Thalapathy Vijay: ʻಜನ ನಾಯಗನ್ʼ ಚಿತ್ರಕ್ಕೆ ತಪ್ಪದ ಸಂಕಷ್ಟ, ಸದ್ಯಕ್ಕೆ ಸಿಗೋದಿಲ್ಲ ಸೆನ್ಸಾರ್ ಸರ್ಟಿಫಿಕೇಟ್; ಕೋರ್ಟ್‌ನಲ್ಲಿ ಮತ್ತೆ ಹೈಡ್ರಾಮಾ!
Jana Nayagan Legal Battle: ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾದ ಕುರಿತ ವಿಚಾರಣೆ ಇಂದು (ಜ.9) ನಡೆದಿದೆ. ಆದರೆ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ನಾಟಕೀಯ ಬೆಳವಣಿಗೆಯಿಂದ ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.
-
ʻದಳಪತಿʼ ವಿಜಯ್ ಅವರ ಹೊಸ ಸಿನಿಮಾ ಜನ ನಾಯಗನ್‌ಗೆ (Jana Nayagan) ಸಮಸ್ಯೆಗಳ ಮೇಲೆ ಸಮಸ್ಯೆಗಳು ಎದುರಾಗುತ್ತಿವೆ. ಸೆನ್ಸಾರ್ ಸಮಸ್ಯೆಯಿಂದ ಈ ಸಿನಿಮಾ ತೆರೆಗೆ ಬರುವುದು ತಡವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಂದು (ಜ.9) ಈ ಸಿನಿಮಾ ರಿಲೀಸ್ ಆಗಿರಬೇಕಿತ್ತು. ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿರುವುದು ಚಿತ್ರತಂಡಕ್ಕೆ ಆಘಾತ ನೀಡಿದೆ.
ಬೆಳಗ್ಗೆ ಒಂದು ತೀರ್ಪು, ಸಂಜೆ ಒಂದು ತೀರ್ಪು!
ಹೌದು, ವಿಜಯ್ ನಟನೆಯ 'ಜನ ನಾಯಗನ್' ಚಿತ್ರದ ಬಿಡುಗಡೆಯ ಬಗ್ಗೆ ಅನಿಶ್ಚಿತತೆ ಮುಂದುವರಿದಿದ್ದು, ನಿರ್ಮಾಪಕರಿಗೆ ತಕ್ಷಣದ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಚಿತ್ರದ ಬಿಡುಗಡೆಗೆ ಇದ್ದ ಅತಿದೊಡ್ಡ ಅಡೆತಡೆ ನಿವಾರಣೆಯಾಯಿತು ಎನ್ನುವಷ್ಟರಲ್ಲಿ, ಪರಿಸ್ಥಿತಿ ಮತ್ತೆ ನಾಟಕೀಯ ತಿರುವು ಪಡೆದಿದೆ. ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠವು ಚಿತ್ರದ ಬಿಡುಗಡೆಗೆ ಹಾದಿ ಮಾಡಿಕೊಟ್ಟಿದ್ದ ಹಿಂದಿನ ಆದೇಶಕ್ಕೆ ತಡೆ ನೀಡಿದೆ. ಇದರ ಪರಿಣಾಮವಾಗಿ, 'ಜನ ನಾಯಗನ್' ಚಿತ್ರಕ್ಕೆ ನೀಡಬೇಕಿದ್ದ ಪ್ರಮಾಣಪತ್ರವನ್ನು (Certification) ಸದ್ಯಕ್ಕೆ ತಡೆಹಿಡಿಯಲಾಗಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುವ ಪ್ರಕ್ರಿಯೆ ಮತ್ತೆ ಸ್ಥಗಿತಗೊಂಡಿದೆ.
ಇಂದು (ಜ.9) ಬೆಳಿಗ್ಗೆಯಷ್ಟೇ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ. ಟಿ. ಆಶಾ ಅವರು ನಿರ್ಮಾಣ ಸಂಸ್ಥೆಯಾದ 'ಕೆವಿಎನ್ ಪ್ರೊಡಕ್ಷನ್ಸ್' ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ಚಿತ್ರಕ್ಕೆ ತಕ್ಷಣವೇ 'U/A (16+)' ಪ್ರಮಾಣಪತ್ರ ನೀಡುವಂತೆ ಸಿಬಿಎಫ್‌ಸಿ (CBFC) ಗೆ ನಿರ್ದೇಶಿಸಿದ್ದರು. ಇದರಿಂದ ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತಿದ್ದ ನಿರ್ಮಾಪಕರಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿತ್ತು, ಆದರೆ ಈಗ ಮುಖ್ಯ ನ್ಯಾಯಮೂರ್ತಿಗಳ ಪೀಠವು ಈ ಆದೇಶಕ್ಕೆ ತಡೆ ನೀಡಿರುವುದರಿಂದ ಮತ್ತೆ ಸಂಕಷ್ಟ ಎದುರಾಗಿದೆ.
ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು ಸಿನಿಮಾ ಬಿಡುಗಡೆಗೆ ಆದೇಶ ನೀಡಿದ ಬೆನ್ನಲ್ಲೇ, ಸಿಬಿಎಫ್‌ಸಿ (CBFC) ತಕ್ಷಣವೇ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಮಧ್ಯಾಹ್ನ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯವು, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು. ಈ ಕಾರಣದಿಂದಾಗಿ, 'ಜನ ನಾಯಗನ್' ಚಿತ್ರಕ್ಕೆ ದೊರೆತಿದ್ದ ಪ್ರಮಾಣಪತ್ರವು ಅಮಾನತ್ತಿನಲ್ಲಿರಲಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯ ಪ್ರಕ್ರಿಯೆ ಮತ್ತೊಮ್ಮೆ ಸ್ಥಗಿತಗೊಂಡಿದೆ.
ಸಂಕ್ರಾಂತಿ ರಜೆಗಳ ನಂತರ, ಅಂದರೆ ಜನವರಿ 21 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ 'ಜನ ನಾಯಗನ್' ಸಿನಿಮಾ ತಕ್ಷಣವೇ ಬಿಡುಗಡೆಯಾಗುವ ಸಾಧ್ಯತೆಗಳು ಕ್ಷೀಣಿಸಿವೆ. ವಿತರಕರು, ಪ್ರದರ್ಶಕರು ಮತ್ತು ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಚಿತ್ರದ ಭವಿಷ್ಯ ಈಗ ಸಂಪೂರ್ಣವಾಗಿ ನ್ಯಾಯಾಲಯದ ಅಂತಿಮ ತೀರ್ಪಿನ ಮೇಲೆ ನಿಂತಿದೆ. ಸೆನ್ಸಾರ್ ಮಂಡಳಿಯ ಕಠಿಣ ನಿಲುವು ಮತ್ತು ಸುದೀರ್ಘ ಕಾನೂನು ಹೋರಾಟದಿಂದಾಗಿ 'ಜನ ನಾಯಗನ್' ಸಿನಿಮಾಗೆ ಸಂಕಷ್ಟಗಳು ಹೆಚ್ಚಾಗಿವೆ.