ʻಇದು ವಿಚಾರಣೆಗೆ ಅರ್ಹವಲ್ಲದ ಅರ್ಜಿʼ; ದರ್ಶನ್‌ಗೆ ಸುಪ್ರೀಂ ಕೋರ್ಟ್ ʻಬಿಗ್ʼ ಶಾಕ್! ಜಾಮೀನಿನ ಬಗ್ಗೆ ಸದ್ಯಕ್ಕೆ ಯೋಚನೆಯೂ ಮಾಡಂಗಿಲ್ಲ `ದಾಸ'!
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಆದೇಶದ ತಿದ್ದುಪಡಿಗೆ ಕೋರಿದ್ದ ಅರ್ಜಿ ರಿಜಿಸ್ಟ್ರಾರ್ ಕಚೇರಿ ಮಟ್ಟದಲ್ಲೇ ತಿರಸ್ಕೃತಗೊಂಡಿದ್ದು, ದರ್ಶನ್ ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿದೆ. ಈ ಮೂಲಕ ದರ್ಶನ್ ಅವರ ಕಾನೂನು ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಹಾಗೂ ಜೈಲುವಾಸ ಮುಂದುವರಿದಿದೆ.
-
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ತಿದ್ದುಪಡಿ ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ನ ರಿಜಿಸ್ಟ್ರಾರ್ ಕಚೇರಿ ತಿರಸ್ಕರಿಸಿದೆ. "ಇದು ವಿಚಾರಣೆಗೆ ಅರ್ಹವಲ್ಲದ ಅರ್ಜಿ" ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್, ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದು ದರ್ಶನ್ ಪರ ವಕೀಲರಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಹಾಗಾಗಿ, ದರ್ಶನ್ ಸಲ್ಲಿಸಿದ್ದ ಅರ್ಜಿಯು ನ್ಯಾಯಪೀಠಕ್ಕೂ ಬರದೇ ರಿಜೆಕ್ಟ್ ಆಗಿದೆ.
ಏನಿದು ದರ್ಶನ್ ಕೋರಿದ್ದ ಮನವಿ?
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್, ಒಂದು ವರ್ಷದ ಅವಧಿಯವರೆಗೆ ಯಾವುದೇ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನಟ ದರ್ಶನ್‌ಗೆ ಕಠಿಣ ಸೂಚನೆ ನೀಡಿತ್ತು. ಆದರೆ, ಈ ಆದೇಶವನ್ನು ಮಾರ್ಪಾಡು ಮಾಡಬೇಕು ಮತ್ತು ಭವಿಷ್ಯದಲ್ಲಿ ತುರ್ತು ಪರಿಸ್ಥಿತಿಗಳು ಎದುರಾದಾಗ ಜಾಮೀನು ಕೋರಲು ತಮಗೆ ಕಾನೂನಾತ್ಮಕ ಅವಕಾಶ ನೀಡಬೇಕು ಎಂದು ಕೋರಿ ದರ್ಶನ್ ಸುಪ್ರೀಂಕೋರ್ಟ್‌ಗೆ ತಿದ್ದುಪಡಿ ಅರ್ಜಿ ಸಲ್ಲಿಸಿದ್ದರು. ಆದರೆ, ರಿಜಿಸ್ಟ್ರಾರ್ ಮಟ್ಟದಲ್ಲೇ ಈ ಅರ್ಜಿ ತಿರಸ್ಕೃತಗೊಂಡಿರುವುದರಿಂದ ದರ್ಶನ್ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.
Darshan Case: ರೇಣುಕಾಸ್ವಾಮಿ ಕೇಸ್: ದರ್ಶನ್ ಗ್ಯಾಂಗ್‌ನ ಈ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾ
ಅರ್ಜಿಯಲ್ಲಿ ದರ್ಶನ್ ತಿಳಿಸಿದ್ದ ಪ್ರಮುಖ ಅಂಶಗಳೇನು?
ಒಂದು ವರ್ಷದವರೆಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಇಲ್ಲದಿರುವ ಆದೇಶದಿಂದಾಗಿ ಟ್ರಯಲ್ (ವಿಚಾರಣೆ) ಇನ್ನಷ್ಟು ವಿಳಂಬವಾಗಬಹುದು ಎಂದು ದರ್ಶನ್ ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಒಂದು ವರ್ಷದ ನಿರ್ಬಂಧದಿಂದಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ಮಾನವೀಯ ನೆಲೆಗಳಲ್ಲಿ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ತಮ್ಮ ತಾಯಿಯವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ತಮ್ಮ ದೀರ್ಘಾವಧಿಯ ಬಂಧನವನ್ನು ನ್ಯಾಯಾಲಯ ಪರಿಶೀಲಿಸಬೇಕು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಯ ಹಕ್ಕು ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದು ದರ್ಶನ್ ವಾದಿಸಿದ್ದರು. ಜೊತೆಗೆ ದೀರ್ಘಾವಧಿಯ ಬಂಧನದಿಂದ ತಮ್ಮ ವೃತ್ತಿಜೀವನ, ಜೀವನೋಪಾಯ ಹಾಗೂ ಕುಟುಂಬಕ್ಕೆ ತೀವ್ರ ಹಾನಿಯಾಗಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದರು.
Actor Darshan: ಧನ್ವೀರ್‌ಗೆ ಸಾಥ್ ಕೊಟ್ಟ ದರ್ಶನ್; `ಡಿ ಬಾಸ್' ಪೋಸ್ಟ್‌ನಲ್ಲಿ ಏನಿದೆ?
ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು, ಸದ್ಯಕ್ಕೆ ಜಾಮೀನಿಗೆ ಮನವಿ ಮಾಡದೇ ಇದ್ದರೂ, ಭವಿಷ್ಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಕಾನೂನು ಮಾರ್ಗವನ್ನು ಮುಕ್ತವಾಗಿಟ್ಟುಕೊಳ್ಳಲು ನಟ ದರ್ಶನ್ ಪ್ರಯತ್ನ ನಡೆಸಿದ್ದರು. ಆದರೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಅರ್ಜಿ ತಿರಸ್ಕರಿಸಿರುವುದರಿಂದ ದರ್ಶನ್ ಅವರಿಗೆ ಸದ್ಯಕ್ಕೆ ಯಾವುದೇ ಪರಿಹಾರ ಸಿಗದಂತಾಗಿದೆ.