ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Renu Desai : ಕಷ್ಟದಲ್ಲಿರುವವರನ್ನು ಮತ್ತಷ್ಟು ನೋಯಿಸಬೇಡಿ; ಪವನ್ ಕಲ್ಯಾಣ್ ವಿಚ್ಛೇದನದ ಬೆನ್ನಲ್ಲೇ ಮಾಜಿ ಪತ್ನಿ ರೇಣು ದೇಸಾಯಿ ಪೋಸ್ಟ್

ತೆಲುಗು ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಹಾನುಭೂತಿ, ಮಾನವೀಯತೆ ಮತ್ತು ದಯೆಯ ಮಹತ್ವವನ್ನು ಸಾರುವ ಸಂದೇಶವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪವನ್ ಕಲ್ಯಾಣ್ ವಿಚ್ಛೇದನ ಬೆನ್ನಲ್ಲೇ ಮಾಜಿ ಪತ್ನಿ ಪೋಸ್ಟ್ ವೈರಲ್‌

ರೇನು ದೇಸಾಯಿ -

Yashaswi Devadiga
Yashaswi Devadiga Nov 11, 2026 9:00 AM

ತೆಲುಗು ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan kalyan) ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ ( Renu Desai) ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ಚರ್ಚಗೆ ಗ್ರಾಸವಾಗಿದೆ. ಸಹಾನುಭೂತಿ, ಮಾನವೀಯತೆ ಮತ್ತು ದಯೆಯ ಮಹತ್ವವನ್ನು ಸಾರುವ ಸಂದೇಶವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದಿದ್ದರೂ, ಪವನ್ ಕಲ್ಯಾಣ್ ಅವರು ತಮ್ಮ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರಿಂದ ದೂರವಾಗುತ್ತಿರುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ರೇಣು ಈ ಸಂದೇಶ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ.

“ಕಷ್ಟದಲ್ಲಿರುವವರನ್ನು ಮತ್ತಷ್ಟು ಟೀಕಿಸುವುದು ಸರಿಯಲ್ಲ”

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೋಟೋಗಳೊಂದಿಗೆ ಸಂದೇಶ ಹಂಚಿಕೊಂಡಿರುವ ರೇಣು ದೇಸಾಯಿ, ಈಗಾಗಲೇ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಮತ್ತಷ್ಟು ಟೀಕಿಸುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 13: ‘ಬಿಗ್‌ ಬಾಸ್‌’ ಗಾನವಿ ಗೌಡ ಫ್ಯಾಮಿಲಿ ವಿಚಾರ ರಿವೀಲ್‌ ಮಾಡಿದ ಕಿಚ್ಚ!

“ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಮತ್ತಷ್ಟು ಟೀಕಿಸುವುದು ನೈತಿಕವಾಗಿ ಸರಿಯಲ್ಲ. ನೆಲಕ್ಕೆ ಬಿದ್ದವರನ್ನು ಮತ್ತಷ್ಟು ತುಳಿಯುವುದು ಅಮಾನವೀಯ. ಅವರ ಸ್ಥಾನಮಾನ ಏನೇ ಇರಲಿ, ಅವರೂ ಮನುಷ್ಯರು ಎಂಬುದನ್ನು ನಾವು ಮರೆಯಬಾರದು. ಅವರು ಯಾರದೋ ಮಗುವಾಗಿರಬಹುದು, ಪೋಷಕರಾಗಿರಬಹುದು ಅಥವಾ ಸಹೋದರ-ಸಹೋದರಿಯಾಗಿರಬಹುದು” ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, “ನಾವು ಕೂಡ ಪರಿಪೂರ್ಣರಲ್ಲದ ಗಾಜಿನ ಮನೆಗಳಲ್ಲಿ ವಾಸಿಸುತ್ತಿರುವಾಗ ಬೇರೆಯವರ ಮನೆಗಳ ಮೇಲೆ ಕಲ್ಲು ಎಸೆಯಬಾರದು. ನಾವೆಲ್ಲರೂ ಮನುಷ್ಯರು. ಮಾನವೀಯತೆ ಮತ್ತು ಸಹಾನುಭೂತಿ ಎಂಬುದು ಒಬ್ಬ ವ್ಯಕ್ತಿಯನ್ನು ನಿಜವಾದ ಮನುಷ್ಯನನ್ನಾಗಿ ಮಾಡುವ ಮೂಲಭೂತ ಗುಣಗಳು” ಎಂದು ಹೇಳಿದ್ದಾರೆ.

“ಒಳ್ಳೆಯವರಾಗಿರಲು ನನಗೆ ಯಾರೂ ಹಣ ನೀಡಿಲ್ಲ!”

ತಮ್ಮ ಪೋಸ್ಟ್‌ಗೆ ಅನಗತ್ಯವಾಗಿ ಬೇರೆ ಅರ್ಥ ಕಲ್ಪಿಸಬಾರದು ಎಂದು ರೇಣು ಸ್ಪಷ್ಟಪಡಿಸಿದ್ದಾರೆ.

“ನಾನು ಈ ಮಾತುಗಳನ್ನು ಬರೆದಿದ್ದೇನೆ ಎಂಬ ಕಾರಣಕ್ಕೆ ದಯವಿಟ್ಟು ಅನಗತ್ಯ ಊಹಾಪೋಹಗಳನ್ನು ಮಾಡಬೇಡಿ. ಸಮಾಜವಾಗಿ ನಾವು ಇನ್ನಷ್ಟು ಉತ್ತಮವಾಗಬಹುದು ಎಂಬ ಪ್ರಾಮಾಣಿಕ ನಂಬಿಕೆಯಿಂದಲೇ ಈ ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಳ್ಳೆಯತನ ಮತ್ತು ವಿವೇಕದಿಂದ ಮಾತನಾಡಲು ನನಗೆ ಯಾರೂ ಪೇಟಿಎಂ ಮೂಲಕ ಹಣ ಕಳುಹಿಸಿಲ್ಲ. ನನ್ನ ಮೆದುಳಿನ ಪ್ರೀಫ್ರಂಟಲ್ ಕಾರ್ಟೆಕ್ಸ್ ಸರಿಯಾಗಿ ಕೆಲಸ ಮಾಡುತ್ತಿರುವುದರಿಂದ ಹೀಗೆ ಯೋಚಿಸುತ್ತೇನೆ” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ದಾಂಪತ್ಯಕ್ಕೆ ಅಂತ್ಯ

ನವೆಂಬರ್ 10ರಂದು ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿರುವುದಾಗಿ ಘೋಷಿಸಿದ್ದರು. ಈ ಘೋಷಣೆಯ ಬೆನ್ನಲ್ಲೇ ಅನ್ನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ದಂಪತಿ, ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

“ನಮ್ಮ ಜೀವನದ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ಬಳಿಕ, ಪರಸ್ಪರ ತಿಳಿವಳಿಕೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮಕ್ಕಳಿಗೆ ಸಮರ್ಪಿತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ, ಸಹಾನುಭೂತಿ ತೋರಿಸಬೇಕೆಂದು ಮನವಿ ಮಾಡುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಹಿಂದಿನ ವೈವಾಹಿಕ ಜೀವನ

ಪವನ್ ಕಲ್ಯಾಣ್ ಅವರು ಈ ಹಿಂದೆ ಮೂರು ಬಾರಿ ವಿವಾಹವಾಗಿದ್ದಾರೆ. 1997ರಲ್ಲಿ ನಂದಿನಿ ಅವರನ್ನು ಮೊದಲ ಬಾರಿಗೆ ವಿವಾಹವಾಗಿದ್ದರು. 1999ರಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರೂ, ಕಾನೂನುಬದ್ಧ ವಿಚ್ಛೇದನ 2008ರಲ್ಲಿ ಪೂರ್ಣಗೊಂಡಿತ್ತು. ಈ ದಾಂಪತ್ಯದಲ್ಲಿ ಅವರಿಗೆ ಮಕ್ಕಳಿರಲಿಲ್ಲ.

ನಂತರ 2000ರಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾ 'ಬದ್ರಿ' ಚಿತ್ರದ ಚಿತ್ರೀಕರಣದ ವೇಳೆ ನಟಿ ರೇಣು ದೇಸಾಯಿ ಅವರ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದು, 2009ರ ಜನವರಿಯಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಅಖಿರಾ ನಂದನ್ ಮತ್ತು ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, 2012ರಲ್ಲಿ ಇವರ ದಾಂಪತ್ಯ ಜೀವನವೂ ವಿಚ್ಛೇದನದೊಂದಿಗೆ ಅಂತ್ಯಗೊಂಡಿತ್ತು.

ಇದನ್ನೂ ಓದಿ: Bigg Boss Kannada 13: ಸೌಂದರ್ಯಾ-ಕಿರಣ್ ನಡುವೆ ನೇರ ವಾಗ್ದಾಳಿ; ಅಧ್ಯಕ್ಷ ಮಂಜು ಕಠಿಣ ನಿರ್ಧಾರ

ಇದೀಗ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯದ ಅಂತ್ಯದ ಸುದ್ದಿ ಹೊರಬಂದಿರುವ ಬೆನ್ನಲ್ಲೇ ರೇಣು ದೇಸಾಯಿ ಹಂಚಿಕೊಂಡಿರುವ ಮಾನವೀಯತೆಯ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಆದರೆ, ತಮ್ಮ ಪೋಸ್ಟ್ ಯಾರನ್ನೂ ಉದ್ದೇಶಿಸಿ ಬರೆದದ್ದಲ್ಲ ಎಂದು ರೇಣು ಸ್ಪಷ್ಟಪಡಿಸಿರುವುದನ್ನು ಗಮನಿಸಬೇಕಿದೆ.