ನಾಲ್ಕೇ ದಿನಕ್ಕೆ 150 ಕೋಟಿ ರೂ. ಬಾಚಿದ ʻವಿಶ್ವನಾಥ್ ಆಂಡ್ ಸನ್ಸ್ʼ; ಕರ್ನಾಟಕದಲ್ಲಿ ಸೂರ್ಯ ಸಿನಿಮಾ ಈವರೆಗೆ ಗಳಿಸಿದ್ದೆಷ್ಟು?
ಸೂರ್ಯ ನಟನೆಯ ʻವಿಶ್ವನಾಥ್ ಆಂಡ್ ಸನ್ಸ್ʼ ಚಿತ್ರವು ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ವಿಶ್ವಾದ್ಯಂತ ₹150 ಕೋಟಿಗೂ ಅಧಿಕ ಗಳಿಕೆ ಕಂಡು ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಸಿನಿಮಾ ಕರ್ನಾಟಕದಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ.
-
ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಶ್ವನಾಥ್ & ಸನ್ಸ್’ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ನೊಂದಿಗೆ ಧೂಳೆಬ್ಬಿಸುತ್ತಿದೆ. ವೆಂಕಿ ಅಟ್ಲೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಆಗಸ್ಟ್ 14ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ನಾಲ್ಕೇ ದಿನಕ್ಕೆ 150 ಕೋಟಿ ರೂ. ಗಳಿಕೆ
ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದ್ದ ಈ ಚಿತ್ರ, ನಾಲ್ಕೇ ದಿನಗಳಲ್ಲಿ ವಿಶ್ವಾದ್ಯಂತ ₹150 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ಮೈಲಿಗಲ್ಲು ತಲುಪಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿದೆ. ತಮಿಳುನಾಡು ಹಾಗೂ ತೆಲುಗು ರಾಜ್ಯಗಳಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಚಿತ್ರಕ್ಕೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದೆ. ಯುಎಸ್‌ಎ ಬಾಕ್ಸಾಫೀಸ್‌ನಲ್ಲಿ ಈಗಾಗಲೇ $1.75 ಮಿಲಿಯನ್ ಕಲೆಕ್ಷನ್ ಆಗಿದ್ದು, ಸದ್ಯದಲ್ಲೇ 2 ಮಿಲಿಯನ್ ಡಾಲರ್ ಕ್ಲಬ್ ಸೇರುವ ನಿರೀಕ್ಷೆಯಿದೆ.
ʻಕರುಪ್ಪುʼ ದಾಖಲೆ ಬ್ರೇಕ್ ಆಗಲಿದೆಯಾ?
‘ಸಾರ್’ ಮತ್ತು ‘ಲಕ್ಕಿ ಭಾಸ್ಕರ್’ ಚಿತ್ರಗಳ ಯಶಸ್ಸಿನ ನಂತರ ವೆಂಕಿ ಅಟ್ಲೂರಿ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಬ್ಲಾಕ್‌ಬಸ್ಟರ್ ಪಡೆದುಕೊಂಡಿದ್ದಾರೆ. ಇನ್ನು ಈ ಹಿಂದೆ ಆರ್.ಜೆ. ಬಾಲಾಜಿ ನಿರ್ದೇಶನದ 'ಕರುಪ್ಪು' ಚಿತ್ರದ ಮೂಲಕ ₹300 ಕೋಟಿಗೂ ಹೆಚ್ಚು ಗಳಿಕೆ ಕಂಡಿದ್ದ ಸೂರ್ಯ, ಇದೀಗ ‘ವಿಶ್ವನಾಥ್ & ಸನ್ಸ್’ ಮೂಲಕ ತಮ್ಮದೇ ಹಿಂದಿನ ದಾಖಲೆಗಳನ್ನು ಮುರಿಯುವ ಹಾದಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಗಮನಸೆಳೆದ ಜಿವಿ ಪ್ರಕಾಶ್ ಮ್ಯೂಸಿಕ್
ಈ ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ಮಮಿತಾ ಬೈಜು ನಟಿಸಿದ್ದು, ರವೀನಾ ಟಂಡನ್, ರಾಧಿಕಾ ಶರತ್‌ಕುಮಾರ್, ನಾಸರ್, ರಾಜೀವ್ ಮೆನನ್, ಭವಾನಿ ಶ್ರೀ, ಹರ್ಷ ಚೆಮುಡು ಹಾಗೂ ಹೈಪರ್ ಆದಿ ಪ್ರಮುಖ ತಾರಾಗಣದಲ್ಲಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ಹಾಗೂ ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಚಿತ್ರಕ್ಕಿದೆ.
Suriya: ನಟ ಸೂರ್ಯ ಅವರ ವಿಶ್ವನಾಥ್ ಆಂಡ್ ಸನ್ಸ್ ಟ್ರೈಲರ್ ರಿಲೀಸ್
ಕರ್ನಾಟಕದಲ್ಲೂ ದಾಖಲೆ ಬರೆದ ʻವಿಶ್ವನಾಥ್ & ಸನ್ಸ್’
ಕರ್ನಾಟಕದಲ್ಲೂ ʻವಿಶ್ವನಾಥ್ & ಸನ್ಸ್’ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನ ₹1.91 ಕೋಟಿ, ಎರಡನೇ ದಿನ ₹3.30 ಕೋಟಿ ಹಾಗೂ ಮೂರನೇ ದಿನ ₹3.01 ಕೋಟಿ ಗಳಿಸಿತ್ತು. ನಾಲ್ಕನೇ ದಿನವೂ ₹1 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ರಾಜ್ಯದಲ್ಲಿ ಮೊದಲ ನಾಲ್ಕು ದಿನಗಳಲ್ಲಿ ಒಟ್ಟು ₹9.23 ಕೋಟಿ ಕಲೆಕ್ಷನ್ ದಾಖಲಿಸಿದೆ. ವಾರದ ದಿನಗಳಲ್ಲೂ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.