ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಣ್ಣ ಹುಟ್ಟುಹಬ್ಬಕ್ಕೆ 'ಲಕ್ಷ್ಮೀಪುತ್ರ' ಚಿತ್ರತಂಡದ ಸ್ಪೆಷಲ್ ಗಿಫ್ಟ್: ಸರಿಗಮಪ ಪ್ರತಿಭೆಗಳಿಗೆ ʻಇನ್ಮೇಲೆʼ ಸಾಂಗ್‌ನಲ್ಲಿ ಚಾನ್ಸ್‌

ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ 'ಲಕ್ಷ್ಮೀಪುತ್ರ' ಚಿತ್ರದ 'ಇನ್ಮೇಲೆ' ಎಂಬ ಮಂಡ್ಯ ಸೊಗಡಿನ ಪ್ರೇಮಗೀತೆಯನ್ನು ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಎ.ಪಿ. ಅರ್ಜುನ್ ಸಾಹಿತ್ಯ ಹಾಗೂ ಅರ್ಜುನ್ ಜನ್ಯ ಸಂಗೀತದ ಈ ಹಾಡಿನ ಮೂಲಕ 'ಸರಿಗಮಪ' ಖ್ಯಾತಿಯ ದರ್ಶನ್ ಮೇಳವಂಕಿ ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

Chikkanna: ಲಕ್ಷ್ಮೀಪುತ್ರ ಚಿತ್ರದಲ್ಲಿ ‌ʻಸರಿಗಮಪʼ ಪ್ರತಿಭೆಗಳಿಗೆ ಚಾನ್ಸ್

-

Avinash GR
Avinash GR Jun 23, 2026 3:01 PM

ಸ್ಯಾಂಡಲ್‌ವುಡ್‌ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರ 'ಲಕ್ಷ್ಮೀಪುತ್ರ'ದ ಕಡೆಯಿಂದ ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಕೊಡುಗೆಯೊಂದು ಸಿಕ್ಕಿದೆ. ಚಿತ್ರದ 'ಇನ್ಮೇಲೆ' ಹಾಡನ್ನು ಚಿತ್ರರಂಗದ 8 ಜನ ಖ್ಯಾತ ನಟಿಯರು ಸೇರಿ ಅನಾವರಣಗೊಳಿಸಿದ್ದಾರೆ. ಆ ಮೂಲಕ ಚಿಕ್ಕಣ್ಣನ ಬರ್ತ್‌ಡೇಯನ್ನು ವಿಶೇಷವಾಗಿಸಿದ್ದಾರೆ.

ನಿರೀಕ್ಷೆಯ ಭಯವಿತ್ತು, ಆದ್ರೆ ಹಾಡು ಅದ್ಭುತವಾಗಿದೆ

ಹಾಡಿನ ಬಿಡುಗಡೆ ಬಳಿಕ ಮಾತನಾಡಿದ ನಟ ಚಿಕ್ಕಣ್ಣ, "ಎ.ಪಿ. ಅರ್ಜುನ್ ಸಾಹಿತ್ಯ ಬರೆಯುತ್ತಾರೆ ಮತ್ತು ಅರ್ಜುನ್ ಜನ್ಯ ಮ್ಯೂಸಿಕ್ ಮಾಡ್ತಾರೆ ಎಂದಾಗ ನನಗೆ ಒಂದು ಕಡೆ ಭಯವಿತ್ತು. ಏಕೆಂದರೆ, ನನ್ನ ಮೊದಲ ಚಿತ್ರದ ಸೂಪರ್ ಹಿಟ್ ಗೀತೆ 'ನನಗೆ ನೀನು' ಕೊಟ್ಟ ಜೋಡಿ ಇದು. ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿದೆ ಎಂದಾಗ ಆ ನಿರೀಕ್ಷೆಯನ್ನು ತಲುಪುತ್ತೇವಾ ಎಂಬ ಆತಂಕವಿತ್ತು. ಆದರೆ ಈಗ ಹಾಡು ಅದ್ಭುತವಾಗಿ ಮೂಡಿಬಂದಿದ್ದು, ಆ ನಿರೀಕ್ಷೆಯನ್ನು ತಲುಪಿದ್ದೇವೆ. ಸಿನಿಮಾದ ಮೊದಲ ಆಹ್ವಾನ ಪತ್ರಿಕೆ ಎಂದರೆ ಅದು ಹಾಡು. ನಮ್ಮ ಚಿತ್ರದ ಆಡಿಯೋ ಹಕ್ಕನ್ನು ಡಿಬೀಟ್ಸ್ ಕಂಪನಿಯು ಅತ್ಯುತ್ತಮ ಮೊತ್ತಕ್ಕೆ ಕೊಂಡುಕೊಂಡಿರುವುದು ನಮಗೆ ದೊಡ್ಡ ಖುಷಿ ತಂದಿದೆ" ಎಂದರು.

Chikkanna: ಚಿಕ್ಕಣ್ಣ ಮದುವೆ ಫಿಕ್ಸ್; ಲವ್ವಾ? ಅರೇಂಜ್ಡ್ ಮ್ಯಾರೇಜಾ? ನಟ ಹೇಳಿದ್ದೇನು?

ಮಂಡ್ಯ ಸೊಗಡಿನ ಅಪ್ಪಟ ಕನ್ನಡ ಪ್ರೇಮಗೀತೆ

ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ಎ.ಪಿ. ಅರ್ಜುನ್, "ನಾವು ದಿನನಿತ್ಯ ಮಾತನಾಡುವ ಪದಗಳಿಂದಲೇ ಹಾಡು ಶುರುವಾಗಬೇಕು ಮತ್ತು ಅದು ಎಲ್ಲರ ಬಾಯಲ್ಲೂ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಪ್ರೇಮಿಗಳು ಮಾತನಾಡುವಾಗ ಸಾಮಾನ್ಯವಾಗಿ 'ಇನ್ಮೇಲೆ, ಆಮೇಲೆ' ಎನ್ನುತ್ತಾರೆ. ಅದನ್ನೇ ಇಟ್ಟುಕೊಂಡು ಬರೆದ ಮಂಡ್ಯ ಸೊಗಡಿನ ಅಪ್ಪಟ ಕನ್ನಡ ಹಾಡು ಇದು. ಈ ಹಾಡಿನ ಮೂಲಕ 'ಸರಿಗಮಪ' ರನ್ನರ್ ಅಪ್, ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ದರ್ಶನ್ ಮೇಳವಂಕಿ ಅವರು ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇವರ ಜೊತೆಗೆ ಪೃಥ್ವಿ ಭಟ್ ಧ್ವನಿಯಾಗಿದ್ದಾರೆ" ಎಂದು ತಿಳಿಸಿದರು.

Actor Chikkanna: ಹಸೆಮಣೆ ಏರಲು ಸಜ್ಜಾದ ನಟ ಚಿಕ್ಕಣ್ಣ; ಹುಡುಗಿ ಯಾರು? ಮದುವೆ ಯಾವಾಗ?

ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್!

'ಲಕ್ಷ್ಮೀಪುತ್ರ' ಚಿತ್ರದ ಮೂಲಕ ಯುವ ನಟಿ ವಂದಿತಾ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿಕ್ಕಣ್ಣ ಹಾಗೂ ವಂದಿತಾ ಜೋಡಿಯಾಗಿ 'ಇನ್ಮೇಲೆ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಹಿರಿಯ ನಟಿ ತಾರಾ, ಕುರಿ ಪ್ರತಾಪ್ ಮತ್ತು ಧರ್ಮಣ್ಣ ಕಡೂರು ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಸದ್ಯ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಚಿತ್ರತಂಡವು ಮುಂಬರುವ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾವನ್ನು ರಿಲೀಸ್‌ ಮಾಡಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.

ಎ. ಪಿ. ಅರ್ಜುನ್ ನಿರ್ಮಾಣದ ಸಿನಿಮಾ

'ಎ.ಪಿ. ಅರ್ಜುನ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಎ.ಪಿ. ಅರ್ಜುನ್ ಅವರ ಪತ್ನಿ ಅನ್ನಪೂರ್ಣ ಅರ್ಜುನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ರವಿಕಿರಣ್ ಗೌಡ ಸಹ-ನಿರ್ಮಾಣದಲ್ಲಿ ಸಾಥ್ ನೀಡಿದ್ದು, ಮಾಜಿ ಸಚಿವ ಸಂತೋಷ್ ಲಾಡ್ ಅವರ ಆಶೀರ್ವಾದ ಈ ಚಿತ್ರಕ್ಕಿದೆ. ಎ.ಪಿ. ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಸ್ವಾಮಿ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿದೆ.