ಕನ್ನಡ ಚಿತ್ರರಂಗದ ನಿರ್ಮಾಪಕರೆಲ್ಲಿ? ನಿರ್ಮಾಣ ಸಂಸ್ಥೆಗಳೆಲ್ಲಿ? ಗಾಂಧಿನಗರದಲ್ಲೆಲ್ಲೋ ಕಳೆದು ಹೋಯ್ತಾ ಚಿತ್ರರಂಗ?
ಕನ್ನಡ ಚಿತ್ರರಂಗದ ಬಲಿಷ್ಠ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಮತ್ತು ಕೆವಿಎನ್ ಈಗ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷಾ ಸಿನಿಮಾಗಳ ಮೇಲೆ ಹೂಡಿಕೆ ಮಾಡುತ್ತಿವೆ. ಹೊಂಬಾಳೆ ಸಂಸ್ಥೆ ಪ್ರಭಾಸ್ ಮತ್ತು ಹೃತಿಕ್ ರೋಷನ್ ಅವರೊಂದಿಗೆ ಬ್ಯುಸಿಯಾಗಿದ್ದರೆ, ಕೆವಿಎನ್ ಸಂಸ್ಥೆಯ ಕೋಟಿ ಕೋಟಿ ಹಣ ʻಜನನಾಯಗನ್ʼ, 'ಟಾಕ್ಸಿಕ್' ಮತ್ತು 'ಕೆಡಿ' ಅಂತಹ ಸಿನಿಮಾಗಳ ಮೇಲೆ ಹೂಡಿದೆ.
-
ಪ್ರಮೋದ ಮೋಹನ ಹೆಗಡೆ
ಉತ್ತಮ ಕಥೆಗಳು ಕನ್ನಡದಲ್ಲಿ ತೆರೆ ಮೇಲೆ ಬರುತ್ತಿಲ್ಲ ಎಂಬ ಮಾತುಗಳನ್ನು ಕಳೆದ ಕೆಲವು ವರ್ಷಗಳಿಂದ ಕೇಳುತ್ತಲೇ ಇದ್ದೇವೆ. ಎಲ್ಲೋ ಒಂದೋ ಎರಡು ಸಿನಿಮಾಗಳು ತಕ್ಕ ಮಟ್ಟಿಗೆ ಹೆಸರು ಮಾಡಿವೆ ಬಿಟ್ಟರೆ ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗಿವೆ ಎನ್ನುವಂಥ ಸಿನಿಮಾಗಳು ಕಡಿಮೆ. ʻಸು ಫ್ರಂ ಸೋʼ ಸಣ್ಣ ಬಜೆಟ್ ಅಲ್ಲಿ ದೊಡ್ಡ ಹೆಸರು ಮಾಡಿದರೆ ಕಾಂತಾರ: ಚಾಪ್ಟರ್ ೧ ಪ್ರೀಕ್ವೆಲ್ ಎಂಬ ಹೈಪ್ ಅಲ್ಲಿ ಸದ್ದು ಮಾಡಿದೆ. ಕೆಲವು ಉತ್ತಮ ಕಥೆಗಳಾದರೂ ತೆರೆಯ ಮೇಲೆ ಪ್ರಸ್ತುತ ಪಡಿಸುವುದರಲ್ಲಿ ಸೋತಿವೆ. ಆದರೆ, ಈಗ ವಿಷಯ ಅದಲ್ಲ.
ಹೊಂಬಾಳೆ ಕಡೆಯಿಂದ ಅನೌನ್ಸ್‌ಮೆಂಟ್ ಇಲ್ಲ
ಒಂದು ವೇಳೆ ಅದ್ಭುತ ಕಥೆಯಿದೆ ಎಂದರೆ ಅದನ್ನು ನಿರ್ಮಾಣ ಮಾಡಲು ಮುಂದೆ ಬರುವವರಾರು? ಅಂಥದ್ದೊಂದು ನಿರ್ಮಾಣ ಸಂಸ್ಥೆ ಕನ್ನಡದಲ್ಲಿ ಯಾವುದಿದೆ? ಹೊಂಬಾಳೆ ಹಂತ ಹಂತವಾಗಿ ಬೆಳೆದುಕೊಂಡ ಬಂದ ನಿರ್ಮಾಣ ಸಂಸ್ಥೆ. ಈಗ ʻಕಾಂತಾರ: ಚಾಪ್ಟರ್ 1ʼ ಬಳಿಕ ಪ್ರಭಾಸ್ ಜೊತೆ 3 ಸಿನಿಮಾಗಳು ಹಾಗೂ ಹೃತಿಕ್ ರೋಷನ್ ಜೊತೆ ಒಂದು ಸಿನಿಮಾ ಮಾಡುತ್ತಿರುವುದರಿಂದ ಬೇರೆ ಲೀಗ್ ಅಲ್ಲೇ ವ್ಯವಹಾರ ಮಾಡುತ್ತಿದೆ. ವಿದೇಶದಲ್ಲಿ ವಿತರಣೆ ಮಾಡುತ್ತಿರುವ ಅಪ್ಡೇಟ್ ಬಿಟ್ಟರೆ ಸದ್ಯದ ಮಟ್ಟಿಗೆ ಯಾವುದೇ ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಿರುವ ಬಗ್ಗೆ ಸುದ್ದಿಯಿಲ್ಲ.
Rishab Shetty: ಹೊಂಬಾಳೆ ಅನ್ಫಾಲೋ ಮಾಡಿದ್ರಾ ರಿಷಬ್? ತಮ್ಮ ಬ್ಯಾನರ್‌ನಲ್ಲೇ ಈ ಹೊಸ ಸಿನಿಮಾ!
ಬರಬೇಕಿದೆ ಕೆವಿಎನ್ ಸಿನಿಮಾಗಳು
ಇನ್ನು ಅದೇ ಮಟ್ಟದಲ್ಲಿ ಸದ್ದು ಮಾಡಿರುವ ಇನ್ನೊಂದು ನಿರ್ಮಾಣ ಸಂಸ್ಥೆ ಎಂದರೆ ಕೆವಿಎನ್. ಮೊದಲಿನ ಎರಡು ಸಿನಿಮಾಗಳ ಬಳಿಕ ಕೆವಿಎನ್ ಕೂಡ ದೊಡ್ಡ ಬಜೆಟ್ ಸಿನಿಮಾಗಳ ಪೈಪೋಟಿಯಲ್ಲಿದೆ. ಆದರೆ, ʻಟಾಕ್ಸಿಕ್ʼ, ʻಜನನಾಯಗನ್ʼ ಹಾಗೂ ʻಕೆಡಿʼ ಚಿತ್ರಗಳಿಗೆ ಬಿಡುಗಡೆ ಭಾಗ್ಯ ಸಿಗದೆ ಕೋಟಿಗಟ್ಟಲೆ ಹಣ ಸಿಕ್ಕಾಕೊಂಡಿದೆ. ಇನ್ನು ಅಂದುಕೊಂಡಂತೆ ಆದರೆ, ಏ.30ಕ್ಕೆ ʻಕೆಡಿʼ ಬಿಡುಗಡೆ ಆದ ಬಳಿಕ ʻಟಾಕ್ಸಿಕ್ʼ ಹಾಗೂ ʻಜನನಾಯಗನ್ʼ ರಿಲೀಸ್ ಆಗಿ ಅಂದುಕೊಂಡಂತೆ ಸದ್ದು ಮಾಡಿ ಕಲೆಕ್ಷನ್ ಮಾಡಿದರೆ ಹಣ ವಾಪಸ್ ಬರಬಹುದು. ಈಗಾಗಲೇ ಕೆಡಿ ಬಹಳ ವಿಳಂಬವಾಗಿದೆ. ಉಳಿದೆರಡು ಸಿನಿಮಾಗಳ ಯಶಸ್ಸಿನ ಮೇಲೆ ಕೆವಿಎನ್ ಮುಂದಿನ ಸಿನಿಮಾಗಳು ನಿರ್ಧಾರವಾಗಬಹುದು. ಕನ್ನಡದಲ್ಲೊಂದು ಸಿನಿಮಾ ಮಾಡುತ್ತಿರುವುದು ಬಿಟ್ಟರೆ ಮುಂದೆ ಮಲಯಾಳಂ, ಹಿಂದಿ ಹಾಗೂ ತಮಿಳು ಸಿನಿಮಾಗಳ ಮೇಲೆ ಕಣ್ಣಿಟ್ಟಿರುವ ಹಾಗಿದೆ. ಹಾಗಾದರೆ ಇನ್ನೊಂದು ದೊಡ್ಡ ಸಂಸ್ಥೆ ಕನ್ನಡದಿಂದ ದೂರ ಸರಿದಂತಾಗುತ್ತದೆ.
ಸಿನಿಮಾ ಕಡೆ ತಲೆ ಹಾಕದಂತೆ ಮಾಡುವ ನಿರ್ದೇಶಕರು
ಇನ್ನು, ಪಿಆರ್‌ಕೆ ಇವರಿಬ್ಬರಷ್ಟು ದೊಡ್ಡ ಗೇಮ್ ಆಡುತ್ತಿಲ್ಲ. ಅವರಿಗೆ ಅವರದ್ದೇ ಆದ ಲಿಮಿಟೇಶನ್ ಅಲ್ಲಿ ಸಿನಿಮಾ ಹಾಗೂ ವೆಬ್ ಸರಣಿ ಮಾಡಿವೆ. ಮುಂದೆ ಏನು ಎಂಬುದು ಸ್ಪಷ್ಟವಿಲ್ಲ. ಡಾಲಿ ಪಿಕ್ಚರ್ಸ್ ಹೊಸಬರಿಗೆ ಅವಕಾಶ ನೀಡಿದರೂ ಕಳೆದೆರಡು ಸಿನಿಮಾಗಳು ಲಾಭ ತಂದುಕೊಟ್ಟಿಲ್ಲ. ಪರಂವಃ ಕೆಲವು ಸಿನಿಮಾಗಳ ನಷ್ಟವನ್ನು ಸುಧಾರಿಸಿಕೊಂಡು ಮತ್ತೆ ಬರಲು ರಿಚರ್ಡ ಆಂಟನಿಯಷ್ಟೇ ಸಮಯ ಆಗಬಹುದು. ಲೈಟರ್ ಬುದ್ಧ ಫಿಲ್ಮ್ಸ್ ದೊಡ್ಡ ಸಿನಿಮಾಗಳನ್ನೇನೂ ಮಾಡುತ್ತಿಲ್ಲ. ರಮೇಶ್ ರೆಡ್ಡಿ 45 ಸಿನಿಮಾದಿಂದ ಚೇತರಿಸಿಕೊಳ್ಳಬೇಕಿದೆ. ಉದಯ್ ಮೆಹ್ತಾ ಮಾರ್ಟಿನ್ ನೆನಪಿನಲ್ಲೇ ಇರಬಹುದು. ಇನ್ನೂ ಹಲವು ನಿರ್ಮಾಪಕರು ಒಂದೊಂದು ಸಿನಿಮಾ ಮಾಡಿ ಕಾಣೆಯಾಗಿದ್ದಿದೆ. ಅವರೆನ್ನಲ್ಲ ಆಗಾಗ ಫೋನ್ ಮಾಡಿ ಹೇಗಿದ್ದಾರೆ ಎಂದು ವಿಚಾರಿಸುವುದು ಒಳ್ಳೇದು ಎಂದು ನಾವು ಕೆಲವು ಗೆಳೆಯರು ಮಾತನಾಡಿಕೊಂಡಿದ್ದಿದೆ. ಕೆಲವರು ಒಳ್ಳೇ ಜೋಶ್ ಇಂದ ಮುಂದೆ ಬರುತ್ತಾರೆ. ಆದರೆ, ಅವರನ್ನು ಇಂದೆಂದೂ ಸಿನಿಮಾ ಕಡೆ ತಲೆ ಹಾಕದಂತೆ ಮಾಡುವ ನಿರ್ದೇಶಕರು, ಕಲಾವಿದರು ಮತ್ತೆ ಬೇರೆ ನಿರ್ಮಾಪಕರನ್ನು ಹುಡುಕಲು ಮುಂದಾಗಿರುತ್ತಾರೆ.
ಗಟ್ಟಿಯಾಗಿ ನಿಲ್ಲುವ ನಿರ್ಮಾಣ ಸಂಸ್ಥೆಗಳೇ ಇಲ್ಲ
ಬೇರೆ ಭಾಷೆಯಲ್ಲಿ ಅದ್ಭುತ ಕಥೆಗಳು ಬರುತ್ತಿವೆ ಎಂದು ಮಾತನಾಡುವಾಗ ಅಲ್ಲಿನ ನಿರ್ಮಾಣ ಸಂಸ್ಥೆಗಳು ಅಷ್ಟೇ ಗಟ್ಟಿಯಾಗಿ ಜೊತೆ ನಿಲ್ಲುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ʻಸ್ಕೈಫೋರ್ಸ್ʼ ಕನ್ನಡ ಯೋಧನ ಕಥೆ. ಅದನ್ನು ಮಾಡಿದ್ದು ಬಾಲಿವುಡ್. ಕನ್ನಡದಲ್ಲಿ ಏಕೆ ಮಾಡಿಲ್ಲ ಎಂಬ ಪ್ರಶ್ನೆಗೆ, ʻಇಲ್ಲಿ ಅಂಥ ಬಜೆಟ್ ಇಲ್ಲ. ಅದನ್ನು ನೀಡುವ ನಿರ್ಮಾಣ ಸಂಸ್ಥೆ ಇಲ್ಲʼ ಎಂಬ ಉತ್ತರ ಮಾತ್ರ ಕಾಣಿಸುತ್ತದೆ. ಗಟ್ಟಿಯಾಗಿ ನಿಲ್ಲುವ ನಿರ್ಮಾಣ ಸಂಸ್ಥೆಗಳೇ ಇಲ್ಲದಂತಾಗಿರುವಾಗ ಸಿನಿಮಾ ಇಂಡಸ್ಟ್ರಿ ಏನು ಮಾಡುತ್ತಿದೆ? ಎಲ್ಲಿದೆ? ಎಂದು ಕೇಳಿದರೆ ಅದಕ್ಕೆ ಎಲ್ಲಿಯೂ ಉತ್ತರ ಇಲ್ಲ. ಗಾಂಧಿನಗರದಲ್ಲೆಲ್ಲೋ ಕಳೆದು ಹೋಗಿದೆ.