ʻಶ್ರೀರಸ್ತುʼ ಚಿತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಎಂಟ್ರಿ; ತಮ್ಮ ಪ್ರಣಾಮ್ ಸಿನಿಮಾಕ್ಕೆ ಟ್ವಿಸ್ಟ್ ನೀಡಲು ಬಂದ ಅಣ್ಣ ಪ್ರಜ್ವಲ್ ದೇವರಾಜ್!
ಸ್ಯಾಂಡಲ್‌ವುಡ್‌ನ ಸಹೋದರರಾದ ಪ್ರಜ್ವಲ್ ದೇವರಾಜ್ ಮತ್ತು ಪ್ರಣಾಮ್ ದೇವರಾಜ್ ಇದೀಗ ಮೊದಲ ಬಾರಿಗೆ ‘ಶ್ರೀರಸ್ತು’ ಚಿತ್ರದ ಮೂಲಕ ಒಟ್ಟಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಪ್ರಣಾಮ್ ಮತ್ತು ಸಂಜನಾ ಆನಂದ್ ನಟನೆಯ ಈ ಚಿತ್ರಕ್ಕೆ ಪ್ರಜ್ವಲ್ ಅವರ ಎಂಟ್ರಿಯಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ.
-
ಸ್ಯಾಂಡಲ್‌ವುಡ್‌ನ ಸ್ಟಾರ್ ಸಹೋದರರಾದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಪ್ರಣಾಮ್ ದೇವರಾಜ್ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಒಂದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಣಾಮ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ 'ಶ್ರೀರಸ್ತು' ಚಿತ್ರಕ್ಕೆ ಈಗ ಅಣ್ಣ ಪ್ರಜ್ವಲ್ ದೇವರಾಜ್ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಇತ್ತೀಚೆಗೆ ನಟ ಪ್ರಜ್ವಲ್ ದೇವರಾಜ್ ಅವರ ಜನ್ಮದಿನದ ಪ್ರಯುಕ್ತ 'ಶ್ರೀರಸ್ತು' ಚಿತ್ರತಂಡ ವಿಶೇಷ ಪೋಸ್ಟರ್ ಹಾಗೂ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿ ಶುಭ ಕೋರಿತ್ತು. ಈ ವಿಡಿಯೋದಲ್ಲಿ ಪ್ರಣಾಮ್ ಜೊತೆಗೆ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ತಿರುವು ನೀಡುವ ಪಾತ್ರದಲ್ಲಿ ಪ್ರಜ್ವಲ್
ಪ್ರಣಾಮ್ ದೇವರಾಜ್ ಮತ್ತು ಸಂಜನಾ ಆನಂದ್ ಕಾಂಬಿನೇಷನ್‌ನಲ್ಲಿ 'ಶ್ರೀರಸ್ತು' ಸಿನಿಮಾ ಸೆಟ್ಟೇರಿತ್ತು. ಇದೊಂದು ಪಕ್ಕಾ ಲವ್ ಸ್ಟೋರಿ ಎಂದೇ ಸುದ್ದಿಯಾಗಿತ್ತು. ಆದರೆ ಈಗ ಪ್ರಜ್ವಲ್ ದೇವರಾಜ್ ಅವರ ಸೇರ್ಪಡೆಯಿಂದ ಚಿತ್ರಕ್ಕೆ ಕೌಟುಂಬಿಕ ಕಳೆ ಬಂದಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಶಂಕರ್ ರೆಡ್ಡಿ, "ಚಿತ್ರದಲ್ಲಿ ಪ್ರಜ್ವಲ್ ಅವರು ತಮ್ಮನಿಗೆ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಿಗೆ ಕಥೆಗೆ ತಿರುವು ನೀಡುವ ಪ್ರಧಾನ ಪಾತ್ರದಲ್ಲಿ ಗಮನ ಸೆಳೆಯಲಿದ್ದಾರೆ" ಎಂದು ಹೇಳಿದ್ದಾರೆ. ಪ್ರೇಮದ ಜೊತೆಗೆ ಕೌಟುಂಬಿಕ ಬಾಂಧವ್ಯವನ್ನು ಸಾರುವ ವಿಭಿನ್ನ ಚಿತ್ರವಾಗಿ ʻಶ್ರೀರಸ್ತುʼ ಮೂಡಿಬರಲಿದೆ.
ದೊಡ್ಡ ಕ್ಯಾನ್ವಾಸ್‌ನಲ್ಲಿ ತೆಲುಗಿನಲ್ಲೂ ನಿರ್ಮಾಣ
ಈ ಚಿತ್ರವು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿದೆ. ಚಿತ್ರದಲ್ಲಿ ತೆಲುಗು ಚಿತ್ರರಂಗದ ಖ್ಯಾತ ಕಲಾವಿದರಾದ ಸುಮನ್, ಆಮನಿ, ಚೈತ್ರಾ ರೈ, ರವಿ ಶಿವತೇಜ, ಜೋಶ್ ರವಿ ಹಾಗೂ ರವಿ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 'ಹರ ಕ್ರಿಯೇಶನ್ಸ್' ಬ್ಯಾನರ್ ಅಡಿಯಲ್ಲಿ ಹರಗೌಡ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. 'ಪುಷ್ಪ' ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಕೆಲಸ ಮಾಡಿರುವ ಬಾಲಸರಸ್ವತಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಕೃಷ್ಣ ಮಾಯ ಅವರ ಕಲಾ ನಿರ್ದೇಶನ ಹಾಗೂ ಶ್ರೀ ವರ್ಕಲ ಅವರ ಸಂಕಲನ ಈ ಚಿತ್ರಕ್ಕಿದೆ.
ಚಿತ್ರತಂಡ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಿನ್ನೆಲೆ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಹಾಡುಗಳ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಶೇಖರ್ ಚಂದ್ರು ಸಂಗೀತ ನೀಡುತ್ತಿದ್ದು, ಹಾಡುಗಳು ಅದ್ಭುತವಾಗಿ ಮೂಡಿಬರಲಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಪ್ರಜ್ವಲ್, ಪ್ರಣಾಮ್ ಹಾಗೂ ಸಂಜನಾ ಆನಂದ್ ಅವರ ಈ ಕಾಂಬಿನೇಷನ್‌ನ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದು.