ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾದ ಧನುಷ್; ಹೇಗಿರಲಿದೆ ʻಸೂಪರ್ ಸ್ಟಾರ್ʼ ರಜನಿಕಾಂತ್ ಮೊಮ್ಮಗನ ಮೊದಲ ಸಿನಿಮಾ?
ನಟ ಮತ್ತು ನಿರ್ದೇಶಕ ಧನುಷ್ ತಮ್ಮ ಹಿರಿಯ ಮಗ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮೊಮ್ಮಗನಾದ 19 ವರ್ಷದ ಯಾತ್ರಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಜ್ಜಾಗುತ್ತಿದ್ದಾರೆ. ಧನುಷ್ ನಿರ್ದೇಶಿಸಲಿರುವ ಈ 5ನೇ ಚಿತ್ರವು 'ಆರ್-ಟೇಕ್ ಸ್ಟುಡಿಯೋಸ್' ಬ್ಯಾನರ್ ಅಡಿ ಮೂಡಿಬರಲಿದ್ದು, ರಜನಿಕಾಂತ್ ಅವರ 'ಬಿಲ್ಲಾ' ಶೈಲಿಯ ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಕಥೆಯನ್ನು ಹೊಂದಿರಲಿದೆಯಂತೆ.
-
ನಟ, ನಿರ್ದೇಶಕ ಧನುಷ್ ಅವರು ಶೀಘ್ರದಲ್ಲೇ ತಮ್ಮ ಹಿರಿಯ ಮಗ ಯಾತ್ರಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಧನುಷ್, ತಾವು ನಿರ್ದೇಶನ ಮಾಡಲಿರುವ ಐದನೇ ಸಿನಿಮಾದಲ್ಲಿ ತಮ್ಮ 19 ವರ್ಷದ ಮಗಾ ಯಾತ್ರಾ ಅವರನ್ನು ಹೀರೋ ಮಾಡಲು ನಿರ್ಧರಿಸಿದ್ದರಂತೆ.
ಮಗನ ಸಿನಿಮಾದ ಬಗ್ಗೆ ಧನುಷ್ ಹೇಳಿದ್ದೇನು?
ಇತ್ತೀಚೆಗೆ ʻಕರʼ ಚಿತ್ರದ ಆಡಿಯೋ ಲಾಂಚ್ ಸಂದರ್ಭದಲ್ಲಿ ಯಾತ್ರಾ ಅವರ ಸಿನಿಮಾ ಪ್ರವೇಶದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಧನುಷ್ ಉತ್ತರಿಸಿದ್ದರು. ತಮ್ಮ ಮಗನ ಭವಿಷ್ಯವನ್ನು ಇಷ್ಟು ಬೇಗ ಊಹಿಸುವುದು ಕಷ್ಟ ಎಂದು ನಟ ಹೇಳಿದ್ದರು. "ಅಂದು ನನಗಿದ್ದ ಪರಿಸ್ಥಿತಿಯಿಂದಾಗಿ ನಾನು 16ನೇ ವಯಸ್ಸಿಗೆ ನಟನೆಗೆ ಬಂದೆ. ಮಗನಿಗಿನ್ನೂ ಕೇವಲ 19 ವರ್ಷ, ನಾನು ಇನ್ನೂ ಅವನನ್ನು ಮಗುವಿನಂತೆ ನೋಡುತ್ತೇನೆ. ಆತ ಮುಂದೆ ಏನಾಗುತ್ತಾನೋ ನನಗೆ ಗೊತ್ತಿಲ್ಲ. ಈಗಲೇ ಈ ಬಗ್ಗೆ ಹೇಳುವುದು ಕಷ್ಟ" ಎಂದು ಧನುಷ್ ಹೇಳಿದ್ದರು.
ಧನುಷ್ ಅವರೇನೋ ಮಗನ ಸಿನಿಮಾ ಆಲೋಚನೆ ಇಲ್ಲ ಎಂದಿದ್ದರೂ, ಯಾತ್ರಾ ಸಿನಿಪ್ರವೇಶಕ್ಕೆ ಮಾತ್ರ ವೇದಿಕೆ ಸಜ್ಜಾಗಿದೆಯಂತೆ. ರಾಜಕುಮಾರ್ ಪೆರಿಯಸಾಮಿ ನಿರ್ದೇಶನದ, ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಧನುಷ್ ಅವರ ಮುಂದಿನ ಚಿತ್ರವನ್ನು ಪ್ರಸ್ತುತ ನಿರ್ಮಾಣ ಮಾಡುತ್ತಿರುವ ಮುಂಬೈ ಮೂಲದ 'ಆರ್-ಟೇಕ್ ಸ್ಟುಡಿಯೋಸ್' (RTake Studios) ಬ್ಯಾನರ್ ಅಡಿಯಲ್ಲಿಯೇ ಯಾತ್ರಾ ನಟನೆಯ ಹೊಸ ಸಿನಿಮಾ ನಿರ್ಮಾಣವಾಗಲಿದೆ ಎಂದು ವರದಿಗಳು ಹೇಳುತ್ತವೆ.
Dhanush: ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ಠಾಕೂರ್?
ರಜನಿಕಾಂತ್ ಸಿನಿಮಾಗಳ ನೆನಪು
"ಯಾತ್ರಾ ಈಗಾಗಲೇ ನಟನೆ ಮತ್ತು ನೃತ್ಯ ತರಗತಿಗಳಿಗೆ ಸಕ್ರಿಯವಾಗಿ ಹಾಜರಾಗುತ್ತಿದ್ದಾರೆ. ಈ ಚಿತ್ರದ ಕಥೆಯು ಔಟ್ ಅಂಡ್ ಔಟ್ ಮಾಸ್ ಕಮರ್ಷಿಯಲ್ ಸ್ಕ್ರಿಪ್ಟ್ ಆಗಿದ್ದು, ಇದು ಯಾತ್ರಾ ತಾತ ʻಸೂಪರ್ ಸ್ಟಾರ್ʼ ರಜನಿಕಾಂತ್ ಅವರ 'ಬಿಲ್ಲಾ' ಮತ್ತು 'ಮುರಟ್ಟುಕಾಲೈ' ಸಿನಿಮಾಗಳನ್ನು ನೆನಪಿಸಲಿದೆ. ಸದ್ಯದಲ್ಲೇ ಚೆನ್ನೈನಲ್ಲಿ ಟೆಸ್ಟ್ ಶೂಟ್ ನಡೆಯಲಿದೆ" ಎಂದು ಆಪ್ತ ಮೂಲಗಳು ತಿಳಿಸಿವೆ.
Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್ ಮಾಡಿದ ನಟ ಧನುಷ್!
ಈ ಸಿನಿಮಾಕ್ಕೆ ಸಂಗೀತ ನಿರ್ದೇಶಕ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಲು ಮಾತುಕತೆ ನಡೆಸುತ್ತಿದ್ದರೆ, ಛಾಯಾಗ್ರಾಹಕ ವೇಲ್‌ರಾಜ್ ಕ್ಯಾಮೆರಾ ಜವಾಬ್ದಾರಿಯನ್ನು ಹೊರಲಿದ್ದಾರೆ. ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರಲಿದ್ದು, ಚೆನ್ನೈನಲ್ಲಿ ಅತ್ಯಂತ ಅದ್ಧೂರಿಯಾಗಿ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲಾ ಯಾತ್ರಾ ಅವರ ಲುಕ್, ಕೆಲವು ಆಂಗಲ್‌ಗಳಲ್ಲಿ ತಾತ ರಜನಿಕಾಂತ್ ಅವರನ್ನು ಹೋಲುವ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಯಾತ್ರ ಅವರು ಧನುಷ್ ಮಗ ಮಾತ್ರವಲ್ಲ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೊಮ್ಮಗ ಕೂಡ ಹೌದು! ರಜನಿಕಾಂತ್ ಮಕ್ಕಳಿಬ್ಬರು ನಿರ್ಮಾಪಕಿಯರಾಗಿ, ನಿರ್ದೇಶಕಿಯರಾಗಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ ರಜನಿಕಾಂತ್‌ರಂತೆಯೇ ನಟನಾಗಿ ಅವರ ಕುಟುಂಬದಿಂದ ಮೊಮ್ಮಗ ಯಾತ್ರಾ ಸಿನಿಮಾರಂಗ ಪ್ರವೇಶ ಮಾಡಲಿರುವುದು ವಿಶೇಷ. ಇದು ಧನುಷ್ ಮತ್ತು ತಲೈವಾ ಫ್ಯಾನ್ಸ್‌ಗೆ ಖುಷಿ ನೀಡಿದೆ.
ಧನುಷ್ ಈ ಹಿಂದೆ ನಿರ್ದೇಶಿಸಿದ್ದ 'ನಿಲಾವುಕ್ಕು ಎನ್ಮೇಲ್ ಎನ್ನಡಿ ಕೋಬಮ್' ಸಿನಿಮಾದ ಮೂಲಕ ತಮ್ಮ ಸೋದರಳಿಯ ಪವಿಶ್ ಅವರನ್ನು ನಟನಾಗಿ ಪರಿಚಯಿಸಿದ್ದರು. ಈಗ ಮಗನ ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಧನುಷ್ ಅವರು 2017ರಲ್ಲಿ 'ಪಾ ಪಾಂಡಿ' ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಆನಂತರ 2024ರಲ್ಲಿ 'ರಾಯನ್', ತದನಂತರ 2025 ರಲ್ಲಿ 'ನಿಲಾವುಕ್ಕು ಎನ್ಮೇಲ್ ಎನ್ನಡಿ ಕೋಬಮ್' ಮತ್ತು 'ಇಡ್ಲಿ ಕಡೈ' ಚಿತ್ರಗಳನ್ನು ನಿರ್ದೇಶಿಸಿದ್ದರು. ಹಾಗಾಗಿ, ಯಾತ್ರಾ ನಟಿಸಲಿರುವ ಈ ಹೊಸ ಚಿತ್ರವು ನಿರ್ದೇಶಕರಾಗಿ ಧನುಷ್ ಅವರಿಗೆ ಐದನೇ ಸಿನಿಮಾವಾಗಲಿದೆ.