Bigg Boss 13: ವೀಕೆಂಡ್ ಸಂಚಿಕೆಯಲ್ಲಿ ಧರಿಸಲು ಸೂಕ್ತ ಉಡುಪಿಲ್ಲದೆ ಕಣ್ಣೀರಿಟ್ಟ ಜಗ್ಗಾ ಮಮ್ಮಿ; ಬಟ್ಟೆ ಕಳುಹಿಸಿದ ನಟ ಕಿಚ್ಚ ಸುದೀಪ್‌ಗೆ ಎಲ್ಲರಿಂದ ಮೆಚ್ಚುಗೆ
ಬಿಗ್ ಬಾಸ್ ಕನ್ನಡ 13 ರಿಯಾಲಿಟಿ ಶೋನಲ್ಲಿ ಸೂಕ್ತ ಬಟ್ಟೆಯಿಲ್ಲದೇ ಕೊರಗುತ್ತಿದ್ದ ಜಗ್ಗಾ ಮಮ್ಮಿ ನೆರವಿಗೆ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಬಡತನದ ಕಾರಣದಿಂದ ಬಿಗ್ ಬಾಸ್ ವೇದಿಕೆಗೆ ಸ್ನೇಹಿತನ ಬಟ್ಟೆ ಧರಿಸಿ ಬಂದಿದ್ದ ಜಗ್ಗಾ ಮಮ್ಮಿಗೆ ಈಗ ವಾರಾಂತ್ಯದ ಸಂಚಿಕೆಗಾಗಿ ಬಟ್ಟೆಗಳಿರಲಿಲ್ಲ. ಅದಕ್ಕಾಗಿ ಸುದೀಪ್ ವಿಶೇಷ ಉಡುಪುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
-
'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋನ ವಾರಾಂತ್ಯದ ಸಂಚಿಕೆಯಲ್ಲಿ ಧರಿಸಲು ಸೂಕ್ತ ಉಡುಪಿಲ್ಲದೆ ಭಾವುಕರಾಗಿದ್ದ ಸ್ಪರ್ಧಿ ಜಗ್ಗಾ ಮಮ್ಮಿ (ಜಗದೀಶ್) ಅವರ ನೆರವಿಗೆ ನಿರೂಪಕ, ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಜಗದೀಶ್ ಅವರಿಗೆ ಸ್ವತಃ ಸುದೀಪ್ ಅವರೇ ವಿಶೇಷ ಉಡುಪುಗಳನ್ನು ಕಳುಹಿಸಿಕೊಡುವ ಮೂಲಕ ಮತ್ತೊಮ್ಮೆ ತಮ್ಮ ದೊಡ್ಡತನ ಹಾಗೂ ಮಾನವೀಯತೆಯನ್ನು ಮೆರೆದಿದ್ದಾರೆ.
ಅಂದು ಫ್ರೆಂಡ್ ಬಟ್ಟೆ ಧರಿಸಿ ಬಂದಿದ್ದ ಜಗ್ಗಾ ಮಮ್ಮಿ
'ಬಿಗ್ ಬಾಸ್ ಕನ್ನಡ ಸೀಸನ್ 13'ರ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿದ್ದ 'ಲವ್ ಮಾಕ್ಟೇಲ್ 3' ಖ್ಯಾತಿಯ ನಟ ಜಗದೀಶ್ (ಜಗ್ಗಾ ಮಮ್ಮಿ), ತಮ್ಮ ಮುಗ್ಧ ಮಾತು ಮತ್ತು ನಡವಳಿಕೆಯಿಂದ ಆರಂಭದಲ್ಲೇ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದಿರುವ ಅವರು, ಶೋಗೆ ಪ್ರವೇಶ ಪಡೆದ ಮೊದಲ ದಿನವೇ ತಮ್ಮ ಬಳಿ ಧರಿಸಲು ಉತ್ತಮ ಬಟ್ಟೆಗಳಿಲ್ಲದ ಕಾರಣ ಸ್ನೇಹಿತನ ಮದುವೆಯ ಡ್ರೆಸ್ ಅನ್ನೇ ಪಡೆದುಕೊಂಡು ಬಂದಿರುವುದಾಗಿ ವೇದಿಕೆಯಲ್ಲಿ ಹೇಳಿಕೊಂಡು ಭಾವುಕರಾಗಿದ್ದರು.
ಸಹಾಯ ಮಾಡಿದ್ದ ಗಗನ್ ಚಿನ್ನಪ್ಪ
ಮನೆಯಲ್ಲಿ ದಿನಗಳು ಉರುಳಿದಂತೆ, ವಾರಾಂತ್ಯದ ‘ಕಿಚ್ಚನ ಪಂಚಾಯಿತಿ’ ವಿಶೇಷ ಸಂಚಿಕೆಗೆ ಧರಿಸಲು ತಮ್ಮ ಬಳಿ ಒಳ್ಳೆಯ ಶರ್ಟ್ ಅಥವಾ ಸೂಟ್ ಇಲ್ಲ ಎಂಬುದನ್ನು ನೆನೆದು ಜಗ್ಗಾ ಮಮ್ಮಿ ಮನೆಯೊಳಗೆ ಕಣ್ಣೀರಿಟ್ಟಿದ್ದರು. ಅವರ ಅಸಹಾಯಕ ಸ್ಥಿತಿಯನ್ನು ಗಮನಿಸಿದ ಗಗನ್ ಚಿನ್ನಪ್ಪ ಕೂಡಲೇ ಸಾಂತ್ವನ ಹೇಳಿ, ತಮ್ಮ ಬಳಿಯಿದ್ದ ಡಿಸೈನರ್ ವೇರ್ ನೀಡುವ ಮೂಲಕ ಮೊದಲ ನೆರವಿನ ಹಸ್ತ ಚಾಚಿದ್ದರು.
ಕಿಚ್ಚನಿಗೆ ಧನ್ಯವಾದ ಹೇಳಿದ ಜಗ್ಗಾ ಮಮ್ಮಿ
ಮನೆಯೊಳಗಿನ ಈ ಸೂಕ್ಷ್ಮ ವಿಚಾರ ಶೋ ನಿರೂಪಕ ಕಿಚ್ಚ ಸುದೀಪ್ ಅವರ ಗಮನಕ್ಕೆ ಬಂದ ತಕ್ಷಣವೇ ಅವರು ತಡಮಾಡದೆ ಸ್ಪಂದಿಸಿದ್ದಾರೆ. ವಾರಾಂತ್ಯದ ಸಂಚಿಕೆಯಲ್ಲಿ ಜಗ್ಗು ಮಮ್ಮಿ ಧರಿಸಲೆಂದೇ ತಮ್ಮ ಕಡೆಯಿಂದಲೇ ವಿಶೇಷ ಮತ್ತು ಆಕರ್ಷಕ ಉಡುಪುಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಸುದೀಪ್ ಕಳುಹಿಸಿದ ಬಟ್ಟೆಗಳನ್ನು ಕಂಡ ಜಗ್ಗಾ ಮಮ್ಮಿ ಭಾವುಕರಾಗಿ ಕಿಚ್ಚನ ಔದಾರ್ಯಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ.
Bigg Boss Kannada 13: ಇದೇ ಭಾನುವಾರ ಬಿಗ್ ಬಾಸ್ 13 Grand Take Off!
ಸುದೀಪ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ
ಕಿಚ್ಚ ಸುದೀಪ್ ಅವರು 'ಬಿಗ್ ಬಾಸ್' ವೇದಿಕೆಯಲ್ಲಿ ಇಂತಹ ಮಾನವೀಯ ಸ್ಪಂದನೆ ತೋರಿರುವುದು ಇದೇ ಮೊದಲಲ್ಲ. ಈ ಹಿಂದಿನ ಸೀಸನ್‌ನಲ್ಲೂ ಸೂಕ್ತ ಉಡುಪಿಲ್ಲದೆ ಕಷ್ಟದಲ್ಲಿದ್ದ ಗಾಯಕ ಹನುಮಂತ ಅವರಿಗೂ ಸುದೀಪ್ ಅವರೇ ಉಡುಪುಗಳನ್ನು ಕೊಡಿಸಿ ಬೆಂಬಲವಾಗಿ ನಿಂತಿದ್ದರು. ಸ್ಪರ್ಧಿಗಳನ್ನು ಕೇವಲ ಆಟಗಾರರಂತೆ ನೋಡದೆ, ಅವರ ನೋವು-ನಲಿವುಗಳಿಗೆ ಕುಟುಂಬದ ಹಿರಿಯನಂತೆ ಸ್ಪಂದಿಸುವ 'ಅಭಿನಯ ಚಕ್ರವರ್ತಿ'ಯ ಈ ಗುಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಹಾಗೂ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.