ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾರ್ಟ್‌ ಚೆಕಪ್‌ ಮಾಡಿಸಿಕೊಳ್ಳೋಕೂ ಮುಂಚೆಯೇ ಇಹಲೋಕ ತ್ಯಜಿಸಿದ ದಿಲೀಪ್‌ ರಾಜ್;‌ ʻಬಾಯ್‌ಫ್ರೆಂಡ್‌ʼ ಬದುಕಲ್ಲಿ ವಿಧಿಯ ಅಟ್ಟಹಾಸ

ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ (47) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾ ಪ್ರವಾಸದ ವೇಳೆ ಕಾಣಿಸಿಕೊಂಡಿದ್ದ ಎದೆನೋವಿನ ಹಿನ್ನೆಲೆಯಲ್ಲಿ ಇಂದೇ ವೈದ್ಯರ ತಪಾಸಣೆಗೆ ಸಮಯ ನಿಗದಿಯಾಗಿತ್ತು. ಆದರೆ ಚಿಕಿತ್ಸೆಗೂ ಮುನ್ನವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಇಂದೇ ಇತ್ತು ಅಪಾಯಿಂಟ್‌ಮೆಂಟ್; ವೈದ್ಯರ ಭೇಟಿಗೂ ಮುನ್ನವೇ ದಿಲೀಪ್ ರಾಜ್ ಸಾವು

-

Avinash GR
Avinash GR May 13, 2026 12:01 PM

ಹಿರಿತೆರೆ ಮತ್ತು ಕಿರುತೆರೆಯಲ್ಲಿ ಹೆಸರುವಾಸಿಯಾಗಿದ್ದ ನಟ, ನಿರ್ಮಾಪಕ ದಿಲೀಪ್‌ ರಾಜ್‌ (47) ಅವರು ಇಂದು (ಮೇ 13) ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಿಲೀಪ್‌ ರಾಜ್‌ ಅವರ ಹಠಾತ್‌ ಸಾವು ಸ್ನೇಹಿತರಿಗೆ, ಆಪ್ತರಿಗೆ, ಅಭಿಮಾನಿಗಳಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ಅಂದಹಾಗೆ, ದಿಲೀಪ್‌ಗೆ ಹೃದಯಾಘಾತದ ಸುಳಿವು ಕೆಲ ದಿನಗಳ ಹಿಂದೆಯೇ ಸಿಕ್ಕಿತ್ತು ಎಂಬ ಮಾಹಿತಿ ಗೊತ್ತಾಗಿದೆ.

ಗೋವಾ ಪ್ರವಾಸದಲ್ಲಿದ್ದಾಗ ಎದೆನೋವು

ಹೌದು, ಕೆಲ ದಿನಗಳ ಹಿಂದಷ್ಟೇ ದಿಲೀಪ್‌ ರಾಜ್‌ ಅವರು ಗೋವಾಕ್ಕೆ ಪ್ರವಾಸ ಹೋಗಿದ್ದರು. ಆಗಲೇ ಅವರಿಗೆ ಎದೆನೋವಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ದಿಲೀಪ್‌, ವೈದ್ಯರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಮೆಡಿಕಲ್‌ ಚೆಕಪ್‌ಗಾಗಿ ವೈದ್ಯರ ಅಪಾಯಿಟ್ಮೆಂಟ್‌ ಅನ್ನು ಕೂಡ ಪಡೆದುಕೊಂಡಿದ್ದರು. ವಿಪರ್ಯಾಸ ಎಂದರೆ, ಅಪಾಯಿಟ್ಮೆಂಟ್‌ ಪ್ರಕಾರ, ಇಂದೇ ದಿಲೀಪ್‌ ರಾಜ್‌ ವೈದ್ಯರನ್ನು ಭೇಟಿಯಾಗಬೇಕಿತ್ತು. ಆದರೆ ಅವರು ಬೆಳಗ್ಗೆ ಎದ್ದೆಳುವುದಕ್ಕೂ ವಿಧಿ ಅವಕಾಶ ನೀಡಿಲ್ಲ.

ಕಿರುತೆರೆ ಖ್ಯಾತ ನಟ ದಿಲೀಪ್‌ ರಾಜ್‌ ಹೃದಯಾಘಾತದಿಂದ ನಿಧನ

ಆಸ್ಪತ್ರೆ ತಲುಪುವ ಮುನ್ನವೇ ನಿಧನ

ತೀವ್ರ ಹೃದಯಾಘಾತವಾಗಿ ದಿಲೀಪ್‌ ಪ್ರಾಣಪಕ್ಷಿ ಹಾರಿಹೋಗಿದೆ. ರಾತ್ರಿ ಮಾಮೂಲಿಯಾಗಿಯೇ ಇದ್ದ ದಿಲೀಪ್‌ ರಾಜ್‌, ಊಟ ಮಾಡಿ ಮಲಗಿದ್ದರು. ಇಂದು ಬೆಳಗ್ಗೆ 5.30ರ ಸುಮಾರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಪತ್ನಿ ವಿದ್ಯಾ ಅವರು ದಿಲೀಪ್‌ರನ್ನು ಹಾಸ್ಪಿಟಲ್‌ಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ದಿಲೀಪ್‌ ರಾಜ್‌ ಅವರು ಕೊನೆಯುಸಿರೆಳೆದಿದ್ದರು. ಕೆಲಸವನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ದಿಲೀಪ್‌, ಮಿಕ್ಕಂತೆ ಎಲ್ಲಾ ವಿಚಾರಗಳಲ್ಲೂ ಹೆಚ್ಚು ಶಿಸ್ತಿನಿಂದ ಇರುತ್ತಿದ್ದರು ಎಂದು ಅವರ ಆಪ್ತರು ಹೇಳುತ್ತಾರೆ.

ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದ ಕಲಾವಿದ

ದಿಲೀಪ್‌ ರಾಜ್‌ ಅವರಿಗೆ ಈಗ 47 ವರ್ಷ ವಯಸ್ಸಾಗಿತ್ತು. ಫಿಟ್‌ನೆಸ್‌ ಬಗ್ಗೆ ತುಂಬಾ ಆದ್ಯತೆ ನೀಡುತ್ತಿದ್ದ ದಿಲೀಪ್‌ ರಾಜ್‌, ಬ್ಯಾಡ್ಮಿಂಟನ್‌ ಅನ್ನು ಆಡುತ್ತಿದ್ದರು. "ದಿಲೀಪ್‌ ರಾಜ್‌ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದ. ತುಂಬಾ ಶಿಸ್ತಿನ ಮನುಷ್ಯ. ಕೆಲಸದ ವಿಚಾರದಲ್ಲಿ ವಿಪರೀತ ಶ್ರದ್ಧೆಯನ್ನು ಹೊಂದಿದ್ದ ನಟ, ಯಾವುದಕ್ಕೂ ಕಾಂಪ್ರಮೈಸ್‌ ಮಾಡಿಕೊಳ್ಳುತ್ತಿರಲಿಲ್ಲ. ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿವಹಿಸುವ ವ್ಯಕ್ತಿಗಳಿಗೆ ಹೀಗೆ ಆಗಿಬಿಟ್ಟರೆ ಹೇಗೆ? ದಿಲೀಪ್‌ ಅವರಂತಹ ಪ್ರತಿಭೆ ಈಗ ಸಿಗುವುದು ಮರೀಚಿಕೆ. ಆತ ಒಬ್ಬ ಅದ್ಭುತ ಕಲಾವಿದ. ನಾನು ಹಿಟ್ಲರ್‌ ಕಲ್ಯಾಣ ಸೀರಿಯಲ್‌ನಲ್ಲಿ ದಿಲೀಪ್‌ಗೆ ನಾನು ತಾಯಿ ಪಾತ್ರ ಮಾಡಿದ್ದೆ. ಈಗಲೂ ಎಲ್ಲರೂ ನನ್ನನ್ನು ಎಜೆ ತಾಯಿ ಅಂತಲೇ ಕರೆಯುತ್ತಾರೆ. ಹೀಗೆ ಆಗಬಾರದಿತ್ತು, ಬಹಳ ದುಃಖವಾಗುತ್ತಿದೆ" ಎಂದು ಹಿರಿಯ ನಟಿ ವಿದ್ಯಾಮೂರ್ತಿ ಹೇಳಿದ್ದಾರೆ.

ಸದ್ಯ ದಿಲೀಪ್‌ ರಾಜ್‌ ಅವರು ಕಿರುತೆರೆಯಲ್ಲಿ ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ್ದರು. ಹಲವು ಹಿಟ್‌ ಸೀರಿಯಲ್‌ಗಳನ್ನು ನೀಡಿದ್ದರು. ಸದ್ಯ ಬ್ರಹ್ಮಗಂಟು ಮತ್ತು ಕೃಷ್ಣ ರುಕ್ಕು ಸೀರಿಯಲ್‌ಗಳನ್ನು ಅವರು ನಿರ್ಮಾಣ ಮಾಡುತ್ತಿದ್ದರು.