ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಚಂದ್ರಹಾಸ’ ಚಿತ್ರದ ಮೂಲಕ ಹೀರೋ ಆದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ಹಿರಿಯೂರು; ಭರವಸೆ ಮೂಡಿಸಿದ ಟ್ರೇಲರ್, ಅಕ್ಟೋಬರ್ 23ಕ್ಕೆ ರಿಲೀಸ್!

ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಹಾಸ್ಯ ನಟ ಹರೀಶ್ ಹಿರಿಯೂರು ಅವರು ʻಚಂದ್ರಹಾಸʼ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ರಂಗಭೂಮಿ ಪ್ರತಿಭೆಗಳ ಸಂಗಮದಲ್ಲಿ ಆನಂದ್ ಕಲಕಬಂಡಿ ನಿರ್ದೇಶಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಕ್ಟೋಬರ್ 23 ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.

ʻಚಂದ್ರಹಾಸʼ ಚಿತ್ರದ ಮೂಲಕ ಹೀರೋ ಆದ ʻಕಾಮಿಡಿ ಕಿಲಾಡಿಗಳುʼ ಹರೀಶ್ ಹಿರಿಯೂರು

-

Avinash GR
Avinash GR Sep 22, 2026 8:03 PM

‘ಚಂದ್ರಹಾಸ’ ಎಂದಾಕ್ಷಣ ಕನ್ನಡಿಗರಿಗೆ ಥಟ್ಟನೆ ನೆನಪಾಗುವುದು ವರನಟ ಡಾ. ರಾಜ್‌ಕುಮಾರ್ ಅಭಿನಯದ ಕ್ಲಾಸಿಕ್ ಸಿನಿಮಾ. ಇದೀಗ ಅದೇ ಶೀರ್ಷಿಕೆಯಡಿ ಮತ್ತೊಂದು ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ಹರೀಶ್ ಹಿರಿಯೂರು ಈ ಚಿತ್ರದ ಮೂಲಕ ನಾಯಕ ನಟನಾಗಿ ಚಂದನವನದಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ. ಆನಂದ್ ಕಲಕಬಂಡಿ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ‘ಚಂದ್ರಹಾಸ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿನಿಮಾ ಅಕ್ಟೋಬರ್ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಾಯಕನಾಗಿ ಹರೀಶ್ ಹಿರಿಯೂರು ಹೊಸ ಇನಿಂಗ್ಸ್

ಚಿತ್ರತಂಡದಲ್ಲಿ ಬಹುತೇಕ ಎಲ್ಲರೂ ಹೊಸಬರಾಗಿದ್ದರೂ ಅಭಿನಯ ಕ್ಷೇತ್ರಕ್ಕೆ ಯಾರೂ ಅಪರಿಚಿತರಲ್ಲ. ರಂಗಭೂಮಿಯ ಗರಡಿಯಲ್ಲಿ ಪಳಗಿದ ಪ್ರತಿಭೆಗಳೇ ಒಟ್ಟಾಗಿ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ರಂಗಭೂಮಿ ಅನುಭವದೊಂದಿಗೆ ಟಿವಿ ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದ ಹರೀಶ್ ಹಿರಿಯೂರು ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಗೆಳೆಯ ಹರೀಶ್ ಬೆಂಬಲಕ್ಕೆ ಕಾಮಿಡಿ ಕಲಾವಿದರಾದ ಹುಲಿ ಕಾರ್ತಿಕ್, ನವಾಜ್ ಸೇರಿದಂತೆ ರಂಗಭೂಮಿ ಹಾಗೂ ಕಿರುತೆರೆಯ ಹಲವರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಎಲ್ಲರ ಮನಸ್ಸನ್ನು ತಟ್ಟಲಿದೆ

‘ಚಂದ್ರಹಾಸ’ ಚಿತ್ರವು ‘ಚಂದ್ರ’ ಎನ್ನುವ ಸ್ನೇಹಿತ ಜೊತೆಯಲ್ಲಿದ್ದರೆ ಜೀವನವೆಲ್ಲ ನಗುವಿನಿಂದ ಕೂಡಿರುತ್ತದೆ ಎಂಬ ಸರಳ ಸುಂದರ ಎಳೆಯನ್ನಿಟ್ಟುಕೊಂಡು ಸಾಗುತ್ತದೆ. ಹಾಸ್ಯ, ಅಪ್ಪಟ ಸ್ನೇಹ, ಕೌಟುಂಬಿಕ ಭಾವನೆಗಳು ಹಾಗೂ ಮಧ್ಯಮ ವರ್ಗದ ಜನರ ಬದುಕಿನ ಜಂಜಾಟಗಳ ಹೂರಣವೇ ಚಿತ್ರದಲ್ಲಿದೆ. ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಆನಂದ್, "ಈ ಕಥೆ ಕಾಲ್ಪನಿಕವಾಗಿ ಹುಟ್ಟಿದ್ದಲ್ಲ, ನಿತ್ಯ ಜೀವನದಲ್ಲಿ ನಾವು ಕಾಣುವ ನೈಜ ಪಾತ್ರಗಳನ್ನೇ ಆಧರಿಸಿ ಹೆಣೆಯಲಾಗಿದೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ಈ ಸಿನಿಮಾ ಕನೆಕ್ಟ್ ಆಗಲಿದ್ದು, ಎಲ್ಲರ ಮನಸ್ಸನ್ನು ತಟ್ಟಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comedy Khiladigalu: ಝೀ ಕನ್ನಡದಲ್ಲಿ ವೀಕ್ಷಕರಿಗೆ ನಗೆಯ ರಸ ದೌತಣ: ಕಾಮಿಡಿ ಕಿಲಾಡಿಗಳು ಶೋ ಶೀಘ್ರದಲ್ಲೇ ಪ್ರಾರಂಭ!

ಹರೀಶ್‌ಗೆ ರಂಗರತ್ನ ಬಿರುದು

ನಾಯಕ ಹರೀಶ್ ಹಿರಿಯೂರು ತಮ್ಮ ಅನುಭವ ಹಂಚಿಕೊಂಡು, "ರಂಗಭೂಮಿಯ ಹಿನ್ನೆಲೆಯಿಂದ ಬಂದ ನನಗೆ ಈ ಚಿತ್ರದ ಮೂಲಕ ‘ರಂಗರತ್ನ’ ಎಂಬ ಬಿರುದು ನೀಡಿರುವುದು ಅತ್ಯಂತ ಸಂತಸ ತಂದಿದೆ. ನಿರ್ದೇಶಕರು ಹೀರೋ ಪಾತ್ರ ಎಂದಾಗ ನಾನು ಕಾಮಿಡಿ ಮಾಡಿಕೊಂಡೇ ಇರುತ್ತೇನೆ ಎಂದಿದ್ದೆ. ಆದರೆ ಅವರು ವಿಶ್ವಾಸವಿಟ್ಟು ಕಥೆ ಮಾಡಿದರು. ನಾವೆಲ್ಲರೂ ಖುಷಿಯನ್ನು ಸುಲಭವಾಗಿ ಹಂಚಿಕೊಳ್ಳುತ್ತೇವೆ, ಆದರೆ ನೋವನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದಿಲ್ಲ. ಅಂತಹ ಸೂಕ್ಷ್ಮ ನೋವು-ನಲಿವಿನ ಕಥೆ ಹೊಂದಿರುವ ಈ ಸಿನಿಮಾ ಖಂಡಿತ ಪ್ರತಿಯೊಬ್ಬರಿಗೂ ಆಪ್ತವಾಗಲಿದೆ" ಎಂದರು.

ಚಿತ್ರದ ನಾಯಕಿ ಛಾಯಾಶ್ರೀ ಮಾತನಾಡಿ, "ಚಿತ್ರದಲ್ಲಿ ನಾನು ಶ್ರೀದೇವಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದರಲ್ಲಿ ಪಾಸಿಟಿವ್ ಜೊತೆಗೆ ಕೊಂಚ ನೆಗೆಟಿವ್ ಛಾಯೆಯೂ ಇರಲಿದೆ. ನಾನು ಮಂಡ್ಯ ರಮೇಶ್ ಅವರ ‘ನಟನಾ’ ರಂಗಶಾಲೆಯಿಂದ ಬಂದವಳು. ಆ ರಂಗಭೂಮಿ ಅನುಭವ ಈ ಪಾತ್ರ ಮಾಡಲು ಬಹಳ ಸಹಕಾರಿಯಾಯಿತು" ಎಂದರು.

‘ಅಮರಶ್ರೀ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ಬಸವಂತಗೌಡ ಪಾಟೀಲ್ ಚಿತ್ರವನ್ನು ನಿರ್ಮಿಸಿದ್ದು, ಬಸಣ್ಣ ಕಮತ್ತರ್ ಸಹ-ನಿರ್ಮಾಪಕರಾಗಿದ್ದಾರೆ. ಹರೀಶ್ ಹಿರಿಯೂರು ಹಾಗೂ ಛಾಯಾಶ್ರೀ ಉಮೇಶ್ ಜೋಡಿಯ ಜೊತೆಗೆ ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲಾ, ಜ್ಯೋತಿ ಮಂಗಳೂರು ಮತ್ತು ಕಳಕಪ್ಪ ತಲವಾರ್ ಪ್ರಮುಖ ಪಾತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ತಾಂತ್ರಿಕವಾಗಿ ಪೂರ್ಣಚಂದ್ರ ಅವರ ಸಂಗೀತ ಸಂಯೋಜನೆ, ಚೇತನ್ ಶರ್ಮಾ ಅವರ ಛಾಯಾಗ್ರಹಣ ಹಾಗೂ ವಿ. ಗಿರೀಶ್ ಎಂ.ಸಿ. ಹಳ್ಳಿ ಅವರ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡಿರುವ ಈ ಚಿತ್ರ, ಟ್ರೇಲರ್‌ನಿಂದ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.