ಯಶ್ ನಟನೆಯ ʻಟಾಕ್ಸಿಕ್ʼ ಇಂಗ್ಲಿಷ್ ವರ್ಷನ್ ರಿಲೀಸ್‌ಗೆ ಕೂಡಿಬಂತು ಮೂಹೂರ್ತ; ರನ್‌ಟೈಮ್‌ನಲ್ಲಿ 17 ನಿಮಿಷ ಕಟ್ ಮಾಡಿದ್ದೇಕೆ?
Yash: ʻಟಾಕ್ಸಿಕ್ʼ ಸಿನಿಮಾದ ಇಂಗ್ಲಿಷ್ ವರ್ಷನ್ ಅನ್ನು ಭಾರತದ ಆಯ್ದ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 4 ರಂದು ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಜಾಗತಿಕ ವೀಕ್ಷಕರ ಅಭಿರುಚಿಗೆ ತಕ್ಕಂತೆ ಭಾರತೀಯ ಆವೃತ್ತಿಗಿಂತ 17 ನಿಮಿಷಗಳನ್ನು ಕತ್ತರಿಸಿ 2 ಗಂಟೆ 57 ನಿಮಿಷಗಳಿಗೆ ಸಿನಿಮಾದ ಅವಧಿಯನ್ನು ಇಳಿಸಲಾಗಿದೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಇಂಗ್ಲಿಷ್ ಆವೃತ್ತಿಯು ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆಗಸ್ಟ್ 26ರಂದು ಕನ್ನಡ, ಹಿಂದಿ ಸೇರಿದಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಚಿತ್ರ ವಿಶ್ವಾದ್ಯಂತ ತೆರೆಕಂಡಿತ್ತಾದರೂ, ಇಂಗ್ಲಿಷ್ ವರ್ಷನ್ ಭಾರತದಲ್ಲಿ ಬಿಡುಗಡೆಯಾಗಿರಲಿಲ್ಲ. ಇದೀಗ ಸೆಪ್ಟೆಂಬರ್ 4 ರಿಂದ ಭಾರತದ ಆಯ್ದ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಇಂಗ್ಲಿಷ್ ಆವೃತ್ತಿಯನ್ನು ಪ್ರದರ್ಶಿಸಲು ಚಿತ್ರತಂಡ ಮುಹೂರ್ತ ನಿಗದಿಪಡಿಸಿದೆ.
ರನ್‌ಟೈಮ್‌ನಲ್ಲಿ ಕತ್ತರಿ
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡ ಈ ಸಿನಿಮಾದ ಇಂಗ್ಲಿಷ್ ಆವೃತ್ತಿಯು ಭಾರತೀಯ ಭಾಷೆಗಳ ಆವೃತ್ತಿಗಿಂತ ಸುಮಾರು 17 ನಿಮಿಷಗಳಷ್ಟು ಕಡಿಮೆ ರನ್‌ಟೈಮ್ ಹೊಂದಿರಲಿದೆ. ಮೂಲ ಆವೃತ್ತಿಗೆ ಹೋಲಿಸಿದರೆ ಕತ್ತರಿ ಪ್ರಯೋಗಗೊಂಡಿರುವ ಇಂಗ್ಲಿಷ್ ಆವೃತ್ತಿಯು 2 ಗಂಟೆ 57 ನಿಮಿಷಗಳ ಅವಧಿಯನ್ನು ಒಳಗೊಂಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ವಿದೇಶಗಳಲ್ಲಿ ಈ ಇಂಗ್ಲಿಷ್ ಆವೃತ್ತಿ ಆಗಸ್ಟ್ 26 ರಂದೇ ಬಿಡುಗಡೆಯಾಗಿತ್ತು.
ಈ ಕುರಿತು ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, "ಟಾಕ್ಸಿಕ್ ಚಿತ್ರವನ್ನು ಮೂಲತಃ ಬರೆದು ಚಿತ್ರೀಕರಿಸಿದ ಭಾಷೆಗಳಲ್ಲಿ ಇಂಗ್ಲಿಷ್ ಕೂಡ ಒಂದು. ಇದು ಭಾರತೀಯ ಆವೃತ್ತಿಗಿಂತ ಕಡಿಮೆ ಅವಧಿಯನ್ನು ಹೊಂದಿದ್ದು, ಸೆಪ್ಟೆಂಬರ್ 4ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ" ಎಂದು ಸ್ಪಷ್ಟಪಡಿಸಿದೆ.
ಚಿತ್ರತಂಡದ ಈ ಟ್ರಿಕ್ ವರ್ಕ್ ಆಗಬಹುದೇ?
ಗ್ಲೋಬಲ್ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ವೇಗವಾದ ನಿರೂಪಣೆ ನೀಡುವ ಉದ್ದೇಶದಿಂದ ‘ತಬಾಹಿ’ ಹಾಗೂ ‘ಮಧೋಶ್’ ಸೇರಿದಂತೆ ಕೆಲವು ಹಾಡುಗಳು ಮತ್ತು ಕೆಲವು ದೃಶ್ಯಗಳನ್ನು ಕತ್ತರಿಸಿರಬಹುದು ಎನ್ನಲಾಗಿದೆ. 17 ನಿಮಿಷಗಳು ಕಟ್ ಆಗಿರುವುದರಿಂದ, ಸಿನಿಮಾವು ಕೊಂಚ ಟ್ರಿಮ್ ಆಗಿ ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡುವ ಸಾಧ್ಯತೆ ಎಂಬುದು ಚಿತ್ರತಂಡದ ವಿಶ್ವಾಸ. ಮೊದಲ ದಿನದಿಂದಲೇ ಮಿಶ್ರ ಪ್ರತಿಕ್ರಿಯೆ ಎದುರಿಸಿ ಗಲ್ಲಾಪೆಟ್ಟಿಗೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಕಾರಣ, ಕಾಂಪ್ಯಾಕ್ಟ್ ರನ್‌ಟೈಮ್ ಮೂಲಕ ಮೆಟ್ರೋ ನಗರಗಳ ಇಂಗ್ಲಿಷ್ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಈ ತಂತ್ರ ರೂಪಿಸಿದೆ.
Actor Yash: ಯಶ್ ಅದ್ಭುತ ಕಲಾವಿದ; 'ಟಾಕ್ಸಿಕ್' ಆ್ಯಕ್ಷನ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ ಮೆಚ್ಚುಗೆ
1.39 ಲಕ್ಷ ಪ್ರದರ್ಶನಗಳು
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಸಿನಿಮಾ ವಿಮರ್ಶೆಗಳಲ್ಲಿ ಹಿನ್ನಡೆ ಕಂಡರೂ, ತನ್ನ ಮೊದಲ 8 ದಿನಗಳಲ್ಲಿ ವಿಶ್ವಾದ್ಯಂತ 322 ಕೋಟಿ ರೂ. ಮೊತ್ತ ಗಳಿಸಿದೆ. ಭಾರತದಲ್ಲೇ ಸುಮಾರು 1.39 ಲಕ್ಷ ಪ್ರದರ್ಶನಗಳಿಂದ 234.70 ಕೋಟಿ ನಿವ್ವಳ ಗಳಿಕೆ ದಾಖಲಿಸಿದೆ. ಇದೀಗ ಬಿಡುಗಡೆಯಾಗುತ್ತಿರುವ ಇಂಗ್ಲಿಷ್ ಆವೃತ್ತಿಯು ಭಾರತದಲ್ಲಿ ಚಿತ್ರದ ಕಲೆಕ್ಷನ್‌ಗೆ ಹೊಸ ಚೈತನ್ಯ ನೀಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.