ಪತ್ರಕರ್ತನಾಗಿ ಉಪೇಂದ್ರ ಅಣ್ಣನ ಮಗ ನಿರಂಜನ್; ʻಸ್ಪಾರ್ಕ್ʼ ಚಿತ್ರದಲ್ಲಿ ನಟ ʻನೆನಪಿರಲಿʼ ಪ್ರೇಮ್‌ಗೆ ಏನು ಪಾತ್ರ?
'ರಿಯಲ್ ಸ್ಟಾರ್' ಉಪೇಂದ್ರ ಅವರ ಸೋದರಸಂಬಂಧಿ ನಿರಂಜನ್ ಸುಧೀಂದ್ರ ಅಭಿನಯದ 'ಸ್ಪಾರ್ಕ್' ಚಿತ್ರದ 'ಶಕಲಕ ಭುಂ ಭೂಂ' ಹಾಡಿನ ಬಿಡುಗಡೆ ಅದ್ಧೂರಿಯಾಗಿ ನೆರವೇರಿದೆ. ಚಿತ್ರದಲ್ಲಿ ನಿರಂಜನ್ ನ್ಯಾಯಕ್ಕಾಗಿ ಹೋರಾಡುವ ಪತ್ರಕರ್ತನಾಗಿ ನಟಿಸಿದ್ದು, ರಚನಾ ಇಂದರ್ ನಾಯಕಿಯಾಗಿದ್ದಾರೆ.
-
ʻರಿಯಲ್ ಸ್ಟಾರ್ʼ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಬಹುನಿರೀಕ್ಷಿತ ‘ಸ್ಪಾರ್ಕ್’ ಸಿನಿಮಾದ ಮಾಸ್ ಹಾಗೂ ಅದ್ಧೂರಿ ‘ಶಕಲಕ ಭುಂ ಭೂಂ’ ಹಾಡಿನ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ವೇದಿಕೆಯಲ್ಲಿ ಈ ಹಾಡಿಗೆ ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ಅವರ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು. ಈ ಚಿತ್ರದಲ್ಲಿ ನಿರಂಜನ್ ಸುಧೀಂದ್ರ ನ್ಯಾಯಕ್ಕಾಗಿ ಹೋರಾಡುವ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ರಚನಾ ಅಭಿನಯಿಸಿದ್ದಾರೆ.
ಹಾಡು ಕೇಳಿ ಉಪೇಂದ್ರ ಏನಂದ್ರು?
"ಈ ಹಾಡನ್ನು ನನ್ನ ಚಿಕ್ಕಪ್ಪ (ರಿಯಲ್ ಸ್ಟಾರ್ ಉಪೇಂದ್ರ) ಅವರಿಗೆ ತೋರಿಸಿದಾಗ, ‘ದೊಡ್ಡ ಸ್ಟಾರ್‌ಗೆ ಸಿಗುವಂತಹ ಹಾಡು ನಿನಗೆ ಸಿಕ್ಕಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಪೊರೇಟ್ ಶೈಲಿಯ ನಿರ್ಮಾಣ ಸಂಸ್ಥೆ ಬೆನ್ನಿಗಿದ್ದುದರಿಂದ ನನ್ನ ವೃತ್ತಿಜೀವನದಲ್ಲೇ ಅತ್ಯಂತ ವೇಗವಾಗಿ ಪೂರ್ಣಗೊಂಡ ಚಿತ್ರವಿದು" ಎಂದು ನಿರಂಜನ್ ಸುಧೀಂದ್ರ ಸಂತಸ ಹಂಚಿಕೊಂಡರು.
ನನ್ನ ಮೊದಲ ಕಮರ್ಷಿಯಲ್ ಸಾಂಗ್
"ಇದು ನನ್ನ ವೃತ್ತಿಜೀವನದ ಮೊದಲ ಕಮರ್ಷಿಯಲ್ ಸಾಂಗ್. ಮೊದಲ ಬಾರಿಗೆ ಈ ಮಟ್ಟಿಗೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇನೆ" ಎಂದು ನಾಯಕಿ ರಚನಾ ಇಂದರ್ ಹೇಳಿದರೆ, "ನಿರಂಜನ್ ನಮ್ಮ ಕನ್ನಡದ ಪ್ರತಿಭೆ. ಅವರನ್ನು ಪರಭಾಷೆಯವರು ಹೈಜಾಕ್ ಮಾಡುವ ಮುನ್ನವೇ ನಮ್ಮ ಕನ್ನಡ ನಿರ್ಮಾಪಕರು ಉಳಿಸಿಕೊಳ್ಳಬೇಕು. ಹಾಲಿವುಡ್ ಸಿನಿಮಾ ಮಾಡುವಷ್ಟು ಸಾಮರ್ಥ್ಯವಿರುವ ನಿರ್ಮಾಪಕರು ಕನ್ನಡದ ಯುವ ನಾಯಕನಿಗಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿರುವುದು ಶ್ಲಾಘನೀಯ" ಎಂದು ನೆನಪಿರಲಿ ಪ್ರೇಮ್ ಹೇಳಿದರು. ಅವರಿಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಮಹಾಂತೇಶ್ ಹಂದ್ರಾಳ್, "ಇದು ಒಂದು ವರ್ಷದ ಪಯಣ. ಅಂದುಕೊಂಡಂತೆ ತೆರೆಯ ಮೇಲೆ ತಂದಿರುವ ತೃಪ್ತಿ ನನಗಿದೆ. ಪ್ರೇಮ್ ಅವರು ನೆಗೆಟಿವ್ ಪಾತ್ರ ಒಪ್ಪಿಕೊಂಡು ನಮಗೆ ದೊಡ್ಡ ಶಕ್ತಿ ತುಂಬಿದ್ದಾರೆ" ಎಂದರು. "ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಈ ಹಾಡು ನನಗೆ ಚಿತ್ರರಂಗದಲ್ಲಿ ದೊಡ್ಡ ಬ್ರೇಕ್ ನೀಡುವ ಭರವಸೆ ಇದೆ. ಈ ಹಾಡನ್ನು ನಟ ಶರಣ್ ಹಾಗೂ ಸಂಗೀತ ರವೀಂದ್ರನಾಥ್ ಹಾಡಿದ್ದಾರೆ" ಎಂದರು ಸಂಗೀತ ನಿರ್ದೇಶಕ ಸಚಿನ್ ಬಸ್ರೂರು. ಸಾಹಿತ್ಯವನ್ನು ಪ್ರಮೋದ್ ಮರವಂತೆ ಬರೆದಿದ್ದಾರೆ
ಸೆಪ್ಟೆಂಬರ್ 25ಕ್ಕೆ ‘ಸ್ಪಾರ್ಕ್’ ತೆರೆಗೆ
ಗರಿಮಾ ಮತ್ತು ಅವಿನಾಶ್ ವಸಿಷ್ಠ ದಂಪತಿ ನಿರ್ಮಿಸಿರುವ ಈ ಚಿತ್ರಕ್ಕೆ ಸ್ವಾಮಿ ಜೆ. ಗೌಡ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದು, ಮಹಾಂತೇಶ ಹಿರೇಮಠ ಮತ್ತು ಧರ್ಮಣ್ಣ ಕಡೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಸ್ಪಾರ್ಕ್’ ಸಿನಿಮಾ ಸೆಪ್ಟೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.