ʻಕೃಷ್ಣʼ ಅಜಯ್ ರಾವ್ - ಬೃಂದಾ ಆಚಾರ್ಯ ಜೋಡಿಯ ‘ಪಾರ್ಟ್ನರ್’ ಚಿತ್ರದ ‘ಲವಲವಿಕೆ’ ಹಾಡು ರಿಲೀಸ್
Partner Movie: ʻಕೃಷ್ಣʼ ಅಜಯ್ ರಾವ್ - ಬೃಂದಾ ಆಚಾರ್ಯ ಜೋಡಿಯ ‘ಪಾರ್ಟ್ನರ್’ ಚಿತ್ರದ 'ಲವಲವಿಕೆ' ಹಾಡು ಬಿಡುಗಡೆಯಾಗಿದ್ದು, ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರವು ಆಧುನಿಕ ಜೆನ್-ಝೀ ಪ್ರೇಮ ಮತ್ತು ಕೌಟುಂಬಿಕ ಮೌಲ್ಯಗಳನ್ನು ಅನಾವರಣಗೊಳಿಸುತ್ತದೆ. ಶಿವತೇಜಸ್ ನಿರ್ದೇಶನದ ಈ ಕಲರ್‌ಫುಲ್ ಚಿತ್ರವು ಎಲ್ಲ ವರ್ಗದ ವೀಕ್ಷಕರಿಗೆ ಇಷ್ಟವಾಗುವ ಭರವಸೆ ಮೂಡಿಸಿದೆ.
-
ವಿಶಿಷ್ಟ ಕಥಾಹಂದರ ಹಾಗೂ ಮೇಕಿಂಗ್ ಮೂಲಕ ಗಮನ ಸೆಳೆಯುತ್ತಿರುವ, ‘ಕೃಷ್ಣ’ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿರುವ ‘ಪಾರ್ಟ್ನರ್’ ಚಿತ್ರದ ಮತ್ತೊಂದು ಹೊಸ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ‘ಅಮೋರಾ’ ಗೀತೆಯ ಯಶಸ್ಸಿನ ಬೆನ್ನಲ್ಲೇ, ಇದೀಗ ಬಿಡುಗಡೆಯಾಗಿರುವ ‘ಲವಲವಿಕೆ’ ಎಂಬ ಹಾಡು ಸಂಗೀತ ಪ್ರಿಯರ ಮನಗೆಲ್ಲುತ್ತಿದೆ.
‘ಮಳೆ’, ‘ಧೈರ್ಯಂ’ ಹಾಗೂ ‘ದಿಲ್ ಪಸಂದ್’ ಖ್ಯಾತಿಯ ನಿರ್ದೇಶಕ ಶಿವತೇಜಸ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಔಟ್ ಅಂಡ್ ಔಟ್ ಲವ್ ಹಾಗೂ ಫ್ಯಾಮಿಲಿ ಎಂಟರ್‌ಟೈನರ್ ಕಥೆಯನ್ನು ಒಳಗೊಂಡಿದೆ. ಇಂದಿನ ‘ಜೆನ್-ಝೀ’ ಯುವಜನತೆಯ ಜೀವನಶೈಲಿ, ಪ್ರೇಮ, ಬ್ರೇಕಪ್ ಹಾಗೂ ಲಿವಿಂಗ್ ರಿಲೇಶನ್‌ಶಿಪ್ ಪರಿಕಲ್ಪನೆಯನ್ನು ಇಟ್ಟುಕೊಂಡು, ಒಂದು ಉತ್ತಮ ಸಂದೇಶದೊಂದಿಗೆ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆಯಂತೆ.
‘ಲವಲವಿಕೆ..’ ಸಾಂಗ್ ರಿಲೀಸ್
ಕವಿರಾಜ್ ಸಾಹಿತ್ಯ ಬರೆದಿರುವ ‘ಲವಲವಿಕೆ..’ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಹಾಗೂ ರಮ್ಯ ಅಭಯಂಕರ್ ಸುಮಧುರವಾಗಿ ದನಿಯಾಗಿದ್ದಾರೆ. ಮುರಳಿ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ಸುಜ್ಞಾನ್ ಅವರ ಕ್ಯಾಮೆರಾ ಕೈಚಳಕದಲ್ಲಿ ಮೂಡಿಬಂದಿರುವ ಈ ಕಲರ್‌ಫುಲ್ ಹಾಡನ್ನು ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಅವರು ಅಧಿಕೃತವಾಗಿ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.
ಪ್ರತಿ ಹಾಡಿಗೂ ಕಲರ್ ಪ್ಯಾಟ್ರನ್
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಶಿವತೇಜಸ್, "ಸಿನಿಮಾ ನಾವು ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಮೂಡಿಬಂದಿದೆ. ಇದು ಚಿತ್ರದ ಎರಡನೇ ಹಾಡಾಗಿದ್ದು, ಅತ್ಯಂತ ಕಲರ್‌ಫುಲ್ ಆಗಿದೆ. ಚಿತ್ರದ ಪ್ರತಿಯೊಂದು ಹಾಡನ್ನೂ ಒಂದೊಂದು ನಿರ್ದಿಷ್ಟ ‘ಕಲರ್ ಪ್ಯಾಟ್ರನ್’ನಲ್ಲಿ ವಿನ್ಯಾಸಗೊಳಿಸಿದ್ದೇವೆ. ಲಕ್ಷ್ಮಿ ಕೃಷ್ಣ ಅವರು ವಸ್ತ್ರವಿನ್ಯಾಸ ಮಾಡಿದ್ದು, ಪಾಂಡಿಚೇರಿ ಮತ್ತು ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು ಹಾಗೂ ಚಿತ್ಕಲಾ ಬಿರಾದಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ‘ಪ್ರೇಮದ ಊರಲಿ’ ಚಿತ್ರವು ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದೆ. ನಮ್ಮದೂ ಕೂಡ ಸಂಪೂರ್ಣ ಕೌಟುಂಬಿಕ ಕಥಾವಸ್ತುವಾಗಿದ್ದು, ಅದೇ ರೀತಿ ಜನಮನ ಗೆಲ್ಲಲಿದೆ ಎಂಬ ಬಲವಾದ ನಂಬಿಕೆಯಿದೆ" ಎಂದರು.
ಇಡೀ ಕುಟುಂಬ ಸಮೇತ ನೋಡಬಹುದಾದ ಸಿನಿಮಾ
ಚಿತ್ರದ ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡಿ, "ನಾನು ಚಿತ್ರ ವಿತರಣೆ ಹಾಗೂ ಟಿವಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಸಮೇತ ಕುಳಿತು ಆನಂದಿಸಬಹುದಾದ ಸಿನಿಮಾ ಇದು. ವ್ಯವಹಾರಿಕ ದೃಷ್ಟಿಕೋನವನ್ನು ಇಟ್ಟುಕೊಂಡೇ ಈ ಸಿನಿಮಾ ನಿರ್ಮಿಸಿದ್ದು, ಚಿತ್ರವನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸೂಕ್ತ ಪ್ರಚಾರದ ಯೋಜನೆಗಳನ್ನು ರೂಪಿಸುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.
ಮನಸ್ಸಿಗೆ ಹತ್ತಿರವಾದ ಕಥೆ: ನಟ ಅಜಯ್ ರಾವ್
ನಾಯಕ ನಟ ಅಜಯ್ ರಾವ್ ಮಾತನಾಡಿ, "ನಿರ್ದೇಶಕರು ವಿವರಿಸಿದ ಕಥಾವಸ್ತು ನನಗೆ ಅಪಾರವಾಗಿ ಇಷ್ಟವಾಯಿತು. ಇದು ನನ್ನ ಮನಸ್ಸಿಗೆ ಅತ್ಯಂತ ಆಪ್ತವಾದ ಸಿನಿಮಾ. ಹಾಡುಗಳಷ್ಟೇ ಅಲ್ಲದೆ, ಪ್ರತಿಯೊಂದು ದೃಶ್ಯವೂ ಅಷ್ಟೇ ಕಲರ್‌ಫುಲ್ ಆಗಿ ಮೂಡಿಬಂದಿದೆ. ಕಥೆಯಲ್ಲಿ ಮಾನವೀಯ ಮೌಲ್ಯಗಳು ಹಾಗೂ ಭಾವನೆಗಳನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ನಿರ್ದೇಶಕ ಶಿವತೇಜಸ್ ಮತ್ತು ನನಗೆ 25 ವರ್ಷಗಳ ಸುದೀರ್ಘ ಸ್ನೇಹವಿದೆ. ಚಿತ್ರದ ಶೀರ್ಷಿಕೆಯಂತೆಯೇ ನಿರ್ಮಾಪಕರ ರೂಪದಲ್ಲಿ ನಮಗೆ ಅತ್ಯುತ್ತಮ ‘ಪಾರ್ಟ್ನರ್’ ಸಿಕ್ಕಿದ್ದಾರೆ. ಈ ಚಿತ್ರದ ಯಶಸ್ಸಿನ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆಯಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೊದಲು ಸಿಡುಕುಮೂತಿ ಸಿದ್ದಪ್ಪ, ಆಮೇಲೆ ಸ್ವೀಟ್ ಸಿದ್ದಪ್ಪ!
ನಾಯಕಿ ಬೃಂದಾ ಆಚಾರ್ಯ ತಮ್ಮ ಅನುಭವ ಹಂಚಿಕೊಳ್ಳುತ್ತಾ, "ಚಿತ್ರೀಕರಣದ ಸಮಯದಲ್ಲಿ ಇಡೀ ತಂಡದಲ್ಲಿದ್ದ ಉತ್ತಮ ಒಡನಾಟವೇ ಈ ಚಿತ್ರ ಚೆನ್ನಾಗಿ ಮೂಡಿಬರಲು ಮುಖ್ಯ ಕಾರಣ. ಆರಂಭದ ದಿನಗಳಲ್ಲಿ ಅಜಯ್ ರಾವ್ ಅವರು ಯಾರ ಜೊತೆಯೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ, ಒಂಥರಾ ‘ಸಿಡುಕ್ಮೂತಿ ಸಿದ್ದಪ್ಪ’ನಂತಿದ್ದರು! ಆದರೆ ದಿನ ಕಳೆದಂತೆ ಅವರು ಎಲ್ಲರೊಂದಿಗೆ ಬೆರೆತು ‘ಸ್ವೀಟ್ ಸಿದ್ದಪ್ಪ’ನಾಗಿ ಬದಲಾದರು. ಹಾಡುಗಳ ಶೂಟಿಂಗ್ ವೇಳೆ ಅಭಿನಯಕ್ಕೆ ಸಂಬಂಧಿಸಿದಂತೆ ನನಗೆ ಸಾಕಷ್ಟು ಮಾರ್ಗದರ್ಶನ ನೀಡಿದರು" ಎಂದು ನೆನೆದರು.
ಹೆಚ್.ಪಿ.ಆರ್. ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದ್ರೆ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದ್ದು, ಸದ್ಯ ಬಿಡುಗಡೆಯಾಗಿರುವ ‘ಲವಲವಿಕೆ’ ಹಾಡು ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.