BBK 13: ಪ್ರಶಾಂತ್ - ತಾಂಡವ್ ರಾಮ್ ನಡುವೆ ಶುರುವಾಯಿತು ಭರ್ಜರಿ ಪೈಪೋಟಿ; ಈ ವಾರದ ಕಿಚ್ಚನ ಚಪ್ಪಾಳೆಗೆ ಯಾರು ಅರ್ಹ?
Bigg Boss Kannada 13: ಬಿಗ್ ಬಾಸ್ 13ರ ಈ ವಾರದ 'ಕಿಚ್ಚನ ಪಂಚಾಯಿತಿ' ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. 'ಶೆಟ್ಟಿ ಡಾನ್' ಮದುವೆ ಟಾಸ್ಕ್ನಲ್ಲಿ ಸೌಂದರ್ಯ ಶೆಟ್ಟಿ ಪೋಷಕರಾಗಿ ನಟಿಸಿದ ಪ್ರಶಾಂತ್ ಮತ್ತು ತಾಂಡವ್ ರಾಮ್ ಅದ್ಭುತ ಹಾಸ್ಯ ಪ್ರಜ್ಞೆಯಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ.
-
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಅಂಗಳದಲ್ಲಿ ದಿನಕ್ಕೊಂದು ಹೊಸ ತಿರುವು ಕಾಣಿಸಿಕೊಳ್ಳುತ್ತಿದ್ದು, ವೀಕ್ಷಕರಿಗೆ ಪ್ರತಿ ಕ್ಷಣವೂ ಭರಪೂರ ಮನರಂಜನೆ ದೊರೆಯುತ್ತಿದೆ. ವಾರದ ಕೊನೆಯಲ್ಲಿ ಪ್ರಸಾರವಾಗುವ ‘ಕಿಚ್ಚನ ಪಂಚಾಯಿತಿ’ಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಡೀ ವಾರ ಮನೆಯಲ್ಲಿ ಅತ್ಯುತ್ತಮವಾಗಿ ಆಟವಾಡಿ, ಪ್ರೇಕ್ಷಕರನ್ನು ರಂಜಿಸಿದ ಸ್ಪರ್ಧಿಗೆ ಕಿಚ್ಚ ಸುದೀಪ್ ನೀಡುವ ‘ಕಿಚ್ಚನ ಚಪ್ಪಾಳೆ’ ಅತ್ಯುನ್ನತ ಗೌರವದ ಪುರಸ್ಕಾರವಾಗಿದೆ. ಸದ್ಯ ಈ ವಾರದ ಪ್ರದರ್ಶನವನ್ನು ಗಮನಿಸಿದರೆ, ಈ ಗೌರವಕ್ಕಾಗಿ ಪ್ರಶಾಂತ್ ಹಾಗೂ ತಾಂಡವ್ ರಾಮ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಪ್ರಶಾಂತ್ ಕಾಮಿಡಿ ಟೈಮಿಂಗ್ ಸೂಪರ್
ದೊಡ್ಮನೆಯಲ್ಲಿ ಈ ವಾರ ನಡೆದ ‘ಶೆಟ್ಟಿ ಡಾನ್’ ಮದುವೆ ಟಾಸ್ಕ್ನಲ್ಲಿ ಸೌಂದರ್ಯ ಶೆಟ್ಟಿ ಅವರ ಪೋಷಕರ ಪಾತ್ರದಲ್ಲಿ ತಾಂಡವ್ ಮತ್ತು ಪ್ರಶಾಂತ್ ಅದ್ಭುತವಾಗಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಪ್ರಶಾಂತ್ ಅವರಿಗೆ ಸೌಂದರ್ಯ ಅವರ ತಾಯಿಯಂತಹ ವಿಭಿನ್ನ ಹಾಗೂ ಸವಾಲಿನ ಸ್ತ್ರೀ ಪಾತ್ರವನ್ನು ನೀಡಲಾಗಿತ್ತು. ಆಟದ ಭಾಗವಾಗಿ ಬರುವ ಇಂತಹ ಪಾತ್ರಗಳನ್ನು ಅನೇಕರು ಮುಜುಗರದಿಂದ ನಿರ್ವಹಿಸುವುದುಂಟು. ಆದರೆ, ಪ್ರಶಾಂತ್ ಅದನ್ನು ಅತ್ಯಂತ ಸ್ಪೋರ್ಟಿವ್ ಆಗಿ ಸ್ವೀಕರಿಸಿ, ಹೆಣ್ಣಿನ ವೇಷಕ್ಕೆ ತಕ್ಕಂತೆ ತಮ್ಮ ನಡವಳಿಕೆ, ಮಾತು ಮತ್ತು ಅಭಿನಯವನ್ನು ಬದಲಾಯಿಸಿಕೊಂಡು ಇಡೀ ಮನೆಯನ್ನು ನಗೆಗಡಲಲ್ಲಿ ತೇಲಿಸಿದರು. ತಮ್ಮ ಕಾಮಿಡಿ ಟೈಮಿಂಗ್ ಮೂಲಕ ಪ್ರತಿ ಸನ್ನಿವೇಶವನ್ನೂ ವೀಕ್ಷಕರು ಎಂಜಾಯ್ ಮಾಡುವಂತೆ ಮಾಡಿದರು.
Kiccha Sudeep: 'ಬಿಗ್ ಬಾಸ್ ಕನ್ನಡ' ಶೋಗೆ ಗುಡ್ಬೈ ಹೇಳಿದ Kiccha Sudeep; ಅಭಿಮಾನಿಗಳಿಗೆ ತೀವ್ರ ಬೇಸರ!
ತಾಂಡವ್ ಏನ್ ಕಮ್ಮಿ ಇಲ್ಲ!
ಇನ್ನೊಂದೆಡೆ, ಆರಂಭದ ದಿನಗಳಲ್ಲಿ ತಕ್ಕಮಟ್ಟಿಗೆ ಸೈಲೆಂಟ್ ಆಗಿದ್ದ ತಾಂಡವ್ ರಾಮ್, ಇತ್ತೀಚಿನ ದಿನಗಳಲ್ಲಿ ಅಖಾಡದಲ್ಲಿ ಸಿಂಹದಂತೆ ಗರ್ಜಿಸುತ್ತಿದ್ದಾರೆ. ಈ ಹಿಂದೆ ಒಮ್ಮೆ ‘ಕಿಚ್ಚನ ಚಪ್ಪಾಳೆ’ ಪಡೆದುಕೊಂಡಿದ್ದ ತಾಂಡವ್, ಇದೀಗ ಮತ್ತಷ್ಟು ಚುರುಕಾಗಿ ಆಟದ ಶೈಲಿಯನ್ನೇ ಬದಲಿಸಿಕೊಂಡಿದ್ದಾರೆ. ‘ಶೆಟ್ಟಿ ಡಾನ್’ ಮದುವೆ ಟಾಸ್ಕ್ನಲ್ಲಿ ಅವರ ಆಟದ ವೈಖರಿ, ಕಾಮಿಡಿ ಸ್ಟೈಲ್ ಹಾಗೂ ಡ್ಯಾನ್ಸ್ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿತು. ಕೇವಲ ಟಾಸ್ಕ್ಗಳಲ್ಲಿ ಮಾತ್ರವಲ್ಲದೆ, ಮನರಂಜನೆಯಲ್ಲೂ ತಾವೇನೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಡುವ ಮೂಲಕ ಆಲ್-ರೌಂಡರ್ ಪ್ರದರ್ಶನ ನೀಡಿದ್ದಾರೆ.
ಯಾರಿಗೆ ಸಿಗಲಿದೆ ಕಿಚ್ಚನ ಚಪ್ಪಾಳೆ?
ಸೋಶಿಯಲ್ ಮೀಡಿಯಾಗಳಲ್ಲೂ ಈ ಇಬ್ಬರ ಸ್ಪೋರ್ಟಿವ್ ಆಟಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೀಕ್ಷಕರ ಲೆಕ್ಕಾಚಾರದ ಪ್ರಕಾರ, ಇಬ್ಬರೂ ಈ ವಾರದ ಕಿಚ್ಚನ ಚಪ್ಪಾಳೆಗೆ ಸಮಾನ ಅರ್ಹತೆ ಹೊಂದಿದ್ದಾರೆ. ಆದರೆ ತಾಂಡವ್ ಅವರಿಗೆ ಈಗಾಗಲೇ ಒಮ್ಮೆ ಈ ಗೌರವ ಸಂದಿರುವುದರಿಂದ, ಈ ಬಾರಿ ಹೆಣ್ಣಿನ ಲುಕ್ನಲ್ಲಿ ಮನರಂಜನೆ ನೀಡಿದ ಪ್ರಶಾಂತ್ ಅವರಿಗೆ ‘ಕಿಚ್ಚನ ಚಪ್ಪಾಳೆ’ ಸಿಗಬೇಕೆಂಬ ವಾದ ಪ್ರೇಕ್ಷಕರ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಅಂತಿಮವಾಗಿ ಕಿಚ್ಚ ಸುದೀಪ್ ಅವರ ಪ್ರಶಂಸೆಯ ಚಪ್ಪಾಳೆ ಯಾರ ಪಾಲಾಗಲಿದೆ ಎಂಬ ಕುತೂಹಲಕ್ಕೆ ಈ ವಾರಾಂತ್ಯದ ಎಪಿಸೋಡ್ನಲ್ಲಿ ಉತ್ತರ ಸಿಗಲಿದೆ.