ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಸರ್ಕಾರಿ ನೌಕರಿ ಇಷ್ಟವಿಲ್ಲ, ನಟನೆ ಮೇಲೆಯೇ ಆಸಕ್ತಿʼ; ನಟಿ ನಂದಿನಿ ಆತ್ಮಹತ್ಯೆ ಕಾರಣ ಬಹಿರಂಗ, ಡೆತ್‌ನೋಟ್‌ನಲ್ಲಿ ಏನಿದೆ?

Actress Nandini CM Death: ನಟಿ ನಂದಿನಿ ಸಿ ಎಂ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಅವರ ಡೆತ್‌ ನೋಟ್‌ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ, ತಮಗೆ ಇಷ್ಟವಿಲ್ಲದಿದ್ದರೂ ಸರ್ಕಾರಿ ನೌಕರಿ ಸೇರುವಂತೆ ಇದ್ದ ಒತ್ತಡವೇ ಸಾವಿಗೆ ಪ್ರೇರಣೆ ಎಂದು ಉಲ್ಲೇಖಿಸಲಾಗಿದೆ. ತಂದೆಯ ನಿಧನದ ನಂತರ ಸಿಕ್ಕಿದ್ದ ಅನುಕಂಪದ ಆಧಾರಿತ ಸರ್ಕಾರಿ ಕೆಲಸವನ್ನು ನಿರಾಕರಿಸಿ, ನಟನೆಯಲ್ಲಿ ಮುಂದುವರಿಯಬೇಕೆಂಬ ಉದ್ದೇಶ ಅವರದಾಗಿತ್ತು ಎನ್ನಲಾಗಿದೆ.

ನಟಿ ನಂದಿನಿ ಡೆತ್‌ನೋಟ್ ಲಭ್ಯ; ಸರ್ಕಾರಿ ಕೆಲಸವೇ ಸಾವಿಗೆ ಕಾರಣವಾಯ್ತಾ?

-

Avinash GR
Avinash GR Dec 30, 2025 11:40 AM

ʻಜೀವ ಹೂವಾಗಿದೆʼ, ʻಸಂಘರ್ಷʼ, ʻಮಧುಮಗಳುʼ, ʻನೀನಾದೆ ನಾʼ ಸೇರಿದಂತೆ ಕನ್ನಡ, ತಮಿಳಿನ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ ನಂದಿನಿ ಸಿ ಎಂ ಆತ್ಮಹತ್ಯೆಗೆ ಬಹಿರಂಗವಾಗಿದೆ. ಮೂಲತಃ ಕೊಟ್ಟೂರಿನವರಾದ ನಂದಿನಿ ಧಾರಾವಾಹಿಗಳಲ್ಲಿ ನಟಿಸುತ್ತಾ ಬೆಂಗಳೂರಿನಲ್ಲಿ ವಾಸವಿದ್ದರು. ಇದೀಗ ಅವರ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್‌ ನೋಟ್‌ ಲಭ್ಯವಾಗಿದ್ದು, ಅನೇಕ ವಿಚಾರಗಳು ಹೊರಬಂದಿವೆ.

ಸರ್ಕಾರಿ ನೌಕರಿಗೆ ಹೋಗಲು ಒತ್ತಡ?

ನಂದಿನಿ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದ್ದು, ಅದಕ್ಕೆ ಸೇರುವಂತೆ ಒತ್ತಡವಿತ್ತು ಮತ್ತು ಮದುವೆಯಾಗುವಂತೆಯೂ ಕುಟುಂಬದಿಂದ ಒತ್ತಡ ಇತ್ತು ಎಂದು ಹೇಳಲಾಗಿದೆ. ಆದರೆ ನಂದಿನಿ ಅವರಿಗೆ ನಟನೆ ಮೇಲೆ ಅಪಾರವಾದ ಒಲವು ಇದ್ದಿದ್ದರಿಂದ ಸರ್ಕಾರಿ ನೌಕರಿಗೆ ಸೇರಲು ಆಸಕ್ತಿ ಇರಲಿಲ್ಲ ಎನ್ನಲಾಗಿದೆ. ಅಸಹಜ ಸಾವು ಪ್ರಕರಣ ದಾಖಲಿಸಿ ನಂದಿನಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಅವರ ಹುಟ್ಟೂರು ವಿಜಯನಗರ ಜಿಲ್ಲೆಯ ಚಿಗಟೇರಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.

Actress Nandini: ನೀನಾದೆ ನಾ, ಜೀವ ಹೂವಾಗಿದೆ ಖ್ಯಾತಿಯ ನಟಿ ನಂದಿನಿ ಆ*ತ್ಮಹತ್ಯೆ; ಕಾರಣವಾದ್ರೂ ಏನು?

ನಂದಿನಿ ತಾಯಿ ಹೇಳಿದ್ದೇನು?

ಸರ್ಕಾರಿ ಶಾಲಾ ಶಿಕ್ಷಕಿಯಾಗಿರುವ ನಂದಿನಿ ಅವರ ತಾಯಿ ಬಸವರಾಜೇಶ್ವರಿ, ಅವರು ಮಗಳ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಪತಿ ಎಸ್‌. ಮಹಾಬಲೇಶ್ವರ ಅವರು ಸರ್ಕಾರಿ ಶಾಲಾ ಶಿಕ್ಷಕರಾಗಿದ್ದರು. ಅವರು 2021ರಲ್ಲಿ ಮೃತಪಟ್ಟಿದ್ದರು. ಆನಂತರ ಅನುಕಂಪದ ಆಧಾರದಲ್ಲಿ ಮಗಳು ನಂದಿನಿಗೆ 2023ರಲ್ಲಿ ಸರ್ಕಾರಿ ಕೆಲಸ ಸಿಕ್ಕಿತ್ತು. ಆದರೆ, ಕೆಲಸಕ್ಕೆ ಸೇರದೇ ನಟನಾ ಕ್ಷೇತ್ರದಲ್ಲಿಯೇ ಮುಂದುವರಿಯುವುದಾಗಿ ಹಠ ಮಾಡಿ ನಂದಿನಿ ಬೆಂಗಳೂರಿಗೆ ಬಂದಿದ್ದಳು. ನಮ್ಮ ಮಗಳ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾನವಿಲ್ಲ ಎಂದು ಬಸವರಾಜೇಶ್ವರಿ ಹೇಳಿಕೆ ನೀಡಿದ್ದಾರೆ" ಅಂತ ಪೊಲೀಸ್‌ ಮೂಲಗಳು ತಿಳಿಸಿವೆ.

ಕನ್ನಡ ನಟಿ ನಂದಿನಿ

ಆತ್ಮಹತ್ಯೆ ಮಾಡಿಕೊಂಡಿದ್ದು ಯಾವಾಗ?

ನಂದಿನಿ ಅವರು ಕಳೆದ ಆಗಸ್ಟ್‌ನಿಂದ ಮೈಲಸಂದ್ರದ ಪಿಜಿಯೊಂದರಲ್ಲಿ ವಾಸ ಮಾಡುತ್ತಿದ್ದರು. ಭಾನುವಾರ (ಡಿ.28) ಸ್ನೇಹಿತ ಪುನೀತ್‌ ಎಂಬುವವರ ಮನೆಗೆ ಹೋಗಿ ರಾತ್ರಿ 11.20ರ ಸುಮಾರಿಗೆ ಪಿಜಿಗೆ ವಾಪಸ್‌ ಬಂದಿದ್ದರು. ಆದರೆ ಪುನೀತ್‌ ಕರೆ ಮಾಡಿದಾಗ ನಂದಿನಿ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡು ಪಿಜಿ ಮ್ಯಾನೇಜರ್‌ಗೆ ಪುನೀತ್‌ ಮಾಹಿತಿ ನೀಡಿದ್ದರು. ನಂತರ ಕೊಠಡಿ ಬಳಿ ತೆರಳಿ ನೋಡಿದಾಗ ನಂದಿನಿ ಅವರು ವೇಲ್‌ನಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಗೊತ್ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳಿನಲ್ಲೂ ಫೇಮಸ್‌ ಆಗಿದ್ದ ನಂದಿನಿ

ನೀನಾದೆನಾ, ಜೀವ ಹೂವಾಗಿದೆ, ಸಂಘರ್ಷ, ಮಧುಮಗಳು ಧಾರಾವಾಹಿಗಳ ಜೊತೆಗೆ ತಮಿಳಿನ ‘ಗೌರಿ’ ಧಾರಾವಾಹಿಯ ಮೂಲಕ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದರು ನಂದಿನಿ. ಈ ಧಾರವಾಹಿಯಲ್ಲಿ ಕನಕ ಮತ್ತು ದುರ್ಗ ಎಂಬ ಎರಡು ಸವಾಲಿನ ಪಾತ್ರಗಳನ್ನು ನಿರ್ವಹಿಸಿ ನಂದಿನಿ ಅವರು ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದರು.