3 ಆಸ್ಪತ್ರೆಗಳಿಗೆ ಹೋದರೂ ಉಳಿಯಲಿಲ್ಲ ದಿಲೀಪ್ ರಾಜ್ ಜೀವ; ಪ್ರತಿಭಾವಂತ ನಟನ ಆ ಕೊನೆಯ ಕ್ಷಣಗಳು ಹೇಗಿದ್ದವು?
ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ನಿಧನವು ವೈದ್ಯಕೀಯ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಮೇ 13ರ ಮುಂಜಾನೆ ಎದೆನೋವಿನಿಂದ ಕುಸಿದ ದಿಲೀಪ್ ಅವರನ್ನು ಉಳಿಸಲು ಪತ್ನಿ ವಿದ್ಯಾ ಮೂರು ಆಸ್ಪತ್ರೆಗಳಿಗೆ ಅಲೆದರೂ ಸಕಾಲಕ್ಕೆ ವೈದ್ಯಕೀಯ ನೆರವು ಸಿಗಲಿಲ್ಲ!
-
ನಟ ದಿಲೀಪ್ ರಾಜ್ ಅವರ ಸಾವು ಕನ್ನಡ ಚಿತ್ರರಂಗವನ್ನು ಕಂಗೆಡಿಸಿದೆ. ಪ್ರತಿಭಾವಂತ ನಟರೊಬ್ಬರು ಹೀಗೆ ವಯಸ್ಸಾಲ್ಲದ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡಿದ್ದು ತೀವ್ರ ನೋವನ್ನು ಉಂಟುಮಾಡಿದೆ. ದಿಲೀಪ್ ರಾಜ್ ಅವರಿಗೆ 48 ವರ್ಷ ವಯಸ್ಸು. ತುಂಬಾ ಫಿಟ್ ಆಗಿದ್ದಂತಹ ವ್ಯಕ್ತಿ. ಇಂತಹ ದಿಲೀಪ್ ಹೃದಯಾಘಾತದ ನೆಪವೊಡ್ಡಿ ಸದ್ದಿಲ್ಲದೇ ಎದ್ದು ನಡೆದಿದ್ದಾರೆ. ಅಂದಹಾಗೆ, ಮೇ 13ರ ಬೆಳಗಿನ ಜಾವ ಆಗಿದ್ದೇನು? ದಿಲೀಪ್ ಪ್ರಾಣ ಉಳಿಸಲು ಏನೆಲ್ಲಾ ಕಸರತ್ತು ಮಾಡಲಾಯಿತು? ಮುಂದೆ ಓದಿ.
ಆಟೋದಲ್ಲಿ ಆಸ್ಪತ್ರೆಗೆ ಹೋಗಿದ್ದ ದಿಲೀಪ್
ಮೇ 13ರ ಬೆಳಗ್ಗೆ 5.30ರ ಸುಮಾರಿಗೆ ದಿಲೀಪ್ ಎದೆನೋವೆಂದು ಕುಸಿದಿದ್ದಾರೆ. ಕೂಡಲೇ ಅವರ ಪತ್ನಿ ಶ್ರೀವಿದ್ಯಾ ಮನೆಯಿಂದ ಆಚೆ ಬಂದು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ದಿಲೀಪ್ ರಾಜ್ ಮನೆಯ ಸಮೀಪದಲ್ಲೇ ಇದ್ದ ದೇವೇಂದ್ರ ನಾಯ್ಡು ಎಂಬ ಆಟೋ ಚಾಲಕ ದಿಲೀಪ್ ಮನೆಗೆ ಓಡಿಬಂದಿದ್ದಾರೆ. ಅಷ್ಟರಲ್ಲಾಗಲೇ ದಿಲೀಪ್ ಮನೆಯ ಮೆಟ್ಟಿಲು ಬಳಿ ಬಿದ್ದುಹೋಗಿದ್ದರು. ಅವರ ಮನೆಯ ಸೆಕ್ಯೂರಿಟಿ ಮತ್ತು ಅಟೋ ಚಾಲಕ, ದಿಲೀಪ್ ಅವರನ್ನ ಎತ್ತಿಕೊಂಡು ಆಟೋದಲ್ಲಿ ಕೂರಿಸಿಕೊಂಡಿದ್ದಾರೆ. ಆಗಿನ್ನೂ ದಿಲೀಪ್ ಉಸಿರಾಡುತ್ತಿದ್ದರು.
ಆಟೋ ಚಾಲಕ ಹೇಳಿದ್ದೇನು?
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆಟೋ ಚಾಲಕ್ ದೇವೇಂದ್ರ ನಾಯ್ಡು, "ಮೊದಲು ಒಂದು ಆಸ್ಪತ್ರೆಗೆ ಹೋದಾಗ ಅಲ್ಲಿ 'ನಮ್ಮ ಬಳಿ ವೈದ್ಯರು ಇಲ್ಲ' ಎಂದು ಹೇಳಿ ವಾಪಸ್ ಕಳಿಸಿದರು. ಬಳಿಕ ತಕ್ಷಣವೇ ಇನ್ನೊಂದು ಆಸ್ಪತ್ರೆಗೆ ಹೋದೆವು. ಅಲ್ಲಿ ಇಸಿಜಿ ಮಾಡಿದಾಗ ಲೈನ್ ಪೂರ್ತಿ ಫ್ಲಾಟ್ ಬಂದಿತ್ತು (ಹೃದಯ ಬಡಿತ ನಿಂತಿತ್ತು). ಪರಿಸ್ಥಿತಿ ಗಂಭೀರವಾಗಿದೆ ಎಂದು ಆಂಬ್ಯುಲೆನ್ಸ್ ಕೇಳಿದರೂ ಅವರು ಕೊಡಲಿಲ್ಲ. ಆಮೇಲೆ ಸಾಗರ್ ಆಸ್ಪತ್ರೆಗೆ ಧಾವಿಸಿದೆವು. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿ ದಿಲೀಪ್ ಮೃತಪಟ್ಟಿದ್ದಾರೆ ಅಂತ ಹೇಳಿದರು" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
"ನನ್ನ ಆಟೋದಲ್ಲಿ ದಿಲೀಪ್ ರಾಜ್ ಅವರನ್ನು ಕರೆದುಕೊಂಡು ಬರುವಾಗ, ಬನ್ನೇರುಘಟ್ಟ ರಸ್ತೆಯ ಆರ್ಚ್‌ವರೆಗೂ ಅವರು ಜೀವಂತವಾಗಿದ್ದರು. ಅವರ ಪತ್ನಿ ಜಯದೇವ ಆಸ್ಪತ್ರೆಗೆ ಹೋಗೋಣ ಎಂದರು, ಆದರೆ ಅದು ದೂರವಾಗುತ್ತದೆ ಎಂದು ಭಾವಿಸಿ ಸಮಯ ಉಳಿಸಲು ಹತ್ತಿರದ ಆಸ್ಪತ್ರೆಗೆ ಹೋಗೋಣ ಎಂದು ನಾನೇ ಸಲಹೆ ನೀಡಿದೆ. ಅವರೂ ಅದಕ್ಕೆ ಒಪ್ಪಿದರು. ದಿಲೀಪ್ ಅವರನ್ನು ಬದುಕಿಸಲೇಬೇಕೆಂದು ನಾವು ಒಟ್ಟು ಮೂರು ಆಸ್ಪತ್ರೆಗಳಿಗೆ ಅಲೆದವು" ಎಂದು ದೇವೇಂದ್ರ ನಾಯ್ಡು ಆ ಕ್ಷಣಗಳನ್ನು ನೆನೆದಿದ್ದಾರೆ. ವಿಪರ್ಯಾಸ ಎಂದರೆ, ಸಾಗರ್ ಆಸ್ಪತ್ರೆಯಲ್ಲಿಯೇ ಮೇ 13ರಂದು ಚೆಕಪ್‌ಗಾಗಿ ದಿಲೀಪ್ ಅಪಾಯಿಂಟ್‌ಮೆಂಟ್ ಪಡೆದುಕೊಂಡಿದ್ದರು.
ಡಾಕ್ಟರ್ ಇಲ್ಲ ಎಂದಮೇಲೆ ಆಸ್ಪತ್ರೆ ತೆರೆಯುವುದು ಯಾಕೆ?
ಸಕಾಲಕ್ಕೆ ಚಿಕಿತ್ಸೆ ನೀಡದೇ, ಡಾಕ್ಟರ್ ಇಲ್ಲ ಎಂದು ಸಬೂಬು ಹೇಳುವ ಆಸ್ಪತ್ರೆಗಳ ವಿರುದ್ದ ಪತ್ರಕರ್ತ, ಲೇಖಕ ಡಾ. ಶರಣು ಹುಲ್ಲೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ಅವರ ಸಾವಿನ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, "ವೈದ್ಯ ಲೋಕದ ಬಗ್ಗೆ ಬೇಸರ ಆಯಿತು. ದಿಲೀಪ್ ರಾಜ್ ಸಾವು ಆಗಿದ್ದು ಹೇಗೆ? ಬೆಳಗ್ಗೆ ಎಂದಿನಂತೆ 5. 45ಕ್ಕೆ ಎದ್ದಿರುವ ದಿಲೀಪ್ ರಾಜ್, ಎದೆನೋವು ಕಾಣಿಸಿಕೊಂಡ ಬಗ್ಗೆ ಪತ್ನಿ ಜೊತೆ ಮಾತು.. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪತ್ನಿ ತಯಾರಿ.. ಮನೆಯ ಮೆಟ್ಟಿಲು ಇಳಿಯುವಾಗ ಕುಸಿದು ಬಿದ್ದ ದಿಲೀಪ್ ರಾಜ್.. ಸಹಾಯಕ್ಕೆ ಮನೆ ಹೊರಗೆ ಓಡಿ ಬಂದಿದ್ದ ಪತ್ನಿ ವಿದ್ಯಾ.."
ಶರಣು ಹುಲ್ಲೂರು ಪೋಸ್ಟ್
"ವಿದ್ಯಾ ಅವರ ನೆರವಿಗೆ ಬಂದ ಆಟೋ ಚಾಲಕ ಮತ್ತು ಸೆಕ್ಯೂರಿಟಿ ಗಾರ್ಡ್. ಕುಸಿದು ಬಿದ್ದಿದ್ದ ದಿಲೀಪ್ ರಾಜ್‌ಗೆ ಪ್ರಥಮ ಚಿಕಿತ್ಸೆ ನೀಡಿದ್ದ ಆಟೋ ಚಾಲಕ.. ಅಷ್ಟರಲ್ಲಿ ಹದಿನೈದು ನಿಮಿಷ ಕಳೆದು ಹೋಗಿತ್ತು.. ಚೇತರಿಕೆ ಬಾರದೇ ಇರುವ ದಿಲೀಪ್‌ರನ್ನು ಆಟೋದಲ್ಲಿ ಕೂರಿಸಿಕೊಂಡ ಹೊರಟ ಪತ್ನಿ ವಿದ್ಯಾ.. ಮೊದಲು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದ ವಿದ್ಯಾ.. ಆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲ ಅಂದಿದ್ದ ಸಿಬ್ಬಂದಿ.. ಅಲ್ಲಿಂದ ಉತ್ತರ ಹಳ್ಳಿ ರಸ್ತೆಯ ಮತ್ತೊಂದು ಆಸ್ಪತ್ರೆಗೆ ಶಿಫ್ಟ್.. ಆ ಆಸ್ಪತ್ರೆಯಲ್ಲೂ ವೈದ್ಯರಿಲ್ಲ ಅಂತ ಸಾಗರ್ ಆಸ್ಪತ್ರೆಗೆ ಶಿಫ್ಟ್.. ಸಾಗರ್ ಆಸ್ಪತ್ರೆ ವೈದ್ಯರಿಂದ ತಪಾಸಣೆ.. ಅಷ್ಟರಲ್ಲಿ ದಿಲೀಪ್ ಜೀವ ಹಾರಿ ಹೋಗಿತ್ತು.."
"ನೈಟ್ ಡ್ಯೂಟಿ ಡಾಕ್ಟರ್ ಇಲ್ಲ ಅಂದರೆ, ಆಸ್ಪತ್ರೆ ತೆರೆಯುವುದು ಯಾಕೆ? ವೈದ್ಯರು ಇಲ್ಲದ ಆಸ್ಪತ್ರೆ ಬಗ್ಗೆ ಕ್ರಮ ತೆಗೆದುಕೊಳ್ತಾರಾ ಆರೋಗ್ಯ ಸಚಿವರು" ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.