ನಟ ಅರುಣ್ ಸಾಗರ್ ಮಗಳು ಅದಿತಿಗೆ ಜೋಡಿಯಾದ ಪೂರ್ಣ ಮೈಸೂರು; ಡಾಲಿ ನಿರ್ಮಾಣದ ʻಹೆಗ್ಗಣ ಮುದ್ದುʼ ಟ್ರೇಲರ್ ಹೇಗಿದೆ?
Heggana Muddu Trailer: ʻಹೆಗ್ಗಣ ಮುದ್ದುʼ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಡಾಲಿ ಧನಂಜಯ್ ನಿರ್ಮಾಣದ ಈ ಚಿತ್ರದಲ್ಲಿ ನವಜೋಡಿಯ ಕೌಟುಂಬಿಕ ಹಾಸ್ಯ ಹಾಗೂ ರೋಚಕ ತಿರುವುಗಳನ್ನು ಅದ್ಭುತವಾಗಿ ಹೆಣೆಯಲಾಗಿದೆ. ಪೂರ್ಣ ಮೈಸೂರು ಅವರಿಗೆ ನಾಯಕಿಯಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸಾಥ್ ನೀಡಿದ್ದಾರೆ.
-
ನಟ ರಾಕ್ಷಸ ಡಾಲಿ ಧನಂಜಯ್ ಅವರ ‘ಡಾಲಿ ಪಿಚ್ಚರ್ಸ್’ ಬ್ಯಾನರ್‌ನಡಿ ಮೂಡಿಬಂದಿರುವ ಬಹುನಿರೀಕ್ಷಿತ ‘ಹೆಗ್ಗಣ ಮುದ್ದು’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಪಕ್ಕಾ ಮನರಂಜನೆ ಹಾಗೂ ನಗುವಿನ ಕಚಗುಳಿ ಇಡುವ ದೃಶ್ಯಗಳಿಂದ ಕೂಡಿರುವ ಈ ಟ್ರೇಲರ್ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಗಳಿಸುತ್ತಿದ್ದು, ಸೆಪ್ಟೆಂಬರ್ 25ರಂದು ಈ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ.
ಅನಿರೀಕ್ಷಿತ ತಿರುವುಗಳುಳ್ಳ ಕಥಾಹಂದರ
ಕನ್ನಡದ ಜನಪ್ರಿಯ ಗಾದೆಮಾತಾದ "ಹೆತ್ತವರಿಗೆ ಹೆಗ್ಗಣ ಮುದ್ದು" ಎಂಬುದನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡು ರೂಪುಗೊಂಡಿರುವ ಈ ಚಿತ್ರವು, ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಯ ಸಂಬಂಧಗಳ ಸುತ್ತ ಸುತ್ತುತ್ತದೆ. ಕೌಟುಂಬಿಕ ಭಾವನೆಗಳು, ಹಾಸ್ಯ ಹಾಗೂ ಅನಿರೀಕ್ಷಿತ ತಿರುವುಗಳನ್ನೊಳಗೊಂಡ ಥ್ರಿಲ್ಲರ್ ಅಂಶಗಳು ಈ ಕಥಾಹಂದರದಲ್ಲಿದ್ದು, ಇಡೀ ಕುಟುಂಬ ಒಟ್ಟಾಗಿ ಕುಳಿತು ಆನಂದಿಸುವಂತೆ ಚಿತ್ರವನ್ನು ಕಟ್ಟಿಕೊಡಲಾಗಿದೆ.
Daali Dhananjaya: ಇದೇ ನನ್ನ ಕೊನೇ ಸಿನಿಮಾ ಆಗಬಹುದು! ಡಾಲಿ ಧನಂಜಯ್ ಬೇಸರ
ನಾಯಕಿಯಾದ ಅರುಣ್ ಸಾಗರ್ ಮಗಳು
ಈ ಚಿತ್ರದ ಮೂಲಕ ನವ ಪ್ರತಿಭೆ ಅವಿನಾಶ್ ಬಳೆಕ್ಕಳ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಭರ್ಜರಿ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರತಿಭಾವಂತ ನಟ ಪೂರ್ಣ ಮೈಸೂರು (ಪೂರ್ಣಚಂದ್ರ ಮೈಸೂರು) ನಾಯಕನಾಗಿ ನಟಿಸಿದ್ದು, ತಮ್ಮ ಎಂದಿನ ನೈಜ ಅಭಿನಯದ ಮೂಲಕ ಗಮನಸೆಳೆದಿದ್ದಾರೆ. ಇವರಿಗೆ ನಾಯಕಿಯಾಗಿ ಖ್ಯಾತ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಸಾಥ್ ನೀಡಿದ್ದಾರೆ. ಈ ಹಿಂದೆ ಶಿವರಾಜ್‌ಕುಮಾರ್ ಅಭಿನಯದ 'ವೇದ' ಚಿತ್ರದ 'ಕನಕ' ಪಾತ್ರದಲ್ಲಿ ಅಬ್ಬರಿಸಿ, ಕೆಜಿಎಫ್ ಚಾಪ್ಟರ್ 2 ಸೇರಿದಂತೆ ಹಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಪ್ರಶಸ್ತಿ ಬಾಚಿಕೊಂಡಿದ್ದ ಅದಿತಿ, ಈ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಸೆ.25ರಂದು ʻಹೆಗ್ಗಣ ಮುದ್ದುʼ ರಿಲೀಸ್
ತಾಂತ್ರಿಕವಾಗಿಯೂ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಕಾರ್ತಿಕ್ ಚೆನ್ನೂಜಿ ರಾವ್ ಹಾಗೂ ರೋಣದ ಬಕ್ಕೇಶ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ನಚಿಕೇತ್ ಬಳೆಕ್ಕಳ ಅವರ ಛಾಯಾಗ್ರಹಣ ಚಿತ್ರದ ಪ್ರತಿ ಫ್ರೇಮ್‌ಗೂ ಜೀವ ತುಂಬಿದೆ. ಸದ್ಯ ರಿಲೀಸ್ ಆಗಿರುವ ಕಂಪ್ಲೀಟ್ ಫನ್ ಎಂಟರ್‌ಟೈನಿಂಗ್ ಟ್ರೇಲರ್ ಸಿನಿಪ್ರಿಯರಲ್ಲಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು, ಸೆಪ್ಟೆಂಬರ್ 25ರಂದು ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಕಾತರದಿಂದ ಕಾಯುತ್ತಿದೆ.