ಬಾಲಯ್ಯ, ಶಾರುಖ್ ಖಾನ್ ಬಳಿಕ ʻಜೈಲರ್ 2ʼ ಚಿತ್ರಕ್ಕೆ ಶಾಕ್ ನೀಡಿದ ಪವನ್ ಕಲ್ಯಾಣ್; ರಜನಿಕಾಂತ್ ಸಿನಿಮಾಕ್ಕೆ ಗೆಸ್ಟ್ ರೋಲ್‌ನದ್ದೇ ಸಮಸ್ಯೆ!
Jailer 2 Guest Role Problem: ಜೈಲರ್ 2 ಸಿನಿಮಾದ ಪ್ರಮುಖ ಅತಿಥಿ ಪಾತ್ರವೊಂದು ಈಗ ತಲೆನೋವಾಗಿ ಪರಿಣಮಿಸಿದೆ. ಮೊದಲು ನಂದಮೂರಿ ಬಾಲಕೃಷ್ಣ, ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ಈಗ ನಟ ಪವನ್ ಕಲ್ಯಾಣ್ ಕೂಡ ರಾಜಕೀಯ ಒತ್ತಡದ ಕಾರಣ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
-
ʻಸೂಪರ್ ಸ್ಟಾರ್ʼ ರಜನಿಕಾಂತ್ ಅವರ ʻಜೈಲರ್ 2ʼ ಸಿನಿಮಾವು ಬಹುತೇಕ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತಲ್ಲೀನವಾಗಿದೆ. ಚಿತ್ರದಲ್ಲೊಂದು ಬಹುಮುಖ್ಯವಾದ ಅತಿಥಿ ಪಾತ್ರವಿದೆ. ಅದರ ಶೂಟಿಂಗ್ ಮಾತ್ರ ಬಾಕಿಯಿದೆ. ಅದು ಐದು ದಿನಗಳ ಚಿತ್ರೀಕರಣವಾಗಿದೆ. ಆದರೆ ಅದೇ ಈಗ ಸಮಸ್ಯೆ ಆಗಿದೆ. ಸದ್ಯ ಆ ಅತಿಥಿ ಪಾತ್ರದ ಆಫರ್ ಪವನ್ ಕಲ್ಯಾಣ್ ಅವರಗೆ ಹೋಗಿದೆ. ಆದರೆ ಅತ್ತ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿಲ್ಲ.
ಇಬ್ಬರು ರಿಜೆಕ್ಟ್ ಮಾಡಿದ್ದ ಪಾತ್ರವನ್ನ ಪವನ್ ಮಾಡ್ತಾರಾ?
ಆ ಪ್ರಮುಖ ಅತಿಥಿ ಪಾತ್ರಕ್ಕಾಗಿ ಮೊದಲಿಗೆ ನಂದಮೂರಿ ಬಾಲಕೃಷ್ಣ ಅವರೊಂದಿಗೆ ಸುದೀರ್ಘವಾಗಿ ಮಾತುಕತೆ ನಡೆಸಲಾಗಿತ್ತು. ಬಾಲಯ್ಯ ಮತ್ತು ರಜನಿಕಾಂತ್ ಅವರನ್ನು ಒಟ್ಟಿಗೆ ತೆರೆಮೇಲೆ ಮೇಲೆ ನೋಡುವ ಅದ್ಭುತ ಅವಕಾಶ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆಫರ್ ಅನ್ನು ಬಾಲಯ್ಯ ನಯವಾಗಿ ತಿರಸ್ಕರಿಸಿದರು. ಬಳಿಕ ಶಾರುಖ್ ಖಾನ್‌ಗೆ ಆಫರ್ ನೀಡಲಾಗಿತ್ತು. ಅವರು ಇನ್ನೇನು ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ಎಸ್‌ಆರ್‌ಕೆ ಕಡೆಯಿಂದಲೂ ಶಾಕ್ ಸಿಕ್ಕಿತ್ತು. ಕೊನೆಗೆ ಚಿತ್ರತಂಡವು ಪವನ್ ಕಲ್ಯಾಣ್ ಮನೆ ಬಾಗಿಲನ್ನು ಬಡಿದಿತ್ತು.
ಆದರೆ ಈಗ ಪವನ್ ಕಲ್ಯಾಣ್ ಕಡೆಯಿಂದಲೂ ನಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ರಾಜಕೀಯ ಕಾರ್ಯದೊತ್ತಡದ ಕಾರಣ ಜೈಲರ್ 2 ಸಿನಿಮಾದಲ್ಲಿ ನಟಿಸಲು ಆಗೋದಿಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ ಎನ್ನಲಾಗಿದೆ. ಅವರು ಸದ್ಯ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆಗಿರುವುದರಿಂದ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಸದ್ಯ ತೆಲುಗಿನಲ್ಲಿಯೇ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ.
Jailer 2 Movie: ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ರಜನಿಕಾಂತ್; 'ಜೈಲರ್ 2' ಚಿತ್ರದ ಟೀಸರ್ ಔಟ್
ತೆರೆಮೇಲೆ ಒಟ್ಟಿಗೆ ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಜೊತೆಗೆ ಪವನ್ ಕಲ್ಯಾಣ್ ಅವರನ್ನು ನೋಡಬೇಕು ಎಂದುಕೊಂಡಿದ್ದ ಫ್ಯಾನ್ಸ್‌ಗೆ ಇದು ಬೇಸರ ತರಿಸಿರುವುದಂತೂ ಸುಳ್ಳಲ್ಲ. ಒಟ್ಟಾರೆ, ಸಿನಿಮಾದ ಬಿಡುಗಡೆಗೆ ಸಮಯ ಹತ್ತಿರವಾಗುತ್ತಿದ್ದರೂ ಅತಿಥಿ ಪಾತ್ರದ ಬಗ್ಗೆ ಇನ್ನೂ ಗೊಂದಲ ಇರುವುದು ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಸದ್ಯ ಕೇಳಿಬರುತ್ತಿರುವ ಮಾತುಗಳು.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ 2 ಸಿನಿಮಾವು ಆಗಸ್ಟ್ ಎರಡನೇ ವಾರದಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ಹಣ ಹಾಕಿದೆ. ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಈ ಬಾರಿ ಎಸ್ ಜೆ ಸೂರ್ಯ ಅವರು ಮುಖ್ಯ ಖಳನ ಪಾತ್ರವನ್ನು ನಿಭಾಯಿಸಿದ್ದಾರೆ.