`ಧುರಂಧರ್', 'ಹನುಮಾನ್ ಅಂಶ್' ಹಿಂದಿಕ್ಕಿ ಆಸ್ಕರ್ ಅಂಗಳಕ್ಕೆ ಜಿಗಿದ ಮರಾಠಿಯ 'ಗೋಂಧಲ್' ಸಿನಿಮಾ; ಏನಿದರ ಕಥೆ?
Gondhal Marathi Movie: ಮರಾಠಿಯ 'ಗೋಂಧಲ್' ಸಿನಿಮಾ ಭಾರತದ ಪರವಾಗಿ 99ನೇ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಸಂತೋಷ್ ದಾವಖರ್ ನಿರ್ದೇಶನದ ಈ ಸಿನಿಮಾವು ರಣವೀರ್ ಸಿಂಗ್‌ರ 'ಧುರಂಧರ್' ಹಾಗೂ ಭಕ್ತಿಪ್ರಧಾನ 'ಹನುಮಾನ್ ಅಂಶ್' ಚಿತ್ರಗಳನ್ನು ಹಿಂದಿಕ್ಕಿದೆ. ಇಳಯರಾಜಾ ಅವರ ಹಿನ್ನೆಲೆ ಸಂಗೀತವಿರುವ 'ಗೋಂಧಲ್' ಚಿತ್ರವು ಮರಾಠಿಯಲ್ಲಿ ಭರ್ಜರಿ ಯಶಸ್ಸು ಕಂಡಿದೆ.
-
ಜಾಗತಿಕ ಚಿತ್ರರಂಗದ ಅತ್ಯುನ್ನತ ಗೌರವವಾದ ಅಕಾಡೆಮಿ ಪ್ರಶಸ್ತಿಗೆ (ಆಸ್ಕರ್-2027) ಭಾರತದ ಅಧಿಕೃತ ಪ್ರವೇಶವಾಗಿ ಮರಾಠಿ ಭಾಷೆಯ ಸಂತೋಷ್ ದಾವಖರ್ ನಿರ್ದೇಶನದ ‘ಗೋಂಧಲ್’ ಚಿತ್ರ ಆಯ್ಕೆಯಾಗಿದೆ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ ಹಿಂದಿಯ ಬೃಹತ್ ಬಜೆಟ್‌ನ ಬ್ಲಾಕ್‌ಬಸ್ಟರ್ ‘ಧುರಂಧರ್’ ಹಾಗೂ ಈ ವರ್ಷದ ಭಕ್ತಿಪ್ರಧಾನ ಸೂಪರ್‌ಹಿಟ್ ‘ಹನುಮಾನ್ ಅಂಶ್’ ಸೇರಿದಂತೆ ಘಟಾನುಘಟಿ ಸಿನಿಮಾಗಳನ್ನು ‘ಗೋಂಧಲ್’ ಹಿಂದಿಕ್ಕಿದೆ. ಈ ಅಪರೂಪದ ಗೌರವವನ್ನು ತನ್ನದಾಗಿಸಿಕೊಂಡಿದೆ ಎಂದು ಭಾರತೀಯ ಚಲನಚಿತ್ರ ಒಕ್ಕೂಟ (FFI) ಅಧಿಕೃತವಾಗಿ ಪ್ರಕಟಿಸಿದೆ.
ಈ ಮೂಲಕ 99ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ‘ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ’ (Best International Feature Film) ವಿಭಾಗದಲ್ಲಿ ‘ಗೋಂಧಲ್’ ಭಾರತವನ್ನು ಪ್ರತಿನಿಧಿಸಲಿದೆ.
ಈ ಸಿನಿಮಾದ ಕಥೆ ಏನು?
ಮಹಾರಾಷ್ಟ್ರದ ಗ್ರಾಮೀಣ ಜನಪದ ಆಚರಣೆ ಹಾಗೂ ಮಾನವೀಯ ದೌರ್ಬಲ್ಯಗಳ ಸಂಘರ್ಷದ ಸುತ್ತ ‘ಗೋಂಧಲ್’ ಚಿತ್ರದ ಕಥಾಹಂದರ ಸಾಗುತ್ತದೆ. ಮದುವೆಯ ನಂತರ ದಂಪತಿಯ ಜೀವನದಲ್ಲಿನ ವಿಘ್ನಗಳನ್ನು ನಿವಾರಿಸಲು ರಾತ್ರಿಯಿಡೀ ನಡೆಸುವ ಸಾಂಪ್ರದಾಯಿಕ ಧಾರ್ಮಿಕ ವಿಧಿ ‘ಗೋಂಧಲ್’. ಇಂತಹ ಪವಿತ್ರ ಧಾರ್ಮಿಕ ಆಚರಣೆಯ ರಾತ್ರಿಯಲ್ಲಿ ವೈಯಕ್ತಿಕ ದುರಾಸೆ, ದ್ವೇಷ, ಸಂಬಂಧಗಳ ಸಂಕೀರ್ಣತೆ ಹಾಗೂ ಅಸೂಯೆ ಹೇಗೆ ಒಂದು ನಿಗೂಢ ಅಪರಾಧದ ಕಗ್ಗಂಟಾಗಿ ಬದಲಾಗುತ್ತದೆ ಎಂಬುದನ್ನು ಚಿತ್ರ ಅತ್ಯಂತ ರೋಚಕವಾಗಿ ತೆರೆದಿಡುತ್ತದೆ.
ಕಿಶೋರ್ ಕದಮ್, ಇಶಿತಾ ದೇಶ್‌ಮುಖ್, ಯೋಗೇಶ್ ಸೋಹೊನಿ ಹಾಗೂ ನಿಶಾದ್ ಭೋಯಿರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಮಾಂತ್ರಿಕ ಸಂಗೀತ ನಿರ್ದೇಶಕ ಇಳಯರಾಜಾ ಅವರ ಹಿನ್ನೆಲೆ ಸಂಗೀತವಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಸಂತೋಷ್ ದಾವಖರ್ ಅವರು 2025ರ ಇಫಿ (IFFI) ಸಿನಿಮೋತ್ಸವದಲ್ಲಿ ʻಸಿಲ್ವರ್ ಪೀಕಾಕ್ʼ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.
‘ಗೋಂಧಲ್’ ಆಯ್ಕೆ ಆಗಿದ್ದೇಗೆ?
ಆಸ್ಕರ್ ಸ್ಪರ್ಧೆಯ ಕಣದಲ್ಲಿ ಈ ಬಾರಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಪಿ. ಶೇಷಾದ್ರಿ, ವಿಜಯ್ ಪಾಟ್ಕರ್, ತನಿಷ್ಠಾ ಚಟರ್ಜಿ ಸೇರಿದಂತೆ ಖ್ಯಾತ ಸಿನಿಮಾ ತಜ್ಞರಿದ್ದ ತೀರ್ಪುಗಾರರ ಸಮಿತಿಯ ಮುಂದೆ ಒಟ್ಟು 33 ಚಿತ್ರಗಳು ಪ್ರದರ್ಶನಗೊಂಡಿದ್ದವು. ಇವುಗಳಲ್ಲಿ 14 ಹಿಂದಿ, ತಲಾ 4 ಮರಾಠಿ, ತೆಲುಗು ಮತ್ತು ಗುಜರಾತಿ, 3 ತಮಿಳು, ತಲಾ ಒಂದು ಮಲಯಾಳಂ ಮತ್ತು ನಾಗಾಮೀಸ್ ಹಾಗೂ ಒಂದು ಮೂಕಿ ಚಿತ್ರ ಸೇರಿದಂತೆ ದೇಶದ ವಿವಿಧ ಭಾಷೆಗಳ ಪ್ರಮುಖ ಕಲಾಕೃತಿಗಳು ಸ್ಪರ್ಧೆಯಲ್ಲಿದ್ದವು.
ಅಳಿಯ ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರ ನೋಡಿ ಮಾವ ಪ್ರಕಾಶ್ ಪಡುಕೋಣೆ ಹೇಳಿದ್ದೇನು?
ಕಥೆಯ ಆಳ, ದೇಸಿಯ ಸೊಗಡು ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಮೇಕಿಂಗ್‌ನಿಂದಾಗಿ ಜ್ಯೂರಿ ಮಂಡಳಿಯು ಅಂತಿಮವಾಗಿ ‘ಗೋಂಧಲ್’ ಚಿತ್ರವನ್ನು ಆಯ್ಕೆ ಮಾಡಿದೆ. ಈ 99ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು 2027ರ ಮಾರ್ಚ್ 14 ರಂದು ಲಾಸ್ ಏಂಜಲೀಸ್‌ನ ಪ್ರಸಿದ್ಧ ಡಾಲ್ಬಿ ಥಿಯೇಟರ್‌ನಲ್ಲಿ ವೈಭವದಿಂದ ನಡೆಯಲಿದೆ.
ಪೈಪೋಟಿ ನೀಡಿದ್ದ ಧುರಂಧರ್, ಹನುಮಾನ್ ಅಂಶ್
ಸ್ಪರ್ಧೆಯಲ್ಲಿದ್ದ ಇತರ ಪ್ರಮುಖ ಸಿನಿಮಾಗಳ ವಿವರ ನೋಡುವುದಾದರೆ, ಆದಿತ್ಯ ಧರ್ ನಿರ್ದೇಶನದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಸಂಜಯ್ ದತ್ ಹಾಗೂ ಅಕ್ಷಯ್ ಖನ್ನಾ ತಾರಾಗಣದಲ್ಲಿ ಮೂಡಿಬಂದಿದ್ದ ಸ್ಪೈ ಥ್ರಿಲ್ಲರ್ ‘ಧುರಂಧರ್’ ಆಸ್ಕರ್ ರೇಸ್‌ನಲ್ಲಿ ಮುಂಚೂಣಿಯಲ್ಲಿತ್ತು.
ಇದರೊಂದಿಗೆ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ನಿರ್ದೇಶಕ ಡಾ. ವಿಶಾಲ್ ಚತುರ್ವೇದಿ ಅವರ 'ಡಿವೈನ್ ಡಿಟೂರ್' ಪುಸ್ತಕ ಆಧಾರಿತ, ಶೋಭಿನವ್ ಸತ್ಯಾ ಮತ್ತು ಚಂದನ್ ಆನಂದ್ ಅಭಿನಯದ ಈ ವರ್ಷದ ಅತಿ ಹೆಚ್ಚು ಗಳಿಕೆಯ ಮೂರನೇ ಚಿತ್ರ ‘ಹನುಮಾನ್ ಅಂಶ್’ ಕೂಡ ಪ್ರಬಲ ಪೈಪೋಟಿ ನೀಡಿತ್ತು. ಆದಾಗ್ಯೂ, ಬಾಕ್ಸಾಫೀಸ್ ಗಣಿತವನ್ನು ಮೀರಿ ಕಂಟೆಂಟ್ ಆಧಾರಿತವಾಗಿ ‘ಗೋಂಧಲ್’ ಸಿನಿಮಾವನ್ನು ಜಾಗತಿಕ ವೇದಿಕೆಗೆ ಭಾರತದ ಧ್ವನಿಯಾಗಿ ಆಯ್ಕೆ ಮಾಡಿರುವುದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.