‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಒಂದು ವರ್ಷ; ಸಂಭ್ರಮಿಸಿದ ರಿಷಬ್ ಶೆಟ್ಟಿ – ಹೊಂಬಾಳೆ ಫಿಲ್ಮ್ಸ್! ಆದ್ರೆ, ಈ ಒಂದು ವಿಷಯವನ್ನು ನೀವು ಗಮನಿಸಿದ್ರಾ?
Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಕಂಡು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ಸಂಭ್ರಮದ ಸಂದರ್ಭದಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಪ್ರತ್ಯೇಕ ಪೋಸ್ಟ್‌ಗಳನ್ನು ಹಂಚಿಕೊಂಡಿವೆ. ಆದರೆ ಇಲ್ಲೊಂದು ವಿಷಯ ಸಖತ್ ಕುತೂಹಲ ಮೂಡಿಸಿದೆ.
-
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಕಂಡು ಇಂದಿಗೆ 1 ವರ್ಷ ಪೂರೈಸಿದೆ. ಕಳೆದ ವರ್ಷ ಅಕ್ಟೋಬರ್ 2ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 900 ಕೋಟಿ ರೂ.ವರೆಗೂ ಗಳಿಕೆ ಕಂಡಿತ್ತು. ಇದೀಗ ಚಿತ್ರವು ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಕೂಡ ಪೋಸ್ಟ್ ಹಂಚಿಕೊಂಡಿದೆ. ಆದರೆ ಇಲ್ಲೊಂದು ವಿಷಯ ಸಖತ್ ಕುತೂಹಲ ಮೂಡಿಸಿದೆ. ಅದೇನು? ಮುಂದೆ ಓದಿ.
ಅತ್ಯಂತ ದೊಡ್ಡ ಸವಾಲಾಗಿತ್ತು
ರಿಷಬ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, "ಕಾಂತಾರ ಚಾಪ್ಟರ್ 1 — ಒಂದು ವರ್ಷ... 'ಕಾಂತಾರ' ಚಿತ್ರದ ಮೇಲೆ ಈಗಾಗಲೇ ಅಪಾರ ಪ್ರೀತಿಯನ್ನು ತೋರಿದ್ದ ಪ್ರೇಕ್ಷಕರ ಮುಂದೆ ಅದರ 'ಪ್ರೀಕ್ವೆಲ್' (ಹಿಂದಿನ ಕಥೆ) ಅನ್ನು ತರುವುದು ಅತ್ಯಂತ ದೊಡ್ಡ ಸವಾಲಾಗಿತ್ತು. ಕಥೆಯ ಮುನ್ನುಡಿಯನ್ನು ಒದಗಿಸುವುದು, ಅದರ ಮೂಲ ಬೇರುಗಳನ್ನು ಆಳವಾಗಿ ಪರಿಶೋಧಿಸುವುದು ಮತ್ತು ಆ ನೆಲದ ಆತ್ಮವನ್ನು ಪ್ರತಿಬಿಂಬಿಸುವ ಕಥೆಯನ್ನು ಹೇಳುವುದು ಒಂದು ಜವಾಬ್ದಾರಿಯೂ ಹೌದು ಹಾಗೂ ವಿಶೇಷ ಗೌರವವೂ ಹೌದು" ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅವರ ಟ್ವೀಟ್
Kantara Chapter 1 — One Year.
— Rishab Shetty (@shetty_rishab) October 2, 2026
The biggest challenge was to bring this prequel to an audience that had already showered Kantara with immense love. To give a prelude , go deeper into its roots, and tell a story that carries the soul of the land was both a responsibility and a… pic.twitter.com/cAQ7txWHqm
ಪ್ರೀತಿ, ಆಶೀರ್ವಾದ ಮತ್ತು ಬೆಂಬಲ ಹೀಗೆಯೇ ಇರಲಿ
"ಕಾಂತಾರ ಚಾಪ್ಟರ್ 1 ತೆರೆಕಂಡು ಒಂದು ವರ್ಷ ಕಳೆದಿದೆ; ಆದರೂ ಪ್ರೇಕ್ಷಕರ ಪ್ರೀತಿ, ಮೆಚ್ಚುಗೆ ಮತ್ತು ಆಶೀರ್ವಾದಗಳು ನಿರಂತರವಾಗಿ ಹರಿದುಬರುತ್ತಲೇ ಇವೆ. ಕಾಡಿನ ಸಂಸ್ಕೃತಿ ನಾಡಿಗೆ ಬಂದ ಕಥೆಯನ್ನು ಹೇಳುವ ಈ ಪ್ರಯತ್ನದಲ್ಲಿ, ನನ್ನ ಬೆನ್ನೆಲುಬಾಗಿ ನಿಂತ ನನ್ನ ತಂಡದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ಪ್ರೇಕ್ಷಕರ ಮುಖಗಳಲ್ಲಿ ನಾನು ಕಂಡ ತೃಪ್ತಿಯ ಭಾವನೆ ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಆ ಕ್ಷಣ, ಆ ನಿಶ್ಯಬ್ದ, ಆ ಕರತಾಡನ ಮತ್ತು ತದನಂತರ ವ್ಯಕ್ತವಾದ ಪ್ರೀತಿ — ಇವೆಲ್ಲವೂ ನನಗೆ ಸದಾ ವಿಶೇಷವಾಗಿ ಉಳಿದುಕೊಳ್ಳುತ್ತವೆ. ನಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೂ ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ. ಐದು ವರ್ಷ… ಎರಡು ಕಥೆ… ಒಂದು ಕನಸು… ಮರೆಯಲಾಗದ ಪಯಣ.. ನಿಮ್ಮೆಲ್ಲರ ಪ್ರೀತಿಗೆ ನಾನೆಂದೂ ಆಭಾರಿ.." ಎಂದು ರಿಷಬ್ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್‌ನ ಲೋಗೋ ಕೂಡ ಇಲ್ಲ
ಆದರೆ, ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಸಂಗತಿಯೆಂದರೆ, ತಮ್ಮ ಇಡೀ ಪೋಸ್ಟ್‌ನಲ್ಲಿ ಎಲ್ಲಿಯೂ ರಿಷಬ್ ಅವರು ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಅನ್ನು ಮೆನ್ಷನ್ ಮಾಡಿಲ್ಲ ಮತ್ತು ಟ್ಯಾಗ್ ಕೂಡ ಮಾಡಿಲ್ಲ. ಅಷ್ಟೇ ಅಲ್ಲದೆ, ರಿಷಬ್ ಹಂಚಿಕೊಂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪೋಸ್ಟರ್‌ನಲ್ಲಿ ಹೊಂಬಾಳೆ ಫಿಲ್ಮ್ಸ್‌ನ ಲೋಗೋ ಕೂಡ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ!
Kantara Chapter 1: ಹೊಸ ದಾಖಲೆ ಸೃಷ್ಟಿಸಿದ ʼಕಾಂತಾರ 'ಬ್ರಹ್ಮಕಲಶ' ಹಾಡು
ರಿಷಬ್ ಹೆಸರಿಲ್ಲ!
ಅತ್ತ ಹೊಂಬಾಳೆ ಫಿಲ್ಮ್ಸ್ ಕೂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತೆರೆಕಂಡು ಒಂದು ವರ್ಷ ಪೂರ್ಣವಾಗಿರುವುದಕ್ಕೆ ಪ್ರತ್ಯೇಕ ಪೋಸ್ಟ್ ಹಂಚಿಕೊಂಡಿದೆ. "ಒಂದು ವರ್ಷ ಕಳೆದರೂ, ಆ ಅನುಭವ ಇನ್ನೂ ಹಸಿರಾಗಿದೆ. ನಮ್ಮ ಮಣ್ಣಿನ ಕಥೆಯನ್ನು ನಿಮ್ಮ ಹೃದಯದ ಕಥೆಯನ್ನಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅದ್ಭುತ ಯಶಸ್ಸು ಕಂಡ ದೈವಿಕ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಒಂದು ವರ್ಷ. ನಮ್ಮ ಬೇರುಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂಭ್ರಮಿಸುವ ಈ ದೈವಿಕ ಪಯಣವನ್ನು, ಪ್ರಪಂಚದಾದ್ಯಂತದ ಪ್ರೇಕ್ಷಕರು ನಿಜಕ್ಕೂ ವಿಶೇಷವಾಗಿಸಿದ್ದಾರೆ. ನಿಮ್ಮ ಅಚಲವಾದ ಪ್ರೀತಿಯು ಈ ಅಧ್ಯಾಯವನ್ನು ನಮ್ಮ ಕಾಂತಾರ ಪಯಣದ ಅವಿಸ್ಮರಣೀಯ ಭಾಗವನ್ನಾಗಿಸಿದೆ" ಎಂದು ಬರೆದುಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಮಾಡಿದ ಟ್ವೀಟ್
ಒಂದು ವರ್ಷ ಕಳೆದರೂ, ಆ ಅನುಭವ ಇನ್ನೂ ಹಸಿರಾಗಿದೆ. ❤️
— Hombale Films (@hombalefilms) October 2, 2026
ನಮ್ಮ ಮಣ್ಣಿನ ಕಥೆಯನ್ನು ನಿಮ್ಮ ಹೃದಯದ ಕಥೆಯನ್ನಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
1 YEAR of Divine Blockbuster #KantaraChapter1 ❤️🔥
A divine journey celebrating our roots, culture and traditions, made truly special by audiences across the… pic.twitter.com/H4UtMzl8xf
ಏನು ಸಮಸ್ಯೆ ಇರಬಹುದು?
ಆದರೆ, ಹೊಂಬಾಳೆ ಫಿಲ್ಮ್ಸ್ ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಫೋಟೋದ ಬದಲಿಗೆ ಹುಲಿಯ ಚಿತ್ರವನ್ನು ಬಳಸಲಾಗಿದೆ. ಈ ಪೋಸ್ಟರ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಲೋಗೋ ಇದ್ದರೂ, ಎಲ್ಲಿಯೂ ರಿಷಬ್ ಶೆಟ್ಟಿಯವರ ಹೆಸರಿಲ್ಲ. ಜೊತೆಗೆ ಪೋಸ್ಟ್‌ನಲ್ಲೂ ರಿಷಬ್ ಶೆಟ್ಟಿಯವರನ್ನು ಟ್ಯಾಗ್ ಮಾಡಲಾಗಿಲ್ಲ. ಇದೆಲ್ಲವನ್ನೂ ಗಮನಿಸಿದರೆ, ಇಬ್ಬರ ನಡುವೆ ಏನೋ ಮನಸ್ತಾಪ ಉಂಟಾಗಿದೆಯೇ ಎಂಬ ಅನುಮಾನ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.