ʻನಾನು ದೊಡ್ಡ ಸೂಪರ್ ಸ್ಟಾರ್ ಅಲ್ಲ, ಮನಸ್ಸಿನೊಳಗೆ ಇಂದಿಗೂ ನಾನೊಬ್ಬ ಬಸ್ ಕಂಡಕ್ಟರ್ʼ; ಬೆಂಗಳೂರಿನ ಆ ಬದುಕನ್ನು ನೆನೆದ ರಜನಿಕಾಂತ್
Jailer 2 Movie: ನಟ ರಜನಿಕಾಂತ್ ಅವರು ತಮ್ಮ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಇಷ್ಟೊಂದು ಕೀರ್ತಿ ಸಿಕ್ಕರೂ ತಮ್ಮ ಮನಸ್ಸಿನಲ್ಲಿ ತಾವಿನ್ನೂ ಸಾಮಾನ್ಯ ಬಸ್ ಕಂಡಕ್ಟರ್ ಎಂದೇ ನಂಬಿರುವುದಾಗಿ ಹೇಳಿಕೊಂಡಿದ್ದಾರೆ. ಬೆಂಗಳೂರಿನ ಸಾರಿಗೆ ಸಂಸ್ಥೆಯಲ್ಲಿ ಕಳೆದ ದಿನಗಳೇ ತಮಗೆ ಪರಮ ಆನಂದ ತಂದಿತ್ತು ಎಂದಿಗೂ ಮಾಸದು ಎಂದಿರುವ ಅವರ ಮಾತುಗಳು ಕೋಟ್ಯಂತರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
-
ʻಸೂಪರ್‌ಸ್ಟಾರ್ʼ ರಜನಿಕಾಂತ್ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಸರಳತೆಯಿಂದಲೇ ಕೋಟ್ಯಂತರ ಜನರ ಮನಗೆದ್ದವರು. ಪ್ರಸ್ತುತ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರುವ ತಲೈವರ್, ಪ್ರಚಾರ ಕಾರ್ಯಕ್ರಮವೊಂದರಲ್ಲಿ ತಮ್ಮ ಆರಂಭಿಕ ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಗತಕಾಲದ ನೆನಪುಗಳನ್ನು ಮೆಲುಕು ಹಾಕಿರುವ ಅವರು, ತಮ್ಮನ್ನು ಒಬ್ಬ ಬಸ್ ಕಂಡಕ್ಟರ್ ಎಂದೇ ಭಾವಿಸುವುದಾಗಿ ಹೇಳುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಅಕ್ಟೋಬರ್ 15ರಂದು ʻಜೈಲರ್ 2ʼ ರಿಲೀಸ್
ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಷನ್‌ನಲ್ಲಿ ಈ ಹಿಂದೆ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದ ‘ಜೈಲರ್’ ಚಿತ್ರದ ಮುಂದುವರಿದ ಭಾಗವಾಗಿ ‘ಜೈಲರ್ 2’ ಸಿದ್ಧಗೊಂಡಿದೆ. ದಸರಾ ಹಬ್ಬದ ವಿಶೇಷ ಉಡುಗೊರೆಯಾಗಿ ಅಕ್ಟೋಬರ್ 15ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿರುವ ಈ ಚಿತ್ರದ ಪ್ರಚಾರ ಸಮಾರಂಭದಲ್ಲಿ ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ ನಿರ್ದೇಶಕ ನೆಲ್ಸನ್ ಅವರು ರಜನಿಕಾಂತ್ ಅವರ ಸರಳತೆ ಹಾಗೂ ಯಾವುದೇ ಹಮ್ಮು-ಬಿಮ್ಮು ಇಲ್ಲದ ಅವರ ವ್ಯಕ್ತಿತ್ವವನ್ನು ವೇದಿಕೆಯಲ್ಲಿ ಕೊಂಡಾಡಿದರು.
ಆ ಸಾಮಾನ್ಯ ದಿನಗಳೇ ಹೆಚ್ಚು ಆನಂದ ನೀಡುತ್ತವೆ
ನೆಲ್ಸನ್ ಅವರ ಮೆಚ್ಚುಗೆಯ ಮಾತುಗಳಿಗೆ ಪ್ರತಿಕ್ರಿಯಿಸಿದ ರಜನಿಕಾಂತ್, ಸಿನಿಮಾರಂಗದ ಅಪಾರ ಯಶಸ್ಸು ಮತ್ತು ಸ್ಟಾರ್‌ಡಮ್‌ಗಿಂತ ತಮಗೆ ವೈಯಕ್ತಿಕವಾಗಿ ಬೆಂಗಳೂರಿನಲ್ಲಿ ಕಳೆದ ಆ ಸಾಮಾನ್ಯ ದಿನಗಳೇ ಹೆಚ್ಚು ಆನಂದ ನೀಡುತ್ತವೆ ಎಂದು ಹಂಚಿಕೊಂಡರು. ಸಿನಿಮಾರಂಗ ಪ್ರವೇಶಿಸುವ ಮುನ್ನ ಬೆಂಗಳೂರಿನ ಸಾರಿಗೆ ಸಂಸ್ಥೆಯಲ್ಲಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದ್ದ ಆ ದಿನಗಳನ್ನು ಸ್ಮರಿಸಿದ್ದಾರೆ ಅವರು.
"ಸುಮಾರು ಐದು ವರ್ಷಗಳ ಕಾಲ ನಾನು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದೆ. ಆ ಸುಂದರ ದಿನಗಳನ್ನು ನಾನಿಂದಿಗೂ ಮರೆತಿಲ್ಲ. ಆ ಕೆಲಸವನ್ನು ನಾನು ಇವತ್ತಿಗೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅದೇ ಕಾರಣಕ್ಕಾಗಿಯೇ ಆಗಾಗ ಬೆಂಗಳೂರಿಗೆ ಭೇಟಿ ನೀಡುತ್ತಿರುತ್ತೇನೆ. ನಾನು ಎಂದಿಗೂ ನನ್ನನ್ನು ಒಬ್ಬ ದೊಡ್ಡ ಸೂಪರ್‌ಸ್ಟಾರ್ ಎಂದು ಭಾವಿಸುವುದಿಲ್ಲ; ಮನಸ್ಸಿನೊಳಗೆ ಇಂದಿಗೂ ನಾನೊಬ್ಬ ಬಸ್ ಕಂಡಕ್ಟರ್ ತರಹವೇ ಅನಿಸುತ್ತಿರುತ್ತದೆ" ಎಂದು ಭಾವುಕರಾಗಿ ನುಡಿದರು ರಜನಿಕಾಂತ್.
ಸೂಪರ್ ಸ್ಟಾರ್ ಆದರೂ ಬೇರುಗಳನ್ನ ಮರೆಯದ ನಟ
ಬೆಂಗಳೂರಿನ ಬೀದಿಗಳಲ್ಲಿ ಬಸ್ ಕಂಡಕ್ಟರ್ ಆಗಿ ಸಾಮಾನ್ಯರಂತೆ ಜೀವನ ಆರಂಭಿಸಿ, ನಂತರ ಚಿತ್ರರಂಗಕ್ಕೆ ಕಾಲಿಟ್ಟು, ತಮ್ಮದೇ ಆದ ವಿಶಿಷ್ಟ ಸ್ಟೈಲ್ ಮತ್ತು ಅಭಿನಯದ ಮೂಲಕ ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪ್ರತಿಮ ನಾಯಕನಾಗಿ ಮೆರೆದವರು ರಜನಿಕಾಂತ್. ಆದರೆ ಎಷ್ಟೇ ಅಪಾರ ಕೀರ್ತಿ, ಹಣ ಮತ್ತು ಜಾಗತಿಕ ಮನ್ನಣೆ ದೊರೆತರೂ ತಮ್ಮ ಬೇರುಗಳನ್ನು ಮರೆಯದೆ, ಸಾಮಾನ್ಯ ಬದುಕನ್ನು ಗೌರವಿಸುವ ಅವರ ಈ ಗುಣವೇ ಅವರನ್ನು ಇತರರಿಗಿಂತ ಭಿನ್ನವಾಗಿಸಿದೆ. ರಜನಿಕಾಂತ್ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಅವರ ಸರಳ ವ್ಯಕ್ತಿತ್ವಕ್ಕೆ ಪ್ರೇಕ್ಷಕರು ಮತ್ತೊಮ್ಮೆ ತಲೆಬಾಗಿದ್ದಾರೆ.