ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Renukaswamy Case: ಖುದ್ದು ಹಾಜರಿಗೆ ಮನವಿ ಮಾಡಿದ್ದ ನಟ ದರ್ಶನ್‌ಗೆ ನಿರಾಸೆ; ಹೈಕೋರ್ಟ್ ಕೊಟ್ಟ ಪರ್ಯಾಯ ಆಯ್ಕೆಗಳೇನು?

Actor Darshan Thoogudeepa: ನಟ ದರ್ಶನ್‌ ಸಲ್ಲಿಸಿದ್ದ ಖುದ್ದು ಹಾಜರಾತಿ ಅರ್ಜಿಯನ್ನು ಹೈಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಭದ್ರತೆ ಹಾಗೂ ಜನದಟ್ಟಣೆಯ ಸವಾಲುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರತ್ಯೇಕ ಸಮಾಲೋಚನೆ ನಡೆಸಲು ಹಲವು ಪರ್ಯಾಯ ಪರಿಹಾರಗಳನ್ನು ವಕೀಲರ ಮುಂದಿಟ್ಟಿದೆ.

ನಟ ದರ್ಶನ್‌ಗೆ ಹೈಕೋರ್ಟ್ ಶಾಕ್; ಖುದ್ದು ಹಾಜರಿ ಮನವಿಗೆ ಹೇಳಿದ್ದೇನು?

-

Avinash GR
Avinash GR Sep 10, 2026 5:31 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಅನುಮತಿ ನೀಡಬೇಕೆಂದು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ನ್ಯಾಯಾಲಯಕ್ಕೆ ಕರೆತಂದು ಖುದ್ದು ಹಾಜರುಪಡಿಸುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಗೌಪ್ಯತೆ ಮತ್ತು ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ಹಲವು ಪರ್ಯಾಯ ಪರಿಹಾರ ಹಾಗೂ ಆಯ್ಕೆಗಳನ್ನು ದರ್ಶನ್ ಮತ್ತು ವಕೀಲರ ಮುಂದಿಟ್ಟಿದೆ.

ದರ್ಶನ್ ಖುದ್ದು ಹಾಜರಾತಿ ಅತ್ಯಗತ್ಯ; ವಕೀಲರ ವಾದ

ಪತ್ನಿಯ ಮೂಲಕ ದರ್ಶನ್ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಇಂದು (ಸೆಪ್ಟೆಂಬರ್ 10) ಕೈಗೆತ್ತಿಕೊಂಡಿತು. ವಿಚಾರಣೆ ವೇಳೆ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲರು, "ಪ್ರಸ್ತುತ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಯುತ್ತಿರುವುದರಿಂದ ಕಕ್ಷಿದಾರರೊಂದಿಗೆ ಮುಕ್ತವಾಗಿ ಸಮಾಲೋಚಿಸಲು ಸಾಧ್ಯವಾಗುತ್ತಿಲ್ಲ. ವಕೀಲರು ಕಕ್ಷಿದಾರರ ಜೊತೆ ಮಾತನಾಡುವುದು ಇತರ ಆರೋಪಿಗಳು ಮತ್ತು ಸಾಕ್ಷಿಗಳಿಗೂ ಕೇಳಿಬಿಡುತ್ತದೆ. ಇದರಿಂದ ಕಕ್ಷಿದಾರ ಮತ್ತು ವಕೀಲರ ನಡುವಿನ ಮಾತುಕತೆಯ ಗೌಪ್ಯತೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಕಲಾಪದ ವೇಳೆ ದರ್ಶನ್ ಖುದ್ದು ಹಾಜರಾತಿ ಅತ್ಯಗತ್ಯ" ಎಂದು ಬಲವಾಗಿ ಪ್ರತಿಪಾದಿಸಿದರು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ವಿಚಾರ: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಜನದಟ್ಟಣೆ ನಿಯಂತ್ರಿಸುವುದು ಅತ್ಯಂತ ಸವಾಲಿನ ಕೆಲಸ

ಈ ವಾದಕ್ಕೆ ಪರ್ಯಾಯ ಪರಿಹಾರ ಸೂಚಿಸಿದ ನ್ಯಾಯಮೂರ್ತಿಗಳು, "ಮಾತುಕತೆ ಇತರರಿಗೆ ಕೇಳುತ್ತದೆ ಎಂಬ ಆಕ್ಷೇಪವಿದ್ದರೆ, ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆಯಲ್ಲೇ ಪ್ರತ್ಯೇಕವಾಗಿ ಮತ್ತು ಖಾಸಗಿಯಾಗಿ ಮಾತನಾಡಲು ಅವಕಾಶ ಮಾಡಿಕೊಡುತ್ತೇವೆ. ಕೋರ್ಟ್ ಕಲಾಪ ಆರಂಭವಾಗುವುದಕ್ಕಿಂತ 15 ನಿಮಿಷ ಮುನ್ನವೇ ವಕೀಲರು ಕಕ್ಷಿದಾರರೊಂದಿಗೆ ಅಗತ್ಯ ಸಮಾಲೋಚನೆ ಮುಗಿಸಿಕೊಳ್ಳಬಹುದು. ದರ್ಶನ್ ಅವರನ್ನು ನ್ಯಾಯಾಲಯದ ಆವರಣಕ್ಕೆ ಕರೆತರಬೇಕೆಂದರೆ ಭಾರೀ ಪೊಲೀಸ್ ಭದ್ರತೆ ಒದಗಿಸಬೇಕಾಗುತ್ತದೆ ಮತ್ತು ಜನದಟ್ಟಣೆ ನಿಯಂತ್ರಿಸುವುದು ಅತ್ಯಂತ ಸವಾಲಿನ ಕೆಲಸ. ಖಾಸಗಿತನ ಕಾಯ್ದುಕೊಳ್ಳಲು ಹೆಡ್‌ಫೋನ್ ವ್ಯವಸ್ಥೆ ಅಥವಾ ಪ್ರತ್ಯೇಕ ಲ್ಯಾಪ್‌ಟಾಪ್ ಕಲ್ಪಿಸಬಹುದು ಹಾಗೂ ಮರುದಿನದ ಸಾಕ್ಷಿಗಳ ವಿಚಾರಣೆ ಕುರಿತು ಹಿಂದಿನ ದಿನವೇ ಚರ್ಚಿಸಲು ಅನುಮತಿ ನೀಡಬಹುದು" ಎಂದು ತಿಳಿಸಿದರು.

ಜಯಲಲಿತಾ ಪ್ರಕರಣ ಉಲ್ಲೇಖ

ತಂತ್ರಜ್ಞಾನದ ಮಹತ್ವವನ್ನು ವಿವರಿಸಿದ ನ್ಯಾಯಮೂರ್ತಿಗಳು, "ನಮ್ಮ ತಂದೆಗೆ 91 ವರ್ಷ ವಯಸ್ಸಾಗಿದೆ, ಅವರೇ ಸ್ಕೈಪ್, ಜೂಮ್, ಗೂಗಲ್ ಮೀಟ್‌ನಂತಹ ತಂತ್ರಜ್ಞಾನಗಳನ್ನು ಸುಲಭವಾಗಿ ಬಳಸುತ್ತಾರೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಮನೆಯಲ್ಲೇ ಕುಳಿತು ಬ್ಯಾಂಕ್ ವ್ಯವಹಾರಗಳನ್ನೂ ಪೂರ್ಣಗೊಳಿಸಬಹುದು" ಎಂದು ಉಲ್ಲೇಖಿಸಿದರು.

ಅಷ್ಟಾಗಿಯೂ ಖುದ್ದು ಹಾಜರಾತಿಯೇ ಬೇಕೆಂಬ ಹಠವಿದ್ದರೆ, ಪರಪ್ಪನ ಅಗ್ರಹಾರ ಜೈಲು ಆವರಣದಲ್ಲೇ ನ್ಯಾಯಾಲಯ ಪ್ರಕ್ರಿಯೆ ನಡೆಸಿ ಅಲ್ಲೇ ವಿಚಾರಣೆಗೆ ವ್ಯವಸ್ಥೆ ಕಲ್ಪಿಸಬಹುದು ಎಂದು ಪೀಠ ಸಲಹೆ ನೀಡಿತು. ಹಿಂದೆ ಜಯಲಲಿತಾ ಪ್ರಕರಣದ ವಿಚಾರಣೆ ನಡೆದಿದ್ದ ಜೈಲು ಸಂಕೀರ್ಣದಲ್ಲೇ ವಿಚಾರಣೆ ನಡೆಸಬಹುದು, ಅಲ್ಲಿ ಸಂಬಂಧಪಟ್ಟವರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದೂ ತಿಳಿಸಿತು.

ವಿಚಾರಣೆ ಮುಂದೂಡಿಕೆ

ಆದರೆ, ಜೈಲಿನಲ್ಲೇ ಕಲಾಪ ನಡೆಸುವ ಸಲಹೆಗೆ ದರ್ಶನ್ ಪರ ವಕೀಲರು ಹಾಗೂ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿ, ಇದರಿಂದ ಎರಡೂ ಕಡೆಯವರಿಗೂ ತೊಂದರೆಯಾಗುತ್ತದೆ ಎಂದರು. ಅಂತಿಮವಾಗಿ ನ್ಯಾಯಾಲಯಕ್ಕೆ ದರ್ಶನ್ ಅವರನ್ನು ಖುದ್ದು ಹಾಜರುಪಡಿಸುವುದನ್ನು ನಿರಾಕರಿಸಿದ ನ್ಯಾಯಪೀಠ, ನೀಡಿರುವ ಪರ್ಯಾಯ ಆಯ್ಕೆಗಳ ಕುರಿತು ಎರಡೂ ಕಡೆಯ ವಕೀಲರು ಪರಸ್ಪರ ಸಮಾಲೋಚಿಸಿ ನಿರ್ಧಾರಕ್ಕೆ ಬರುವಂತೆ ನಿರ್ದೇಶನ ನೀಡಿತು. ಸೆಪ್ಟೆಂಬರ್ 16ರೊಳಗೆ ತಮ್ಮ ಅಂತಿಮ ಅಭಿಪ್ರಾಯ ತಿಳಿಸುವಂತೆ ಸೂಚಿಸಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.