ಒಟಿಟಿಯಲ್ಲೂ ಭರ್ಜರಿ ದಾಖಲೆ ಬರೆದ ʻಧುರಂಧರ್ 2ʼ; ಮೊದಲ ವಾರಾಂತ್ಯದಲ್ಲೇ 5 ಕೋಟಿ ವೀಕ್ಷಕರನ್ನು ತಲುಪಿದ ರಣವೀರ್ ಸಿಂಗ್ ಸಿನಿಮಾ
ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಸಿನಿಮಾವು ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿ, ಮೊದಲ ವಾರಾಂತ್ಯದಲ್ಲೇ ಬರೋಬ್ಬರಿ 5 ಕೋಟಿ ವೀಕ್ಷಕರನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆದಿತ್ಯ ಧರ್ ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಥಿಯೇಟರ್‌ಗಿಂತ 5 ಪಟ್ಟು ಹೆಚ್ಚು ವೀಕ್ಷಣೆ ಪಡೆದಿದ್ದು ವಿಶೇಷ.
-
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಸಿನಿಮಾವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿ ಹೊಸ ಇತಿಹಾಸ ಸೃಷ್ಟಿಸಿದೆ. ತನ್ನ ಡಿಜಿಟಲ್ ಪ್ರದರ್ಶನದ ಮೊದಲ ವಾರಾಂತ್ಯದಲ್ಲೇ (ಶನಿವಾರ ಮತ್ತು ಭಾನುವಾರ) ಬರೋಬ್ಬರಿ 50 ಮಿಲಿಯನ್ (5 ಕೋಟಿ) ವೀಕ್ಷಕರನ್ನು ಸೆಳೆಯುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.
ಇದು ಚಿತ್ರಮಂದಿರಗಳಲ್ಲಿ ಸಿಕ್ಕ ಮೊದಲ ವೀಕೆಂಡ್‌ನ ಪ್ರೇಕ್ಷಕರ ಸಂಖ್ಯೆಗಿಂತ ಬರೋಬ್ಬರಿ 5 ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಈ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಇಡೀ ದೇಶದ ಸಿನಿರಸಿಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಮೆಟ್ರೋ ನಗರಗಳಿಂದ ಹಿಡಿದು ಗ್ರಾಮೀಣ ಭಾಗಗಳವರೆಗೆ ಜನರ ವಾಚ್‌ಲಿಸ್ಟ್‌ನಲ್ಲಿ ‘ಧುರಂಧರ್ 2’ ಮುಂಚೂಣಿಯಲ್ಲಿದೆ.
Dhurandhar: ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್!
ಸ್ಮಾರ್ಟ್ ಟಿವಿಯಿಂದ ಹೆಚ್ಚು ವೀಕ್ಷಣೆ
ವಿಶೇಷವೆಂದರೆ, ಚಿತ್ರದ ಒಟ್ಟು ವೀಕ್ಷಣಾ ಸಮಯದ (Watch-Time) ಪೈಕಿ ಶೇ. 60 ರಷ್ಟು ವೀಕ್ಷಣೆಗಳು ಸ್ಮಾರ್ಟ್ ಟಿವಿ (Connected TV) ಸಾಧನಗಳಿಂದ ಬಂದಿದ್ದು, ಭಾರತೀಯ ಕುಟುಂಬಗಳು ದೊಡ್ಡ ಪರದೆಯ ಮೇಲೆ ಒಟ್ಟಾಗಿ ಸಿನಿಮಾ ನೋಡುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಇದು ಎತ್ತಿ ತೋರಿಸುತ್ತದೆ ಎಂದು ಜಿಯೋ ಹಾಟ್‌ಸ್ಟಾರ್ ಹೇಳಿಕೊಂಡಿದೆ.
ಮನೋರಂಜನೆಯ ರಸದೌತಣವನ್ನು ಉಣಬಡಿಸಿದೆ
ಈ ಚಿತ್ರದ ಅಭೂತಪೂರ್ವ ಯಶಸ್ಸಿನ ಬಗ್ಗೆ ಮಾತನಾಡಿದ ಜಿಯೋಸ್ಟಾರ್‌ನ ಹಿಂದಿ ಮತ್ತು ಇಂಗ್ಲಿಷ್ ಎಂಟರ್‌ಟೈನ್‌ಮೆಂಟ್ ಬ್ಯುಸಿನೆಸ್ ಮುಖ್ಯಸ್ಥ ಆಲೋಕ್ ಜೈನ್, "ಧುರಂಧರ್ 2 ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನಿಜಕ್ಕೂ ಅಸಾಧಾರಣವಾದದ್ದು. ಮೊದಲ ವೀಕೆಂಡ್‌ನಲ್ಲೇ 5 ಕೋಟಿ ವೀಕ್ಷಕರನ್ನು ತಲುಪಿರುವುದು ಬ್ಲಾಕ್‌ಬಸ್ಟರ್ ಕಂಟೆಂಟ್‌ಗಳನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ತಲುಪಿಸುವ ನಮ್ಮ ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯವನ್ನು ತೋರಿಸುತ್ತದೆ. ಚಿತ್ರದ ಯಶಸ್ಸಿನ ಜೊತೆಗೆ ನಾವು ನೀಡಿದ RAW & Undekha ಆವೃತ್ತಿಯ ಶೂಟಿಂಗ್‌ನ ಸುಂದರ ಕ್ಷಣಗಳು ಮತ್ತು ಮೇಕಿಂಗ್ ಒಳಗೊಂಡ 30 ನಿಮಿಷಗಳ ವಿಶೇಷ ಪ್ರೀ-ಶೋ (Pre-Show) ಪ್ರೇಕ್ಷಕರಿಗೆ ಒಂದು ಪರಿಪೂರ್ಣ ಮನೋರಂಜನೆಯ ರಸದೌತಣವನ್ನು ಉಣಬಡಿಸಿದೆ" ಎಂದಿದ್ದಾರೆ.
Dhurandhar Movie: ಶೀಘ್ರದಲ್ಲೇ ತೆರೆಗೆ ಬರಲಿದೆಯೇ ‘ಧುರಂಧರ್ 3’? ಏನಿದು ಸುದ್ದಿ?
ಕನ್ನಡದಲ್ಲೂ ಉತ್ತಮ ರೆಸ್ಪಾನ್ಸ್
ಈ ಹಿಂದೆ ಬಿಡುಗಡೆಯಾಗಿದ್ದ ‘ಧುರಂಧರ್ 1’ ಸಿನಿಮಾದ ಆರಂಭದ ಮೂರೇ ದಿನಗಳಲ್ಲಿ 3.20 ಕೋಟಿ ವೀಕ್ಷಣೆಗಳನ್ನು ಪಡೆದು ಇತಿಹಾಸ ನಿರ್ಮಿಸಿತ್ತು. ಇದೀಗ ಎರಡನೇ ಭಾಗ ಆ ದಾಖಲೆಯನ್ನು ಸುಲಭವಾಗಿ ಮುರಿದಿದೆ. ಈ ಭರ್ಜರಿ ಯಶಸ್ಸು ಜಾಹೀರಾತುದಾರರಲ್ಲೂ ಭಾರಿ ವಿಶ್ವಾಸ ಮೂಡಿಸಿದ್ದು, ಹಲವು ಪ್ರತಿಷ್ಠಿತ ಪ್ರಾಯೋಜಕರು ಈ ಚಿತ್ರದೊಂದಿಗೆ ಕೈಜೋಡಿಸಿದ್ದಾರೆ. ದೈತ್ಯ ಮಾರುಕಟ್ಟೆ ಹೊಂದಿರುವ ಜಿಯೋಹಾಟ್‌ಸ್ಟಾರ್ ವೇದಿಕೆಯಲ್ಲಿ ‘ಧುರಂಧರ್ ದಿ ರಿವೇಂಜ್’ ಈಗ ಕನ್ನಡದಲ್ಲೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು. ಚಿತ್ರದ ನಿರ್ಮಾಣದಲ್ಲಿ ಆದಿತ್ಯ ಧರ್ ಕೂಡ ಕೈಜೋಡಿಸಿದ್ದರು. ರಣವೀರ್ ಸಿಂಗ್ ಜೊತೆಗೆ ಸಾರಾ ಅರ್ಜುನ್, ರಾಕೇಶ್ ಬೇಡಿ, ಅರ್ಜುನ್ ರಾಮ್‌ಪಾಲ್, ಸಂಜಯ್ ದತ್, ಅಕ್ಷಯ್ ಖನ್ನಾ ಮುಂತಾದವರು ನಟಿಸಿದ್ದರು.