ʻರಾಮಾಯಣʼ ಚಿತ್ರದಲ್ಲಿ ರಣಬೀರ್ ಕಪೂರ್‌ಗೆ ದ್ವಿಪಾತ್ರ, ಸಿನಿಮಾದ ಅವಧಿ 6 ಗಂಟೆ; ಸಿಕ್ತು ಬಿಗ್ ಅಪ್ಡೇಟ್!
ರಾಮಾಯಣ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಶ್ರೀರಾಮನಾಗಿ ಮಾತ್ರವಲ್ಲದೆ, ಭಗವಾನ್ ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ದ್ವಿಪಾತ್ರಕ್ಕಾಗಿ ರಣಬೀರ್ ಒಂದು ವರ್ಷಗಳ ಕಾಲ ವಿಶೇಷ ತಯಾರಿ ನಡೆಸಿದ್ದು, ವಿಭಿನ್ನ ದೇಹಭಾಷೆ ಮತ್ತು ಧ್ವನಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರಂತೆ.
-
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಟೀಸರ್ ಈಚೆಗಷ್ಟೇ ರಿಲೀಸ್ ಆಗಿ, ದೊಡ್ಡ ರೆಸ್ಪಾನ್ಸ್ ಪಡೆದುಕೊಂಡಿದೆ. ನಟ ರಣಬೀರ್ ಕಪೂರ್ ಅವರು ರಾಮನಾಗಿ ಮಿಂಚಿದ್ದಾರೆ. ವಿಶೇಷವೆಂದರೆ, ಅವರಿಲ್ಲಿ ಬರೀ ಶ್ರೀರಾಮನಾಗಿ ಮಾತ್ರವಲ್ಲ, ಮತ್ತೊಂದು ಪಾತ್ರವನ್ನು ಕೂಡ ಈ ಸಿನಿಮಾದಲ್ಲಿ ಮಾಡಿದ್ದಾರೆ. ಆ ಮೂಲಕ ʻರಾಮಾಯಣʼ ಚಿತ್ರದಲ್ಲಿ ದ್ವಿಪಾತ್ರ ಮಾಡಿರುವುದು ಖಚಿತವಾಗಿದೆ. ಅಂದಹಾಗೆ, ಆ ಇನ್ನೊಂದು ಪಾತ್ರ ಯಾವುದು?
ಪರಶುರಾಮನಾಗಿ ರಣಬೀರ್ ಕಪೂರ್
ಹೌದು, ರಾಮಾಯಣ ಸಿನಿಮಾದಲ್ಲಿ ಶ್ರೀರಾಮನಾಗಿ ಮಾತ್ರವಲ್ಲದೆ, ಭಗವಾನ್ ವಿಷ್ಣುವಿನ ಅವತಾರವಾದ ಪರಶುರಾಮನಾಗಿಯು ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಟೀಸರ್‌ನಲ್ಲಿ ಈ ದ್ವಿಪಾತ್ರದ ಸುಳಿವು ನೀಡಲಾಗಿತ್ತಾದರೂ, ಈಗ ಅದನ್ನು ರಣಬೀರ್ ಅವರೇ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ರಣಬೀರ್ ಕಪೂರ್, "ರಾಮ ಮತ್ತು ಪರಶುರಾಮರ ವಿಭಿನ್ನ ಸ್ವಭಾವಗಳನ್ನು ಪ್ರತಿಬಿಂಬಿಸಲು ವಿಭಿನ್ನ ದೇಹಭಾಷೆ ಮತ್ತು ಧ್ವನಿ ಬದಲಾವಣೆಗಳನ್ನು ಬಳಸಿದ್ದೇನೆ. ಈ ಅವತಾರಗಳ ಆಧ್ಯಾತ್ಮಿಕತೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ತಮ್ಮ ಅಭಿನಯಕ್ಕೆ ಪ್ರಮುಖವಾಗಿತ್ತು" ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್, ರಣಬೀರ್ ಕಪೂರ್ ಹಿಂದಿಕ್ಕಿದ ರಿಷಬ್ ಶೆಟ್ಟಿ; ಅಪರೂಪದ ದಾಖಲೆಗೆ ಇನ್ನೊಂದೇ ಹೆಜ್ಜೆ ಬಾಕಿ
ಒಂದು ವರ್ಷ ತಯಾರಿ
"ಭಗವಾನ್ ವಿಷ್ಣುವು ವಿವಿಧ ಅವತಾರಗಳನ್ನು ಹೊಂದಿದ್ದರು. ಅದರಲ್ಲಿ ಶ್ರೀರಾಮ ಒಂದು ಅವತಾರವಾದರೆ, ಪರಶುರಾಮ ಶ್ರೀರಾಮನಿಗಿಂತ ಮುಂಚಿನ ಅವತಾರವಾಗಿತ್ತು. ಎರಡೂ ಪಾತ್ರಗಳನ್ನು ನಿರ್ವಹಿಸುವುದು ಒಂದು ಅದ್ಭುತ ಅವಕಾಶವಾಗಿತ್ತು. ಈ ಪಾತ್ರಗಳು ಯಾರು, ಅವರ ನಂಬಿಕೆಗಳು ಮತ್ತು ಉದ್ದೇಶಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ರಾಮಾಯಣಕ್ಕಾಗಿ ಒಂದು ವರ್ಷ ತಯಾರಿಯಲ್ಲಿ ಕಳೆದಿದ್ದೇನೆ" ಎಂದು ರಣಬೀರ್ ಕಪೂರ್ ಹೇಳಿಕೊಂಡಿದ್ದಾರೆ.
Ramayana Teaser: ರಣಬೀರ್ ಮುಖದಲ್ಲಿ ಮುಗ್ಧತೆ ಇಲ್ಲ ಎಂದ 'ರಾಮಾಯಣ' ನಟ
ಸಿನಿಮಾದ ಅವಧಿ ಬಗ್ಗೆ ರಣಬೀರ್ ಕಪೂರ್ ಹೇಳಿದ್ದೇನು?
"ನಮ್ಮ ಸಿನಿಮಾವು 'ಲಾರ್ಡ್ ಆಫ್ ದಿ ರಿಂಗ್ಸ್' ಗಿಂತ ಕಡಿಮೆ ಏನಿಲ್ಲ. ಇದು ನಮ್ಮ ದೇಶದ ಶ್ರೇಷ್ಠ ಮಹಾಕಾವ್ಯದ ಒಂದು ದೃಶ್ಯ ವೈಭವವಾಗಿದೆ. ಈಗ ಬಿಡುಗಡೆಯಾಗಿರುವುದು ಕೇವಲ ಟೀಸರ್ ಮಾತ್ರ. ನಮ್ಮ ಬಳಿ ಆರು ಗಂಟೆಗಳ ಕಾಲದ ಅದ್ಭುತ ದೃಶ್ಯಗಳು, ಆಕ್ಷನ್ ಸನ್ನಿವೇಶಗಳು ಮತ್ತು ಭಾವನೆಗಳಿವೆ. ಇದು ನಿಮಗೆ ಒಬ್ಬ ಉತ್ತಮ ಮಗ, ಉತ್ತಮ ಪತಿ ಮತ್ತು ಉತ್ತಮ ಸಹೋದರನಾಗಿರುವುದು ಹೇಗೆ ಎಂದು ಕಲಿಸುತ್ತದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವಾಗಿದೆ. ಈ ಸಿನಿಮಾದಲ್ಲಿ ಕಥೆ ಹೇಳುವ ಹಲವು ವಿಭಿನ್ನ ಹಂತಗಳಿವೆ. ಜನರು ಇದನ್ನು ಅನುಭವಿಸುವುದನ್ನು ನೋಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ" ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
"ನಾವು ಈಗಾಗಲೇ ಎರಡನೇ ಭಾಗದ ಚಿತ್ರೀಕರಣವನ್ನು ಅರ್ಧದಷ್ಟು ಮುಗಿಸಿದ್ದೇವೆ, ನನ್ನ ಭಾಗದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ನೀವು ಈವರೆಗೆ ನೋಡಿರುವುದಕ್ಕಿಂತಲೂ ಇದು ಹೆಚ್ಚು ರೋಚಕವಾಗಿದೆ" ಎಂದು ರಣಬೀರ್ ಹೇಳಿದ್ದಾರೆ. ಅಲ್ಲಿಗೆ ಈ ಸಿನಿಮಾದ ಎರಡೂ ಪಾರ್ಟ್‌ಗಳ ಒಟ್ಟು ಅವಧಿ 6 ಗಂಟೆಗಳಿಗೂ ಅಧಿಕ ಇರುವುದು ಖಚಿತ ಎಂಬುದು ಗೊತ್ತಾಗಿದೆ.