ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಶಾಂತಿ ಕ್ರಾಂತಿ’ ರೀ-ರಿಲೀಸ್‌ ಮಾಡೋಕೆ ರೈಟ್ಸ್‌ ಕೇಳಲು ಹೋದವರಿಗೆ ʻಕ್ರೇಜಿ ಸ್ಟಾರ್‌ʼ ರವಿಚಂದ್ರನ್‌ ಹೇಳಿದ್ದೇನು?

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ‘ಶಾಂತಿ ಕ್ರಾಂತಿ’ ಸಿನಿಮಾ ರೀ-ರಿಲೀಸ್ ಕುರಿತ ವದಂತಿಗಳಿಗೆ ನಿರ್ದೇಶಕ ರವೀಂದ್ರ ವೆಂಶಿ ಫೇಸ್‌ಬುಕ್ ಪೋಸ್ಟ್ ಮೂಲಕ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ರಿಲೀಸ್‌ ಹಕ್ಕುಗಳನ್ನು ಕೇಳಲು ಹೋದಾಗ, ರವಿಚಂದ್ರನ್ ಏನು ಹೇಳಿದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ʻಶಾಂತಿ ಕ್ರಾಂತಿʼ ರೀ- ರಿಲೀಸ್‌ ಬಗ್ಗೆ ರವಿಚಂದ್ರನ್ ಏನಂದ್ರು ಗೊತ್ತಾ?

-

Avinash GR
Avinash GR Aug 12, 2026 8:17 PM

'ಕ್ರೇಜಿ ಸ್ಟಾರ್' ರವಿಚಂದ್ರನ್ ನಿರ್ದೇಶಿಸಿ, ಅಭಿನಯಿಸಿ ಅಂದು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತೆರೆಗೆ ತಂದಿದ್ದ ಅಸಲಿ ಪ್ಯಾನ್‌ ಇಂಡಿಯಾ ಸಿನಿಮಾ ‘ಶಾಂತಿ ಕ್ರಾಂತಿ’ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ. ಈ ಅದ್ಧೂರಿ ಚಿತ್ರವನ್ನು ಮತ್ತೆ ಥಿಯೇಟರ್‌ಗಳಲ್ಲಿ ಮರುಬಿಡುಗಡೆ ಮಾಡಬೇಕೆಂದು ಅಭಿಮಾನಿಗಳು ಜಾಲತಾಣಗಳಲ್ಲಿ ನಿರಂತರ ಒತ್ತಾಯಿಸುತ್ತಿದ್ದಾರೆ.

ಈ ಬೆನ್ನಲ್ಲೇ, ಕನ್ನಡ ಸಿನಿಮಾಗಳ ನಿರ್ದೇಶಕ, ಬರಹಗಾರ ರವೀಂದ್ರ ವೆಂಶಿ ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ 'ಶಾಂತಿ ಕ್ರಾಂತಿ' ರೀ-ರಿಲೀಸ್ ಕುರಿತು ರವಿಚಂದ್ರನ್ ಅವರ ನಿಲುವನ್ನು ಬಹಿರಂಗಪಡಿಸಿದ್ದಾರೆ.

ಎಲ್ಲವೂ ಸಹೋದರ ಬಾಲಾಜಿ ಅವರ ಬಳಿ ಇವೆ

"ಕೆಲವು ತಿಂಗಳುಗಳ ಹಿಂದೆ ನಾನು ನನ್ನ ನಿರ್ಮಾಪಕರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಗೆ ಹೋಗಿದ್ದೆ. ವಿಷಯ, ಅವರ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ರೀ-ರಿಲೀಸ್ ಮಾಡಲು ಅನುಮತಿ ಕೇಳಲು ಮತ್ತು ಅದರ ಹಕ್ಕುಗಳನ್ನು ಪಡೆದುಕೊಳ್ಳಲು. ಆವತ್ತು ರಾತ್ರಿ ಒಂಬತ್ತರಿಂದ ಹನ್ನೊಂದು ಗಂಟೆಯವರೆಗೆ ಕ್ರೇಜಿಸ್ಟಾರ್ ನಮ್ಮೊಡನೆ ಮಾತನಾಡಿದರು. ʻಶಾಂತಿ ಕ್ರಾಂತಿ ಅಲ್ಲ, ಈಶ್ವರಿ ಸಂಸ್ಥೆಯ ಯಾವ ಸಿನಿಮಾದ ಹಕ್ಕುಗಳೂ ನನ್ನ ಬಳಿ ಇಲ್ಲ; ಎಲ್ಲವೂ ಸಹೋದರ ಬಾಲಾಜಿ ಅವರ ಬಳಿ ಇವೆʼ ಎಂದರು. ಮುಂದುವರಿದು ಮಾತನಾಡಿದ ಅವರು, ʻನೀವು ಸಿನಿಮಾ ಮಾಡಲು ಬಂದವರು. ಈಗಾಗಲೇ ನೂರಾರು ಬಾರಿಗೆ ಟಿವಿಯಲ್ಲಿ ಪ್ರಸಾರವಾಗಿರುವ ಸಿನಿಮಾವನ್ನು ಯಾಕೆ ಬಿಡುಗಡೆ ಮಾಡುತ್ತೀರಿ? ಸಿನಿಮಾ ಗೆದ್ದರೆ ಅದು ನಿಮ್ಮದು ಎನಿಸಿಕೊಳ್ಳುವುದಿಲ್ಲ, ಸೋತರೆ 'ರವಿಚಂದ್ರನ್ ಸಿನಿಮಾದಿಂದ ನಷ್ಟವಾಯಿತು' ಎಂದು ಹೇಳಿಕೊಂಡು ತಿರುಗಬೇಕಾಗುತ್ತದೆ. ಸಿನಿಮಾ ಮಾಡಲು ಬಂದಿದ್ದೀರಿ, ಹೊಸ ಸಿನಿಮಾ ಮಾಡಿ. ಅದಕ್ಕೆ ಏನು ಬೆಂಬಲ ಬೇಕೋ ಮಾಡೋಣ. ನನ್ನದೇ ಯಾವುದಾದರೂ ಸಿನಿಮಾದ ಕಥೆ ಇಷ್ಟವಾದರೆ ಅದನ್ನೇ ಬದಲಾಯಿಸಿ ಮಾಡಿ, ನಾನು ಪ್ರಶ್ನಿಸುವುದಿಲ್ಲʼ ಎಂದರು"

ಎಷ್ಟು ಹಣ ಬೇಕಾಗುತ್ತದೆ ಎನ್ನುವ ಅಂದಾಜು ನಿಮಗಿದೆಯೇ?

"ಹಾಗೆಯೇ, ʻಒಂದು ಸಿನಿಮಾವನ್ನು ರೀ-ರಿಲೀಸ್ ಮಾಡಲು ಹಕ್ಕುಗಳನ್ನು ಹೊರತುಪಡಿಸಿ ಎಷ್ಟು ಹಣ ಬೇಕಾಗುತ್ತದೆ ಎನ್ನುವ ಅಂದಾಜು ನಿಮಗಿದೆಯೇ? ಅಷ್ಟೊಂದು ಖರ್ಚು ಮಾಡಿ ನೀವು ಪ್ರಚಾರ ಮಾಡುತ್ತೀರಿ. ಆಗ ಅದನ್ನು ಈಗಾಗಲೇ ಹಕ್ಕುಗಳನ್ನು ಹೊಂದಿರುವ ಟಿವಿಯವರು ಮರುಪ್ರಸಾರ ಮಾಡಿಬಿಡುತ್ತಾರೆ. ನಿಮ್ಮ ಪ್ರಚಾರ ಅವರಿಗೆ ಸಹಾಯವಾಗುತ್ತದೆʼ ಎಂದೂ ಹೇಳಿದರು. ಆವತ್ತು 2 ಗಂಟೆಗಳ ಕಾಲ ಅವರು ಆಡಿದ ಮಾತುಗಳು ನಮ್ಮ ಪಾಲಿಗಂತೂ ಅತ್ಯಮೂಲ್ಯವಾಗಿದ್ದವು. ನಾವು ಹಾಗೂ ನಮ್ಮ ನಿರ್ಮಾಪಕರು ಸಿನಿಮಾವನ್ನು ರೀ-ರಿಲೀಸ್ ಮಾಡುವ ಆಲೋಚನೆಯನ್ನು ಕೈಬಿಡುವಂತೆ ಮಾಡಿದವು"

ಇಷ್ಟಕ್ಕೆಲ್ಲ ಕೋಟಿಗಟ್ಟಲೆ ಹಣ ಬೇಕು!

"ಪ್ರಾಯೋಗಿಕವಾಗಿ ಯೋಚಿಸಿದರೆ... ʻಶಾಂತಿ ಕ್ರಾಂತಿʼ ಸಿನಿಮಾ ನೆಗೆಟಿವ್ ಫಾರ್ಮ್ಯಾಟ್‌ನಲ್ಲಿದೆ. ಅದನ್ನು ಡಿಜಿಟಲ್‌ಗೆ ರೂಪಾಂತರ ಮಾಡಬೇಕು. ಆ ನಂತರ DI ಮಾಡಿಸಿ DPX ಫಾರ್ಮ್ಯಾಟ್‌ಗೆ ಪರಿವರ್ತಿಸಬೇಕು. ಇದು ದೃಶ್ಯಕ್ಕೆ ಸಂಬಂಧಿಸಿದ ವೆಚ್ಚ. ಇನ್ನು ಧ್ವನಿಯ ಲೆಕ್ಕಾಚಾರಕ್ಕೆ ಬಂದರೆ, ಆವತ್ತಿನ ಸಂಗೀತವೆಲ್ಲವೂ ಲೈವ್ ವಾದ್ಯಗಳ ಒರಿಜಿನಲ್ ಸಂಗೀತ. ಅದನ್ನೆಲ್ಲ ಮತ್ತೆ ರೀ-ಕ್ರಿಯೇಟ್ ಮಾಡಬೇಕು. ಆನಂತರ ಅದನ್ನು DTS, 5.1 ಅಥವಾ 7.1 ಗೆ ಕನ್ವರ್ಟ್ ಮಾಡಬೇಕು. IT ಟ್ರ್ಯಾಕ್ ಲಭ್ಯವಿಲ್ಲದಿದ್ದರೆ ಮಾತುಗಳ ಮರುಮುದ್ರಣ (ಡಬ್ಬಿಂಗ್) ಕೂಡ ಮಾಡಬೇಕಾದೀತು. ಇವೆಲ್ಲವನ್ನೂ ಮಾಡಿಸಿದರೆ ಮಾತ್ರ ಆ ಗುಣಮಟ್ಟ ಬರಲು ಸಾಧ್ಯ! ಇಷ್ಟಕ್ಕೆಲ್ಲ ಕೋಟಿಗಟ್ಟಲೆ ಹಣ ಬೇಕು"

"ಆನಂತರ UFO, Qube, UMW, K-Sera ಮುಂತಾದ ಸರ್ವಿಸ್ ಪ್ರೊವೈಡರ್‌ಗಳಿಗೆ ಅಪ್‌ಲೋಡ್ ಮಾಡಲೇಬೇಕು. ಏಕೆಂದರೆ ಇವತ್ತು ರೀಲ್ಸ್/ನೆಗೆಟಿವ್‌ನಿಂದ ಪ್ರದರ್ಶಿಸುವ ಪ್ರೊಜೆಕ್ಟರ್ ಅಥವಾ ಚಿತ್ರಮಂದಿರಗಳಿಲ್ಲ. ಆನಂತರ ಪತ್ರಿಕೆಗಳಲ್ಲಿ ಜಾಹೀರಾತು, ಭಿತ್ತಿಪತ್ರಗಳು (ಪೋಸ್ಟರ್‌ಗಳು), ಬ್ಯಾನರ್‌ಗಳಿಗೆ ಹಣ ಹೂಡಬೇಕು. ಥಿಯೇಟರ್/ಪರದೆ ಸೆಟಪ್ ಮಾಡಬೇಕು. ಸರ್ವಿಸ್ ಪ್ರೊವೈಡರ್‌ಗಳಿಗೆ ವಾರಕ್ಕೆ/28 ಪ್ರದರ್ಶನಗಳಿಗೆ/7 ಪ್ರದರ್ಶನಗಳಿಗೆ ಶುಲ್ಕ ಪಾವತಿಸಬೇಕು. 1 ವಾರಕ್ಕೆ ಕನಿಷ್ಠ 100 ಪರದೆ/ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿಸಲು ಈ ಲೆಕ್ಕಾಚಾರದಲ್ಲಿ ಲಕ್ಷಗಟ್ಟಲೆ ಹಣ ಬೇಕೇಬೇಕು"

ಪ್ರದರ್ಶಕರು ಬಾಡಿಗೆ ಕೇಳ್ತಾರೆ

"ಇನ್ನು ಪ್ರದರ್ಶನದ ವಿಷಯಕ್ಕೆ ಬಂದರೆ, ಪ್ರದರ್ಶಕರು ಬಾಡಿಗೆ ಅಥವಾ ಶೇಕಡಾವಾರು ಹಂಚಿಕೆಯ ಆಧಾರದ ಮೇಲೆ ಪ್ರದರ್ಶಿಸುತ್ತಾರೆ. ಬಾಡಿಗೆ ಲೆಕ್ಕಕ್ಕೆ ಹೋದರೂ ನೂರು ಚಿತ್ರಮಂದಿರಗಳಿಗೆ ಹತ್ತಿರ ಹತ್ತಿರ ಎರಡು ಕೋಟಿ ರೂಪಾಯಿ ಬೇಕು. ಶೇಕಡಾವಾರು ಹಂಚಿಕೆ ವ್ಯವಸ್ಥೆಗೆ ಹೋದರೆ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ಹತ್ತಿರ ಹತ್ತಿರ ಎರಡು ಕೋಟಿ ಖರ್ಚಾಗುತ್ತದೆ ಎಂದುಕೊಳ್ಳಿ, ಆ ಲೆಕ್ಕದಲ್ಲಿ ಒಂದು ವಾರಕ್ಕೆ ನಾಲ್ಕು ಕೋಟಿ ಗಳಿಸಿದರೆ ಪ್ರದರ್ಶಕರ ಪಾಲು (ಶೇರ್) ಕಳೆದು ಮೂಲ ಬಂಡವಾಳ ವಾಪಸ್ ಬರಬಹುದು. ಆನಂತರದ್ದು ಲಾಭ"

'ಶಾಂತಿ ಕ್ರಾಂತಿ' ಹಾಡಿನ ಶೂಟಿಂಗ್‌ಗಾಗಿ ಎಂ.ಜಿ. ರೋಡ್‌ ಒದ್ದೆ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ರವಿಚಂದ್ರನ್;‌ 1 ದಿನದ ಚಿತ್ರೀಕರಣಕ್ಕೆ ಎಷ್ಟು ದುಡ್ಡು ಬೇಕಾಗುತ್ತಿತ್ತು?

ಚಿತ್ರಮಂದಿರ ತುಂಬದಿದ್ದರೆ ಬಂಡವಾಳ ಹಿಂತಿರುಗುವುದು ಕಷ್ಟ

"ಈ ರೀ-ರಿಲೀಸ್‌ಗಳು ಒಂದು ದಿನಕ್ಕೆ ಅಬ್ಬರಿಸಿ ಎರಡನೇ ದಿನಕ್ಕೆ ಚಿತ್ರಮಂದಿರ ತುಂಬದಿದ್ದರೆ ಬಂಡವಾಳ ಹಿಂತಿರುಗುವುದು ಕಷ್ಟ ಮತ್ತು ನಷ್ಟ ಖಂಡಿತ! ಹಾಗೆಯೇ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರಿಂದ ಸಿನಿಮಾಗೆ ಪ್ರಚಾರ ಸಿಗುತ್ತದೆ ನಿಜ, ಆದರೆ ಆ ವೀಕ್ಷಕರೆಲ್ಲರೂ ಚಿತ್ರಮಂದಿರದ ಪ್ರೇಕ್ಷಕರಾಗಿ ಟಿಕೆಟ್ ಕೊಳ್ಳುವ ಗ್ರಾಹಕರಾಗಿ ಬದಲಾಗುವುದೇ ಇಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಶಾಂತಿ ಕ್ರಾಂತಿ’ ರೀ-ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆ ಸುದ್ದಿಯನ್ನು ಯಾರು ಹರಿಬಿಟ್ಟರೋ ತಿಳಿಯದು! ಯೂಟ್ಯೂಬ್‌ನಲ್ಲಿರುವ ‘ಶಾಂತಿ ಕ್ರಾಂತಿ’ ಸಿನಿಮಾ ಬರೀ ಮೂರೇ ದಿನಗಳಲ್ಲಿ ಇಲ್ಲಿಯವರೆಗೆ ಬಂದಿದ್ದ ವೀಕ್ಷಣೆಗಿಂತ (Views) ದುಪ್ಪಟ್ಟು ವೀಕ್ಷಣೆ ಕಂಡಿದೆ. ಯಥಾಪ್ರಕಾರ ಹಿಂದೆಮುಂದೆ ಯೋಚಿಸದ ‘ಶೇರ್ King’ಗಳು ಅದನ್ನು ಶೇರ್ ಮಾಡುತ್ತಲೇ ಇದ್ದಾರೆ"

- ಹೀಗೆ ರವೀಂದ್ರ ವೆಂಶಿ ಅವರು ಅತ್ಯಂತ ಪ್ರ್ಯಾಕ್ಟಿಕಲ್ ಆಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ರವಿಚಂದ್ರನ್‌ ಏನು ಹೇಳಿದರು ಎಂಬುದನ್ನು ಕೂಡ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ರವಿಚಂದ್ರನ್ ಮನಸ್ಸು ಬದಲಾಗುತ್ತಾ?

ಅಂದು ಬಿಡುಗಡೆಯಾದ ಸಮಯದಲ್ಲಿ ದೊಡ್ಡ ಮಟ್ಟದ ಪ್ರಯೋಗವೆನಿಸಿದ್ದ 'ಶಾಂತಿ ಕ್ರಾಂತಿ' ಇಂದಿನ ತಂತ್ರಜ್ಞಾನದ ಯುಗಕ್ಕೆ ಮತ್ತು ಇಂದಿನ ಪ್ರೇಕ್ಷಕರಿಗೆ ಹೇಗೆ ತಲುಪಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಅಭಿಮಾನಿಗಳ ತೀವ್ರ ಒತ್ತಾಯ ಕಂಡು 'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರು 'ಶಾಂತಿ ಕ್ರಾಂತಿ' ರೀ-ರಿಲೀಸ್‌ಗೆ ಮನಸ್ಸು ಬದಲಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.