NTR - ಪ್ರಶಾಂತ್ ನೀಲ್ ಸಿನಿಮಾದ ರಿಲೀಸ್ ಡೇಟ್ ಕೊನೆಗೂ ಫಿಕ್ಸ್; ತಾರಕ್ ದರ್ಶನಕ್ಕೆ 14 ತಿಂಗಳು ಕಾಯಲೇಬೇಕು ಫ್ಯಾನ್ಸ್!
ಎನ್‌ಟಿಆರ್ ಅಭಿನಯದ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದ್ದು, 2027ರ ಜೂನ್ 11ರಂದು ತೆರೆಕಾಣಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಮಾಸ್ ಆಕ್ಷನ್ ಚಿತ್ರದಲ್ಲಿ ಎನ್‌ಟಿಆರ್ ಪವರ್‌ಫುಲ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಮೇ 20ರಂದು ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಗ್ಲಿಂಪ್ಸ್ ಕೂಡ ಬಿಡುಗಡೆಯಾಗಲಿದೆ.
-
ತೆಲುಗು ನಟ ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಮೇಲೆ ನಿರೀಕ್ಷೆಗಳು ದೊಡ್ಡಮಟ್ಟದಲ್ಲಿವೆ. 'ಕೆಜಿಎಫ್' ಹಾಗೂ 'ಸಲಾರ್'ನಂತಹ ಹಿಟ್ ಚಿತ್ರಗಳ ಮೂಲಕ ಬಾಕ್ಸ್ ಆಫೀಸ್ ಅನ್ನೇ ನಡುಗಿಸಿರುವ ಪ್ರಶಾಂತ್ ನೀಲ್, ಈಗ ಎನ್‌ಟಿಆರ್ ಅವರನ್ನು ಮಾಸ್ ಅವತಾರದಲ್ಲಿ ತೋರಿಸಲು ಸಜ್ಜಾಗಿದ್ದಾರೆ. ಸದ್ಯ ಈ ಪ್ರಾಜೆಕ್ಟ್‌ನಿಂದ ಹೊರಬಂದಿರುವ ಹೊಸ ಅಪ್‌ಡೇಟ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
ರಿಲೀಸ್ ಡೇಟ್ ಘೋಷಣೆ
ಎನ್‌ಟಿಆರ್ - ನೀಲ್ ಕಾಂಬಿನೇಷನ್‌ನ ಈ ಸಿನಿಮಾ ಯಾವಾಗ ಬರಲಿದೆ ಎಂಬ ಬಗ್ಗೆ ಫ್ಯಾನ್ಸ್‌ಗೆ ಬಹಳ ಕುತೂಹಲವಿತ್ತು. ಚಿತ್ರತಂಡ ಕೂಡ ರಿಲೀಸ್ ಡೇಟ್ ಬಗ್ಗೆ ಯಾವುದೇ ಕ್ಲಾರಿಟಿ ನೀಡಿರಲಿಲ್ಲ. ಆದರೆ ಇದೀಗ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿದ್ದು, 2027ರ ಜೂನ್ 11ರಂದು ಈ ಸಿನಿಮಾ ರಿಲೀಸ್ ಆಗಲಿದೆ. His Reign... His Soil ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ. ಸದ್ಯ ರಿಲೀಸ್ ಡೇಟ್ ಜೊತೆ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಎನ್‌ಟಿಆರ್ ಅವರ ಶಾಡೋ ಲುಕ್ ಅತ್ಯಂತ ಪವರ್‌ಫುಲ್ ಆಗಿದೆ. ಇದು ಫ್ಯಾನ್ಸ್‌ಗೆ ಖುಷಿ ನೀಡಿದರೂ, ಎನ್‌ಟಿಆರ್ ಅವರನ್ನು ತೆರೆಮೇಲೆ ನೋಡಲು ಬರೋಬ್ಬರಿ 14 ತಿಂಗಳು ಕಾಯಲೇಬೇಕು ಎಂಬುದು ಬೇಸರ ವಿಚಾರ.
ಹುಟ್ಟುಹಬ್ಬಕ್ಕೂ ಇದೆ ಸ್ಪೆಷಲ್ ಗಿಫ್ಟ್
ಇನ್ನು, ಎನ್‌ಟಿಆರ್ ಜನ್ಮದಿನದ ಅಂಗವಾಗಿ ಮೇ 20ರಂದು ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಬಹುಶಃ ಅಂದೇ ಈ ಚಿತ್ರದ ಟೈಟಲ್ ಅನೌನ್ಸ್‌ಮೆಂಟ್ ಆಗುವ ಸಾಧ್ಯತೆ ಇದೆ. ಈವರೆಗೂ ಇದಕ್ಕೆ ʻಡ್ರ್ಯಾಗನ್ʼ ಎಂಬ ಟೈಟಲ್ ಇಡಲಾಗುತ್ತಿದೆ ಎಂಬ ಟಾಕ್ ಇದೆಯಾದರೂ, ಅದಿನ್ನು ಖಚಿತವಾಗಿಲ್ಲ. ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ಸುಮಾರು 350 ಕೋಟಿ ರೂಪಾಯಿಗಳ ಭಾರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿವೆ.
ಇದು ಕೇವಲ ಆಕ್ಷನ್ ಸಿನಿಮಾ ಮಾತ್ರವಲ್ಲದೆ, ಎಮೋಷನಲ್ ಡ್ರಾಮಾವನ್ನು ಕೂಡ ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಈ ಚಿತ್ರಕ್ಕಾಗಿ ಎನ್‌ಟಿಆರ್ ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅವರ ಜಿಮ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈ ಚಿತ್ರಕ್ಕಾಗಿ ಕಠಿಣ ತರಬೇತಿ ಪಡೆದಿರುವ ಅವರು ಪವರ್‌ಫುಲ್ ಮೇಕ್ ಓವರ್‌ನೊಂದಿಗೆ ಕಾಣಿಸಿಕೊಳ್ಳಲಿರುವುದಂತೂ ಖಚಿತ.
ಎನ್‌ಟಿಆರ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಆಲಿಯಾ ಭಟ್ ಕೂಡ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಹರಡಿವೆ. ಇನ್ನು ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಖಳನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಿರಿಯ ನಟ ಅನಿಲ್ ಕಪೂರ್ ಕೂಡ ಈ ಚಿತ್ರದ ಭಾಗವಾಗಿದ್ದಾರೆ.
ರಿಲೀಸ್ ಡೇಟ್ ಘೋಷಣೆ ಮಾಡಿದ ಚಿತ್ರತಂಡ
HIS REIGN… HIS SOIL…
— Jr NTR (@tarak9999) April 21, 2026
JUNE 11, 2027… IT IS…. #NTRNeel pic.twitter.com/ln9Dq4BFZs
ಸದ್ಯ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ಜೋರ್ಡಾನ್‌ನಲ್ಲಿ ಒಂದು ಬೃಹತ್ ಆಕ್ಷನ್ ಶೆಡ್ಯೂಲ್ ಅನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.