ʻಬಿಗ್ ಬಾಸ್ʼ ಶೋನಿಂದ ಆಫರ್ ಬಂದರೂ ಮೇಘಾ ಶೆಟ್ಟಿ ಹೋಗುತ್ತಿಲ್ಲವೇಕೆ? ಇಲ್ಲಿದೆ ನೋಡಿ ಉತ್ತರ
'ಜೊತೆ ಜೊತೆಯಲಿ' ಧಾರಾವಾಹಿಯ ಖ್ಯಾತ ನಟಿ ಮೇಘಾ ಶೆಟ್ಟಿ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಹೋಗಲಿದ್ದಾರೆಂಬ ವದಂತಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ. ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ, ಬಿಡುವಿಲ್ಲದ ಚಿತ್ರೀಕರಣ ಹಾಗೂ ಸಿನಿಮಾ ಡೇಟ್ಸ್ ಸಮಸ್ಯೆಯಿಂದಾಗಿ ಶೋ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
-
‘ಜೊತೆ ಜೊತೆಯಲಿ’ ಎಂಬ ಅತ್ಯಂತ ಜನಪ್ರಿಯ ಧಾರಾವಾಹಿಯಲ್ಲಿ ‘ಅನು ಸಿರಿಮನೆ’ ಪಾತ್ರದ ಮೂಲಕ ನಾಡಿನ ಮನೆಮಾತಾಗಿದ್ದ ನಟಿ ಮೇಘಾ ಶೆಟ್ಟಿ, ಆನಂತರ ಬೆಳ್ಳಿಪರದೆಯತ್ತ ಮುಖ ಮಾಡಿದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಮೇಘಾ ಶೆಟ್ಟಿ. ಇತ್ತೀಚೆಗೆ ‘ಬಿಗ್ ಬಾಸ್’ ರಿಯಾಲಿಟಿ ಶೋ ಆರಂಭದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪುನಃ ಮೇಘಾ ಶೆಟ್ಟಿ ಹೆಸರು ಭಾರಿ ಸದ್ದು ಮಾಡುತ್ತಿದೆ. ಹಾಗಾದರೆ, ಈ ಬಾರಿಯಾದರೂ ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರಾ? ಈ ಕುರಿತು ಸ್ವತಃ ಮೇಘಾ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸಾಮಾನ್ಯವಾಗಿ ಪ್ರತಿ ಸೀಸನ್ ಆರಂಭವಾಗುವಾಗಲೂ ಮೇಘಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ಸಹಜವಾಗಿದೆ. ಆದರೆ, ಅವರು ಮಾತ್ರ ಇದುವರೆಗೂ ಯಾವುದೇ ಸೀಸನ್‌ಗೆ ಹೋಗಿಲ್ಲ. ಈ ವರ್ಷ ಅವರಿಗೆ ಕಾರ್ಯಕ್ರಮದಿಂದ ಆಹ್ವಾನ ಬಂದಿದೆಯೇ? ಸದ್ಯಕ್ಕಂತೂ ಇಲ್ಲ!
ಮುಂದೆ ಏನಾಗಲಿದೆಯೋ ನೋಡೋಣ
ಪ್ರಸ್ತುತ ‘ಬಿಗ್ ಬಾಸ್ ಕನ್ನಡ 13’ರ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬರುತ್ತಿದ್ದಂತೆಯೇ ಮೇಘಾ ಅವರ ಹೆಸರೂ ಕೇಳಿಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮೇಘಾ, "ಈ ಬಾರಿ ನನ್ನ ಹೆಸರು ಕೇಳಿಬರುತ್ತಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಪ್ರತಿ ವರ್ಷವೂ ನನ್ನ ಹೆಸರು ಮುಂಚೂಣಿಯಲ್ಲಿ ಇರುತ್ತಿತ್ತು. ಸದ್ಯಕ್ಕೆ ನಾನು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವುದರಿಂದ, ಬಿಗ್ ಬಾಸ್ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಏನಾಗಲಿದೆಯೋ ನೋಡೋಣ" ಎಂದು ಹೇಳುವ ಮೂಲಕ ಸದ್ಯಕ್ಕಂತೂ ತಾವು ಶೋಗೆ ಹೋಗುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
Ramya and Vinay Rajkumar: ನಟ ವಿನಯ್ ರಾಜ್‌ಕುಮಾರ್ ಜೊತೆ ರಮ್ಯಾ ಡೇಟಿಂಗ್? ಏನಿದು ರೂಮರ್ಸ್?
ಡೇಟ್ಸ್ ಹೊಂದಿಸೋಕೆ ಆಗಲ್ಲ!
ಪ್ರತಿ ಬಾರಿಯೂ ಬಿಗ್ ಬಾಸ್ ಕಡೆಯಿಂದ ಆಫರ್ ಬಂದರೂ ಅವರು ಒಪ್ಪಿಕೊಳ್ಳದಿರಲು ಮುಖ್ಯ ಕಾರಣ ಸಿನಿಮಾ ಡೇಟ್ಸ್ ಅಭಾವವಂತೆ! ಈ ಬಗ್ಗೆ ಮಾತನಾಡಿದ ಅವರು, "ಕಳೆದ ಬಾರಿ ‘ಕೈವ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಬಿಗ್ ಬಾಸ್ ಆಫರ್ ಬಂದಿತ್ತು. ಈಗ ‘ಗ್ರಾಮಾಯಣ’ ಚಿತ್ರದ ಬಿಡುಗಡೆಯ ಕೆಲಸಗಳಿವೆ. ಇದಕ್ಕೂ ಮುನ್ನ ಧಾರಾವಾಹಿಯ ಚಿತ್ರೀಕರಣ ಇರುತ್ತಿತ್ತು. ಹೀಗೆ ಸತತವಾಗಿ ಸಿನಿಮಾಗಳ ಕೆಲಸಗಳು ಇರುವುದರಿಂದ ಬಿಗ್ ಬಾಸ್‌ಗೆ ದಿನಾಂಕಗಳನ್ನು ಹೊಂದಿಸುವುದು ಕೊಂಚ ಕಷ್ಟವಾಗುತ್ತದೆ" ಎಂದು ತಮ್ಮ ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ. ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿರುವ ಮೇಘಾ ಶೆಟ್ಟಿ ಅವರು ಚಿತ್ರರಂಗದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದು, ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Vinay Rajkumar: ಎಲ್ಲರ ಗಮನಸೆಳೆದ ʻಗ್ರಾಮಾಯಣʼ ಟ್ರೇಲರ್; ಇದು ಅಗಲಿದ ನಿರೂಪಕಿ ಅಪರ್ಣಾ ನಟನೆಯ ಕೊನೇ ಸಿನಿಮಾ!
ತೆರೆಕಂಡಿರುವ ʻಗ್ರಾಮಾಯಣʼ ಸಿನಿಮಾ
ಸದ್ಯ ವಿನಯ್ ರಾಜ್‌ಕುಮಾರ್ ನಾಯಕತ್ವದ ʻಗ್ರಾಮಾಯಣʼ ಸಿನಿಮಾದಲ್ಲಿ ನಟಿ ಮೇಘಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದೇವನೂರು ಚಂದ್ರು ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಲಹರಿ ಸಂಸ್ಥೆ ನಿರ್ಮಾಣ ಮಾಡಿದೆ. ಜುಲೈ 3ರಂದು ತೆರೆಕಂಡಿರುವ ಈ ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಕೂಡ ದೊಡ್ಡ ಹಿಟ್ ಆಗಿದ್ದವು. ಈಗ ಸಿನಿಮಾಕ್ಕೂ ಒಳ್ಳೆಯ ರೆಸ್ಪಾನ್ಸ್ ಸಕ್ಕಿರುವುದು ಸಹಜವಾಗಿಯೇ ಮೇಘಾ ಮತ್ತು ವಿನಯ್‌ಗೆ ಖುಷಿ ನೀಡಿದೆ.