ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಬಿಗ್‌ ಬಾಸ್‌ʼ ಕಾರ್ತಿಕ್‌ ಮಹೇಶ್‌ ನಟನೆಯ ʻರಾಮರಸʼ ಚಿತ್ರಕ್ಕೆ ‘ಡೆಡ್ಲಿ’ ಆದಿತ್ಯ ಎಂಟ್ರಿ; ‘ವೀರ ದುರ್ಮುರ್ಗಿ’ ಪಾತ್ರದಲ್ಲಿ ಅಬ್ಬರ

Ramarsa Movie Updates: ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಟನೆಯ ಪೌರಾಣಿಕ ಕಥಾಹಂದರದ ʻರಾಮರಸʼ ಚಿತ್ರಕ್ಕೆ ‘ಡೆಡ್ಲಿ’ ಆದಿತ್ಯ ಸೇರ್ಪಡೆಯಾಗಿದ್ದಾರೆ. ‘ವೀರ ದುರ್ಮುರ್ಗಿ’ ಎಂಬ ಪಾತ್ರದಲ್ಲಿ ಅವರು ಅಬ್ಬರಿಸಲಿದ್ದು, ಕಥೆಯ ತಿರುವು ನೀಡುವ ‘ದಶ ಮಹಾವಿದ್ಯೆ’ಯ ರಹಸ್ಯ ಈ ಪಾತ್ರದ ಸುತ್ತ ಸಾಗಲಿದೆ. ಪ್ರಜ್ವಲ್ ದೇವರಾಜ್ ಮತ್ತು ಶರಣ್ ಕೂಡ ಚಿತ್ರದಲ್ಲಿದ್ದಾರೆ.

ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಎಂಟ್ರಿ

-

Avinash GR
Avinash GR Sep 27, 2026 8:00 PM

‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಮಹೇಶ್, ನಟ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಮೆಥಿಕಲ್ ಡ್ರಾಮಾ ‘ರಾಮರಸ’ ಚಿತ್ರಕ್ಕೆ ಮತ್ತೊಬ್ಬ ಖ್ಯಾತ ನಟನ ಸೇರ್ಪಡೆಯಾಗಿದೆ. ಸ್ಯಾಂಡಲ್‌ವುಡ್‌ನ ಖಡಕ್ ನಟ ‘ಡೆಡ್ಲಿ’ ಆದಿತ್ಯ ಈ ಚಿತ್ರದ ‘ವೀರ ದುರ್ಮುರ್ಗಿ’ ಎಂಬ ವಿಶಿಷ್ಟ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಯಶಸ್ವಿಯಾಗಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಈ ಹೊತ್ತಲ್ಲೇ ಹೊರಬಿದ್ದಿರುವ ಆದಿತ್ಯ ಅವರ ಎಂಟ್ರಿ ಕುರಿತ ಅಪ್ಡೇಟ್‌ ಕುತೂಹಲ ಹೆಚ್ಚಿಸಿದೆ.

ದೈವಿಕ ಆಟದ ಕಥಾಹಂದರ

ತಮ್ಮ ಇಂಟೆನ್ಸ್‌ ಅಭಿನಯದಿಂದ ಹೆಸರಾಗಿರುವ ಆದಿತ್ಯ, ಈ ಚಿತ್ರದಲ್ಲಿ ಹಿಂದೆಂದೂ ಕಾಣದ ರಗಡ್ ಅವತಾರದಲ್ಲಿ ದರ್ಶನ ನೀಡಲಿದ್ದಾರೆ. ‘ವೀರ ದುರ್ಮುರ್ಗಿ’ ಪಾತ್ರವು ಕೇವಲ ಸಾಮಾನ್ಯ ಪಾತ್ರವಾಗಿರದೆ, ಶಕ್ತಿ, ಭಯ ಮತ್ತು ವಿನಾಶದ ಪ್ರತೀಕವಾಗಿ ಕಥೆಗೆ ದೊಡ್ಡ ತಿರುವು ನೀಡಲಿದೆಯಂತೆ. ಚಿತ್ರದ ಮುಖ್ಯ ಕಥಾಹಂದರವಾದ ‘ದಶ ಮಹಾವಿದ್ಯೆ’ಯ ರಹಸ್ಯದ ಬಹುಪಾಲು ಭಾಗವು ಈ ಪಾತ್ರದ ಸುತ್ತವೇ ಸುತ್ತಲಿದ್ದು, ಸಿನಿಮಾದ ನಿರೂಪಣೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಸಾಂಪ್ರದಾಯಿಕ ಜಾನಪದ ಹಾಗೂ ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಪ್ರೇರಿತವಾದ ಪರಾಶಕ್ತಿಯ ದೈವಿಕ ಆಟದ ಕಥಾಹಂದರವನ್ನು ʻರಾಮರಸʼ ಚಿತ್ರ ಹೊಂದಿದೆ.

ʻಬಿಗ್‌ ಬಾಸ್‌ʼ ಕಾರ್ತಿಕ್‌ ಮಹೇಶ್‌ ನಟನೆಯ ‘ರಾಮರಸ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ‘ದಿ ಕೇರಳ ಸ್ಟೋರಿ’ ಖ್ಯಾತಿಯ ಅದಾ ಶರ್ಮಾ ರೀ-ಎಂಟ್ರಿ

ರಾಮರಸದಲ್ಲಿ ಕಲಾವಿದರ ದಂಡು

ಈ ಚಿತ್ರದಲ್ಲಿ ತಾರೆಯರ ದಂಡೇ ಜಮಾಯಿಸಿದೆ. ಗುರು ಸಿದ್ಧನಾಗಿ ಪ್ರಜ್ವಲ್ ದೇವರಾಜ್ , ಕಾರ್ತಿಕ್ ಮಹೇಶ್, ಇಂದ್ರ ದೇವೇಂದ್ರನಾಗಿ ಶರಣ್, ಬಹುಭಾಷಾ ನಟಿ ಅದಾ ಶರ್ಮಾ, ಗ್ಲಾಮರಸ್ ನಟಿ ಹೇಬಾ ಪಟೇಲ್, ಬಾಲಾಜಿ ಮನೋಹರ್ ಹಾಗೂ ವೈಶಾಲಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಬಿ.ಎಂ. ಗಿರಿರಾಜ್ ನಿರ್ದೇಶನದ ಈ ಚಿತ್ರವನ್ನು ಜಿ ಸಿನಿಮಾಸ್ ಪ್ರೊಡಕ್ಷನ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಸಹಯೋಗದಲ್ಲಿ ಗುರು ದೇಶಪಾಂಡೆ ಹಾಗೂ ವಿಕ್ರಂ ಆರ್ಯ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಎ.ವಿ. ಕೃಷ್ಣ ಕುಮಾರ್ (ಕೆಕೆ) ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ರಾಮರಸ

ಅತ್ಯಾಧುನಿಕ ವಿಎಫ್‌ಎಕ್ಸ್ ಹಾಗೂ ಸೌಂಡ್ ಡಿಸೈನಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಪ್ರೇಕ್ಷಕರಿಗೆ ಕಣ್ಮನ ಸೆಳೆಯುವ ದೃಶ್ಯ ವೈಭವ ನೀಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಚಿತ್ರದ ಮತ್ತಷ್ಟು ಪ್ರಮುಖ ಪಾತ್ರಗಳು ಹಾಗೂ ಅಚ್ಚರಿಯ ನಟರ ವಿವರಗಳನ್ನು ತಂಡ ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದು, ಮುಂಬರುವ ದಿನಗಳಲ್ಲಿ ಟೀಸರ್ ಬಿಡುಗಡೆ ದಿನಾಂಕ ಹಾಗೂ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಹಂತಹಂತವಾಗಿ ಅನಾವರಣಗೊಳಿಸಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ಈ ಚಿತ್ರವನ್ನು ತೆರೆಗೆ ತರಲು ಯೋಜಿಸಿದೆ.