ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Love Seasons Review: ಒಲವಿನ ಋತುವಿನಲ್ಲಿ ಮುಳುಗೇಳುವ ನಾಯಕ; ಪ್ರೀತಿಯ ಹುಡುಕಾಟವೇ ಆತನ ಕಾಯಕ

Love Seasons Kannada Movie Review: ನಿರ್ದೇಶಕ ಕೃತ್ವಿಕ್ ಅವರ ವಿವಿಧ ಲೇಯರ್‌ಗಳ ಪ್ರೇಮಕಥೆ ‘ಲವ್‌ ಸೀಸನ್ಸ್‌’ ಚಿತ್ರವು ಇಂದು (ಜುಲೈ 3) ತೆರೆಕಂಡಿದೆ. ಅನಾಥ ರಾಮ್ ಬದುಕಿನಲ್ಲಿ ಬಂದು ಹೋಗುವ ಮೂರು ಋತುಗಳಂತಹ ಮೂವರು ಹುಡುಗಿಯರ ಸುತ್ತ ಕಥೆ ಸಾಗಲಿದ್ದು, ದ್ವಿತೀಯಾರ್ಧದಲ್ಲಿ ಹಲವು ರೋಚಕ ತಿರುವುಗಳಿಂದ ಕೂಡಿದೆ.

ರಂಗಭೂಮಿ ಪ್ರತಿಭೆಗಳ ʻಲವ್‌ ಸೀಸನ್ಸ್‌ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Jul 3, 2026 12:26 PM

“ಋಣ ಅನ್ನೋದು ವಿಧಿಯ ಕೈಯಲ್ಲಿರುವ ಉಡುಗೊರೆ. ಸಮಯ ಬಂದಾಗ, ಅದು ಯಾರ ಕೈಗೆ ಸಿಗಬೇಕೋ, ಅವರಿಗೆ ಸಿಕ್ಕೇ ಸಿಗುತ್ತದೆ” – ಹೀಗೆ ಹೇಳುವ ನಾಯಕ ರಾಮ್‌ ಬದುಕಿನಲ್ಲಿ ಒಂದಲ್ಲ, ಎರಡಲ್ಲ, ಮೂರು ಬಾರಿ ಪ್ರೀತಿಯಾಗುತ್ತದೆ. ಆದರೆ, ಕೊನೆಗೆ ಆತನ ಬಾಳಿಗೆ ಯಾರು ಜೊತೆಯಾಗುತ್ತಾರೆ ಎಂಬುದೇ ‘ಲವ್‌ ಸೀಸನ್ಸ್‌’ ಸಿನಿಮಾದ ಒನ್‌ಲೈನ್ ಸ್ಟೋರಿ.

ಪ್ರಕೃತಿಯಲ್ಲಿ ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ ಬರುವಂತೆ ಇಲ್ಲಿ ರಾಮ್‌ ಬದುಕಿನಲ್ಲೂ ಮೂವರು ಹುಡುಗಿಯರು ಬರುತ್ತಾರೆ. ಒಂದೊಂದು ಋತುವಿಗೂ ಒಂದೊಂದು ಗುಣವಿರುವಂತೆ, ರಾಮ್‌ ಬದುಕಿನಲ್ಲಿ ಬರುವ ಹುಡುಗಿಯರು ಕೂಡ ವಿಭಿನ್ನ ಗುಣಗಳನ್ನು ಹೊಂದಿರುತ್ತಾರೆ. ಅದು ರಾಮ್‌ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದೇ ರೋಚಕ.

ಏನಿದು ಲವ್‌ ಸೀಸನ್ಸ್?‌

ಅಪ್ಪ-ಅಮ್ಮನಿಲ್ಲದ ರಾಮ್‌ (ಮುಕುಂದ್‌ ರಾಮಸ್ವಾಮಿ) ಅನಾಥಾಶ್ರಮದಲ್ಲಿ ಬೆಳೆದಿರುತ್ತಾನೆ. ಶಾಲೆಯಲ್ಲಿ ಓದುವಾಗಲೇ ಆತನಿಗೆ ಮೊದಲ ಪ್ರೀತಿಯಾಗಿರುತ್ತದೆ. ಆದರೆ, ಅದು ಅಷ್ಟೇ ವೇಗದಲ್ಲಿ ಮುದುಡಿ ಹೋಗುತ್ತದೆ. ನಂತರ ಕಾಲೇಜು ದಿನಗಳಲ್ಲಿ ಮತ್ತೊಂದು ಪ್ರೀತಿ ಹುಟ್ಟುತ್ತದೆ. ಆದರೆ ಇದು ಕೂಡ ಆತನ ಬದುಕಿನಲ್ಲಿ ಹಲವು ಏರಿಳಿತಗಳಿಗೆ ಕಾರಣವಾಗುತ್ತದೆ. ಆಮೇಲೆ ಆತನ ಬದುಕಿಗೆ ಮತ್ತೊಬ್ಬಳ ಪ್ರವೇಶವಾಗುತ್ತದೆ. ಆದರೆ, ಈ ಪ್ರೀತಿಯಾದರೂ ರಾಮ್‌ಗೆ ಸಿಗುತ್ತದಾ? ಅಥವಾ ಇನ್ಯಾರಾದರೂ ಆತನ ಜೀವನಕ್ಕೆ ಕಾಲಿಡುತ್ತಾರಾ? ಎಂಬ ಪ್ರಶ್ನೆಗಳೊಂದಿಗೆ 'ಲವ್‌ ಸೀಸನ್ಸ್‌' ಸಿನಿಮಾ ಸಾಗುತ್ತದೆ.

ಮೇಕಿಂಗ್‌ ಹೇಗಿದೆ?

ನಿರ್ದೇಶಕ ಕೃತ್ವಿಕ್‌ಗೆ ಇದು ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲಿಯೇ ವಿವಿಧ ಲೇಯರ್‌ಗಳುಳ್ಳ ಪ್ರೇಮಕಥೆಯನ್ನು ಅವರು ಆಯ್ದುಕೊಂಡಿದ್ದಾರೆ. ಮೊದಲರ್ಧದಲ್ಲಿ ಕಥೆಯನ್ನು ಕಟ್ಟುವಲ್ಲಿ ಸ್ವಲ್ಪ ಹೆಚ್ಚು ಸಮಯ ವ್ಯಯವಾಗಿದೆ. ಅಸಲಿ ಕಥೆ ಆರಂಭ ಆಗುವುದೇ ಸೆಕೆಂಡ್ ಹಾಫ್‌ನಲ್ಲಿ. ಆರಂಭದಿಂದ ಪ್ರೇಕ್ಷಕರ ತಲೆಯಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ; ಆದರೆ ಸೆಕೆಂಡ್ ಹಾಫ್‌ನಲ್ಲಿ ಸಾವಧಾನವಾಗಿ ಒಂದೊಂದೇ ಪ್ರಶ್ನೆಗಳಿಗೆ ನಿರ್ದೇಶಕರು ಉತ್ತರ ನೀಡುತ್ತಾ ಸಾಗುತ್ತಾರೆ. ಇಲ್ಲಿ ಹೀರೋ ಸಿನಿಮಾ ನಿರ್ದೇಶಕನಾಗಬೇಕು ಎಂದುಕೊಂಡಿರುತ್ತಾನೆ. ಹಾಗಾಗಿ, ಸೆಕೆಂಡ್ ಹಾಫ್ ಕಥೆಯನ್ನು ಒಂದು ಸಿನಿಮಾದ ಒಳಗಿನ ಸಿನಿಮಾದಂತೆ ಹೇಳಿರುವ ರೀತಿ ವಿಶಿಷ್ಠವಾಗಿದೆ.

ʻಲವ್‌ ಸೀಸನ್ಸ್‌ʼ ಸಿನಿಮಾದ ಹೀರೋ ಆದ ರಂಗಭೂಮಿ ನಟ ಮುಕುಂದ ರಾಮಸ್ವಾಮಿ; ಜೂನ್‌ನಲ್ಲಿ ತೆರೆಗೆ ಬರುವುದು ಫಿಕ್ಸ್

ಚಿತ್ರಕಥೆಯಲ್ಲಿ ಇನ್ನಷ್ಟು ಶಾರ್ಪ್ ಆದ ಬರವಣಿಗೆಯ ಅವಶ್ಯಕತೆ ಇತ್ತು. ವೀರ್‌ ಸಮರ್ಥ್‌ ಸಂಗೀತ ಸಂಯೋಜಿಸಿರುವ ಹಾಡುಗಳು ಉತ್ತಮವಾಗಿವೆ, ಆದರೆ ಬಿಜಿಎಂನಲ್ಲಿ (ಹಿನ್ನೆಲೆ ಸಂಗೀತ) ಇನ್ನಷ್ಟು ತಾಕತ್ತು ಬೇಕಿತ್ತು. ಅವಿನಾಶ ಶಾಸ್ತ್ರಿ ಛಾಯಾಗ್ರಹಣ ಮತ್ತು ಮಧು ತುಂಬಕೆರೆ ಸಂಕಲನದ ಕೆಲಸಗಳು ಚೆನ್ನಾಗಿ ಮೂಡಿಬಂದಿವೆ.

ಕಲಾವಿದರ ನಟನೆ ಹೇಗಿದೆ?

ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕರು ರಂಗಭೂಮಿ ಕಲಾವಿದರು. ಹಾಗಾಗಿ, ಪ್ರತಿಯೊಬ್ಬರೂ ಕೂಡ ಅತ್ಯುತ್ತಮವಾಗಿ ನಟಿಸುವ ಪ್ರಯತ್ನ ಮಾಡಿದ್ದಾರೆ. ರಂಗಭೂಮಿಯಲ್ಲಿ ಶ್ರಮಿಸಿ, ಇದೀಗ ಚಿತ್ರರಂಗಕ್ಕೆ ಕಾಲಿಟ್ಟಿರುವ ಮುಕುಂದ ರಾಮಸ್ವಾಮಿ ಮೊದಲ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ. ಚೊಚ್ಚಲ ಸಿನಿಮಾದಲ್ಲೇ ಅವರಿಗೆ ಮೂರು ಶೇಡ್‌ಗಳುಳ್ಳ ಪಾತ್ರ ಸಿಕ್ಕಿರುವುದು ವಿಶೇಷ. ಅದರಲ್ಲೂ ಶಾಲಾ ವಿದ್ಯಾರ್ಥಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರು ನಿಭಾಯಿಸಿರುವ ಮೂರೂ ಶೇಡ್‌ಗಳಿಗೂ ಒಂದಕ್ಕಿಂತ ಒಂದು ಭಿನ್ನವಾದ ಛಾಯೆ ಇದೆ. ಅದನ್ನು ಮುಕುಂದ್ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

Kannada New Movie: ಸ್ಯಾಂಡಲ್‌ವುಡ್‌ಗೆ ʻಲವ್‌ ಸೀಸನ್ಸ್‌ʼ ಎಂಟ್ರಿ: ಲಿರಿಕಲ್ ವೀಡಿಯೋ ಸಾಂಗ್ ಔಟ್‌

ನಾಯಕಿಯರಲ್ಲಿ ದಿಯಾ ಕೀರ್ತಿಗೆ ಒಂಚೂರು ಜಾಸ್ತಿ ಮಾರ್ಕ್ಸ್ ಸಿಗುತ್ತದೆ. ಅವರ ಪಾತ್ರ ಕೂಡ ಅವರಷ್ಟೇ ಮುದ್ದಾಗಿದೆ. ಉಳಿದಂತೆ ಚಂದನಾ ಗೌಡ ಹಾಗೂ ಶ್ವೇತಾ ಕೊಗ್ಲೂರ್‌ ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅನುಭವಿ ಕಲಾವಿದರಾದ ಸಂಗೀತಾ ಅನಿಲ್‌, ರಾಜೇಶ್‌ ನಟರಂಗ, ಮಂಡ್ಯ ರಮೇಶ್‌ ತಮಗೆ ಸಿಕ್ಕ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹುಲಿ ಕಾರ್ತಿಕ್‌ ಮತ್ತು ಚೇತನ್‌ ದುರ್ಗ ಅಲ್ಲಲ್ಲಿ ನಗಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸಿದ್ಧ ನಿರ್ದೇಶಕ ಜಯತೀರ್ಥ ಈ ಸಿನಿಮಾದಲ್ಲಿಯೂ ನಿರ್ದೇಶಕರಾಗಿಯೇ ಕಾಣಿಸಿಕೊಂಡಿರುವುದು ವಿಶೇಷ. ನಿಧಾನವಾಗಿ ಸಾಗುವ ರೋಮ್ಯಾಂಟಿಕ್ ಲವ್‌ ಸ್ಟೋರಿಗಳನ್ನು ಇಷ್ಟಪಡುವವರಿಗೆ ‘ಲವ್‌ ಸೀಸನ್ಸ್‌’ ಖಂಡಿತಾ ಇಷ್ಟವಾಗುತ್ತದೆ.

Movie: ಲವ್‌ ಸೀಸನ್ಸ್

Release Date: ಜು.3, 2026

Language: ಕನ್ನಡ

Genre: ಡ್ರಾಮಾ, ರೊಮ್ಯಾಂಟಿಕ್

Director: ಕೃತ್ವಿಕ್

Cast:‌ ಮುಕುಂದ್‌ ರಾಮಸ್ವಾಮಿ, ದಿಯಾ ಕೀರ್ತಿ, ಶ್ವೇತಾ ಕೊಗ್ಲೂರ್‌, ಚಂದನಾ ಗೌಡ, ರಾಜೇಶ್‌ ನಟರಂಗ, ಮಂಡ್ಯ ರಮೇಶ್‌, ಸಂಗೀತಾ ಅನಿಲ್‌, ಚೇತನ್‌ ದುರ್ಗ, ಹುಲಿ ಕಾರ್ತಿಕ್

Duration: 145‌ ನಿಮಿಷ

Rating: 3/5