Jailer 2 Review: ಮತ್ತೆ ಮುಂದುವರಿದ ಲಾಜಿಕ್ ಇಲ್ಲದ 'ಟೈಗರ್ ಮುತ್ತುವೇಲ್ ಪಾಂಡಿಯನ್' ಚಾಣಾಕ್ಷತನ!
Jailer 2 Movie Review: ʻಜೈಲರ್ 2ʼ ಚಿತ್ರದಲ್ಲಿ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ವಿಗ್ರಹ ಕಳ್ಳ ಸಾಗಾಣಿಕೆ ಮಾಡುವ ಖಳರ ಸಿಂಡಿಕೇಟ್ ವಿರುದ್ಧ ಹೂಡುವ ರಣತಂತ್ರವೇ ಪ್ರಮುಖ ಕಥಾವಸ್ತು. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಸೀಕ್ವೆಲ್ನಲ್ಲಿ ರಜನಿಕಾಂತ್ ತಮ್ಮ ಎಂದಿನ ಗತ್ತು ಮತ್ತು ಮ್ಯಾನರಿಸಂ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
-
ಸಿನಿಮಾ: ಜೈಲರ್ 2
ತಾರಾಗಣ: ರಜನಿಕಾಂತ್, ವಿದ್ಯಾ ಬಾಲನ್, ಎಸ್ ಜೆ ಸೂರ್ಯ, ಶಿವರಾಜ್ಕುಮಾರ್, ಮೋಹನ್ಲಾಲ್, ಜಾಕಿ ಶ್ರಾಫ್, ಮಿಥುನ್ ಚಕ್ರವರ್ತಿ, ಸೂರಜ್ ವೆಂಜರಮೂಡು, ನಮೋ ನಾರಾಯಣ, ರಮ್ಯಾ ಕೃಷ್ಣನ್, ಯೋಗಿ ಬಾಬು, ಹೃತಿಕ್ ರೋಷನ್ ಮುಂತಾದವರು.
ನಿರ್ದೇಶನ: ನೆಲ್ಸನ್ ದಿಲೀಪ್ ಕುಮಾರ್
ನಿರ್ಮಾಣ: ಕಲಾನಿಧಿ ಮಾರನ್
ಸಂಗೀತ: ಅನಿರುದ್ಧ್
ಅವಧಿ: 2 ಗಂಟೆ 45 ನಿಮಿಷ
ರೇಟಿಂಗ್: 3/5
'ಟೈಗರ್ ಮುತ್ತುವೇಲ್ ಪಾಂಡಿಯನ್'- ಈ ಹೆಸರು ಕೇಳಿದೊಡನೆ ದುಷ್ಟರ ಎದೆ ನಡುಗುತ್ತದೆ. ಜೈಲರ್ ಹುದ್ದೆಯಿಂದ ನಿವೃತ್ತಿಯಾದ ಮೇಲೂ ಮುತ್ತುವೇಲ್ ಒಳಗಿನ ಪೊಲೀಸ್ ಅಧಿಕಾರಿ ಮಾತ್ರ ಸುಮ್ಮನಿರುವುದಿಲ್ಲ. ವಿಗ್ರಹ ಕಳ್ಳಸಾಗಣೆ ಗ್ಯಾಂಗ್ ಜೊತೆಗೆ ಮಗನೇ ಕೈಜೋಡಿಸಿದ್ದಾನೆ ಎಂಬುದು ತಿಳಿಯುತ್ತಿದ್ದಂತೆಯೇ ಆತ ಮಗನನ್ನೇ ಕೊಲ್ಲಿಸಿರುತ್ತಾನೆ; ವಿಗ್ರಹ ಕಳ್ಳಸಾಗಣೆಯ ಕಿಂಗ್ಪಿನ್ ವರ್ಮನ್ಗೂ ಚಟ್ಟ ಕಟ್ಟಿರುತ್ತಾನೆ. ಇದು 'ಜೈಲರ್' ಚಿತ್ರದಲ್ಲಿ 'ಟೈಗರ್ ಮುತ್ತುವೇಲ್ ಪಾಂಡಿಯನ್' ನಡೆಸಿದ ರೋಚಕ ಹಣಾಹಣಿ. ಇದೀಗ 'ಜೈಲರ್ 2' ತೆರೆಕಂಡಿದೆ. ಈ ಬಾರಿ ಟೈಗರ್ ಏನು ಮಾಡುತ್ತಾನೆ? ಇಲ್ಲಿದೆ ಸಂಪೂರ್ಣ ಸಿನಿಮಾ ವಿಮರ್ಶೆ.
'ಜೈಲರ್ 2' ಸಿನಿಮಾ ಕಥೆ ಏನು?
ಮೊದಲ ಭಾಗದಲ್ಲಿ ವಿಲನ್ ವರ್ಮನ್ ಸಾಯುವ ಮುನ್ನ, "ಇದೊಂದು ದೊಡ್ಡ ನೆಟ್ವರ್ಕ್. ಇಲ್ಲಿ ದೊಡ್ಡ ದೊಡ್ಡವರೆಲ್ಲಾ ಇದ್ದಾರೆ. ಅವರೆಲ್ಲಾ ನಿನ್ನ ಹುಡುಕಿಕೊಂಡು ಬರುತ್ತಾರೆ..." ಎಂದು ಹೇಳಿರುತ್ತಾನೆ. ಆ ತಿರುವಿನಿಂದಲೇ 'ಜೈಲರ್ 2' ಸಿನಿಮಾ ಆರಂಭವಾಗುತ್ತದೆ. ಖಳರ ಗ್ಯಾಂಗ್ ಮುತ್ತುವೇಲ್ನನ್ನು (ರಜನಿಕಾಂತ್) ಹುಡುಕುವ ಮುನ್ನವೇ, ಮುತ್ತುವೇಲ್ ತನ್ನ ಚಾಣಾಕ್ಷತನದಿಂದ ಅವರ ಪಡೆಯನ್ನು ಬೆನ್ನತ್ತಿರುತ್ತಾನೆ. ಅದಕ್ಕಾಗಿ ಆತ ಹೆಣೆಯುವ ಜಾಲವೇ ರೋಚಕವಾಗಿದೆ. ಈ ಬಾರಿ ಆತನಿಗೆ ಎದುರಾಗುವುದು ಬೋಧಿ ಕಲ್ಪಕ್ (ಎಸ್.ಜೆ. ಸೂರ್ಯ), ಕಾಂತಾ ಕಲ್ಪಕ್ (ವಿದ್ಯಾ ಬಾಲನ್) ಮತ್ತು ಅವರ ತಂದೆ ಕಲ್ಪಕ್ (ಮಿಥುನ್ ಚಕ್ರವರ್ತಿ) ನೇತೃತ್ವದ ಬಲಿಷ್ಠ ಸಿಂಡಿಕೇಟ್. ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುತ್ತಲೇ ಈ ಜಾಲವನ್ನು ಟೈಗರ್ ಹೇಗೆ ಹೊಡೆದುರುಳಿಸುತ್ತಾನೆ ಎಂಬುದೇ ಈ ಚಿತ್ರದ ಕಥಾಹಂದರ.
ಹಳೆಯ ಫಾರ್ಮುಲಾ, ಹೊಸ ಕಿಕ್!
ಹಿಟ್ ಆದ ಚಿತ್ರವೊಂದಕ್ಕೆ ಸೀಕ್ವೆಲ್ ನಿರ್ದೇಶಿಸುವುದು ಯಾವಾಗಲೂ ಸವಾಲಿನ ಕೆಲಸವೇ ಸರಿ. ನಿರ್ದೇಶಕ ನೆಲ್ಸನ್ ಅವರಿಗೆ ‘ಜೈಲರ್ 2’ ನಿಜಕ್ಕೂ ದೊಡ್ಡ ಸವಾಲಾಗಿತ್ತು. ಏಕೆಂದರೆ, 'ಜೈಲರ್' ಮಾಡುವಾಗ ನೆಲ್ಸನ್ಗೆ ಅದನ್ನು ಭಾಗ-2 ಮಾಡುವ ಯಾವುದೇ ಕಲ್ಪನೆ ಇರಲಿಲ್ಲ. ಆದರೆ ಈ ಬಾರಿ ಅವರು ಆ ಸವಾಲನ್ನು ಸ್ವೀಕರಿಸಿ, ಮೊದಲ ಭಾಗದ ಶೈಲಿ, ಸ್ವ್ಯಾಗ್, ಹಾಸ್ಯ ಮತ್ತು ಮಾಸ್ ಅಂಶಗಳನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಈ ಹಾದಿಯಲ್ಲಿ ಕೊಂಚ ಎಡವಟ್ಟುಗಳಾದರೂ, ಭಾಗಶಃ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂಥದ್ದೇ ಗಂಭೀರ ಪರಿಸ್ಥಿತಿ ಇದ್ದರೂ, ಅದನ್ನು ಬಹುತೇಕ ಹಾಸ್ಯದ ಮೂಲಕವೇ ಕೊಂಡೊಯ್ಯುವುದು ನೆಲ್ಸನ್ಗೆ ಕರಗತ. ಅದನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಮುತ್ತುವೇಲ್ ದೊಡ್ಡ ಪಡೆಯೊಂದನ್ನು ಮಟ್ಟಹಾಕಲು ಅಣಿಯಾಗುತ್ತಿದ್ದರೂ, ಅದನ್ನು ಎಲ್ಲಿಯೂ ಅತಿಯಾದ ಗಂಭೀರತೆಯಿಂದ ತೋರಿಸದೆ ತಿಳಿಹಾಸ್ಯದ ಮೂಲಕವೇ ಹೇಳುತ್ತಾ ಸಾಗಿದ್ದಾರೆ. ಮೊದಲಾರ್ಧದಲ್ಲಂತೂ ಕಾಮಿಡಿಗೆ ಹೆಚ್ಚಿನ ಜಾಗ ಮಾಡಿಕೊಟ್ಟಿದ್ದಾರೆ. ಕಥೆಯನ್ನು ನಿಧಾನವಾಗಿ ಕಟ್ಟಿಕೊಡುತ್ತಾ, ವಿರಾಮದ ಹೊತ್ತಿಗೆ ಒಂದು ವಾರ್ ಝೋನ್ ಅನ್ನೇ ನಿರ್ಮಿಸಿಬಿಡುತ್ತಾರೆ. ದ್ವಿತೀಯಾರ್ಧದಲ್ಲಂತೂ ಕಲ್ಪಕ್ ಫ್ಯಾಮಿಲಿ ವರ್ಸಸ್ ಮುತ್ತುವೇಲ್ ಗ್ಯಾಂಗ್ನ ಭರ್ಜರಿ ಕಾಳಗವೇ ನಡೆಯುತ್ತದೆ.
ಹಾಸ್ಯದ ಜೊತೆಜೊತೆಗೆ ಬರುವ ಎಲಿವೇಶನ್ ಸೀನ್ಗಳು ರಜನಿ ಅಭಿಮಾನಿಗಳಿಗೆ ಹಬ್ಬವೇ ಸರಿ. ಟೀ ಅಂಗಡಿಯಲ್ಲಿ ನಡೆಯುವ ಶೂಟೌಟ್, ಸೇತುವೆ ಮೇಲಿನ ಮುಖಾಮುಖಿ, ಕಂಟೈನರ್ ಲಾರಿ ಬ್ಲಾಸ್ಟ್ ಸೀನ್, ಪೊಲೀಸ್ ಸ್ಟೇಷನ್ಗೆ ಹೃತಿಕ್ ನುಗ್ಗುವ ದೃಶ್ಯಗಳು ಭರ್ಜರಿ ಶಿಳ್ಳೆ ಗಿಟ್ಟಿಸುತ್ತವೆ. ಹೀಗೆ ಅಭಿಮಾನಿಗಳಿಗೆ ಮಜಾ ಕೊಡುವಂತಹ ಸಾಕಷ್ಟು ಅಂಶಗಳನ್ನು ನೆಲ್ಸನ್ ತುಂಬಿದ್ದಾರೆ. ಆದರೆ ಇಲ್ಲಿ ಯಾವುದಕ್ಕೂ ಲಾಜಿಕ್ ಇಲ್ಲ; ಅದನ್ನು ಹುಡುಕಲು ಹೋದರೆ ನಿರಾಸೆ ಖಂಡಿತ!
ಈ ಬಾರಿ ಹಲವು ಪಾತ್ರಗಳು ತೆರೆಮೇಲೆ ಕಾಣಿಸಿಕೊಳ್ಳುವುದರಿಂದ ಕಥೆ ಕೊಂಚ ಎಳೆದಂತೆ ಭಾಸವಾಗುತ್ತದೆ. ಮೊದಲಾರ್ಧ ಸಾಗಿದಷ್ಟು ಸರಾಗವಾಗಿ ದ್ವಿತೀಯಾರ್ಧ ಸಾಗುವುದಿಲ್ಲ. ಚಿತ್ರದಲ್ಲಿ ಎರಡೆರಡು ಐಟಂ ಹಾಡುಗಳ ಅಗತ್ಯವೇನಿತ್ತು ಎಂಬುದನ್ನು ನಿರ್ದೇಶಕರೇ ಸ್ಪಷ್ಟಪಡಿಸಬೇಕು. ಅನಿರುದ್ಧ್ ಅವರ ಸಂಗೀತ ಈ ಬಾರಿ ಕೊಂಚ ಸಪ್ಪೆ ಎನಿಸುತ್ತದೆ; ಮೊದಲ ಭಾಗದಲ್ಲಿದ್ದ ಟ್ಯೂನ್ ಹಾಗೂ ಬಿಜಿಎಂಗಳು ಇಲ್ಲಿಯೂ ಮರುಕಳಿಸಿವೆ. ವಿಜಯ್ ಕಾರ್ತಿಕ್ ಕಣ್ಣನ್ ಅವರ ಛಾಯಾಗ್ರಹಣ ಸಿನಮಾದ ಸೊಗಸನ್ನು ಹೆಚ್ಚಿಸಿದೆ.
ಟೈಗರ್ನಂತೆ ಘರ್ಜಿಸಿದ ರಜನಿಕಾಂತ್
ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ಅವರ ಎಂದಿನ ಗತ್ತು ಮತ್ತು ಗಾಂಭೀರ್ಯ ಮುಂದುವರಿದಿದೆ. ಒಂದು ಕಡೆ ಖಳರ ಪಡೆ, ಮತ್ತೊಂದೆಡೆ ಸಂಸಾರ.. ಅತ್ತ ಖಳರನ್ನು ಮಟ್ಟಹಾಕುತ್ತಾ, ಇತ್ತ ಕುಟುಂಬವನ್ನು ಕಾಪಾಡಿಕೊಳ್ಳುವ ರಜನಿಕಾಂತ್ ಅವರ ಪಾತ್ರ ಸಮತೋಲನದಿಂದ ಮೂಡಿಬಂದಿದೆ. 75ರ ಹರೆಯದಲ್ಲೂ ಅವರ ಎನರ್ಜಿ ಬೆರಗು ಮೂಡಿಸುತ್ತದೆ.
ಕುಟುಂಬವನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿ ಮತ್ತು ಪ್ರಚಂಡ ಜೈಲರ್ ನಡುವಿನ ರೂಪಾಂತರವನ್ನು ಲೀಲಾಜಾಲವಾಗಿ ನಿಭಾಯಿಸಿರುವ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಚಾರ್ಮ್ ಚಿತ್ರದ ಬಹುದೊಡ್ಡ ಆಸ್ತಿ. ರಜನಿಕಾಂತ್ ಇಡೀ ಚಿತ್ರವನ್ನು ಮುನ್ನಡೆಸಿದರೆ, ಸೂರಜ್ ವೆಂಜಾರಮೂಡು ಮತ್ತು ಎಸ್.ಜೆ. ಸೂರ್ಯ ತಮ್ಮ ನಟನೆಯ ಮೂಲಕ ನೆನಪಿನಲ್ಲುಳಿಯುತ್ತಾರೆ. ವಿದ್ಯಾ ಬಾಲನ್ ಅವರಿಗೆ ಸೀಮಿತ ಸ್ಕ್ರೀನ್ ಟೈಮ್ ಇದ್ದರೂ, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಮೋ ನಾರಾಯಣ ತಮ್ಮ ವೃತ್ತಿಜೀವನದಲ್ಲೇ ಅತ್ಯಂತ ಪ್ರಭಾವಿ ಪಾತ್ರವನ್ನು ಪಡೆದುಕೊಂಡಿದ್ದಾರೆ; ಯೋಗಿ ಬಾಬು ಎಂದಿನಂತೆ ನಗಿಸುವ ಪ್ರಯತ್ನ ಮಾಡಿದ್ದಾರೆ.
ಜೈಲರ್ಗೆ ಸಂಕಷ್ಟ ಎದುರಾದಾಗಲೆಲ್ಲ ಶಿವರಾಜ್ಕುಮಾರ್, ಮೋಹನ್ಲಾಲ್ ಮತ್ತು ಜಾಕಿ ಶ್ರಾಫ್ ಪಾತ್ರಗಳು ಬಂದು ನೆರವಾಗುವುದು ಇಲ್ಲಿಯೂ ಮುಂದುವರಿದಿದೆ. ಶಿವಣ್ಣ ತಮ್ಮ ಎಂಟ್ರಿಯಿಂದ ಕೊಂಚ ಜಾಸ್ತಿಯೇ ಮಿಂಚಿದ್ದಾರೆ; ಈ ಬಾರಿ ಅವರಿಗೆ ಜೋಡಿಯಾಗಿ ಮೇಘನಾ ರಾಜ್ ಕಾಣಿಸಿಕೊಂಡಿರುವುದು ವಿಶೇಷ. ಇನ್ನುಳಿದಂತೆ, ಹೃತಿಕ್ ರೋಷನ್ ಅವರ ಅತಿಥಿ ಪಾತ್ರ ಕಣ್ಮನ ಸೆಳೆಯುತ್ತದೆ; ಆದರೆ ಅವರ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು ಎನಿಸುತ್ತದೆ. ಮಿಥುನ್ ಚಕ್ರವರ್ತಿ, ರಮ್ಯಾ ಕೃಷ್ಣನ್, ಮಿರ್ನಾ ಹಾಗೂ ಮಾಸ್ಟರ್ ರಿತ್ವಿಕ್ ಸಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಒಟ್ಟಾರೆಯಾಗಿ, ಇದೊಂದು ಪಕ್ಕಾ ಕಮರ್ಷಿಯಲ್ ಸೂತ್ರಗಳನ್ನೇ ನೆಚ್ಚಿಕೊಂಡಿರುವ ಅಚ್ಚುಕಟ್ಟಾದ ಮನರಂಜನಾತ್ಮಕ ಸಿನಿಮಾ. ಕಥೆಯಲ್ಲಿನ ಸಣ್ಣಪುಟ್ಟ ಲೋಪಗಳು, ಸಾಧಾರಣ ಕ್ಲೈಮ್ಯಾಕ್ಸ್ ಮತ್ತು ಲಾಜಿಕ್ ಕೊರತೆಯ ನಡುವೆಯೂ, ನೆಲ್ಸನ್ ಅವರ ಬರವಣಿಗೆ, ವಿಭಿನ್ನ ಹಾಸ್ಯ ಹಾಗೂ ರಜನಿಕಾಂತ್ ಅವರ ಮ್ಯಾಜಿಕ್ನಿಂದಾಗಿ 'ಜೈಲರ್ 2' ಪ್ರೇಕ್ಷಕರಿಗೆ ಖುಷಿ ನೀಡುತ್ತದೆ. ಇದು ಮೊದಲ ಭಾಗದಷ್ಟು ತಾಜಾತನ ಹೊಂದಿಲ್ಲದಿದ್ದರೂ, ಅಭಿಮಾನಿಗಳಿಗೆ ಬೇಕಾದಷ್ಟು ಮಾಸ್ ಮನರಂಜನೆ ನೀಡುವಲ್ಲಿ ಸಫಲವಾಗಿದೆ. ವಿಶೇಷವೆಂದರೆ, ನೆಲ್ಸನ್ ಈ ಚಿತ್ರದ ಕೊನೆಯಲ್ಲಿ ವಿಜಯ್ ಸೇತುಪತಿ ಅವರನ್ನು ತೋರಿಸಿ, ಪಾರ್ಟ್ 3 ಸುಳಿವು ನೀಡಿದ್ದಾರೆ!