BookMyShow: ʻದಿ ಡೆವಿಲ್ʼ ಹಾದಿಯನ್ನೇ ತುಳಿದ ʻಮಾರ್ಕ್ʼ - ʻ45ʼ ಚಿತ್ರತಂಡಗಳು; ಈ ಬೆಳವಣಿಗೆ ಬಗ್ಗೆ ನಿಮಗೆ ಏನನ್ನಿಸುತ್ತೆ?
BookMyShow Rating: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸಿನಿಮಾಗಳ ರೇಟಿಂಗ್ ಮತ್ತು ವಿಮರ್ಶೆಗಳ ಕುರಿತು ಹೊಸ ಸಂಚಲನವೊಂದು ಶುರುವಾಗಿದೆ. ದರ್ಶನ್ ಅವರ 'ದಿ ಡೆವಿಲ್' (The Devil) ಚಿತ್ರತಂಡ ಅನುಸರಿಸಿದ ಹಾದಿಯನ್ನೇ ಈಗ ಶಿವರಾಜ್‌ಕುಮಾರ್ ಅವರ '45' ಮತ್ತು ಸುದೀಪ್ ಅವರ 'ಮಾರ್ಕ್' (Mark) ತಂಡಗಳು ಅನುಸರಿಸಿವೆ.
-
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ʻ45ʼ ಮತ್ತು ಕಿಚ್ಚ ಸುದೀಪ್ ಅವರ ʻಮಾರ್ಕ್ʼ ಸಿನಿಮಾಗಳು ಡಿಸೆಂಬರ್ 25ರಂದು ಒಟ್ಟೊಟ್ಟಿಗೆ ತೆರೆಗೆ ಬಂದಿವೆ. ಎರಡು ಚಿತ್ರಗಳಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಮಧ್ಯೆ ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅವರ ʻದಿ ಡೆವಿಲ್ʼ ಸಿನಿಮಾ ತಂಡ ಪಾಲಿಸಿದ ತಂತ್ರವನ್ನೇ ಇದೀಗ ʻ45ʼ ಹಾಗೂ ʻಮಾರ್ಕ್ʼ ಚಿತ್ರತಂಡಗಳು ಫಾಲೋ ಮಾಡಿವೆ. ಏನದು? ಮುಂದೆ ಓದಿ.
ಕೋರ್ಟ್‌ನಿಂದ ಸ್ಟೇ ತಂದ ಚಿತ್ರತಂಡಗಳು
ಹೌದು, ದರ್ಶನ್ ಅವರ ಡೆವಿಲ್ ಸಿನಿಮಾಗೆ ಬುಕ್ ಮೈ ಶೋನಲ್ಲಿ ರಿವ್ಯೂ ರೇಟಿಂಗ್ ಕೊಡುವಂತೆ ಇರಲಿಲ್ಲ. "ನ್ಯಾಯಾಲಯದ ಆದೇಶದಂತೆ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ" ಎಂದು ಬುಕ್ ಮೈ ಶೋ ಆಪ್‌ನಲ್ಲಿ ಬರೆದುಕೊಂಡಿತ್ತು. ಇದೀಗ ಮಾರ್ಕ್ ಮತ್ತು 45 ಸಿನಿಮಾಗಳು ಇದೇ ತಂತ್ರವನ್ನು ಅಳವಡಿಸಿಕೊಂಡಿವೆ. ಈ ಚಿತ್ರಗಳಿಗೂ ರಿವ್ಯೂ ರೇಟಿಂಗ್ ಕೊಡುವಂತಿಲ್ಲ. ಬುಕ್ ಮೈಶೋನಲ್ಲಿ ಈ ಸಿನಿಮಾಗಳ ಪೇಜ್ ಓಪನ್ ಮಾಡಿದರೆ, ಅಲ್ಲಿ ಚಿಕ್ಕದಾಗಿ "ನ್ಯಾಯಾಲಯದ ಆದೇಶದಂತೆ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ" ಎಂದು ಬರೆಯಲಾಗಿದೆ. ದುಡ್ಡು ಕೊಟ್ಟು ಸಿನಿಮಾಗಳಿಗೆ ನೆಗೆಟಿವ್ ರೇಟಿಂಗ್ ಕೊಡಿಸುವುದು, ನೆಗೆಟಿವ್ ರಿವ್ಯೂ ಬರೆಸುವ ಸಂಸ್ಕೃತಿ ಆರೋಪ ಕೇಳಿಬಂದಿದೆ. ಆ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
Mark Review: ಮ್ಯಾಕ್ಸಿಮಮ್ ಮಾಸ್‌ನೊಂದಿಗೆ ʻಮಾರ್ಕ್ʼ ಮಾರಾಮಾರಿ; ಸುದೀಪ್ ಅಭಿಮಾನಿಗಳಿಗೆ ಇದು ಹಬ್ಬ ಕಣ್ರೀ!
ಅಂದು ದಿನಕರ್ ಹೇಳಿದ್ದೇನು?
ಡೆವಿಲ್ ಸಿನಿಮಾಗೆ ಬುಕ್ ಮೈ ಶೋನಲ್ಲಿ ರಿವ್ಯೂ ಮಾಡದಂತೆ ಕೋರ್ಟ್‌ನಿಂದ ಆರ್ಡರ್ ತಂದಿದ್ದರ ಬಗ್ಗೆ ಮಾತನಾಡಿದ್ದ ದರ್ಶನ್ ಸಹೋದರ ದಿನಕರ್ ತೂಗುದೀಪ, "ಬುಕ್ ಮೈ ಶೋನಲ್ಲಿ ನೆಗೆಟಿವ್ ವಿಮರ್ಶೆ ಮಾಡುತ್ತಾರೆ. ಹಾಗಾಗಿ, ರಿವ್ಯೂ ಬಾಕ್ಸ್ ಅನ್ನು ಆಫ್ ಮಾಡಿಸಿದ್ದೇವೆ. ಯಾಕೆಂದರೆ, ಒಂದಷ್ಟು ಮಂದಿ ದುಡ್ಡು ಕೊಟ್ಟು ನೆಗೆಟಿವ್ ರೇಟಿಂಗ್ ಕೊಡಿಸುವುದು, ನೆಗೆಟಿವ್ ರಿವ್ಯೂ ಬರೆಸೋದು ಮಾಡುತ್ತಿದ್ದರು. ಈ ಮೂಲಕ ಸಿನಿಮಾ ಸಂಸ್ಕೃತಿಯನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಬೇಕಂತಲೇ ಕೆಲವರು ನೆಗೆಟಿವ್ ಕಾಮೆಂಟ್ಸ್ ಹಾಕಿಸುತ್ತಾರೆ" ಎಂದು ಹೇಳಿದ್ದರು.
ಸದ್ಯಕ್ಕಂತೂ ಇಂತಹದ್ದೊಂದು ಬೆಳವಣಿಗೆ ಬಹಳ ಚರ್ಚೆಗೆ ಕಾರಣವಾಗಿದೆ. ಕಷ್ಟಪಟ್ಟು ಒಂದು ತಂಡ ಸಿನಿಮಾ ಮಾಡಿದಾಗ, ಅದನ್ನು ಹಾಳು ಮಾಡಲೆಂದೇ ಒಂದಷ್ಟು ಗುಂಪುಗಳು ರೆಡಿಯಾಗುತ್ತವೆ ಎಂದರೆ, ಸಿನಿಮಾ ಮಾಡುವುದಕ್ಕೇ ಭಯಡಪಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದು ಖಚಿತ. ಎಲ್ಲರೂ ಹೀಗೆ ಸಿನಿಮಾಗಳನ್ನು ನೆಗೆಟಿವ್ ರಿವ್ಯೂ, ನೆಗೆಟಿವ್ ರೇಟಿಂಗ್‌ನಿಂದ ಕಾಪಾಡಿಕೊಳ್ಳಲು ಕೋರ್ಟ್ ಮೊರೆ ಹೋಗಬೇಕಾದ ಸಂದರ್ಭ ಎದುರಾಗುತ್ತದೆ.
ಮಾರ್ಕ್ ಮತ್ತು 45 ಸಿನಿಮಾಗಳು ಹೇಗಿವೆ?
45 ಸಿನಿಮಾಗೆ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದು, ಅವರ ಮೊದಲ ಪ್ರಯತ್ನವಾಗಿದೆ. ಸಾಕಷ್ಟು ಮೆಚ್ಚುಗೆ ಸಿಕ್ಕಿದ್ದು, ಶಿವರಾಜ್‌ಕುಮಾರ್ ಅವರ ಅಭಿನಯದ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಉಪೇಂದ್ರ, ರಾಜ್ ಬಿ ಶೆಟ್ಟಿಗೂ ಇಲ್ಲಿ ಭಿನ್ನ ಪಾತ್ರಗಳು ಸಿಕ್ಕಿವೆ. ಇನ್ನು, ಮ್ಯಾಕ್ಸ್ ಬಳಿಕ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನಲ್ಲಿ ಮಾರ್ಕ್ ಸಿನಿಮಾ ಮೂಡಿಬಂದಿದ್ದು, ಈ ಚಿತ್ರವನ್ನು ನೋಡಿದವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಇದು ಸುದೀಪ್ ಅಭಿಮಾನಿಗಳಿಗೆ ಹಬ್ಬ ಎನ್ನಲಾಗಿದೆ.