ಅಲ್ಲು ಅರ್ಜುನ್ ನಟನೆಯ 'ರಾಕಾ' ಚಿತ್ರದಲ್ಲಿ ಮೃಣಾಲ್ ಠಾಕೂರ್ ನಟಿಸುತ್ತಿಲ್ಲವೇ? ಕೊನೆಗೂ ಹೊರಬಿತ್ತು ಅಚ್ಚರಿ ಸುದ್ದಿ!
Raaka Movie: ಅಲ್ಲು ಅರ್ಜುನ್ ನಟನೆಯ ʻರಾಕಾʼ ಸಿನಿಮಾದ ಕುರಿತಂತೆ ಹರಿದಾಡುತ್ತಿದ್ದ ವದಂತಿಗೆ ನಟಿ ಮೃಣಾಲ್ ಠಾಕೂರ್ ತೆರೆ ಎಳೆದಿದ್ದಾರೆ. ಕಳೆದ 9 ತಿಂಗಳುಗಳಿಂದ ಯಾವುದೇ ಹೊಸ ಚಿತ್ರಕ್ಕೆ ಸಹಿ ಮಾಡಿಲ್ಲವೆಂದು ತಿಳಿಸಿರುವ ಮೃಣಾಲ್, ಕೇವಲ ಸಿನಿಮಾಗಳ ಸಂಖ್ಯೆಗಳನ್ನು ಹೆಚ್ಚಿಸುವಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮೃಣಾಲ್ ಹೇಳಿದ್ದಾರೆ.
-
ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ 'ರಾಕಾ' (Raaka) ಕುರಿತ ಚರ್ಚೆಗಳು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿವೆ. ನಿರ್ದೇಶಕ ಅಟ್ಲೀ ಅವರ ಈ ಬಿಗ್ ಬಜೆಟ್ ಸಿನಿಮಾದ ಮೇಲೆ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮನೆಮಾಡಿದ್ದು, ನಿರೀಕ್ಷೆಗಳು ಗಗನಕ್ಕೇರಿವೆ. ಇದರ ನಡುವೆ, ಈ ಚಿತ್ರದ ತಾರಾಗಣದಲ್ಲಿ ನಟಿ ಮೃಣಾಲ್ ಠಾಕೂರ್ ಕೂಡ ಇರಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಜೋರಾಗಿ ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳ ಬೆನ್ನಲ್ಲೇ ಮೃಣಾಲ್ ನೀಡಿರುವ ಮಹತ್ವದ ಹೇಳಿಕೆಯೊಂದು ಸಿನಿರಂಗದ ಗಮನ ಸೆಳೆದಿದೆ.
ನಾನು 9 ತಿಂಗಳಿನಿಂದ ಯಾವ ಸಿನಿಮಾವನ್ನು ಒಪ್ಪಿಲ್ಲ
ಈಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಸಿನಿಮಾ ಆಯ್ಕೆ ಹಾಗೂ ಮುಂಬರುವ ಪ್ರಾಜೆಕ್ಟ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮೃಣಾಲ್ ಠಾಕೂರ್, ತಾವು ಕಳೆದ 9 ತಿಂಗಳುಗಳಿಂದ ಯಾವುದೇ ಹೊಸ ಚಿತ್ರಕ್ಕೂ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿ ಸುಮಾರು 9 ತಿಂಗಳುಗಳೇ ಕಳೆದಿವೆ. ನನ್ನ ಮನಸ್ಸಿಗೆ ಹಿಡಿಸುವ, ಅರ್ಥಪೂರ್ಣವಾದ ಹಾಗೂ ಕ್ರಿಯೇಟಿವ್ ಆಗಿ ಇಷ್ಟವಾಗುವಂತಹ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ತಿಳಿಸುವ ಮೂಲಕ 'ರಾಕಾ' ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತ ವದಂತಿಗಳಿಗೆ ಪರೋಕ್ಷ ಸ್ಪಷ್ಟನೆ ನೀಡಿದ್ದಾರೆ.
Mrunal Thakur: ಎಐ ತಂತ್ರಜ್ಞಾನದ ಹಾವಳಿ; ಎಚ್ಚರಿಕೆ ನೀಡಿದ ಮೃಣಾಲ್ ಠಾಕೂರ್
ಇಷ್ಟವಾಗುವಂತಹ ಕಥೆಗೆ ಕಾಯುತ್ತಿದ್ದೇನೆ
ಅವಕಾಶಗಳ ಕೊರತೆಯಿಂದಾಗಿ ತಾವು ಈ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದನ್ನು ನಟಿ ಸ್ಪಷ್ಟವಾಗಿ ಹೇಳಿದ್ದಾರೆ. ಚಿತ್ರರಂಗದಿಂದ ಸಾಕಷ್ಟು ಅವಕಾಶಗಳು ಬರುತ್ತಿದ್ದರೂ, ಪ್ರಸ್ತುತ ತಮ್ಮ ಬಳಿ ಬರುತ್ತಿರುವ ಕಥೆಗಳು ಹಾಗೂ ಪಾತ್ರಗಳು ತಮಗೆ ವೈಯಕ್ತಿಕವಾಗಿ ಕನೆಕ್ಟ್ ಆಗುತ್ತಿಲ್ಲ ಎಂದು ಹೇಳಿದ್ದಾರೆ. "ಒಂದು ಸಿನಿಮಾವನ್ನು ಪೂರ್ಣಗೊಳಿಸಲು ಸುಮಾರು 120 ದಿನಗಳ ಚಿತ್ರೀಕರಣ ಹಾಗೂ ಬದ್ಧತೆ ಬೇಕಾಗುತ್ತದೆ. ಹಾಗಾಗಿ ಕೇವಲ ಸಿನಿಮಾಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ, ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಮತ್ತು ಕಲಾವಿದೆಯಾಗಿ ತಮಗೆ ತೃಪ್ತಿ ನೀಡುವಂತಹ ಪಾತ್ರಗಳನ್ನು ನಿರ್ವಹಿಸುವುದೇ ತಮ್ಮ ಮುಖ್ಯ ಆದ್ಯತೆ ಎಂದಿದ್ದಾರೆ. ಅಲ್ಲದೆ, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಘೋಷಣೆಯಾದ ನಂತರವಷ್ಟೇ ಮಾತನಾಡುತ್ತೇನೆ" ಎಂದು ಮೃಣಾಲ್ ಹೇಳಿದ್ದಾರೆ.
ದಾಖಲೆ ಬರೆಯಲು ಸಜ್ಜಾಗಿರುವ ʻರಾಕಾʼ ಸಿನಿಮಾ
ಮತ್ತೊಂದೆಡೆ, ಅಟ್ಲೀ ನಿರ್ದೇಶನದ 'ರಾಕಾ' ಚಿತ್ರವು ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆ ಹಾಗೂ ಅಚ್ಚರಿಗಳ ಮೂಲಕ ಸುದ್ದಿ ಮಾಡುತ್ತಿದೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಅವರ ಜುಗಲ್‌ಬಂದಿ ಜತೆಗೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಜಾನ್ವಿ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕೇವಲ ತಾರಾಗಣದಿಂದ ಮಾತ್ರವಲ್ಲದೆ, ತಾಂತ್ರಿಕವಾಗಿಯೂ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಒಂದೇ ಸೆಷನ್‌ನಲ್ಲಿ ಬರೋಬ್ಬರಿ 37 ಕಲಾವಿದರ ಮೋಷನ್ ಕ್ಯಾಪ್ಚರ್ ಅನ್ನು ಏಕಕಾಲದಲ್ಲಿ ಸೆರೆಹಿಡಿಯುವ ಮೂಲಕ ಈ ಚಿತ್ರವು ಇತ್ತೀಚೆಗಷ್ಟೇ "ರಿಯಲ್-ಟೈಮ್‌ನಲ್ಲಿ ಅತಿ ಹೆಚ್ಚು ಜನರ ಮೋಷನ್-ಕ್ಯಾಪ್ಚರ್ ಮಾಡಿದ" ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಈ ಎಲ್ಲಾ ಅಂಶಗಳು 'ರಾಕಾ' ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿವೆ.