ʻಪವಿತ್ರಾ ಗೌಡ ನನಗೆ ಮಗಳಿದ್ದಂತೆ, ಅಲ್ಲಿರುವ ಎಲ್ಲರಿಗೂ ಸಾಂತ್ವನ ಹೇಳಿದೆʼ; ಜೈಲಿಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಿಷ್ಟು!
ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಹತ್ವದ ಹೇಳಿಕೆ ನೀಡಿದ್ದಾರೆ. ವಿಚಾರಣಾಧೀನ ಕೈದಿ ಪವಿತ್ರಾ ಗೌಡ ತಮಗೆ ಮಗಳಿದ್ದಂತೆ ಎಂದಿರುವ ಅವರು, ಜೈಲಿನಲ್ಲಿರುವ ಎಲ್ಲಾ ಮಹಿಳೆಯರಿಗೂ ಕಾನೂನು ನೆರವು ಹಾಗೂ ಸಾಂತ್ವನ ಅಗತ್ಯ ಎಂದಿದ್ದಾರೆ.
-
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ನಟಿ ಪವಿತ್ರಾ ಗೌಡ ಕೂಡ ಪ್ರಮುಖ ಆರೋಪಿಯಾಗಿದ್ದಾರೆ. ಈಗಾಗಲೇ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ದಿನದೂಡುತ್ತಿರುವ ಅವರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಆಗಮಿಸಿ, ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ.
ಮಹಿಳೆಯರು ಮೂಲತಃ ಭಾವನಾತ್ಮಕ ಜೀವಿಗಳು
"ನಾನು ಜೈಲಿನಲ್ಲಿರುವ ಎಲ್ಲರ ಜೊತೆಗೂ ಮಾತನಾಡಿದ್ದೇನೆ. ಪವಿತ್ರಾ ಗೌಡ ಮಾನಸಿಕವಾಗಿ ನೊಂದಿದ್ದಾರೆ. ನನಗೆ ಪವಿತ್ರಾ ಗೌಡ ಅಥವಾ ಬೇರೆ ಯಾವುದೇ ಹೆಣ್ಣುಮಗಳಿರಲಿ, ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ; ಆಕೆಯೂ ನನಗೆ ಮಗಳ ಸಮಾನ. ಯಾರೇ ಇರಲಿ, ನಾನೊಬ್ಬಳು ತಾಯಿಯಂತೆ. ಜೈಲಿನಲ್ಲಿ ಇರುವವರೆಲ್ಲರೂ ಕೆಟ್ಟವರಲ್ಲ. ಕಾನೂನಿನ ಪ್ರಕಾರ ಅವರಿಗೆ ಆಗಬೇಕಾದ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ, ಮಹಿಳೆಯರು ಮೂಲತಃ ಭಾವನಾತ್ಮಕ ಜೀವಿಗಳು. ಹೀಗಾಗಿ ಎಲ್ಲರಿಗೂ ಅಗತ್ಯ ಕಾನೂನು ನೆರವು ಸಿಗಬೇಕು, ಎಲ್ಲರೂ ಸನ್ನಡತೆಯಿಂದ ಹೊರಬರಬೇಕು. ಕೇವಲ ಪವಿತ್ರಾ ಗೌಡ ಮಾತ್ರವಲ್ಲ, ಅಲ್ಲಿರುವ ಪ್ರತಿಯೊಬ್ಬರೂ ನನಗೆ ಒಂದೇ. ನಾನು ಎಲ್ಲರನ್ನೂ ತಬ್ಬಿಕೊಂಡು ಸಾಂತ್ವನ ಹೇಳಿದೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾವೇನೂ ಪ್ರತ್ಯೇಕವಾಗಿ ಕೊಡಲಾಗುವುದಿಲ್ಲ, ಆದರೆ 'ನಮ್ಮವರು' ಎಂಬ ಭಾವನೆಯಿಂದ ಅಪ್ಪಿಕೊಂಡಾಗ ಅವರ ಮೊದಲ ಪ್ರತಿಕ್ರಿಯೆಯೇ ಕಣ್ಣೀರಾಗಿತ್ತು" ಎಂದು ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಪವಿತ್ರಾ ಗೌಡರನ್ನು ಗುರಿಯಾಗಿಸಿ ಪ್ರಶ್ನೆ ಕೇಳಬೇಡಿ
ಪವಿತ್ರಾ ಗೌಡ ಅವರ ಆರೋಗ್ಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಜೈಲಿನಲ್ಲಿಯೇ ಪ್ರತ್ಯೇಕ ಆಸ್ಪತ್ರೆ ಸೌಲಭ್ಯವಿದೆ. ಮಹಿಳೆಯರಿಗಾಗಿ ವಿಶೇಷ ವೈದ್ಯಕೀಯ ವ್ಯವಸ್ಥೆಯೂ ಇದೆ. ನೀವು ಕೇವಲ ಒಬ್ಬರನ್ನೇ ಗುರಿಯಾಗಿಸಿ ಪ್ರಶ್ನೆ ಕೇಳಬೇಡಿ. ಯಾವುದೋ ಒಂದು ಘಟನೆಗೆ ಅವರು ಈಗಾಗಲೇ ಜೈಲಿನಲ್ಲಿದ್ದಾರೆ. ಮಾಧ್ಯಮಗಳಲ್ಲಿ ಸತ್ಯಾಸತ್ಯತೆ ತಿಳಿಯದೆ ಪ್ರಸಾರ ಮಾಡುವ ಊಹಾಪೋಹದ ಸುದ್ದಿಗಳು ಅವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸುತ್ತವೆ. ಅಂತಹ ಕೆಲಸವನ್ನು ನಾವು ಮಾಡಬಾರದು" ಎಂದು ಅವರು ತಿಳಿಸಿದರು.
ಪವಿತ್ರಾ ಗೌಡಗೆ ವಾರಕ್ಕೊಮ್ಕೆ ಮನೆಯೂಟ ನೀಡಲು ಅವಕಾಶ ಕೊಟ್ಟ ಕೋರ್ಟ್
ಜೈಲು ಸಿಬ್ಬಂದಿಯ ಕೆಲಸ ಅಷ್ಟು ಸುಲಭವಲ್ಲ
"ಜೈಲಿನಲ್ಲಿ ಮೊಬೈಲ್ ಬಳಕೆ ವಿಚಾರದ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ, ಸದ್ಯ ಅದು ತನಿಖೆಯ ಹಂತದಲ್ಲಿದೆ. ತನಿಖೆಯಲ್ಲಿ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ನಾನು ಭೇಟಿ ನೀಡಿದಾಗ ಅಂತಹ ಯಾವುದೇ ಘಟನೆ ಕಂಡುಬಂದಿಲ್ಲ. ಜೈಲಿನ ವ್ಯವಸ್ಥೆಯನ್ನು ನಾವು ಅರ್ಥಮಾಡಿಕೊಳ್ಳಬೇಕು; 200 ರಿಂದ 250 ಕೈದಿಗಳಿಗೆ ಒಬ್ಬೊಬ್ಬರು ಸಿಬ್ಬಂದಿ ಕಾವಲು ಕಾಯುತ್ತಿರುತ್ತಾರೆ. ಸಿಸಿಟಿವಿ ಕಣ್ಗಾವಲು ನಿರಂತರವಾಗಿರುವುದರಿಂದ, ಸಣ್ಣ ಲೋಪವಾದರೂ ಸಿಬ್ಬಂದಿಯ ಉದ್ಯೋಗ ಹಾಗೂ ಭವಿಷ್ಯಕ್ಕೆ ಕುತ್ತು ಬರುತ್ತದೆ. ಹೀಗಾಗಿ ಅಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ" ಎಂದು ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ಉತ್ತಮ ಊಟ ನೀಡಲಾಗುತ್ತಿದೆ
"ಇತರ ಜೈಲುಗಳಿಗೆ ಹೋಲಿಸಿದರೆ ನಮ್ಮ ಜೈಲಿನ ವ್ಯವಸ್ಥೆ ಹಾಗೂ ಆಹಾರದ ಗುಣಮಟ್ಟ ಉತ್ತಮವಾಗಿದೆ. ಎಷ್ಟೋ ಹಾಸ್ಟೆಲ್‌ಗಳಿಗಿಂತ ಇಲ್ಲಿನ ಊಟ ಪರವಾಗಿಲ್ಲ. ನಾನು ಕೂಡ ಕೈದಿಗಳಿಗೆ ನೀಡುವ ಮುದ್ದೆ, ಅನ್ನ ಹಾಗೂ ಸಾರನ್ನೇ ಊಟ ಮಾಡಿದೆ. ಅಲ್ಲಿ ಶಿಕ್ಷಣಕ್ಕೆ ಪೂರಕವಾದ ಶಾಲೆ, ಗ್ರಂಥಾಲಯ ಸೇರಿದಂತೆ ಕೈದಿಗಳು ಮಾನಸಿಕವಾಗಿ ಕುಗ್ಗದಂತೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಸಾವಿರಾರು ಜನ ಇರುವಾಗ ಸಣ್ಣಪುಟ್ಟ ಲೋಪಗಳು ನಡೆದಿರಬಹುದೇನೋ, ಆದರೆ ನನ್ನ ಗಮನಕ್ಕೆ ಅಂತಹದ್ದೇನೂ ಬಂದಿಲ್ಲ" ಎಂದು ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.