ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಅಮರಾವತಿ’ ಚಿತ್ರದ ‘ದೂರಿಯಮ್ಮ’ ಸಾಂಗ್‌ ರಿಲೀಸ್; ನವೀನ್ ಸಜ್ಜು - ಕಿನ್ನರಿ ಜೋಗಿ ಸಿದ್ದಪ್ಪ ಕಂಠಸಿರಿಯಲ್ಲಿ ಮೂಡಿಬಂದ ಜಾನಪದ ಹಾಡು

Naveen Sajju: ನಟ ನವೀನ್‌ ಸಜ್ಜು ಅವರು ನಾಯಕನಾಗಿ ನಟಿಸಿರುವ ‘ಅಮರಾವತಿ’ ಚಿತ್ರದ ಬಹುನಿರೀಕ್ಷಿತ ಜಾನಪದ ಶೈಲಿಯ ‘ದೂರಿಯಮ್ಮ’ ಹಾಡು ಬಿಡುಗಡೆಯಾಗಿದೆ. ಕುಮಾರ್ ನಿರ್ದೇಶಿಸಿ ನಿರ್ಮಿಸಿರುವ ಈ ಕಾಮಿಡಿ ಥ್ರಿಲ್ಲರ್ ಸಿನಿಮಾ ನೈಜ ಘಟನೆ ಆಧಾರಿತವಾಗಿದ್ದು, ಒಂದೇ ದಿನದಲ್ಲಿ ನಡೆಯುವ ಕಥಾಹಂದರ ಹೊಂದಿದೆ.

ನವೀನ್‌ ಸಜ್ಜು ಗಾಯನದಲ್ಲಿ ಮೂಡಿಬಂದ ʻಅಮರಾವತಿʼ ಚಿತ್ರದ ʻದೂರಿಯಮ್ಮʼ ಸಾಂಗ್‌

-

Avinash GR
Avinash GR Nov 1, 2026 1:09 PM

‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಹಾಗೂ ‘ಲವ್ ಯೂ ಮುದ್ದು’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಕುಮಾರ್, ಇದೀಗ ನೆಲಮೂಲದ ಸೂಕ್ಷ್ಮ ಕಥನವಿರುವ ‘ಅಮರಾವತಿ’ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಶೀರ್ಷಿಕೆಯ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಚಿತ್ರದ ಬಹುನಿರೀಕ್ಷಿತ ‘ದೂರಿಯಮ್ಮ’ ಎಂಬ ಜಾನಪದ ಶೈಲಿಯ ಹಾಡು ಇದೀಗ ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಗಮನ ಸೆಳೆಯುತ್ತಿದೆ.

ಹಾಡು ಬರೆದು ಸಂಗೀತ ಸಂಯೋಜಿಸಿದ ನವೀನ್‌ ಸಜ್ಜು

ಜಾನಪದ ಸೊಗಡಿನ ಈ ಹಾಡಿನ ಮೂಲಕ ಚಿತ್ರತಂಡ ‘ಅಮರಾವತಿ’ಯ ರೋಚಕ ಕಥೆಯ ಒಂದಷ್ಟು ಝಲಕ್ ಅನ್ನು ಹಂಚಿಕೊಂಡಿದೆ. ಜನಪ್ರಿಯ ಗಾಯಕ ನವೀನ್ ಸಜ್ಜು ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ‘ದೂರಿಯಮ್ಮ’ ಹಾಡಿಗೆ ಸಾಹಿತ್ಯ ಬರೆದು ರಾಗ ಸಂಯೋಜಿಸಿರುವುದೂ ಸ್ವತಃ ನವೀನ್ ಸಜ್ಜು. ಈ ಹಾಡಿಗೆ ಮತ್ತಷ್ಟು ಮಣ್ಣಿನ ಸೊಗಡು ತರಲು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಿತರಾದ ಗ್ರಾಮ್ಯ ಪ್ರತಿಭೆ ಕಿನ್ನರಿ ಜೋಗಿ ಸಿದ್ದಪ್ಪ ಅವರನ್ನು ಹುಡುಕಿ ಕರೆತಂದು ಹಾಡಿಸಲಾಗಿದ್ದು, ಅವರ ಜೊತೆಗೆ ನವೀನ್ ಸಜ್ಜು ಕೂಡ ಧ್ವನಿಗೂಡಿಸಿದ್ದಾರೆ. ಪಿರಿಯಾಪಟ್ಟಣದ ಹಾಡಿ ಹಾಗೂ ಮಡಿಕೇರಿ ಭಾಗದ ನಿಸರ್ಗದ ಮಡಿಲಿನಲ್ಲಿ ಈ ಹಾಡನ್ನು ದೃಶ್ಯೀಕರಿಸಲಾಗಿದೆ.

Kannada New Movie: ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

ಹಾಸ್ಯದ ಮೂಲಕ ಸಂದೇಶ

ಹಿಂದಿನ ಮೂರು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಕುಮಾರ್, ‘ಅಮರಾವತಿ’ ಮೂಲಕ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ. ‘ಕೇಸರಿ ಫಿಲಂ ಕ್ಯಾಪ್ಚರ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಕಾಮಿಡಿ ಥ್ರಿಲ್ಲರ್ ಜಾನರ್‌ಗೆ ಸೇರಿದೆ. ನೈಜ ಘಟನೆಯೊಂದರಿಂದ ಪ್ರೇರಿತಗೊಂಡು, ಕೇವಲ ಒಂದೇ ದಿನದಲ್ಲಿ ಘಟಿಸುವ ರೋಚಕ ಕಥಾಹಂದರವನ್ನು ಇದು ಒಳಗೊಂಡಿದೆ. ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಕಥೆಯಲ್ಲಿ ಪರಿಸರ ನಾಶದಂತಹ ಗಂಭೀರ ಸಾಮಾಜಿಕ ಕಳಕಳಿಯನ್ನೂ ಬೆರೆಸಿ, ಮನೋರಂಜನಾತ್ಮಕ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ.

ಶೀಘ್ರದಲ್ಲೇ ರಿಲೀಸ್‌ ಡೇಟ್‌ ಘೋಷಣೆ

ಈ ಚಿತ್ರದಲ್ಲಿ ನಾಯಕ ನವೀನ್ ಸಜ್ಜು ಜತೆಗೆ ಗಿರೀಶ್ ಶಿವಣ್ಣ, ಯಶ್ ಶೆಟ್ಟಿ, ಸಮೀಕ್ಷಾ ರಾಮ್, ಗೌರಿ ಶೈವ, ಸುಮಂತ್, ವಿಶ್ವ ವಿಜೇತ ಸೇರಿದಂತೆ ಪ್ರತಿಭಾವಂತ ಕಲಾವಿದರ ತಾರಾಗಣವಿದೆ. ತಾಂತ್ರಿಕ ವಿಭಾಗದಲ್ಲಿ ನವೀನ್ ಚಲ್ಲ ಅವರ ಛಾಯಾಗ್ರಹಣ, ವೆಂಕಿ ಯುಡಿವಿ ಮತ್ತು ದೀಪು ಸಿ.ಎಸ್ ಅವರ ಸಂಕಲನ ಹಾಗೂ ಪುರುಷೋತ್ತಮ್ ಅವರ ಕಲಾ ನಿರ್ದೇಶನವಿದೆ. ನವೀನ್ ಸಜ್ಜು ಮತ್ತು ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.