ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

41ನೇ ವಯಸ್ಸಿಗೆ ಪ್ರಾಣಬಿಟ್ಟ ಕಿರುತೆರೆ ನಟ ಸಿದ್ದಾರ್ಥ್‌ ವೇಣುಗೋಪಾಲ್;‌ ಈ ಸಾವಿಗೆ ಕಾರಣವೇನು?

ಮಲಯಾಳಂ ಕಿರುತೆರೆಯ ಖ್ಯಾತ ನಟ ಮತ್ತು ನಿರೂಪಕ ಸಿದ್ಧಾರ್ಥ್ ವೇಣುಗೋಪಾಲ್ (41) ಅವರು ಕ್ಯಾನ್ಸರ್‌ನಿಂದಾಗಿ ಏಪ್ರಿಲ್ 18ರಂದು ನಿಧನರಾಗಿದ್ದಾರೆ. 'ಕಸ್ತೂರಿಮಾನ್', 'ಭಾಗ್ಯಜಾತಕಂ' ಅಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಇವರುನ್ನು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ ಮಹಾಮಾರಿ ಕಾಡುತಿತ್ತು.

41ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಕಿರುತೆರೆ ನಟ ಸಿದ್ಧಾರ್ಥ್ ವೇಣುಗೋಪಾಲ್

-

Avinash GR
Avinash GR Apr 18, 2026 12:30 PM

ಮಲಯಾಳಂ ಕಿರುತೆರೆ ಲೋಕದಿಂದ ಆಘಾತಕಾರಿ ಸುದ್ದಿಯೊಂದು ಕೇಳಿಬಂದಿದೆ. ಮಲಯಾಳಂ ಕಿರುತೆರೆ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದ ನಟ ಸಿದ್ಧಾರ್ಥ್ ವೇಣುಗೋಪಾಲ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು. ಸಿದ್ಧಾರ್ಥ್ ಅವರ ನಿಧನವು ಅವರ ಅಭಿಮಾನಿಗಳಿಗೆ ಮತ್ತು ಕಿರುತೆರೆ ಲೋಕದ ಗಣ್ಯರಿಗೆ ಆಘಾತವನ್ನುಂಟು ಮಾಡಿದೆ.

ಮಲಯಾಳಂನ 'ಕಸ್ತೂರಿಮಾನ್', 'ಭಾಗ್ಯಜಾತಕಂ' ಸೇರಿದಂತೆ ಹಲವು ಸೀರಿಯಲ್‌ಗಳ ಮೂಲಕ ಪರಿಚಿತರಾಗಿದ್ದ ತ್ರಿಶೂರ್‌ನ ಚಾಲಕುಡಿ ಮೂಲದ ಸಿದ್ದಾರ್ಥ್‌ ವೇಣುಗೋಪಾಲ್‌ ಅವರು ಕೇವಲ ನಟನೆ ಮಾತ್ರವಲ್ಲದೆ, ನಿರೂಪಕರಾಗಿಯೂ ತಮ್ಮ ಕಂಚಿನ ಕಂಠದಿಂದ ಜನಮನ ಗೆದ್ದಿದ್ದರು. ಕಾಲೇಜು ದಿನಗಳಲ್ಲೇ ವೃತ್ತಿಪರ ನಾಟಕಗಳಲ್ಲಿ ಸಕ್ರಿಯರಾಗಿದ್ದ ಸಿದ್ದಾರ್ಥ್, ನಟನೆಯನ್ನೇ ಉಸಿರಾಗಿಸಿಕೊಂಡಿದ್ದರು. ಖಾಸಗಿ ವಾಹಿನಿಗಳಲ್ಲಿ ಆಂಕರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಸೀರಿಯಲ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಮೃತರು ತಾಯಿ ಮತ್ತು ಕಿರಿಯ ಸಹೋದರನನ್ನು ಅಗಲಿದ್ದಾರೆ.

ಕ್ಯಾನ್ಸರ್‌ನಿಂದ ಬಳಲಿದ್ದ ನಟ

ಅಂದಹಾಗೆ, ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕ್ಯಾನ್ಸರ್‌ನೊಂದಿಗೆ ಹೋರಾಟ ನಡೆಸುತ್ತಿದ್ದ ಸಿದ್ದಾರ್ಥ್, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಇವರ ಸಾವಿಗೆ ಸಂತಾಪ ಸೂಚಿಸಿರುವ ನಟಿ ಸೀಮಾ ಜಿ ನಾಯರ್‌, "ಎಲ್ಲಾ ಭರವಸೆಗಳೂ ಅಳಿದಿವೆ. ಜನಪ್ರಿಯ ಧಾರಾವಾಹಿ ನಟ ಸಿದ್ಧಾರ್ಥ್ ವೇಣುಗೋಪಾಲ್ ನೋವಿಲ್ಲದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕಳೆದ ಎರಡು ವರ್ಷಗಳಿಂದ ನಿನ್ನನ್ನು ಉಳಿಸಿಕೊಳ್ಳಲು ನನ್ನ ಮನಸ್ಸು ಮತ್ತು ದೇಹ ಸುಸ್ತಾಗಿದ್ದರೂ ನಾನು ಹೋರಾಡಿದೆ. ಇಂದು ನೀನು ಇನ್ನು ಮುಂದೆ ಕಷ್ಟಪಡಬಾರದು ಎಂದು ದೇವರು ನಿರ್ಧರಿಸಿದ್ದಾನೆ. ಇದನ್ನು ತಡೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ ಸಿದ್ಧಾರ್ಥ್, ನಾನು ಸಂಪೂರ್ಣವಾಗಿ ಕುಸಿದುಹೋಗಿದ್ದೇನೆ" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸೀಮಾ ನಾಯರ್‌ ಹಂಚಿಕೊಂಡ ಪೋಸ್ಟ್



ನಟ ಕಿಶೋರ್ ಸತ್ಯ ಅವರು, "ಮತ್ತೊಬ್ಬ ಕಲಾವಿದ ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ. ಸಿದ್ಧಾರ್ಥ್ ವೇಣುಗೋಪಾಲ್ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಪರಿಚಿತ ಮುಖವಾಗಿದ್ದರು. ಅವರು ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ನಟಿ ಸೀಮಾ ಜಿ. ನಾಯರ್ ಅವರು ಇವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು. ಸಿದ್ಧಾರ್ಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಸೀಮಾ ಜಿ. ನಾಯರ್ ಅವರ ಕರುಣಾಹೃದಯಕ್ಕೆ ನಾನು ತಲೆಬಾಗುತ್ತೇನೆ" ಎಂದಿದ್ದಾರೆ. ಮಲಯಾಳಂ ಚಿತ್ರರಂಗದ ಹಲವು ಗಣ್ಯರು ನಟ ಸಿದ್ದಾರ್ಥ್‌ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.