ಲಿದ್ದರೂ, ಅವರ ಹುಟ್ಟುಹಬ್ಬವನ್ನು (ಫೆಬ್ರವರಿ 16) ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಲು 'ಡಿ ಕಂಪನಿ' ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ಹೂವು, ಕೇಕ್ ಮತ್ತು ಪಟಾಕಿಗಳ ಅಬ್ಬರದ ಬದಲು ಅನಾಥಾಶ್ರಮಗಳಿಗೆ ಅನ್ನದಾನ, ಬಟ್ಟೆ ವಿತರಣೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲು ಕರೆ ನೀಡಿದ್ದಾರೆ.
-
ʻಚಾಲೆಜಿಂಗ್ ಸ್ಟಾರ್ʼ ದರ್ಶನ್ ಅವರು ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಹಾಗಾಗಿ, ಈ ಬಾರಿ ಹುಟ್ಟುಹಬ್ಬಕ್ಕೆ (ಫೆ.16) ಅವರ ಅನುಪಸ್ಥಿತಿ ಅಭಿಮಾನಿಗಳಿಗೆ ಕಾಡಲಿದೆ. ದರ್ಶನ್ ಜೈಲಿನಲ್ಲಿದ್ದರೂ, ಅವರ ಫ್ಯಾನ್ಸ್ ಮಾತ್ರ ಹುಟ್ಟಹಬ್ಬ ಆಚರಣೆಯನ್ನು ಮರೆತಿಲ್ಲ. ಈ ಹಿಂದೆ ದರ್ಶನ್ ಯಾವ ರೀತಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೋ, ಅದೇ ಮಾದರಿಯಲ್ಲಿ ಈ ಬಾರಿ ಕೂಡ ಹುಟ್ಟುಹಬ್ಬ ಆಚರಣೆಗೆ ಫ್ಯಾನ್ಸ್ ಸಿದ್ದರಾಗಿದ್ದಾರೆ. ದಾನ-ಧರ್ಮ ಮಾಡುವ ಮೂಲಕ ನೆಚ್ಚಿನ ಡಿ ಬಾಸ್‌ಗೆ ಗೌರವ ಸಲ್ಲಿಸಲಿದ್ದಾರೆ.
ಪತ್ರ ಬರೆದ ಡಿ ಕಂಪನಿ
ದರ್ಶನ್ ಅವರ ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪನಿಯಲ್ಲಿ ಪತ್ರವೊಂದನ್ನು ಶೇರ್ ಮಾಡಲಾಗಿದೆ. ಅದರಲ್ಲಿ ಈ ವರ್ಷ ಡಿ ಬಾಸ್ ಹುಟ್ಟುಹಬ್ಬಕ್ಕೆ ಏನು ಮಾಡಬೇಕು ಎಂಬೆಲ್ಲಾ ವಿಚಾರಗಳು ಇವೆ. "ಡಿ ಬಾಸ್ ಸೆಲೆಬ್ರಿಟಿಸ್‌ಳೇ, ನಿಮ್ಮೆಲ್ಲರಿಗೂ ಹೃದಯ ತುಂಬಿ ಧನ್ಯವಾದಗಳು. ವರ್ಷದಿಂದ ವರ್ಷಕ್ಕೆ ನೀವು ಮಾಡುತ್ತಿರುವ ಸಾಮಾಜಿಕ ಸೇವೆಯ ಹಬ್ಬ ಈಗ ಕರ್ನಾಟಕದಲ್ಲೇ ಮಾದರಿಯಾಗಿದೆ. ಅನಾಥಾಶ್ರಮಗಳಲ್ಲಿ ಊಟ ವಿತರಣೆ, ಬಟ್ಟೆ–ಪುಸ್ತಕ ದಾನ, ರಕ್ತದಾನ ಶಿಬಿರಗಳು, ವೃದ್ಧಾಶ್ರಮಗಳಲ್ಲಿ ಸೇವೆ.. ಇವೆಲ್ಲವೂ ಇಂದು ಡಿ ಬಾಸ್ ಫ್ಯಾನ್ಸ್ ಅಂತ ಹೇಳಿಸಿಕೊಂಡಿರುವ ನಮ್ಮ ಕುಟುಂಬದ ನಿಜವಾದ ಗುರುತು".
ಈ ವರ್ಷ ನಮ್ಮ ಡಿ ಬಾಸ್ ಅವರ ಅನುಪಸ್ಥಿತಿಯಲ್ಲೂ, ಅವರ ವಿಚಾರಧಾರೆ ನಮ್ಮೊಳಗೇ ಇದೆ. ಅವರು ಯಾವಾಗಲೂ ಹೇಳಿದ್ದೂ ಇದೆ. ಹೂವು, ಕೇಕ್-ಕಟೌಟ್, ಪಟಾಕಿಗಳಿಗಿಂತ ಸಮಾಜಕ್ಕೆ ಸಹಾಯ ಮಾಡಿದರೆ ನಿಜವಾದ ಸಂಭ್ರಮ ಅಂತ. ಆದ್ದರಿಂದ, ಈ ಬಾರಿ ಕೂಡ ನಮ್ಮ ಕೈಲಾದಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳೋಣ.
ನಿಮ್ಮ ತಾಲೂಕಿನ ಅನಾಥಾಶ್ರಮ, ವೃದ್ಧಾಶ್ರಮ, ವಿಶೇಷ ಮಕ್ಕಳ ಕೇಂದ್ರಗಳಲ್ಲಿ ಒಂದನ್ನು ಆಯ್ದುಕೊಳ್ಳಿ. ನಿಮ್ಮ ಸಾಮರ್ಥ್ಯಕ್ಕೆ ಸಾಧ್ಯವಾದಷ್ಟು ಊಟ, ಹಣ್ಣು, ಪುಸ್ತಕ, ಔಷಧಿ, ಸಮಯ ಏನಾದ್ರೂ ಕೊಡಿ. ದೊಡ್ಡದಾಗಿರಬೇಕೆಂಬ ಒತ್ತಡ ಬೇಡ. 10 ಮಕ್ಕಳ ನಗುವು, ಐವರು ಹಿರಿಯರ ಆಶೀರ್ವಾದ, ಇದೇ ಡಿ ಬಾಸ್‌ಗೆ ಕೊಡಬಹುದಾದ ದೊಡ್ಡ ಗೌರವ. ತಮ್ಮ ಅಭಿಮಾನಿಗಳನ್ನು ಸದಾ “ಸೆಲೆಬ್ರಿಟೀಸ್” ಅಂತ ಡಿ ಬಾಸ್ ಸದಾ ಹೇಳಿಕೊಳ್ಳುವ ಕಾರಣ, ನೀವು ಯಾವಾಗಲೂ ಕಷ್ಟಕಾಲದಲ್ಲೂ ಜೊತೆಗೆ ನಿಂತಿದ್ದೀರಿ, ಸಮಾಜದ ಜೊತೆ ಕೂಡ ನಿಂತಿದ್ದೀರಿ ಎಂದಷ್ಟೇ.
ದರ್ಶನ್ ಅಭಿಮಾನಿಗಳ ಪೋಸ್ಟ್
ಇದೇ ರೀತಿಯಲ್ಲಿ ನಿಮ್ಮ ಹೆಮ್ಮೆಯ ಸಾಮಾಜಿಕ ಸೇವೆಯನ್ನು ಮುಂದುವರೆಸಿ, ಕರ್ನಾಟಕಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವ ಜವಾಬ್ದಾರಿ ನಮ್ಮದಾಗಿದೆ. ನಿಮ್ಮ ಒಗ್ಗಟ್ಟು, ನಿಮ್ಮ ಮಾನವೀಯತೆ, ನಿಮ್ಮ ಸೇವೆ, ಇವೇ ನಮ್ಮ ಡಿ ಬಾಸ್ ಅವರ ನಿಜವಾದ ಶಕ್ತಿ. ನಮ್ಮ ಕೆಲಸ ಮಾತಾಡಲಿ, ನಮ್ಮ ಸೇವೆ ಡಿ ಬಾಸ್ ನ ಮೇಲಿನ ಪ್ರೀತಿಯನ್ನು ಸದಾ ಜೀವಂತವಾಗಿಡಲಿ.