ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಟಾಕ್ಸಿಕ್‌ʼ ರಿಲೀಸ್‌ ಹಿನ್ನೆಲೆಯಲ್ಲಿ ತಿರುಪತಿಗೆ ಮುಡಿ ಅರ್ಪಿಸಿದ್ರಾ ನಟಿ ನಯನತಾರಾ? ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯವೇನು?

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ‘ಗಂಗಾ’ ಪಾತ್ರ ನಿರ್ವಹಿಸಿರುವ ನಟಿ ನಯನತಾರಾ, ಸಿನಿಮಾದ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಅರ್ಪಿಸಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡಲಾಗಿದೆ. ಆದರೆ ಈ ಬೋಳು ತಲೆಯ ಫೋಟೋಗಳು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳೆಂದು ಸಾಬೀತಾಗಿದೆ.

ʻಟಾಕ್ಸಿಕ್ʼ ರಿಲೀಸ್‌ಗೂ ಮುನ್ನ ತಿರುಪತಿಗೆ ಮುಡಿ ಕೊಟ್ರಾ ನಟಿ ನಯನತಾರಾ?

-

Avinash GR
Avinash GR Aug 18, 2026 3:34 PM

‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವು ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಯಶ್ ಅಕ್ಕ ‘ಗಂಗಾ’ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಇನ್ನೇನು ಸಿನಿಮಾ ತೆರೆಕಾಣಲು 7-8 ದಿನಗಳಷ್ಟೇ ಬಾಕಿ ಇರುವಾಗ, ನಯನತಾರಾ ತಿರುಪತಿಗೆ ತೆರಳಿ ಮುಡಿ ನೀಡಿ ಹರಕೆ ತೀರಿಸಿದ್ರಾ? ‘ಟಾಕ್ಸಿಕ್’ ಸಿನಿಮಾ ಗೆಲ್ಲಲೆಂದು ಮುಡಿ ಹರಕೆ ಹೊತ್ತಿದ್ರಾ? ಇಂತಹ ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅವರ ಕೆಲವು ಫೋಟೋಗಳು.

ತಿರುಪತಿ ಫೋಟೋಗಳು ವೈರಲ್

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಿದ್ದ ನಯನತಾರಾ, ಅಲ್ಲಿ ಮುಡಿ ಅರ್ಪಿಸಿದ್ದಾರೆ ಎಂಬಂತೆ ಬಿಂಬಿಸುವ ಫೋಟೋಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಆ ಫೋಟೋಗಳನ್ನು ನೋಡಿದವರೆಲ್ಲರೂ ಇದು ನಿಜವೆಂದೇ ಭಾವಿಸಿ ಆಶ್ಚರ್ಯಚಕಿತರಾಗಿದ್ದರು.

ಅಸಲಿ ಸತ್ಯವೇನು?

ಆದರೆ, ಫ್ಯಾಕ್ಟ್ ಚೆಕ್ ನಡೆಸಿದಾಗ ಆ ಫೋಟೋಗಳು ನಕಲಿ ಎಂಬುದು ಬಯಲಾಗಿದೆ. ಈ ವರ್ಷದ ಏಪ್ರಿಲ್ 9ರಂದು ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ಜೊತೆ ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದ ಅಸಲಿ ಫೋಟೋಗಳನ್ನೇ ಕಿಡಿಗೇಡಿಗಳು ಮಾರ್ಫಿಂಗ್ ಮಾಡಿದ್ದಾರೆ. ಅವರು ಧರಿಸಿದ್ದ ಬಿಳಿ ಬಣ್ಣದ ಉಡುಪು, ಹಸಿರು ಬಣ್ಣದ ದುಪಟ್ಟಾ ಮತ್ತು ಕಿವಿಯೋಲೆಗಳನ್ನು ಹಾಗೆಯೇ ಉಳಿಸಿಕೊಂಡು, ಎಐ (AI) ಎಡಿಟಿಂಗ್ ಟೂಲ್ಸ್‌ಗಳ ಸಹಾಯದಿಂದ ತಲೆಯ ಕೂದಲನ್ನು ತೆಗೆದುಹಾಕಿ, ಬೋಳು ತಲೆಯ ಮೇಲೆ ಗಂಧ ಹಚ್ಚಿಕೊಂಡಿರುವಂತೆ ನೈಜವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಇದನ್ನು ಕಂಡು ಅಭಿಮಾನಿಗಳು ಹಾಗೂ ನೆಟ್ಟಿಗರು ದಂಗಾಗಿದ್ದರು.

ಸೆಲೆಬ್ರಿಟಿಗಳಿಗೆ ಇದು ದೊಡ್ಡ ಸಮಸ್ಯೆ

ಇಂತಹ ಘಟನೆಗಳು ಕೇವಲ ನಯನತಾರಾಗೆ ಮಾತ್ರ ಸೀಮಿತವಾಗಿಲ್ಲ. ಈ ಹಿಂದೆ ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ರುಕ್ಮಿಣಿ ವಸಂತ್ ಅವರಂತಹ ಮುಂಚೂಣಿ ನಟಿಯರ ಮುಖ ಹಾಗೂ ದೇಹಗಳನ್ನು ಅಶ್ಲೀಲ ಮತ್ತು ಅನುಚಿತ ವಿಡಿಯೋಗಳಿಗೆ ಜೋಡಿಸಿ ಡೀಪ್‌ಫೇಕ್ ದೃಶ್ಯಗಳನ್ನು ಸೃಷ್ಟಿಸಿದ್ದು ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಕೇವಲ ನಕಲಿ ಫೋಟೋ ಮತ್ತು ವಿಡಿಯೋಗಳಷ್ಟೇ ಅಲ್ಲದೆ, ಗಣ್ಯರ ಧ್ವನಿಯನ್ನು ಪ್ರಮೋಷನಲ್ ಜಾಹೀರಾತುಗಳಿಗೆ ಹಾಗೂ ವಾಣಿಜ್ಯ ಲಾಭಗಳಿಗೆ ದುರ್ಬಳಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

Yash Meets Shivanna: ರಾಕಿಭಾಯ್‌ ಮೀಟ್ಸ್‌ ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

‘ಪರ್ಸನಾಲಿಟಿ ರೈಟ್ಸ್’ ಪಡೆದಿರುವ ತಾರೆಯರು

ಈ ಪರಿಸ್ಥಿತಿಯಿಂದ ರಕ್ಷಣೆ ಪಡೆಯಲು ಸೆಲೆಬ್ರಿಟಿಗಳು ಕಾನೂನು ಹೋರಾಟಕ್ಕೆ ಇಳಿಯುತ್ತಿದ್ದಾರೆ. ಈಗಾಗಲೇ ಚಿರಂಜೀವಿ, ಪವನ್ ಕಲ್ಯಾಣ್, ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಅವರಂತಹ ಸ್ಟಾರ್ ನಟರು ನ್ಯಾಯಾಲಯದ ಮೆಟ್ಟಿಲೇರಿ, ತಮ್ಮ ಅನುಮತಿಯಿಲ್ಲದೆ ಎಐ ತಂತ್ರಜ್ಞಾನದ ಮೂಲಕ ತಮ್ಮ ಧ್ವನಿ ಅಥವಾ ಫೋಟೋಗಳನ್ನು ಬಳಸದಂತೆ ‘ಪರ್ಸನಾಲಿಟಿ ರೈಟ್ಸ್’ ಅಡಿಯಲ್ಲಿ ತಡೆಯಾಜ್ಞೆ ಆದೇಶಗಳನ್ನು ಪಡೆದುಕೊಂಡಿದ್ದಾರೆ.

ನೆಟ್ಟಿಗರು ಎಚ್ಚರಿಕೆಯಿಂದ ಇರಬೇಕು

ಸ್ಮಾರ್ಟ್ ಯುಗದಲ್ಲಿ ಆಧುನಿಕ ತಂತ್ರಜ್ಞಾನ ದುರುಪಯೋಗವಾಗುತ್ತಿರುವುದು ಸೆಲೆಬ್ರಿಟಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಸೃಷ್ಟಿಸಲಾಗುತ್ತಿರುವ ಇಂತಹ ನಕಲಿ ಕಂಟೆಂಟ್‌ನಿಂದಾಗಿ ಯಾವುದು ನಿಜ? ಯಾವುದು ಸುಳ್ಳು? ಎಂದು ಪತ್ತೆಹಚ್ಚುವುದೇ ಸವಾಲಾಗಿದೆ. ಗಣ್ಯರ ಅನುಮತಿಯಿಲ್ಲದೆ ಅವರ ಮುಖ ಮತ್ತು ಧ್ವನಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅವರ ವೈಯಕ್ತಿಕ ಗೌರವ ಹಾಗೂ ನೆಮ್ಮದಿಗೆ ಧಕ್ಕೆ ತರುತ್ತಿದೆ. ನೆಟ್ಟಿಗರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಇಂತಹ ಪೋಸ್ಟ್‌ಗಳನ್ನು ಪರಿಶೀಲಿಸದೆ ಹಂಚಿಕೊಳ್ಳಬಾರದು.