ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ ಸಂಭ್ರಮ; ದಾದಾ ಅಭಿಮಾನಿಗಳಲ್ಲಿ ಬಹಿರಂಗ ಕ್ಷಮೆ ಕೋರಿದ ʻಕಿಚ್ಚʼ ಸುದೀಪ್!

Dr Vishnuvardhan Amrutha Mahotsava: ಬೆಂಗಳೂರಿನಲ್ಲಿ ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ ವಿಜೃಂಭಣೆಯಿಂದ ಆರಂಭವಾಗಿದೆ. ಈ ಅದ್ದೂರಿ ಸಮಾರಂಭಕ್ಕೆ ವೈಯಕ್ತಿಕ ಕಾರಣದಿಂದ ಪಾಲ್ಗೊಳ್ಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ತಮ್ಮ ಆದರ್ಶ ಗುರುವಿಗಾಗಿ ಯಾವುದೇ ಕ್ಷಣದಲ್ಲೂ ಮುಂಚೂಣಿಯಲ್ಲಿ ನಿಲ್ಲುವೆ ಎಂದು ಅವರು ಹೇಳಿದ್ದಾರೆ.

ವಿಷ್ಣು ಅಮೃತ ಮಹೋತ್ಸವ; ದಾದಾ ಫ್ಯಾನ್ಸ್‌ಗೆ ಸುದೀಪ್ ಕ್ಷಮೆ ಕೇಳಿದ್ದೇಕೆ?

-

Avinash GR
Avinash GR Sep 27, 2026 4:46 PM

ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಸಂಭ್ರಮ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ನಂದಿ ಲಿಂಕ್ ಮೈದಾನದಲ್ಲಿ ಆಯೋಜಿಸಲಾಗಿರುವ ಈ ಐತಿಹಾಸಿಕ ಕಾರ್ಯಕ್ರಮವು ಮುಂಜಾನೆ 6 ಗಂಟೆಯಿಂದಲೇ ಆರಂಭವಾಗಿದ್ದು, ಮಧ್ಯರಾತ್ರಿ 12 ಗಂಟೆಯವರೆಗೂ ನಿರಂತರವಾಗಿ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳ ಮೂಲಕ 'ದಾದಾ' ಅವರ ಕಲಾ ಬದುಕು ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಅದ್ಧೂರಿಯಾಗಿ ಸ್ಮರಿಸಲಾಗುತ್ತಿದೆ.

ಅದ್ದೂರಿಯಾಗಿ ಆರಂಭವಾದ ಸಮಾರಂಭ

ಈ ಮಹೋತ್ಸವಕ್ಕೆ ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಚಾಲನೆ ಸಿಕ್ಕಿದ್ದು, ಅಲ್ಲಿಂದ ನಂದಿ ಲಿಂಕ್ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಿತು. ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ಬೃಹತ್ ಕನ್ನಡ ಧ್ವಜವನ್ನು ಅಭಿಮಾನಿಗಳು, ವಿಷ್ಣು ಸೇನಾ ಸಮಿತಿಯ ಕಾರ್ಯಕರ್ತರು ಹಾಗೂ ಚಿತ್ರರಂಗದ ಕಲಾವಿದರು ಅತ್ಯಂತ ಸಂಭ್ರಮದಿಂದ ಮೆರವಣಿಗೆಯಲ್ಲಿ ಹೊತ್ತು ಸಾಗಿದರು.

ಇನ್ನು, ಉದ್ಘಾಟನಾ ಸಮಾರಂಭದಲ್ಲಿ ಡಾ. ಶ್ರೀನಾಥ್, ರಮೇಶ್ ಅರವಿಂದ್, ಶ್ರುತಿ, ಡಾ. ಜಯಮಾಲಾ, ಅವಿನಾಶ್, ಮಾಳವಿಕಾ ಅವಿನಾಶ್, ಎಸ್. ನಾರಾಯಣ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಡಾ. ಸುಂದರರಾಜ್, ಅಭಿಜಿತ್, ಸಿಹಿಕಹಿ ಚಂದ್ರು, ಶ್ರೀಮುರಳಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖ ಗಣ್ಯರು ಭಾಗಿಯಾಗಿ ಗೌರವ ಸಲ್ಲಿಸಿದರು.

Vishnuvardhan Amrutha Mahotsava: ಇಂದು ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಆಚರಣೆ! ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಅತ್ಯಂತ ವಿಷಾದದಿಂದ ಕ್ಷಮೆ ಕೋರುತ್ತೇನೆ

ಇದೇ ವೇಳೆ, ಈ ವಿಶೇಷ ಸಮಾರಂಭದಲ್ಲಿ ಅನಿವಾರ್ಯ ಕಾರಣಗಳಿಂದ ಖುದ್ದಾಗಿ ಭಾಗಿಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ಅವರು, "ನನ್ನ ನೆಚ್ಚಿನ ವಿಷ್ಣು ಸರ್ ಅಭಿಮಾನಿಗಳಿಗೆಲ್ಲರಿಗೂ ಪ್ರೀತಿಯ ನಮಸ್ಕಾರಗಳು. ಇಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗುತ್ತಿಲ್ಲವಾದ್ದರಿಂದ ಅತ್ಯಂತ ವಿಷಾದದಿಂದ ಕ್ಷಮೆ ಕೋರುತ್ತೇನೆ. ಅನಿವಾರ್ಯ ವೈಯಕ್ತಿಕ ಕಾರಣವಿಲ್ಲದೆ ನಾನು ಈ ಮಾತನ್ನು ಖಂಡಿತ ಹೇಳುತ್ತಿರಲಿಲ್ಲ. ವಿಷ್ಣು ಸರ್ ಯಾವಾಗಲೂ ನನ್ನ ಆದರ್ಶ, ಪ್ರೇರಣೆ ಮತ್ತು ಎಂದೆಂದಿಗೂ ಅವರೇ ಆಗಿರುತ್ತಾರೆ" ಎಂದು ಭಾವುಕರಾಗಿ ನುಡಿದಿದ್ದಾರೆ.

ಮುಂಚೂಣಿಯಲ್ಲಿ ನಿಲ್ಲಲು ನಾನು ಸದಾ ಸಿದ್ಧ

"ಈ ಮಹತ್ವದ ದಿನದಂದು ನಿಮ್ಮೆಲ್ಲರ ನಡುವೆ ಇರಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ನನಗೂ ಖಂಡಿತ ಕಾಡುತ್ತದೆ. ಆದರೆ ನಮ್ಮ ಆದರ್ಶ ಗುರು ವಿಷ್ಣು ಸರ್ ಅವರಿಗಾಗಿ ಏನೇ ಮಾಡಬೇಕಿದ್ದರೂ, ಯಾವಾಗಲೂ ಮುಂಚೂಣಿಯಲ್ಲಿ ನಿಲ್ಲಲು ನಾನು ಸದಾ ಸಿದ್ಧನಾಗಿದ್ದೇನೆ. ದಯವಿಟ್ಟು ಕ್ಷಮೆ ಇರಲಿ" ಎಂದು ಸುದೀಪ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ನೆಚ್ಚಿನ ನಟನ ಕಾರ್ಯಕ್ರಮಕ್ಕೆ ಸುದೀಪ್ ಗೈರಾಗಿದ್ದರೂ ಅವರ ಗೌರವಯುತ ಮಾತುಗಳು ವಿಷ್ಣು ಅಭಿಮಾನಿಗಳ ಮನಗೆದ್ದಿವೆ.