ಶಾರುಖ್ ಖಾನ್ ಒಡೆತನದ ʻಮನ್ನತ್ʼ ಅರಮನೆಗೆ ಬಂದ್ವು 8 ಅಡಿ ಉದ್ದದ ಎರಡು ಹಾವುಗಳು; ಒಂದು ರಕ್ಷಣೆ, ಮತ್ತೊಂದು ಏನಾಯ್ತು?
ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ನಿವಾಸ 'ಮನ್ನತ್' ಆವರಣದಲ್ಲಿ ಆಗಸ್ಟ್ 17ರ ರಾತ್ರಿ 8 ಅಡಿ ಉದ್ದದ ಎರಡು ಕೇರೆಹಾವುಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು. ಉರಗ ತಜ್ಞ ವಿಕ್ಕಿ ದುಬೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೆಟ್ಟಿಲ ಕೆಳಗಿದ್ದ ಒಂದು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
-
ʻಬಾಲಿವುಡ್ ಬಾದ್‌ಶಾʼ ಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿರುವ ಐಷಾರಾಮಿ ನಿವಾಸ 'ಮನ್ನತ್'ನಲ್ಲಿ ಮನೆಯ ಆವರಣದಲ್ಲಿ ಆಗಸ್ಟ್ 17ರಂದು ಹಾವುಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಮೂಲಗಳ ಪ್ರಕಾರ, ಶಾರುಖ್ ನಿವಾಸದಲ್ಲಿ ಹಾವು ಇರುವ ಬಗ್ಗೆ ಮಾಹಿತಿ ಬಂದ ತಕ್ಷಣವೇ ಉರಗ ತಜ್ಞ ಹಾಗೂ ರಕ್ಷಕ ವಿಕ್ಕಿ ದುಬೆ ಅವರನ್ನು ಸ್ಥಳಕ್ಕೆ ಕರೆಯಿಸಲಾಯಿತು.
ಎಂಟು ಅಡಿ ಉದ್ದದ ಕೇರೆಹಾವು ರಕ್ಷಣೆ
ಮೂಲಗಳ ಪ್ರಕಾರ, ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಮನ್ನತ್ ಆವರಣದಲ್ಲಿ ಎರಡು ಹಾವುಗಳು ಒಟ್ಟಿಗೆ ಸುರುಳಿ ಸುತ್ತಿಕೊಂಡಿರುವುದನ್ನು ಸಿಬ್ಬಂದಿ ಗಮನಿಸಿ ವಿಕ್ಕಿ ದುಬೆ ಅವರಿಗೆ ಕರೆ ಮಾಡಿದ್ದರು. ಕರೆ ಬಂದ ತಕ್ಷಣ ವಿಕ್ಕಿ ಅವರು ಅರಣ್ಯ ಇಲಾಖೆಯ ರೌಂಡ್ ಆಫೀಸರ್ ದೀಪಕ್ ದಾದಾ ಗಾಯಕ್ವಾಡ್ ಹಾಗೂ ಥಾಣೆಯ ಮುಂಬೈ ರೇಂಜ್ ಕಚೇರಿಗೆ ಮಾಹಿತಿ ರವಾನಿಸಿ ಸ್ಥಳಕ್ಕೆ ಧಾವಿಸಿದರು.
ಶೋಧ ಕಾರ್ಯ ನಡೆಸಿದಾಗ, ಬಂಗಲೆಯ ಅಂಗಳದ ಮೆಟ್ಟಿಲುಗಳ ಕೆಳಗೆ ಸುಮಾರು 8 ಅಡಿ ಉದ್ದದ ವಿಷರಹಿತ ಕೇರೆಹಾವು ಇರುವುದು ಪತ್ತೆಯಾಯಿತು. ಅದನ್ನು ಸುರಕ್ಷಿತವಾಗಿ ಸೆರೆಹಿಡಿದ ತಂಡವು, ಅರಣ್ಯ ಇಲಾಖೆಯ ಮಾರ್ಗಸೂಚಿಗಳ ಅನ್ವಯ ಕಾಡಿಗೆ ಬಿಟ್ಟಿದೆ.
ಎರಡನೇ ಹಾವಿಗೆ ಏನಾಯಿತು?
ಜನರ ಓಡಾಟ, ಚಲನವಲನವನ್ನು ಗಮನಿಸಿದ ಎರಡನೇ ಹಾವು, ಬಂಗಲೆಯ ಆವರಣದಿಂದ ತಪ್ಪಿಸಿಕೊಂಡು ಪರಾರಿಯಾಗಿದೆ. ಅದನ್ನು ಹುಡುಕಲು ನಿರಂತರ ಶೋಧ ಕಾರ್ಯ ನಡೆಸಲಾಯಿತಾದರೂ, ಸದ್ಯ ಅದು ಪತ್ತೆಯಾಗಿಲ್ಲ. ಸದ್ಯಕ್ಕೆ ಒಂದು ಹಾವನ್ನು ರಕ್ಷಿಸಲಾಗಿದ್ದು, ಮತ್ತೊಂದು ನಾಪತ್ತೆಯಾಗಿದೆ. ಕೇರೆಹಾವುಗಳು ವಿಷಕಾರಿಯಲ್ಲದ ತಳಿಗೆ ಸೇರಿದ್ದು, ಸಾಮಾನ್ಯವಾಗಿ ಭಾರತದಲ್ಲಿ ಕೃಷಿ ಭೂಮಿ ಹಾಗೂ ಮಾನವ ವಸತಿ ಪ್ರದೇಶಗಳ ಆಸುಪಾಸಿನಲ್ಲೇ ಇಲಿಗಳನ್ನು ಬೇಟೆಯಾಡುತ್ತಾ ಜೀವಿಸುತ್ತವೆ. ಹೀಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.
ಶಾರುಖ್ ಮನೆಯಲ್ಲಿ ಕಾಣಿಸಿಕೊಂಡ ಹಾವು
A stir was caused on Aug 17 following reports of a snake being found at actor SRK's bungalow #Mannat . Snake rescuer Vicky Dubey arrived at the scene and safely captured the snake an approximately 8-foot-long snake. It was later released into its natural habitat.#ShahRukhKhan pic.twitter.com/wxGhyvuFgf
— Team SRK Aryan Knights Fan Club (@srkaryanknights) August 18, 2026
ಸಲ್ಮಾನ್ ಖಾನ್ ನಿವಾಸದಲ್ಲೂ ಪ್ರತ್ಯಕ್ಷವಾಗಿತ್ತು ಹಾವು
ಈ ವರ್ಷದ ಆರಂಭದಲ್ಲಷ್ಟೇ ಬಾಲಿವುಡ್‌ನ ಮತ್ತೊಬ್ಬ ನಟ ಸಲ್ಮಾನ್ ಖಾನ್ ಅವರ ಮುಂಬೈನ 'ಗ್ಯಾಲಕ್ಸಿ ಅಪಾರ್ಟ್‌ಮೆಂಟ್'ನಲ್ಲೂ ಹಾವೊಂದು ಕಾಣಿಸಿಕೊಂಡು, ರಕ್ಷಿಸಲಾಗಿತ್ತು. ಉರಗ ರಕ್ಷಕರು ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಶಾರುಖ್ ಖಾನ್ ಮುಂದಿನ ಪ್ರಾಜೆಕ್ಟ್‌ಗಳು
ಸಿನಿಮಾ ವಿಚಾರಕ್ಕೆ ಬಂದರೆ, ಶಾರುಖ್ ಖಾನ್ ಪ್ರಸ್ತುತ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಕಿಂಗ್' ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅರ್ಷದ್ ವಾರ್ಸಿ, ರಾಘವ್ ಜುಯಲ್ ಹಾಗೂ ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.