ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಿರ್ಮಾಪಕ ಸಿಲ್ಕ್‌ ಮಂಜು ನಿಧನಕ್ಕೆ ಸಂತಾಪ ಸೂಚಿಸಿದ ʻಎʼ ಸಿನಿಮಾ ಖ್ಯಾತಿಯ ನಟಿ ಚಾಂದಿನಿ

ಉಪೇಂದ್ರ ಅಭಿನಯದ ಕಲ್ಟ್ ಕ್ಲಾಸಿಕ್ ‘ಎ’ ಚಿತ್ರಕ್ಕೆ ಹಣ ಹೂಡಿದ್ದ ನಿರ್ಮಾಪಕ ಮಂಜುನಾಥ್‌ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿಗೆ ನಟಿ ಚಾಂದಿನಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮಗೆ ಮೊದಲು ಅವಕಾಶ ನೀಡಿ, ಬಣ್ಣದ ಲೋಕಕ್ಕೆ ಪರಿಚಯಿಸಿದ ಮಂಜುನಾಥ್‌ ಅವರ ವ್ಯಕ್ತಿತ್ವವನ್ನು ಭಾವುಕರಾಗಿ ಸ್ಮರಿಸಿದ್ದಾರೆ.

ನಿರ್ಮಾಪಕ ಸಿಲ್ಕ್ ಮಂಜು ನಿಧನಕ್ಕೆ 'A' ಸಿನಿಮಾ ಖ್ಯಾತಿಯ ಚಾಂದಿನಿ ಸಂತಾಪ

-

Avinash GR
Avinash GR Oct 27, 2026 8:58 PM

ಕನ್ನಡ ಚಿತ್ರರಂಗದ ಟ್ರೆಂಡ್‌ಸೆಟ್ಟರ್ ಹಾಗೂ ಕಲ್ಟ್ ಕ್ಲಾಸಿಕ್ ಎಂದೇ ಹೆಸರಾದ ‘ಎ’ ಚಿತ್ರದ ನಿರ್ಮಾಪಕ ಬಿ.ಜಿ. ಮಂಜುನಾಥ್ (ಸಿಲ್ಕ್ ಮಂಜು) ಅವರು ಸೋಮವಾರ (ಅ.26) ನಿಧನರಾಗಿದ್ದಾರೆ. 65 ವರ್ಷ ವಯಸ್ಸಾಗಿದ್ದ ಅವರು ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ಕಳೆದ ಒಂದೂವರೆ ವರ್ಷದಿಂದ ಡಯಾಲಿಸಿಸ್ ಪಡೆಯುತ್ತಿದ್ದ ಅವರಿಗೆ ಇತ್ತೀಚೆಗಷ್ಟೇ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ಮಾಪಕರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದು, ವಿಶೇಷವಾಗಿ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ಮಾಪಕರನ್ನು ನೆನೆದು ‘ಎ’ ಚಿತ್ರದ ನಾಯಕಿ ಚಾಂದಿನಿ ಸಾಶಾ ಭಾವುಕರಾಗಿ ಸಂತಾಪ ಸೂಚಿಸಿದ್ದಾರೆ.

ಆಸ್ಪತ್ರೆಗೆ ಧಾವಿಸಿದ್ದ ನಟಿ ಚಾಂದಿನಿ

ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ‘ಎ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಟಿ ಚಾಂದಿನಿ, ಮಂಜುನಾಥ್ ಅವರ ಸರಳತೆ ಮತ್ತು ಮಾನವೀಯ ಗುಣಗಳನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಚಿತ್ರ ಬಿಡುಗಡೆಯಾಗಿ ದಶಕಗಳು ಕಳೆದರೂ ನಿರ್ಮಾಪಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಅವರು, ಮಂಜುನಾಥ್ ಅವರ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿಗೆ ಧಾವಿಸಿ ಆಸ್ಪತ್ರೆಯಲ್ಲಿದ್ದ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿಯ ಕ್ಷಣವನ್ನು ನೆನೆದ ಚಾಂದಿನಿ, "ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಅವರ ಮುಖದಲ್ಲಿ ನನ್ನನ್ನು ನೋಡಿದ ತಕ್ಷಣ ದೊಡ್ಡದೊಂದು ನಗು ಮೂಡಿತ್ತು. ಕಣ್ಣೀರಿನ ನಡುವೆಯೂ ನಾನು ನಗುತ್ತಿದ್ದಾಗ, ಅವರು ಕೂಡ ಮಂದಹಾಸ ಬೀರಿದರು. ಆ ಕ್ಷಣ ನನಗೆ ನಮ್ಮ ‘ಎ’ ಚಿತ್ರದ ‘ಸುಮ್ ಸುಮ್ಮನೆ ನಗ್ತಾಳೆ’ ಹಾಡಿನ ಸಾಲುಗಳನ್ನೇ ನೆನಪಿಸಿತ್ತು" ಎಂದು ಭಾವುಕರಾಗಿದ್ದಾರೆ.

Silk Manju: ಉಪೇಂದ್ರ ನಟನೆಯ 'ಎ' ಸಿನಿಮಾದ ನಿರ್ಮಾಪಕ ಸಿಲ್ಕ್ ಮಂಜು ನಿಧನ

ನಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು

ಚಿತ್ರರಂಗವನ್ನು ತಾವು ಕೆಲಸ ಮಾಡಲು ಅತ್ಯಂತ ಸುರಕ್ಷಿತ ಮತ್ತು ಸುಂದರ ಜಾಗವೆಂದು ನಂಬಲು ಸಿಲ್ಕ್ ಮಂಜು ಅವರಂತಹ ವ್ಯಕ್ತಿಗಳೇ ಮುಖ್ಯ ಕಾರಣ ಎಂದಿರುವ ಚಾಂದಿನಿ, ಸಿನಿಮಾರಂಗ ಎಂದರೆ ಒಂದು ಕುಟುಂಬ ಎಂಬ ಭಾವನೆಯನ್ನು ತಮ್ಮಲ್ಲಿ ಮೊದಲ ಬಾರಿಗೆ ಮೂಡಿಸಿದ್ದು ಅವರೇ ಎಂದು ಹೇಳಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಬಂದ ತಮ್ಮನ್ನು ಹಾಗೂ ತಮ್ಮ ಪೋಷಕರನ್ನು ಮಂಜುನಾಥ್ ಅವರು ಅಪಾರ ಪ್ರೀತಿ, ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಇಡೀ ‘ಎ’ ಚಿತ್ರದ ತಂಡವೇ ಒಂದು ಅವಿಭಕ್ತ ಕುಟುಂಬದಂತೆ ಒಗ್ಗಟ್ಟಿನಿಂದ ಕೆಲಸ ಮಾಡುವಂತಹ ಸೌಹಾರ್ದಯುತ ವಾತಾವರಣವನ್ನು ನಿರ್ಮಾಪಕರು ಸೃಷ್ಟಿಸಿದ್ದರು ಎಂದು ಮೆಲುಕು ಹಾಕಿದ್ದಾರೆ.

ಇತ್ತೀಚೆಗಷ್ಟೇ ‘ಎ’ ಸಿನಿಮಾ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಆಗಿ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಗಳಿಸಿದ ಸಂದರ್ಭದಲ್ಲಿ, ಮಂಜುನಾಥ್ ಅವರೊಂದಿಗೆ ಆ ಸಂಭ್ರಮವನ್ನು ಹಂಚಿಕೊಂಡಿದ್ದು ಸದ್ಯಕ್ಕೆ ತಮಗೆ ಸಮಾಧಾನ ತಂದಿತ್ತು ಎಂದು ಚಾಂದಿನಿ ತಿಳಿಸಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಂತಹದೊಂದು ದೈತ್ಯ ಯಶಸ್ಸಿನ ಸಿನಿಮಾವನ್ನು ಕನ್ನಡಿಗರಿಗೆ ನೀಡಲು ತೆರೆಮರೆಯಲ್ಲಿ ಅಪಾರ ಶ್ರಮ ಹಾಕಿದ ಸಿಲ್ಕ್ ಮಂಜು ಅವರಿಗೆ ಚಿತ್ರರಂಗದಿಂದ ಇನ್ನಷ್ಟು ದೊಡ್ಡ ಮಟ್ಟದ ಮನ್ನಣೆ, ಗೌರವಗಳು ಸಿಗಬೇಕಿತ್ತು ಎಂಬ ನೋವನ್ನು ಅವರು ಹಂಚಿಕೊಂಡಿದ್ದಾರೆ.