ʻನಾನು ಹೆಮ್ಮೆಯ ಅಂಧಭಕ್ತೆ..’ ಎಂದ ಇಶಾ ಕೊಪ್ಪಿಕರ್; ಹೇಳಿಕೆ ತಿರುಚಿದವರಿಗೆ ‘ಸೂರ್ಯವಂಶ’ ನಟಿಯ ಖಡಕ್ ತಿರುಗೇಟು!
ನಟಿ ಇಶಾ ಕೊಪ್ಪಿಕರ್ ಅವರು ಇತ್ತೀಚೆಗೆ ತಮ್ಮನ್ನು 'ಹೆಮ್ಮೆಯ ಅಂಧಭಕ್ತೆ' ಎಂದು ಕರೆದುಕೊಂಡಿದ್ದ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ತಿರುಚಿದ ಟ್ರೋಲರ್ಸ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ನಿಷ್ಠೆ ಇರುವುದು ದೇಶಕ್ಕೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕಲ್ಲ ಎಂದಿದ್ದಾರೆ.
-
ಕನ್ನಡದ ‘ಸೂರ್ಯವಂಶ’ ಚಿತ್ರ ಖ್ಯಾತಿಯ ನಟಿ ಇಶಾ ಕೊಪ್ಪಿಕರ್ ಅವರು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದ ಅವರು, ತಮ್ಮನ್ನು ‘ಹೆಮ್ಮೆಯ ಅಂಧಭಕ್ತೆ’ ಎಂದು ಕರೆದುಕೊಂಡಿದ್ದರು. ಈ ಹೇಳಿಕೆ ಭಾರಿ ಸದ್ದು ಮಾಡುತ್ತಿದ್ದಂತೆ, ತಮ್ಮ ಮಾತಿನ ಸಂದರ್ಭ ಮತ್ತು ಅರ್ಥವನ್ನು ತಿರುಚಿ ಗೊಂದಲ ಸೃಷ್ಟಿಸಿದವರಿಗೆ ನಟಿ ಇಶಾ ಖಡಕ್ ಸ್ಪಷ್ಟನೆ ನೀಡಿದ್ದಾರೆ.
‘ಅಂಧಭಕ್ತ’ರಾಗಲು ಏಕೆ ಸಾಧ್ಯವಿಲ್ಲ?
ಸಾಮಾನ್ಯವಾಗಿ ‘ಅಂಧಭಕ್ತ’ ಎಂಬ ಪದವನ್ನು ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ನಾಯಕರನ್ನು ಕುರುಡಾಗಿ ಬೆಂಬಲಿಸುವವರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಆದರೆ, ಇಶಾ ಕೊಪ್ಪಿಕರ್ ಅವರ ಹೇಳಿಕೆ ಪರ-ವಿರೋಧ ಚರ್ಚೆಗೆ ಕಾರಣವಾದ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಟಿಪ್ಪಣಿ ಹಂಚಿಕೊಂಡಿರುವ ನಟಿ ಇಶಾ ಕೊಪ್ಪಿಕರ್, "ಜನರನ್ನು ದಾರಿ ತಪ್ಪಿಸಲು ಪದಗಳನ್ನು ತಿರುಚುವವರಿಗೆ ನನ್ನದೊಂದು ಪ್ರಶ್ನೆ, ನೀವು ಪ್ರೀತಿಯಲ್ಲಿ ಅಂಧರಾಗಲು ಸಾಧ್ಯ ಎಂದಾದರೆ, ದೇಶದ ಮೇಲಿನ ಪ್ರೀತಿಯಲ್ಲಿ ‘ಅಂಧಭಕ್ತ’ರಾಗಲು ಏಕೆ ಸಾಧ್ಯವಿಲ್ಲ? ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಅಂಧಭಕ್ತನೂ ಮತ್ತು ದೇಶಭಕ್ತನೂ ಆಗಿರಲು ಸಾಧ್ಯ" ಎಂದು ತಿರುಗೇಟು ನೀಡಿದ್ದಾರೆ.
ಈ ದೇಶ ನನಗೆ ಅನ್ನ ನೀಡಿದೆ
ತಮ್ಮ ಮೂಲ ವಿಡಿಯೋ ಸಂದೇಶದಲ್ಲಿ ಇಶಾ ಕೊಪ್ಪಿಕರ್, "ದೇಶವನ್ನು ಪ್ರೀತಿಸುವುದು ಹಾಗೂ ಅದರ ಪ್ರಗತಿಯನ್ನು ಬಯಸುವುದು ಭಕ್ತಿಯಾಗಿದ್ದರೆ, ಅಂತಹ ಅಂಧಭಕ್ತೆ ಎಂದು ಕರೆದುಕೊಳ್ಳಲು ನನಗೆ ಹೆಮ್ಮೆಯಿದೆ. ನನ್ನ ಈ ಭಕ್ತಿ ಯಾವುದೇ ರಾಜಕೀಯ ಪಕ್ಷದ ಮೇಲಲ್ಲ, ನನ್ನ ದೇಶದ ಮೇಲಿದೆ. ನನಗೆ ದೇಶವೇ ಮೊದಲು. ನಾನು ಸರ್ಕಾರದ ನೀತಿಗಳನ್ನು ಪ್ರಶ್ನಿಸಬಹುದು, ಭಿನ್ನಾಭಿಪ್ರಾಯವನ್ನೂ ಹೊಂದಿರಬಹುದು; ಆದರೂ ನನ್ನ ದೇಶವನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು. ಜೊತೆಗೆ, "ಈ ದೇಶ ನನಗೆ ಅನ್ನ ಹಾಗೂ ಅವಕಾಶಗಳನ್ನು ನೀಡಿದ್ದು, ದೇಶದ ಬಗ್ಗೆ ಹೆಮ್ಮೆಪಡಲು ಯಾವುದೇ ಮುಜುಗರವಿಲ್ಲ" ಎಂದೂ ತಿಳಿಸಿದ್ದರು.
Star Fashion 2026: ಎಮರಾಲ್ಡ್ ಸಿಕ್ವಿನ್ಸ್ ಗೌನ್‌ನಲ್ಲಿ ಗ್ಲಾಮರಸ್ ಆಗಿ ಕಂಡ ಇಶಾ ಕೊಪ್ಪಿಕರ್
ಕಂಗನಾ ರಣಾವತ್ ಬೆಂಬಲ
ಇಶಾ ಕೊಪ್ಪಿಕರ್ ಅವರ ಈ ದೇಶಭಕ್ತಿಯ ಹೇಳಿಕೆಗೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಶಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಕಂಗನಾ, "ನಾನೂ ಕೂಡ ಇಶಾ ಅವರ ಭಾವನೆಯನ್ನು ಅರ್ಥಮಾಡಿಕೊಳ್ಳಬಲ್ಲೆ" ಎಂದು ಹೇಳುತ್ತಾ, ಅನ್ಯಾಯದ ವಿರುದ್ಧ ತಾವು ಧ್ವನಿ ಎತ್ತಿದ ಹಿಂದಿನ ಅನುಭವಗಳನ್ನು ನೆನಪಿಸಿಕೊಂಡು ದೇಶದ ಮೇಲಿನ ಪ್ರೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.