ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲು ಡಾ. ವಿಷ್ಣುವರ್ಧನ್ ಮೊಮ್ಮಗ ಜ್ಯೇಷ್ಠ ರೆಡಿ; ಮೊದಲ ಸಿನಿಮಾಕ್ಕಾಗಿ ಭರ್ಜರಿ ತಯಾರಿ
Dr Vishnuvardhan Grandson Jyeshtavardhan: ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ ಅವರ ಮೊಮ್ಮಗ ಜ್ಯೇಷ್ಠವರ್ಧನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನಟ ಅನಿರುದ್ಧ್ ಜತ್ಕರ್ ಪುತ್ರನಾದ ಜ್ಯೇಷ್ಠ, ನೇರವಾಗಿ ನಟನೆಗೆ ಇಳಿಯದೆ ಕಳೆದ ಹಲವು ವರ್ಷಗಳಿಂದ ನೃತ್ಯ ಮತ್ತು ನಟನೆಯಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ.
-
ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ - ಭಾರತಿ ವಿಷ್ಣುವರ್ಧನ್ ಅವರ ಮೊಮ್ಮಗ, ನಟ ಅನಿರುದ್ಧ್ ಜತ್ಕರ್ ಪುತ್ರ ಜ್ಯೇಷ್ಠವರ್ಧನ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ವಿಷ್ಣು ಮೊಮ್ಮಗ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಲಿದ್ದಾರೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದವು. ಆದರೆ ಆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿರಲಿಲ್ಲ. ಈಗ ಈ ಎಲ್ಲದರ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಜ್ಯೇಷ್ಠವರ್ಧನ್ ಯಾವುದೇ ಅವಸರ ಮಾಡದೆ, ತಾಳ್ಮೆಯಿಂದಲೇ ತಮ್ಮ ಹಾದಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ.
ನೇರವಾಗಿ ನಟನೆಗೆ ಇಳಿಯಲು ಇಷ್ಟವಿರಲಿಲ್ಲ
'ರಾಜಹಂಸ' ಚಿತ್ರದಲ್ಲಿ ಬಾಲನಟನಾಗಿ ಕ್ಯಾಮರಾ ಎದುರಿಸಿದ್ದರೂ, ಜ್ಯೇಷ್ಠವರ್ಧನ್ ತಕ್ಷಣವೇ ಪೂರ್ಣಪ್ರಮಾಣದ ನಟನಾಗಲು ಮುಂದಾಗಲಿಲ್ಲ. ಬದಲಿಗೆ, ಕಳೆದ ಹತ್ತು ವರ್ಷಗಳಿಂದ ನಟನೆಯ ಜೊತೆಗೆ ನೃತ್ಯವನ್ನು ಕಲಿಯುತ್ತಾ ಬಂದಿದ್ದಾರೆ. 'ಆದಿ ಶಕ್ತಿ ಥಿಯೇಟರ್'ನಲ್ಲಿ ನಟನಾ ತರಬೇತಿ, 'ರಂಗಶಂಕರ'ದಲ್ಲಿ ಕಾರ್ಯಾಗಾರಗಳು ಹಾಗೂ ಗೌರಿ ದತ್ತು ಅವರ ಮಾರ್ಗದರ್ಶನದಲ್ಲಿ ನಟನೆಯ ವಿವಿಧ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ. "ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳದೆ ನೇರವಾಗಿ ನಟನೆಗೆ ಇಳಿಯಲು ನನಗೆ ಇಷ್ಟವಿರಲಿಲ್ಲ. ನಾನು ಕೇವಲ ಪರದೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಸಿದ್ಧನಾಗಿ ಬರಲು ಬಯಸಿದ್ದೆ" ಎನ್ನುತ್ತಾರೆ ಜ್ಯೇಷ್ಠವರ್ಧನ್.
Umashree: ಡಾ. ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್, ಡಾ. ವಿಷ್ಣುವರ್ಧನ್ ಪ್ರಶಸ್ತಿ ಪ್ರಕಟ; ಉಮಾಶ್ರೀಗೆ ಗೌರವ
ಬೆಳ್ಳಿತೆರೆಗೆ ಪ್ರಾಮಾಣಿಕವಾಗಿರಬೇಕು
ಮನೆಯಲ್ಲಿ ಪ್ರತಿದಿನವು ಸಿನಿಮಾ ಕುರಿತ ಚರ್ಚೆಗಳೇ ನಡೆಯುತ್ತಿದ್ದರಿಂದ ಬಣ್ಣದ ಲೋಕದೆಡೆಗೆ ಅವರ ಗಮನವನ್ನು ಸೆಳೆದಿದೆ. "ಸಿನಿಮಾ ಕ್ಷೇತ್ರದಲ್ಲಿ ನಾನು ಯಾವುದೇ ಹಾದಿ ಆಯ್ದುಕೊಂಡರೂ ನನ್ನ ಕುಟುಂಬದ ಬೆಂಬಲ ಸದಾ ಇರುತ್ತದೆ. ನಮ್ಮ ಮನೆಯವರು ನನಗೆ, ಬೆಳ್ಳಿತೆರೆಗೆ ಯಾವಾಗಲೂ ಪ್ರಾಮಾಣಿಕವಾಗಿರು, ಕಠಿಣ ಪರಿಶ್ರಮವೊಂದೇ ಎಂದಿಗೂ ಕೈಹಿಡಿಯುವುದು ಅಂತ ಹೇಳಿದ್ದಾರೆ. ಅದನ್ನೆ ನಾನು ಫಾಲೋ ಮಾಡುತ್ತೇನೆ" ಎಂದು ಜ್ಯೇಷ್ಠವರ್ಧನ್ ತಿಳಿಸಿದ್ದಾರೆ.
ಹೊಸ ಕಥೆಗಳನ್ನ ಕೇಳುತ್ತಿರುವ ಜ್ಯೇಷ್ಠವರ್ಧನ್
ಜ್ಯೇಷ್ಠವರ್ಧನ್ ಅವರಿಗೆ ಕೇವಲ ನಟನೆ ಮಾತ್ರವಲ್ಲದೆ, ಸಿನಿಮಾ ನಿರ್ಮಾಣ ಸೇರಿದಂತೆ ಇನ್ನಿತರ ಮಗ್ಗುಲುಗಳ ಬಗ್ಗೆಯೂ ಆಸಕ್ತಿಯನ್ನು ಹೊಂದಿದ್ದಾರೆ. "ಬರವಣಿಗೆ, ಸಿನಿಮಾಟೋಗ್ರಫಿ ಹೀಗೆ ಎಲ್ಲದರ ಬಗ್ಗೆಯೂ ನನಗೆ ಕುತೂಹಲವಿದೆ. ನಾನು ಶಾಲೆಯಲ್ಲಿ ಓದುವಾಗಲೇ ನಾನು ಇಲ್ಲೇ ಮುಂದುವರಿಯಬೇಕು ಅಂತ ನಿರ್ಧರಿಸಿದೆ. ಸದ್ಯ ಎಲ್ಲಾ ಅಂಶಗಳೂ ಇರುವ ಒಂದು ಉತ್ತಮ ಕಥೆಯ ಹುಡುಕಾಟದಲ್ಲಿದ್ದೇವೆ" ಎಂದು ಜ್ಯೇಷ್ಠವರ್ಧನ್ ತಿಳಿಸಿದ್ದಾರೆ. ಅಂದಹಾಗೆ, ಜ್ಯೇಷ್ಠವರ್ಧನ್ ಸದ್ಯ ಪಬ್ಲಿಕೇಶನ್ ಮತ್ತು ಅಡ್ವರ್ಟೈಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. 2026ರಲ್ಲಿಯೇ ತಮ್ಮ ಮೊದಲ ಸಿನಮಾವನ್ನು ಫೈನಲ್ ಮಾಡುವ ನಿರ್ಧಾರದಲ್ಲಿದ್ದು, ಈಗಾಗಲೇ ಕಥೆಗಳನ್ನು ಕೂಡ ಕೇಳುತ್ತಿದ್ದಾರೆ.
"ನನ್ನ ಮೊದಲ ಸಿನಿಮಾ ಯಾವುದೇ ಒಂದು ನಿರ್ದಿಷ್ಟ ಜಾನರ್‌ಗೆ ಸೀಮಿತವಾಗಬಾರದು. ಆ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುವಂತಿರಬೇಕು. ಮನೆಯಲ್ಲಿ ಎಲ್ಲರೂ 'ಓದು' ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ 'ಸಿನಿಮಾ ನೋಡು' ಎಂದು ಪ್ರೋತ್ಸಾಹಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದೇ ನನ್ನ ಮೊದಲ ಕ್ಲಾಸ್‌ರೂಮ್" ಎಂದು ಜ್ಯೇಷ್ಠವರ್ಧನ್ ಹೇಳುತ್ತಾರೆ.
ಜ್ಯೇಷ್ಠವರ್ಧನ್ ಅವರಿಗೆ ವಿಷ್ಣು ಅವರ 'ಆಪ್ತಮಿತ್ರ' ಹಾಗೂ ಭಾರತಿ ಅವರ 'ಬಂಗಾರದ ಮನುಷ್ಯ' ಸಿನಿಮಾಗಳು ಇಷ್ಟವಂತೆ. ಹಾಗೆ ತಂದೆ ಅನಿರುದ್ದ್ ಅವರ 'ನೀನೆಲ್ಲೋ ನಾನಲ್ಲೆ' ಚಿತ್ರ ಕೂಡ ಜ್ಯೇಷ್ಠಗೆ ಫೇವರಿಟ್ ಅಂತೆ. ಯಶ್, ತಮಿಳಿನ ಸೂರ್ಯ, ಬಾಲಿವುಡ್‌ನ ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಅವರ ನಟನಾ ಶೈಲಿ ಎಂದರೆ ಜ್ಯೇಷ್ಠವರ್ಧನ್‌ಗೆ ಅಚ್ಚುಮೆಚ್ಚು.