ಹೊಂಬಾಳೆ ಫಿಲ್ಮ್ಸ್ ಜೊತೆ ತೆಲುಗು ನಟ ಪ್ರಭಾಸ್ ಕಮಿಟ್ ಆಗಿದ್ದ ಆ ಮೂರು ಸಿನಿಮಾಗಳ ಅಪ್ಡೇಟ್ ಏನು? ಯಾವಾಗ ಶುರುವಾಗಲಿವೆ?
ಪ್ರಭಾಸ್ ಮತ್ತು ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನ ಮೂರು ಮೆಗಾ ಸಿನಿಮಾಗಳ ಬಗ್ಗೆ ಕುತೂಹಲಕಾರಿ ಅಪ್‌ಡೇಟ್‌ಗಳು ಹೊರಬಿದ್ದಿವೆ. 'ಸಲಾರ್ 2' ಶೂಟಿಂಗ್ ಮುಂದಿನ ವರ್ಷ ಆರಂಭ ಆಗುವ ಸಾಧ್ಯತೆ ಇದ್ದು, ಮಲಯಾಳಂನ ದಿಂಜಿತ್ ಅಯ್ಯತಾನ್ ಹಾಗೂ 'ಅಮರನ್' ಖ್ಯಾತಿಯ ರಾಜ್‌ಕುಮಾರ್ ಪೆರಿಯಾಸ್ವಾಮಿ ಅವರು ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳುವ ಸಾಧ್ಯತೆ ದಟ್ಟವಾಗಿದೆ.
-
ಕೆಜಿಎಫ್, ಸಲಾರ್, ಕಾಂತಾರದಂತಹ ಮೆಗಾ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ, ದೇಶಾದ್ಯಂತ ಜನಪ್ರಿಯವಾಗಿರುವ ಹೊಂಬಾಳೆ ಫಿಲ್ಮ್ಸ್ ಜೊತೆಗೆ ನಟ ಪ್ರಭಾಸ್ ಅವರು ಕೆಲ ಸಮಯದ ಹಿಂದೆ ಮೂರು ಸಿನಿಮಾಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರ ಅಪ್ಡೇಟ್ ಏನು? ಆ ಸಿನಿಮಾಗಳನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ಬಗ್ಗೆ ಸದ್ಯ ಒಂದಷ್ಟು ಮಾಹಿತಿಗಳು ಕೇಳಿಬಂದಿವೆ.
ಆ ಮೂರು ಸಿನಿಮಾಗಳಲ್ಲಿ ಸಲಾರ್ ಕೂಡ ಒಂದು
ʻಸಲಾರ್- ಪಾರ್ಟ್ 1ʼ ತೆರೆಕಂಡ ಮೇಲೆ ʻಸಲಾರ್ - ಪಾರ್ಟ್ 2ʼ (Salaar: Part 2 – Shouryaanga Parvam) ಮೇಲೆ ಎಲ್ಲರ ಕಣ್ಣು ಇದೆ. ಹೊಂಬಾಳೆ ಫಿಲ್ಮ್ಸ್ ಜೊತೆಗೆ ಪ್ರಭಾಸ್ ಒಪ್ಪಂದ ಮಾಡಿರುವ ಮೂರು ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದ. ಸದ್ಯ ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದರೆ, ಅತ್ತ ಪ್ರಶಾಂತ್ ನೀಲ್ ಅವರು ಕೂಡ ಎನ್‌ಟಿಆರ್ ಜೊತೆಗಿನ ಚಿತ್ರದಲ್ಲಿ ಸಕ್ರಿಯವಾಗಿದ್ದಾರೆ. ಬಹುಶಃ ಸಲಾರ್ 2 ಸಿನಿಮಾವು ಈ ವರ್ಷದ ಅಂತ್ಯದಲ್ಲಿ ಅಥವಾ 2027ರಲ್ಲಿ ಶೂಟಿಂಗ್ ಆರಂಭಿಸಬಹುದು. ಇನ್ನು, ಈ ಸಿನಿಮಾದ ಬಂದೇ ಬರಲಿದೆ ಎಂಬುದನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ಕನ್ಪರ್ಮ್ ಮಾಡಿದೆ.
Actor Prabhas : ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್; ಹೊಂಬಾಳೆಯದ್ದೇ ಪ್ಲ್ಯಾನ್
ಮಲಯಾಳಂ ಡೈರೆಕ್ಟರ್‌ಗೆ ಸಿಕ್ತು ಚಾನ್ಸ್
ಈ ಮಧ್ಯೆ ಮಲಯಾಳಂನಲ್ಲಿ ಕಿಷ್ಕಿಂದ ಕಾಂಡಂ, ಎಕೊ ಥರದ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿರುವ ದಿಂಜಿತ್ ಅಯ್ಯತಾನ್ ಅವರನ್ನು ಹೊಂಬಾಳೆ ಫಿಲ್ಮ್ಸ್ ಆಯ್ಕೆ ಮಾಡಿಕೊಂಡಿದ್ದು, ಪ್ರಭಾಸ್ ಜೊತೆ ಒಂದು ಹಂತದ ಮಾತುಕತೆಯನ್ನು ಕೂಡ ಮಾಡಿಸಿದೆ ಎಂಬ ಮಾತುಗಳು ಕೇಳಿಬಂದಿವೆ. ಕೆಲ ದಿನಗಳ ಹಿಂದೆ ಪ್ರಭಾಸ್ ಅವರನ್ನು ದಿಂಜಿತ್ ಅಯ್ಯತಾನ್ ಭೇಟಿ ಮಾಡಿ, ಮಾತುಕತೆಯನ್ನು ನಡೆಸಿದ್ದರು. ಆ ಫೋಟೋಗಳು ಕೂಡ ವೈರಲ್ ಆಗಿದ್ದವು. ಅಲ್ಲಿಗೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಪ್ರಭಾಸ್‌ಗಾಗಿ ಒಂದು ಸಿನಿಮಾವನ್ನು ದಿಂಜಿತ್ ಅಯ್ಯತಾನ್ ನಿರ್ದೇಶನ ಮಾಡುವುದು ಖಚಿತ ಎನ್ನಲಾಗುತ್ತಿದೆ.
Sai Pallavi: ಪ್ರಭಾಸ್ ಸಿನಿಮಾದಲ್ಲಿ ಸಾಯಿಪಲ್ಲವಿ? ಜೋಡಿ ಆಗಿ ಅಲ್ಲ, ಪಾತ್ರ ಏನು?
ಅಮರನ್ ನಿರ್ದೇಶಕರಿಗೆ ಗಾಳ
ಈ ಮಧ್ಯೆ ಹನುಮಾನ್ ಡೈರೆಕ್ಟರ್ ಪ್ರಶಾಂತ್ ವರ್ಮಾಗೆ ಹೊಂಬಾಳೆ ಫಿಲ್ಮ್ಸ್ ಆಫರ್ ನೀಡಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪ್ರಭಾಸ್‌ಗೆ ಪ್ರಶಾಂತ್ ಡೈರೆಕ್ಷನ್ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆ ಪ್ರಾಜೆಕ್ಟ್ ಸೆಟ್ಟೇರುವುದಿಲ್ಲ ಎನ್ನಲಾಗುತ್ತಿದೆ. ಈ ನಡುವೆ ಅಮರನ್ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಪೆರಿಯಾಸ್ವಾಮಿ ಅವರಿಗೆ ಹೊಂಬಾಳೆ ಆಫರ್ ನೀಡಿದ್ದು, ಪ್ರಭಾಸ್ ಮತ್ತು ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಜೊತೆಗೆ ಒಂದು ಸಿನಿಮಾ ನಿರ್ಮಾಣ ಮಾಡುವ ಪ್ಲ್ಯಾನ್ ಇಟ್ಟುಕೊಂಡಿದೆ. ಇವೆಲ್ಲವೂ ಸದ್ಯ ಕೇಳಿಬರುತ್ತಿರುವ ಮಾಹಿತಿ. ಶೀಘ್ರದಲ್ಲೇ ಇದೆಲ್ಲದರ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬೀಳಲಿದೆಯಾ? ಕಾದುನೋಡಬೇಕು.
🚨 Big Buzz on the #Prabhas × #HombaleFilms Deal! 🚨
— 𝐆𝐎 𝐓𝐄𝐋𝐔𝐆𝐔 𝐂𝐈𝐍𝐄𝐌𝐀 (@gotelugucinema) March 16, 2026
The 3-movie mega deal between Prabhas and Hombale Films is taking shape. Here’s what’s reportedly on the cards:
1. #Salaar2: Shouryaanga Parvam (Expected to go on floors first) )
2. A project with director #DinjithAyyathan… pic.twitter.com/t7xOrp9Nn8
ಅತ್ತ ಪ್ರಭಾಸ್ ಅವರ ಫೌಜಿ, ಕಲ್ಕಿ 2, ಸ್ಪಿರಿಟ್ ಚಿತ್ರಗಳ ಕೆಲಸಗಳಲ್ಲಿ ಸಕ್ರಿಯವಾಗಿದ್ದಾರೆ. ಈ ಮೂರು ಚಿತ್ರಗಳಲ್ಲಿ ಕನಿಷ್ಟ ಎರಡು ಸಿನಿಮಾಗಳನ್ನಾದರೂ ಈ ವರ್ಷ ಪ್ರಭಾಸ್ ಮುಗಿಸುವುದು ಗ್ಯಾರಂಟಿ. ಆ ಬಳಿಕ ಹೊಂಬಾಳೆ ಜೊತೆ ಬ್ಯಾಕ್ ಟು ಬ್ಯಾಕ್ ವರ್ಕ್ ಮಾಡಲಿದ್ದಾರಾ ಎಂಬುದನ್ನು ಕಾದುನೋಡಬೇಕು.