ಪ್ಲಾಸ್ಟಿಕ್, ಬಟ್ಟೆ, 7,000 ಟನ್ ಕಸ; ಕನ್ವರ್ ಯಾತ್ರೆ ಮುಗಿದ ಬೆನ್ನಲೇ ಹರಿದ್ವಾರದಲ್ಲಿ ತ್ಯಾಜ್ಯ ರಾಶಿ: ಗಂಗಾ ನದಿ ಮತ್ತೆ ಕಲುಷಿತ
Kanwar Yatra: ಶ್ರಾವಣ ಮಾಸದ ಪವಿತ್ರ ಕನ್ವರ್ ಯಾತ್ರೆ ಮುಕ್ತಾಯಗೊಂಡ ಬೆನ್ನಲ್ಲೇ ಉತ್ತರಾಖಂಡದ ಪವಿತ್ರ ಕ್ಷೇತ್ರ ಹರಿದ್ವಾರ ಹಾಗೂ ಪರಿಸರ ಸೂಕ್ಷ್ಮ ಪ್ರದೇಶ ಗಂಗೋತ್ರಿದಲ್ಲಿ ಕಸದ ರಾಶಿಯೇ ಕಂಡು ಬಂದಿದೆ. ದೇವಭೂಮಿಯಲ್ಲಿ ತ್ಯಾಜ್ಯದ ಬೆಟ್ಟಗಳೇ ಸೃಷ್ಟಿಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹರಿದ್ವಾರದಲ್ಲಿನ ಕಸದ ರಾಶಿ -
ಡೆಹ್ರಾಡೂನ್, ಆ. 12: ಶ್ರಾವಣ ಮಾಸದ ಪವಿತ್ರ ಕನ್ವರ್ ಯಾತ್ರೆ (Kanwar Yatra) ಮುಕ್ತಾಯಗೊಂಡ ಬೆನ್ನಲ್ಲೇ ಉತ್ತರಾಖಂಡದ ಪವಿತ್ರ ಕ್ಷೇತ್ರ ಹರಿದ್ವಾರ ಹಾಗೂ ಪರಿಸರ ಸೂಕ್ಷ್ಮ ಪ್ರದೇಶ ಗಂಗೋತ್ರಿದಲ್ಲಿ ಕಸದ ರಾಶಿಯೇ ಕಂಡು ಬಂದಿದ್ದು, ತೀವ್ರ ಮಾಲಿನ್ಯಕ್ಕೆ ತುತ್ತಾಗಿದೆ. ಗಂಗಾಜಲ ಸಂಗ್ರಹಿಸಲು ಆಗಮಿಸಿದ್ದ ಲಕ್ಷಾಂತರ ಭಕ್ತರು ಹಿಂತಿರುಗಿದ ನಂತರ, ದೇವಭೂಮಿಯಲ್ಲಿ ತ್ಯಾಜ್ಯದ ಬೆಟ್ಟಗಳೇ ಸೃಷ್ಟಿಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪವಿತ್ರ ಭೂಮಿಯನ್ನು ಅಪವಿತ್ರಗೊಳಿಸಿದವರ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ.
ಈ ಬಾರಿಯ ಶ್ರಾವಣದಲ್ಲಿ ಸುಮಾರು 5 ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ಹೀಗೆ ಬಂದ ಯಾತ್ರಿಕರು ನಿರ್ಮಲ ಗಂಗಾ ತೀರದಲ್ಲಿ ಚಾಪೆಗಳು, ಹಳೆಯ ಬಟ್ಟೆಗಳು, ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತು ಕಾವಡ್ ಚೌಕಟ್ಟುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗಿದ್ದಾರೆ. ಇದರಿಂದ ಸಾಕಷ್ಟು ಪ್ರಮಾಣದ ತ್ಯಾಜ್ಯ ರಾಶಿ ಕಂಡು ಬಂದಿದೆ.
ಹರಿದ್ವಾರದಲ್ಲಿ ಕಸದ ರಾಶಿ:
Kanwar Yatra concludes in Haridwar...
— D (@Deb_livnletliv) August 12, 2026
Millions of devotees of Lord Shiva, Kanwariya's attain salvation leaving behind 7,000 metric tonnes of garbage, undergarments, bottles filled with Urine across Ganga ghat and Har Ki Pauri.
Har Har Mahadev 𓉸𓆗🔱 pic.twitter.com/Nw8001IY3T
ಹರ್ ಕಿ ಪೌರಿಯಲ್ಲಿ ಅಸಹ್ಯದ ಸ್ಥಿತಿ
ಹರಿದ್ವಾರದ ಅತ್ಯಂತ ಪ್ರಸಿದ್ಧ ಹರ್ ಕಿ ಪೌರಿ ಘಾಟ್ ಸೇರಿ ನೂರಕ್ಕೂ ಹೆಚ್ಚು ಘಾಟ್‌ಗಳು ಸಂಪೂರ್ಣ ಕಸದಿಂದ ತುಂಬಿ ಹೋಗಿವೆ. ಮಹಿಳೆಯರ ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ ಮೂತ್ರ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ಭಕ್ತರು ಹಾಗೆಯೇ ಬಿಟ್ಟು ಹೋಗಿದ್ದಾರೆ. ಯಾವುದೇ ಗ್ಲೌಸ್ ಅಥವಾ ಮಾಸ್ಕ್ ಧರಿಸದ ಪೌರಕಾರ್ಮಿಕರು ಬಾಟಲಿಗಳನ್ನು ತೆರವುಗೊಳಿಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ.
ನೂರಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಬಂದು ಗಂಗೆಯನ್ನು ಪೂಜಿಸುವ ಭಕ್ತರೇ, ಅದೇ ಪವಿತ್ರ ನದಿಯ ದಡವನ್ನು ಈ ರೀತಿ ಗಲೀಜು ಮಾಡಿರುವುದು ವಿಪರ್ಯಾಸ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ವ್ಯಕ್ತಿಯ ಅಂತಿಮ ಯಾತ್ರೆಗೆ ದಾರಿ ಬಿಟ್ಟುಕೊಟ್ಟ ಕನ್ವರ್ ಯಾತ್ರಿಕರು
7,000 ಟನ್ ತ್ಯಾಜ್ಯ ಸಂಗ್ರಹ
ಹರಿದ್ವಾರ ಪಾಲಿಕೆ ಆಯುಕ್ತ ನಂದನ್ ಕುಮಾರ್ ಮಾತನಾಡಿ, ʼʼಶ್ರಾವಣ ಶಿವರಾತ್ರಿಯ (ಆಗಸ್ಟ್ 11) ನಂತರ ಪಾಲಿಕೆಯ ಎಲ್ಲ ಸಿಬ್ಬಂದಿ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಘಾಟ್‌ಗಳು, ಪಾರ್ಕಿಂಗ್ ಪ್ರದೇಶಗಳು ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಇದುವರೆಗೆ ಡಂಪಿಂಗ್ ಯಾರ್ಡ್‌ಗಳಿಗೆ ಬರೋಬ್ಬರಿ 7,000 ಟನ್ ತ್ಯಾಜ್ಯವನ್ನು ಸಾಗಿಸಲಾಗಿದ್ದು, ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸಿದೆʼʼ ಎಂದು ತಿಳಿಸಿದರು.
ಹಿಮಾಲಯದ ಸೂಕ್ಷ್ಮ ಪರಿಸರಕ್ಕೂ ಧಕ್ಕೆ
ಹರಿದ್ವಾರ-ಋಷಿಕೇಶ ಮಾತ್ರವಲ್ಲದೆ, ಗಂಗೆಯ ಉಗಮಸ್ಥಾನವಾದ ಗಂಗೋತ್ರಿಗೆ ಈ ಬಾರಿ ಸುಮಾರು 57,000 ಯಾತ್ರಿಕರು ತೆರಳಿದ್ದರು. ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿತವಾಗಿರುವ ಗಂಗೋತ್ರಿಯಲ್ಲೂ ಯಾತ್ರಿಕರು ಬಟ್ಟೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಹೋಗಿದ್ದಾರೆ.
ಅತ್ಯಂತ ಸೂಕ್ಷ್ಮ ಹಿಮಾಲಯದ ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯತೆಗೆ ಈ ಮಾಲಿನ್ಯ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಪರಿಸರ ನಿಯಮಗಳ ಉಲ್ಲಂಘನೆಯ ಜತೆಗೆ ಧಾರ್ಮಿಕ ಕ್ಷೇತ್ರದ ಪವಿತ್ರತೆಗೂ ಧಕ್ಕೆ ಉಂಟಾಗಿದೆ. ಯಾತ್ರೆ ಮುಕ್ತಾಯದ ನಂತರ ಅರಣ್ಯ ಇಲಾಖೆ ನಡೆಸಿದ ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ ಗಂಗೋತ್ರಿಯಿಂದ ಬರೋಬ್ಬರಿ 57 ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ.