ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karavali Movie Review: ಕಂಬಳ ಗದ್ದೆಯಲ್ಲಿ ಸೇಡಿನ ಕಥೆ ಹೇಳುವ ʻಕರಾವಳಿʼ

Karavali Movie Review: ಗುರುದತ್ತ ಗಾಣಿಗ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಅಭಿನಯದ ‘ಕರಾವಳಿ’ ಸಿನಿಮಾ ಜುಲೈ 24 ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಟ್ರೇಲರ್‌ನಷ್ಟೇ ಕುತೂಹಲಕಾರಿಯಾಗಿ ಈ ಸಿನಿಮಾ ಮೂಡಿಬಂದಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

Prajwal Devaraj: ʻಕರಾವಳಿʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Jul 24, 2026 12:42 PM

ಚಿತ್ರ: ಕರಾವಳಿ

ಬಿಡುಗಡೆ ದಿನಾಂಕ: ಜುಲೈ 24, 2026

ಭಾಷೆ: ಕನ್ನಡ

ಜಾನರ್: ಆಕ್ಷನ್, ಡ್ರಾಮಾ,

ನಿರ್ದೇಶನ: ಗುರುದತ್ತ ಗಾಣಿಗ

ತಾರಾಗಣ: ಪ್ರಜ್ವಲ್‌ ದೇವರಾಜ್‌, ರಾಜ್‌ ಬಿ. ಶೆಟ್ಟಿ, ಮಿತ್ರ, ಶ್ರೀಧರ್‌, ರಮೇಶ್‌ ಇಂದಿರಾ, ಸಂಪದಾ, ಸುಷ್ಮಿತಾ ಭಟ್‌, ವಿದ್ಯಾಮೂರ್ತಿ, ಗೋವಿಂದೇಗೌಡ

ಸಂಗೀತ: ಸಚಿನ್‌ ಬಸ್ರೂರು

ಅವಧಿ: 126 ನಿಮಿಷಗಳು

ರೇಟಿಂಗ್: 3/5

ನಟ ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಕರಾವಳಿ’ ಸಿನಿಮಾ ಆರಂಭವಾದಾಗ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಮೊದಲ ಬಾರಿಗೆ ಪ್ರಜ್ವಲ್‌ ಕರಾವಳಿ ಸೊಗಡಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಕಂಬಳದ ಗದ್ದೆಯಲ್ಲಿ ಓಡಲಿದ್ದಾರೆ ಎಂಬುದೇ ಚಿತ್ರದ ಮುಖ್ಯ ಆಕರ್ಷಣೆಯಾಗಿತ್ತು. ಆದರೆ, ಸಿನಿಮಾ ತೆರೆಗೆ ಬರುವ ಹೊತ್ತಿಗೆ ಒಂದಷ್ಟು ವಿವಾದಗಳಿಂದಲೂ ಸದ್ದು ಮಾಡಿತ್ತು. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಕೊನೆಗೂ ಈ ಸಿನಿಮಾ ಚಿತ್ರಮಂದಿರಕ್ಕೆ ಬಂದಿದೆ. ನಿರ್ದೇಶಕ ಗುರುದತ್ತ ಗಾಣಿಗ ಅವರ ಈ ‘ಕರಾವಳಿ’ ಪ್ರಯೋಗ ಹೇಗಿದೆ? ಪ್ರೇಕ್ಷಕರು ಅಂದುಕೊಂಡ ಮಟ್ಟಕ್ಕೆ ಮೂಡಿಬಂದಿದೆಯೇ? ಇಲ್ಲಿದೆ ಪೂರ್ಣ ವಿಮರ್ಶೆ

ಕರಾವಳಿ ಸಿನಿಮಾದ ಕಥೆ ಏನು?

ಸುಬ್ರಮಣ್ಯದ ಧನಂಜಯ (ಪ್ರಜ್ವಲ್) ಕಳೆದುಹೋದ ತನ್ನ ಹಸುವನ್ನು ಹುಡುಕಿಕೊಂಡು ಕಂಬಳ ನಡೆಯುವ ಕರಾವಳಿಯ ಊರೊಂದಕ್ಕೆ ಆಗಮಿಸುತ್ತಾನೆ. ಕಾರಣಾಂತರಗಳಿಂದ ಆತ ಅಲ್ಲಿಯೇ ಕೆಲಕಾಲ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಕಂಬಳದ ಓಟಗಾರ ಮಹಾಬಲನ (ಮಿತ್ರ) ಮನೆಯಲ್ಲಿಯೇ ಧನಂಜಯನ ವಾಸ್ತವ್ಯ. ಅದೇ ವೇಳೆ ಊರಿನ ಪಶುವೈದ್ಯೆಯ (ಸಂಪದಾ) ಜೊತೆ ಪ್ರೀತಿಯೂ ಚಿಗುರುತ್ತದೆ. ಹೀಗಿರುವಾಗ ಮಹಾಬಲನ ಕಂಬಳದ ಹಿನ್ನೆಲೆಯಲ್ಲಿ ಒಂದು ದೊಡ್ಡ ಇತಿಹಾಸವಿರುತ್ತದೆ. ಆ ಇತಿಹಾಸವು ಅತಿಥಿಯಾಗಿ ಬಂದ ಧನಂಜಯನ ಜೀವನದ ಜೊತೆಗೂ ಗಟ್ಟಿಯಾಗಿ ಬೆಸೆದುಕೊಂಡಿರುತ್ತದೆ. ಅದೇನು ಎಂಬುದೇ ಚಿತ್ರದ ರೋಚಕ ಟ್ವಿಸ್ಟ್!

B Jayashree Karavali: ವಿವಾದಗಳ ಮಧ್ಯೆ ಕರಾವಳಿ ಚಿತ್ರತಂಡದಿಂದ ಹೊರ ಬಿತ್ತು ಬಿಗ್ ಅಪ್ಡೇಟ್!

ಮೇಕಿಂಗ್ ಮತ್ತು ನಿರ್ದೇಶನ ಹೇಗಿದೆ?

ಈ ಹಿಂದೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಮಾಡಿದ್ದ ನಿರ್ದೇಶಕ ಗುರುದತ್ತ ಗಾಣಿಗ, ಸುದೀರ್ಘ ಸಮಯದ ನಂತರ ಈ ಚಿತ್ರದ ಮೂಲಕ ವಾಪಸ್ ಬಂದಿದ್ದಾರೆ. ಗುರು ಅವರೂ ಕರಾವಳಿ ಭಾಗದವರೇ ಆಗಿರುವುದರಿಂದ, ಈ ಸಿನಿಮಾವನ್ನು ಬಹಳ ಆಸ್ಥೆಯಿಂದಲೇ ಮಾಡಿದ್ದಾರೆ. ಸಿನಿಮಾದ ಆರಂಭದಲ್ಲಿ ಕಂಬಳದ ಇತಿಹಾಸವನ್ನು ಅತ್ಯಂತ ಅಚ್ಚುಕಟ್ಟಾಗಿ ಪ್ರೆಸೆಂಟ್ ಮಾಡಿದ್ದಾರೆ. ನಂತರ ಫ್ಲ್ಯಾಶ್‌ಬ್ಯಾಕ್‌ಗೆ ಮುನ್ನುಡಿ ಬರೆದು, ಪ್ರೇಕ್ಷಕರಿಗೆ ಒಂದು ಕುತೂಹಲವನ್ನು ಉಳಿಸಿ, ಕಥೆಯನ್ನು ಹೇಳಿದ್ದಾರೆ. ಆರಂಭದಲ್ಲಿ ಹೇಳಿದ್ದ ಫ್ಲ್ಯಾಶ್‌ಬ್ಯಾಕ್‌ನ ಕುತೂಹಲಕ್ಕೆ ಇಂಟರ್ವಲ್‌ ಹೊತ್ತಿಗೆ ಕಿಡಿ ತಾಕಿಸುವ ಗುರು, ಸೆಕೆಂಡ್‌ ಹಾಫ್‌ನಲ್ಲಿ ರಾಜ್‌ ಬಿ. ಶೆಟ್ಟಿ ಪಾತ್ರವನ್ನು ತಂದು ಮತ್ತೊಂದು ಇಂಟರೆಸ್ಟಿಂಗ್‌ ಕಥೆಯನ್ನು ಹೇಳಿದ್ದಾರೆ.

ಇಡೀ ಸಿನಿಮಾ ಕಂಬಳದ ಬಗ್ಗೆಯೇ ಇರುವುದರಿಂದ, ಇಲ್ಲಿ ಅದರ ಹೊರತಾಗಿ ಬೇರೆ ವಿಚಾರವೇ ಇಲ್ಲ. ಕಂಬಳ ಓಡಿಸುವವರ, ಕಂಬಳದಲ್ಲಿ ಓಡುವ ಕೋಣಗಳ ಸದ್ದು ಇಡೀ ಚಿತ್ರದಲ್ಲಿ ಕೇಳಿಸುತ್ತದೆ. ಎರಡ್ಮೂರು ಕಂಬಳದ ರೇಸ್‌ ಕೂಡ ಇಲ್ಲಿದೆ.

ಕಂಬಳದ ಜೊತೆಗೆ ಎರಡು ಪ್ರೇಮಕಥೆಗಳು, ಗೆಳೆತನ, ತಂದೆ-ಮಗನ ಸೆಂಟಿಮೆಂಟ್ ಹಾಗೂ ಅಜ್ಜ-ಅಜ್ಜಿಯ ಕಕ್ಕುಲತೆಯನ್ನೂ ಸೇರಿಸಲಾಗಿದೆ. ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಹಾಗೂ ಸಚಿನ್ ಬಸ್ರೂರು ಅವರ ಹಿನ್ನೆಲೆ ಸಂಗೀತ ಸಿನಿಮಾದ ಮೆರುಗನ್ನು ಹೆಚ್ಚಿಸಿವೆ. ಅಲ್ಲಲ್ಲಿ ಉತ್ತಮ ಸಂಭಾಷಣೆಗಳು ಗಮನಸೆಳೆಯುತ್ತವೆ. ಕರಾವಳಿಯ ಕಂಬಳದ ಹಿನ್ನೆಲೆಯಲ್ಲಿ ಕಥೆ ಹೇಳಿರುವ ನಿರ್ದೇಶಕ ಗುರು, ಅದನ್ನು ವೇಗವಾಗಿ ಹೇಳಬೇಕೆಂಬ ಹಠಕ್ಕೋ, ಸಂಕಲನದಲ್ಲಿನ ಕತ್ತರಿಯ ಹರಿತಕ್ಕೋ, ಕೆಲವೊಂದು ದೃಶ್ಯಗಳ ಹಿನ್ನೆಲೆ ಮಾಯಾವಾಗಿದೆ.

ಪ್ರಜ್ವಲ್‌ಗೆ ಮೊದಲ ಭಾಗದಲ್ಲಿ ಒಂದಷ್ಟು ದೃಶ್ಯಗಳಿವೆ ಬಿಟ್ಟರೆ, ಸೆಕೆಂಡ್‌ ಹಾಫ್‌ನಲ್ಲಿ ರಾಜ್‌ ಬಿ. ಶೆಟ್ಟಿಯದ್ದೇ ಅಬ್ಬರ. ಅಲ್ಲದೆ, ಪ್ರಜ್ವಲ್‌ಗೆ ಸಂಭಾಷಣೆಯೂ ಇಲ್ಲ. ಇರುವ ಕೆಲವೇ ಕೆಲವು ಡೈಲಾಗ್‌ಗಳನ್ನು ಬೇರೆಯವರಿಂದ ಹೇಳಿಸಿರುವುದು ಈವರೆಗೂ ಪ್ರಜ್ವಲ್‌ ಸಿನಿಮಾಗಳನ್ನು ನೋಡಿದವರಿಗೆ ಕೊಂಚ ಕಿರಿಕಿರಿ ಆಗುತ್ತದೆ. ಬರವಣಿಗೆಯಲ್ಲಿ ಇನ್ನಷ್ಟು ಮೊನಚಾಗಿದ್ದು, ದೃಶ್ಯಗಳಲ್ಲಿನ ಗಟ್ಟಿತನ ಹೆಚ್ಚುತ್ತಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಕಂಬಳವನ್ನು ಮತ್ತಷ್ಟು ರೋಚಕವಾಗಿ ಚಿತ್ರಿಸುವ ಸಾಧ್ಯತೆಗಳಿದ್ದವು. ಸುಮೇಧ್. ಕೆ ಅವರ ʻಎಲ್ಲಿಗೆ ಓಡುವೇ ಓ ಮನುಜ ನೀ..ʼ ಹಾಡನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ.

ಪ್ರಜ್ವಲ್‌ - ರಾಜ್‌ ನಟನೆ ಹೇಗಿದೆ?

ಧನಂಜಯನ ಪಾತ್ರಕ್ಕಾಗಿ ಪ್ರಜ್ವಲ್ ಸಾಕಷ್ಟು ಶ್ರಮವಹಿಸಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿಯೂ ಮಿಂಚಿದ್ದಾರೆ. ಅವರದ್ದೇ ಸ್ವಂತ ಧ್ವನಿ ಇದ್ದಿದ್ದರೆ ಪಾತ್ರ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು. ದ್ವಿತೀಯಾರ್ಧದಲ್ಲಿ ‘ಮಾವೀರ’ನಾಗಿ ಬರುವ ರಾಜ್ ಬಿ. ಶೆಟ್ಟಿ ಕಥೆಗೆ ಬಲವಾದ ತಿರುವು ನೀಡುತ್ತಾರೆ. ಕರಾವಳಿ ಮೂಲದವರೇ ಆಗಿರುವುದರಿಂದ ಈ ಪಾತ್ರವನ್ನು ಅವರು ಸರಾಗವಾಗಿ ನಿಭಾಯಿಸಿದ್ದಾರೆ.

ಸಂಪದಾ ಮತ್ತು ಸುಶ್ಮಿತಾ ಭಟ್‌ಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ; ಹಾಡು ಹಾಗೂ ಒಂದೆರಡು ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಆದರೆ ಈ ಚಿತ್ರದ ನಿಜವಾದ ಅಚ್ಚರಿ ಎಂದರೆ ನಟ ಮಿತ್ರ. ‘ಮಹಾಬಲ’ ಎಂಬ ಪಾತ್ರದಲ್ಲಿ ಅವರು ಅಕ್ಷರಶಃ ಜೀವಿಸಿದ್ದಾರೆ. ಮೂಲತಃ ಕರಾವಳಿಯವರಲ್ಲದಿದ್ದರೂ, ಆ ಭಾಗದ ವ್ಯಕ್ತಿಯೇನೋ ಎಂಬಷ್ಟರ ಮಟ್ಟಿಗೆ ಪಾತ್ರದಲ್ಲಿ ಲೀನವಾಗಿದ್ದಾರೆ. ಗೋವಿಂದೇಗೌಡ ಅವರ ಪಾತ್ರದಲ್ಲಿ ಕೂಗಾಟವೇ ಹೆಚ್ಚಿದ್ದು, ನಗು ಬರುವುದು ಕಮ್ಮಿ. ಖಳನಟನಾಗಿ ರಮೇಶ್ ಇಂದಿರಾ ಫುಲ್ ಸ್ಕೋರ್ ಮಾಡುತ್ತಾರೆ. ಒಟ್ಟಾರೆ, ಕರಾವಳಿ ಸೊಗಡಿನ ಸಿನಿಮಾಗಳನ್ನು ಇಷ್ಟಪಡುವವರಿಗೆ, ಅದರಲ್ಲೂ ಕಂಬಳದ ಬಗ್ಗೆ ಆಸಕ್ತಿ ಇರುವವರಿಗೆ ಈ ಚಿತ್ರ ಹಿಡಿಸಬಹುದು.