ನಟ 'ದುನಿಯಾ' ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ FIR! ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲು?
ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಅಪಹರಣ ಹಾಗೂ ಹಲ್ಲೆ ಆರೋಪ ಹೊರಿಸಲಾಗಿದೆ. ಓವರ್‌ಟೇಕ್ ಜಗಳಕ್ಕೆ ಸಂಬಂಧಿಸಿ ಮನೀಶ್ ಗೌಡ ಎಂಬ ವಿದ್ಯಾರ್ಥಿಯನ್ನು ಎಳೆದೊಯ್ದು, ತಲೆ, ಎದೆಗೆ ಹೊಡೆದು ಗಾಯಗೊಳಿಸಿದ ಆರೋಪದಡಿ ಕೆಂಗೇರಿ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಕೇಸ್ ದಾಖಲಾಗಿದೆ.
-
ನಟ ‘ದುನಿಯಾ’ ವಿಜಯ್ ಅವರ ಪುತ್ರ ಸಾಮ್ರಾಟ್ ವಿರುದ್ಧ ಹಲ್ಲೆ ಹಾಗೂ ಅಪಹರಣದ ಆರೋಪ ಕೇಳಿಬಂದಿದೆ. ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ತನ್ನ ಸಹಪಾಠಿಯನ್ನೇ ಕಾರಿನಲ್ಲಿ ಎಳೆದೊಯ್ದು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಘಟನೆಯಲ್ಲಿ ಗಾಯಗೊಂಡ ಮನೀಶ್ ಗೌಡ ಎಂಬ ವಿದ್ಯಾರ್ಥಿ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಎಫ್‌ಐಆರ್‌ನಲ್ಲಿ ಏನಿದೆ ಮತ್ತು ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಮ್ರಾಟ್ ವಿಜಯ್ ಜೊತೆಗೆ ಸಮೃದ್ಧ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್, ಸಮೀದ್ ಎಂಬುವವರ ವಿರುದ್ಧವೂ ಮನೀಶ್ ಗೌಡ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಏನಿದೆ?
"ಈ ಪ್ರಕರಣದ ಸಾರಾಂಶವೇನೆಂದರೆ, ದೂರುದಾರರಾದ ಮನೀಶ್ ಗೌಡ ಎಸ್. (ಬಿನ್ ಶಶಿಕುಮಾರ್ ಬಿ., 19 ವರ್ಷ) ಆರ್.ವಿ. ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ದಿನಾಂಕ: 01.09.2026ರಂದು ಮಧ್ಯಾಹ್ನ 12:10ರ ಸುಮಾರಿಗೆ ಆರ್.ವಿ. ಕಾಲೇಜಿನ ಹಿಂಬದಿಯ ಗೇಟ್ ಬಳಿಯ ಎನ್‌ಜಿಟಿ ಪಾರ್ಕಿಂಗ್‌ನಲ್ಲಿ ದೂರುದಾರರು ತಮ್ಮ ಸ್ಕೂಟರ್ ಪಾರ್ಕ್ ಮಾಡುತ್ತಿದ್ದರು. ಈ ವೇಳೆ ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್, ಸಮೀದ್ ಮತ್ತು ಇವರ ಸ್ನೇಹಿತರು ಸೇರಿಕೊಂಡು ದೂರುದಾರರನ್ನು ಕೆಎ-05-ಎಸ್-7379 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಸಫಾರಿ ಕಾರಿಗೆ ಬಲವಂತವಾಗಿ ಎಳೆದುಕೊಂಡು ಹೋಗಿ ಕೂರಿಸಿದ್ದಾರೆ. ನಂತರ ಆರ್.ವಿ. ಕಾಲೇಜಿನಿಂದ ಪಟ್ಟಣಗೆರೆ ಮುಖ್ಯರಸ್ತೆಯ ರಾಕ್ಸ್ ಬಾರ್ ಎದುರು ಕಾರು ನಿಲ್ಲಿಸಿ, ಎಲ್ಲರೂ ಸೇರಿ ಕೈಯಿಂದ ಹಾಗೂ ಕೈಬೆರಳಿನ ಉಂಗುರಗಳಿಂದ ಮುಖ, ಕುತ್ತಿಗೆ, ತಲೆ ಮತ್ತು ಎದೆಯ ಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾರೆ.
ಬಳಿಕ ಅದೇ ಜಾಗದಲ್ಲಿ ಕಾರಿನಿಂದ ಇಳಿಸಿ ಹೊರಟುಹೋಗಿದ್ದಾರೆ. ನಂತರ ದೂರುದಾರರು ನಡೆದುಕೊಂಡು ಆರ್.ವಿ. ಕಾಲೇಜಿಗೆ ಮರಳಿ, ತಮ್ಮ ಸ್ನೇಹಿತರಾದ ವಿನೋದ್ ಪಿ. ಮತ್ತು ಜಯಕುಮಾರ್ ಜೊತೆಗೂಡಿ ರಾಷ್ಟ್ರೋತ್ಥಾನ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದ್ದರಿಂದ, ತನ್ನನ್ನು ಅಪಹರಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್, ಸಮೀದ್ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ"
ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲು?
115(2): ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು
118(1): ಅಪಾಯಕಾರಿ ಆಯುಧ/ಸಾಧನಗಳನ್ನು ಬಳಸಿ ಗಾಯ ಉಂಟುಮಾಡುವುದು
352: ಶಾಂತಿಭಂಗ ಉಂಟುಮಾಡುವ ಉದ್ದೇಶದಿಂದ ಅವಮಾನಿಸುವುದು
351(2): ಕ್ರಿಮಿನಲ್ ಬೆದರಿಕೆ
3(5): ಸಾಮಾನ್ಯ ಉದ್ದೇಶದೊಂದಿಗೆ ಕೃತ್ಯವೆಸಗುವುದು (ಸಾಮೂಹಿಕ ಹೊಣೆಗಾರಿಕೆ)
137(2): ಅಪಹರಣ
ಈ ಮೇಲ್ಕಂಡ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.