ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಿಲ್ಲ ರಂಗ ಬಾಷಾʼ ಶೂಟಿಂಗ್ ಆರಂಭ; ಹೇಳಿದ ದಿನದಂದೇ ಅಖಾಡಕ್ಕಿಳಿದ ಕಿಚ್ಚ ಸುದೀಪ್, ವದಂತಿಗಳಿಗೆ ಬ್ರೇಕ್!

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಬಿಲ್ಲ ರಂಗ ಬಾಷಾ' (BRB) ಚಿತ್ರದ ಶೂಟಿಂಗ್ ಜೂನ್ 26 ರಂದು ಅಧಿಕೃತವಾಗಿ ಪುನರಾರಂಭಗೊಂಡಿದೆ. ಚಿತ್ರ ನಿಂತುಹೋಗಿದೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ನಿರ್ದೇಶಕ ಅನೂಪ್ ಭಂಡಾರಿ ಯುದ್ಧ ಆರಂಭವಾಗಿದೆ ಎಂದು ಘೋಷಿಸಿದ್ದಾರೆ.

ಹೇಳಿದ ದಿನದಂದೇ 'ಬಿಲ್ಲ ರಂಗ ಬಾಷಾ' ಸಿನಿಮಾದ ಶೂಟಿಂಗ್‌ ಆರಂಭಿಸಿದ ಸುದೀಪ್

-

Avinash GR
Avinash GR Jun 26, 2026 6:19 PM

ʻಕಿಚ್ಚʼ ಸುದೀಪ್‌ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಬಿಲ್ಲ ರಂಗ ಬಾಷಾ' (BRB) ಕುರಿತಾಗಿ ಎದ್ದಿದ್ದ ಎಲ್ಲಾ ವದಂತಿಗಳಿಗೆ ಈಗ ಅಧಿಕೃತವಾಗಿ ತೆರೆ ಬಿದ್ದಿದೆ. ಜೂನ್ 26 ರಂದು 'ಬಿಲ್ಲ ರಂಗ ಬಾಷಾ' ಚಿತ್ರದ ಶೂಟಿಂಗ್ ಅನ್ನು ಅಧಿಕೃತವಾಗಿ ಪುನರಾರಂಭಿಸಿದೆ ಚಿತ್ರತಂಡ.

ವದಂತಿಗಳಿಗೆ ಫುಲ್‌ ಸ್ಟಾಪ್

2025ರ ಆರಂಭದಲ್ಲೇ 20 ದಿನಗಳ ಕಾಲ ಭರ್ಜರಿ ಆಕ್ಷನ್ ಶೆಡ್ಯೂಲ್ ಅನ್ನು ಚಿತ್ರತಂಡ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಆದರೆ, ಆನಂತರದ ಕೆಲವು ತಿಂಗಳುಗಳ ಕಾಲ ಯಾವುದೇ ಸದ್ದಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಬಗ್ಗೆ ನಾನಾ ರೀತಿಯ ವದಂತಿಗಳು ಹರಡಲಾರಂಭಿಸಿದ್ದವು. 'ಬಿಲ್ಲ ರಂಗ ಬಾಷಾ' ಸಿನಿಮಾ ನಿಂತೇ ಹೋಯ್ತಂತೆ ಎಂಬೆಲ್ಲಾ ಮಾತುಗಳು ಹರಿದಾಡಿದ್ದವು. ಆದರೆ, ಈಗ ಪುನಃ ಶೂಟಿಂಗ್‌ ಆರಂಭವಾಗಿದ್ದರಿಂದ ಎಲ್ಲಾ ಅಂತೆ-ಕಂತೆಗಳಿವೆ ಫುಲ್‌ ಸ್ಟಾಪ್‌ ಬಿದ್ದಿದೆ.‌ ಇತ್ತ ಸುದೀಪ್‌ ಫ್ಯಾನ್ಸ್‌ ಕೂಡ 'ಬಿಲ್ಲ ರಂಗ ಬಾಷಾ' ಶೂಟಿಂಗ್‌ ಆರಂಭವಾಗಿದ್ದಕ್ಕೆ ಖುಷಿಯಾಗಿದ್ದಾರೆ.

Sanvi Sudeep: ನಿಮ್ಮ ಪರ್ಮಿಷನ್ ತಗೋಬೇಕಾ? ಟ್ಯಾಟೂ ವಿಚಾರಕ್ಕೆ ಸುದೀಪ್‌ ಪುತ್ರಿ ಗರಂ

ವಿರಾಮದ ರಹಸ್ಯ ಬಿಚ್ಚಿಟಿದ್ದ ʻಕಿಚ್ಚʼ ಸುದೀಪ್

"ನಾನು ಬೇರೆ ಕೆಲಸದಲ್ಲಿ ಬ್ಯುಸಿ ಇದ್ದೆ. ಆದರೆ ನಿಮ್ಮ ಪ್ರೀತಿಯನ್ನಾಗಲಿ ಅಥವಾ ಸಿಕ್ಕಿರುವ ಈ ಅದ್ಭುತವಾದ ವೃತ್ತಿಜೀವನವನ್ನಾಗಲಿ ನಾನು ನಿರ್ಲಕ್ಷಿಸಿದ್ದೇನೆ ಎಂದಲ್ಲ. ಸಿನಿಮಾ ಕಥೆ ಕೇಳುವುದು, ನಟಿಸುವುದು, ನಿಮಗೆ ಮನರಂಜನೆ ನೀಡುವುದಕ್ಕಿಂತ ಹೆಚ್ಚಿನದ್ದು ಏನೂ ಇಲ್ಲ. ಜೂನ್ 26ರಿಂದ ʻ‌ಬಿಲ್ಲಾ ರಂಗ ಬಾಷಾʼ ಚಿತ್ರದೊಂದಿಗೆ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದ್ದೇನೆ. ಆನಂತರ ನಿರಂತರವಾಗಿ ಸಿನಿಮಾಗಳನ್ನು ಮಾಡುವ ಪ್ರಕ್ರಿಯೆ ಮುಂದುವರಿಯುತ್ತದೆ. ಈಗಾಗಲೇ 4 ಸ್ಕ್ರಿಪ್ಟ್‌ಗಳನ್ನು ಒಪ್ಪಿಕೊಂಡಿದ್ದೇನೆ. ಶೀಘ್ರದಲ್ಲೇ ʻ‌ಬಿಲ್ಲಾ ರಂಗ ಬಾಷಾʼ ಸಿನಿಮಾ ಶೂಟಿಂಗ್ ಪ್ರಾರಂಭಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ" ಎಂದು ಸುದೀಪ್ ಹೇಳಿದ್ದರು.‌

ಇದೀಗ ಹೇಳಿದ ದಿನದಂದೇ ಸಿನಿಮಾ ಆರಂಭಿಸಿದ್ದಾರೆ. ಇನ್ನು, "ಕಾಯುವಿಕೆ ಕೊನೆಗೊಳ್ಳುತ್ತದೆ... ಯುದ್ಧ ಪ್ರಾರಂಭವಾಗುತ್ತದೆ! ನಿಮ್ಮ ಪ್ರೀತಿ ಕಡಿಮೆಯಾಗಲಿಲ್ಲ, ನಮ್ಮ ನಂಬಿಕೆ ಕುಗ್ಗಲಿಲ್ಲ. ಧನ್ಯವಾದಗಳು.." ಎಂದು ನಿರ್ದೇಶಕ ಅನೂಪ್‌ ಭಂಡಾರಿ ಅವರು ಟ್ವೀಟ್‌ ಮಾಡಿದ್ದಾರೆ.

ಮತ್ತೆ ಒಂದಾಯ್ತು 'ವಿಕ್ರಾಂತ್ ರೋಣ' ಜೋಡಿ

ವಿಕ್ರಾಂತ್‌ ರೋಣ ಚಿತ್ರಕ್ಕಾಗಿ ಸುದೀಪ್‌ ಮತ್ತು ನಿರ್ದೇಶಕ ಅನೂಪ್‌ ಭಂಡಾರಿ ಒಂದಾಗಿದ್ದರು. ಆ ಸಿನಿಮಾದ ನಂತರ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದುವರೆಗೆ ಯಾರೂ ನೋಡಿರದಂತಹ ವಿಭಿನ್ನ ಕಾನ್ಸೆಪ್ಟ್‌ ಅನ್ನು ಹೊಂದಿದೆಯಂತೆ. ಇದು ಭವಿಷ್ಯ ಜಗತ್ತನ್ನು ಅನಾವರಣಗೊಳಿಸುವ ಹೈ-ಕಾನ್ಸೆಪ್ಟ್ ಫ್ಯಾಂಟಸಿ ಆಕ್ಷನ್ ಡ್ರಾಮಾ ಎಂದು ಹೇಳಲಾಗಿದೆ. ಈ ಸಿನಿಮಾದ ಕಥೆಯು ಕ್ರಿ.ಶ. 2209 ರ ನಂತರದ ಜಗತ್ತಿನಲ್ಲಿ ಸಾಗಲಿದೆ. "ಈ ಚಿತ್ರದ ವ್ಯಾಪ್ತಿ ನಮ್ಮ ಹಿಂದಿನ 'ವಿಕ್ರಾಂತ್ ರೋಣ'ಗಿಂತ ಕನಿಷ್ಠ 10 ಪಟ್ಟು ದೊಡ್ಡದಾಗಿರಲಿದೆ" ಎಂದು ಸ್ವತಃ ಸುದೀಪ್‌ ಅವರೇ ಹೇಳಿದ್ದರು.

ನಿರ್ದೇಶಕ ಅನೂಪ್‌ ಭಂಡಾರಿ ಟ್ವೀಟ್



ಎರಡು ಭಾಗಗಳಲ್ಲಿ ಬರಲಿದೆ ಈ ಸಿನಿಮಾ

ಹನುಮಾನ್‌ ಸಿನಿಮಾ ನಿರ್ಮಾಣ ಮಾಡಿದ್ದ 'ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಬೃಹತ್ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆಯಂತೆ. ವಿಶ್ವದಾದ್ಯಂತ ಹಲವು ಭಾಷೆಗಳ ಪ್ರೇಕ್ಷಕರನ್ನು ಏಕಕಾಲದಲ್ಲಿ ತಲುಪುವಂತಹ ಕಥೆಯನ್ನು ನಿರ್ದೇಶಕರು ಬರೆದುಕೊಂಡಿದ್ದಾರಂತೆ.