ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ: ತಪ್ಪಿತಸ್ಥರಿಗೆ ಯಾವುದೇ ಕ್ಷಮೆ ಇಲ್ಲ; ಭಕ್ತರ ನಂಬಿಕೆಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕ್ರಮ – ಸಿಎಂ ಯೋಗಿ

ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ ಪ್ರಕರಣದಲ್ಲಿ ಎಂಟು ಆರೋಪಿಗಳ ಬಂಧನದ ಬಳಿಕ, ಭಕ್ತರ ನಂಬಿಕೆಗೆ ಧಕ್ಕೆ ತರುವವರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, SIT ವರದಿ ಬಂದ ತಕ್ಷಣವೇ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ರಾಮಮಂದಿರ ಹಗರಣ: ತಪ್ಪಿತಸ್ಥರಿಗೆ ಕ್ಷಮೆ ಇಲ್ಲ ಎಂದ ಯೋಗಿ

ಯೋಗಿ ಆದಿತ್ಯನಾಥ್ -

Profile
Sushmitha Jain Jun 26, 2026 9:22 PM

ಅಯೋಧ್ಯೆ: ರಾಮಮಂದಿರ(Rama Mandir) ದೇಣಿಗೆ ದುರುಪಯೋಗ ಪ್ರಕರಣದಲ್ಲಿ ಬಂಧನಗಳಾದ ಬೆನ್ನಲ್ಲೇ ಉತ್ತರ ಪ್ರದೇಶ(Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಶುಕ್ರವಾರ ಕಠಿಣ ಸಂದೇಶ ನೀಡಿದ್ದಾರೆ. ಸನಾತನ ಮೌಲ್ಯಗಳು ಮತ್ತು ಭಕ್ತರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ರಾಜ್ಯ ಸರ್ಕಾರ 'ಶೂನ್ಯ ಸಹಿಷ್ಣುತೆ' (Zero Tolerance) ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.ದೇವರಿಯಾ ಜಿಲ್ಲೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ, ವಿಶೇಷ ತನಿಖಾ ತಂಡ (SIT) ವರದಿ ಬಂದ ತಕ್ಷಣವೇ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.

"ಅಯೋಧ್ಯೆ ಬಗ್ಗೆ ಯಾರೂ ಚಿಂತಿಸಬೇಕಿಲ್ಲ ಎಂದು ನಾವು ಮೊದಲೇ ಹೇಳಿದ್ದೆವು. SIT ವರದಿ ಬಂದ ಕೂಡಲೇ ತಕ್ಷಣ ಕ್ರಮ ಆರಂಭಿಸಲಾಗಿದೆ. ಭಕ್ತಿಯ ವಿಷಯದಲ್ಲಿ ಆಟವಾಡುವುದು ಸಹಿಸುವುದಿಲ್ಲ. ಇಂದು ಈ ವಿಷಯವನ್ನು ರಾಜಕೀಯಗೊಳಿಸುತ್ತಿರುವವರೇ ಹಿಂದೆ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು," ಎಂದು ಅವರು ಹೇಳಿದರು.

ಜೂನ್ 19ರಂದು ಅಯೋಧ್ಯೆ ಭೇಟಿ ವೇಳೆ ಕೂಡ ಭಕ್ತರ ನಂಬಿಕೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾಗಿ ಯೋಗಿ ನೆನಪಿಸಿದರು.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ

ಈ ವೇಳೆ ಪ್ರತಿಪಕ್ಷಗಳ ವಿರುದ್ಧವೂ ಯೋಗಿ ತೀವ್ರ ವಾಗ್ದಾಳಿ ನಡೆಸಿದರು. ರಾಮಮಂದಿರ ನಿರ್ಮಾಣವನ್ನು ಹಿಂದೆ ವಿರೋಧಿಸಿದ್ದವರೇ ಈಗ ಭಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

"ಒಂದು ಕಾಲದಲ್ಲಿ ಶ್ರೀರಾಮನೇ ಇಲ್ಲ ಎಂದು ಹೇಳಿದವರು, ರಾಮಜನ್ಮಭೂಮಿ ದೇವಸ್ಥಾನ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿದವರು, 'ಜೈ ಶ್ರೀರಾಮ್' ಘೋಷಣೆ ಕೂಗಿದವರ ಮೇಲೆ ಗುಂಡು ಹಾರಿಸಿದವರೇ ಇಂದು ಭಕ್ತಿಯ ಹೆಸರಿನಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ," ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಯೋಗಿ, ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯನ್ನು ಸಂಸ್ಥಾನೀಕರಿಸಿದ ಪಕ್ಷವೇ ಈಗ ಅಯೋಧ್ಯೆಯ ಬಗ್ಗೆ ಪ್ರಶ್ನೆ ಎತ್ತುತ್ತಿದೆ ಎಂದು ಹೇಳಿದರು.

ದೇಣಿಗೆ ಹಗರಣ ಪ್ರಕರಣ

ಅಯೋಧ್ಯೆ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಯ ದುರುಪಯೋಗ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಕೃಷ್ಣ ಮೋಹನ್ ನೀಡಿದ ದೂರಿನ ಆಧಾರದ ಮೇಲೆ, SIT ಶಿಫಾರಸಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಗುಪ್ತ ಕ್ಯಾಮೆರಾಗಳು, ಬ್ಯಾಂಕ್ ಖಾತೆ ಜಾಡು; ರಾಮ ಮಂದಿರ ದೇಣಿಗೆ ಲೂಟಿ ಬಯಲಾಗಿದ್ದೇಗೆ?
ಬಂಧಿತರಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಹಾಗೂ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಸೇರಿದ್ದಾರೆ.

ಪ್ರಕರಣದಲ್ಲಿ ಕಳವು, ಕ್ರಿಮಿನಲ್ ನಂಬಿಕೆ ದ್ರೋಹ, ಸಂಚು ಹಾಗೂ ಭ್ರಷ್ಟಾಚಾರ ಸಂಬಂಧಿತ ಭಾರತೀಯ ನ್ಯಾಯ ಸಂಹಿತೆ (BNS) ಕಲಂಗಳನ್ನು ಅನ್ವಯಿಸಲಾಗಿದೆ.

SIT ತನಿಖೆಯಲ್ಲಿ ಬಹಿರಂಗವಾದ ಅಂಶಗಳು

SIT ತನಿಖೆಯಲ್ಲಿ ದೇಣಿಗೆ ಹಣದ ನಿರ್ವಹಣೆಯಲ್ಲಿ ಹಲವು ಲೋಪಗಳು ಪತ್ತೆಯಾಗಿವೆ. ನಗದು ಎಣಿಕೆ ಪ್ರಕ್ರಿಯೆ, ಸಿಬ್ಬಂದಿ ನೇಮಕಾತಿ, ಸಿಸಿಟಿವಿ ಮೇಲ್ವಿಚಾರಣೆ, ದೇವಾಲಯದಿಂದ ಟ್ರಸ್ಟ್ ಕಚೇರಿ ಹಾಗೂ ಬ್ಯಾಂಕ್‌ಗಳಿಗೆ ದೇಣಿಗೆ ಸಾಗಿಸುವ ವ್ಯವಸ್ಥೆಯಲ್ಲಿ ಹಲವು ದುರ್ಬಲತೆಗಳು ಕಂಡುಬಂದಿವೆ.

ಖಾಸಗಿ ಏಜೆನ್ಸಿ ಮೂಲಕ ನೇಮಕಗೊಂಡ ಸಿಬ್ಬಂದಿಯನ್ನು ಸ್ಥಳೀಯ ಶಿಫಾರಸುಗಳ ಆಧಾರದಲ್ಲಿ ಕೆಲಸಕ್ಕೆ ಸೇರಿಸಲಾಗಿತ್ತು ಎಂಬ ಆರೋಪವೂ ತನಿಖೆಯಲ್ಲಿ ಪರಿಶೀಲನೆಯಲ್ಲಿದೆ. ಭಕ್ತರು ಸಮರ್ಪಿಸಿದ ಚಿನ್ನ, ಬೆಳ್ಳಿ ಹಾಗೂ ಇತರೆ ಬೆಲೆಬಾಳುವ ವಸ್ತುಗಳ ದಾಖಲೆ ಮತ್ತು ದಾಸ್ತಾನು ವ್ಯವಸ್ಥೆಯನ್ನೂ SIT ಪರಿಶೀಲಿಸಿದೆ.

ಇದೇ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, "ಸಣ್ಣ ಮೀನುಗಳನ್ನು ಮಾತ್ರ ಹಿಡಿಯಲಾಗುತ್ತಿದೆ, ದೊಡ್ಡವರು ತಪ್ಪಿಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದ್ದು, ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆಗಳು ನಡೆಯುವ ಸಾಧ್ಯತೆ ಇದೆ.