ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಲ್ಮಾನ್ ಖಾನ್ ನಟನೆಯ 'ಮಾತೃಭೂಮಿ' ಸಿನಿಮಾ ಈ ವರ್ಷ ರಿಲೀಸ್‌ ಆಗಲ್ಲ! ಕಾರಣ ಇಲ್ಲಿದೆ

ಬಾಲಿವುಡ್ ನಟ ಸಲ್ಮಾನ್ ಖಾನ್, ಚಿತ್ರಾಂಗದಾ ಸಿಂಗ್ ಅಭಿನಯದ ‘ಮಾತೃಭೂಮಿ’ ಸಿನಿಮಾ ಈ ವರ್ಷ ಬಿಡುಗಡೆಯಾಗುವುದು ಅನುಮಾನವಾಗಿದೆ. ಚೀನಾ ಕುರಿತಾದ ಕೆಲವು ಸೂಕ್ಷ್ಮ ದೃಶ್ಯಗಳ ಉಲ್ಲೇಖಕ್ಕೆ ಭಾರತೀಯ ರಕ್ಷಣಾ ಸಚಿವಾಲಯವು ತೀವ್ರ ಆಕ್ಷೇಪಣೆ ಎತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

Salman Khan: ‘ಮಾತೃಭೂಮಿ’ ಚಿತ್ರವು ಈ ವರ್ಷ ರಿಲೀಸ್ ಆಗೋದು ಡೌಟ್!

-

Avinash GR
Avinash GR Jul 13, 2026 7:54 PM

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಾತೃಭೂಮಿ’ ಈ ವರ್ಷ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ. ಅಪೂರ್ವ ಲಖಿಯಾ ನಿರ್ದೇಶನದ ಈ ಸಿನಿಮಾ ಈಗಾಗಲೇ ತನ್ನ ಶೀರ್ಷಿಕೆ ಬದಲಾವಣೆ ಮತ್ತು ಬಿಡುಗಡೆಯ ಗೊಂದಲದಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿದೆ.

ರಕ್ಷಣಾ ಸಚಿವಾಲಯದಿಂದ ಆಕ್ಷೇಪಣೆ

ವರದಿಗಳ ಪ್ರಕಾರ, ಚಿತ್ರದ ಕೆಲವು ಭಾಗಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಚೀನಾ ಕುರಿತಾದ ಉಲ್ಲೇಖಗಳ ಬಗ್ಗೆ ರಕ್ಷಣಾ ಸಚಿವಾಲಯವು ಕೆಲವು ಆಕ್ಷೇಪಣೆಗಳನ್ನು ಎತ್ತಿದೆ. ಸದ್ಯ ಚಿತ್ರತಂಡವು ಈ ಆಕ್ಷೇಪಣೆಗಳನ್ನು ಬಗೆಹರಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದು, ಈ ವಿವಾದಗಳು ಇನ್ನು ಇತ್ಯರ್ಥವಾಗದ ಕಾರಣ ಸಿನಿಮಾದ ಬಿಡುಗಡೆಯು ಮುಂದಿನ ವರ್ಷಕ್ಕೆ ಮುಂದೂಡಲ್ಪಡುವ ಸಾಧ್ಯತೆಯಿದೆ ಎನ್ನಲಾಗಿದೆ. ವಿವಾದದ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಸೂಕ್ತವಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದು ಸದ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Salman Khan: ಸಲ್ಮಾನ್ ಖಾನ್ ಇನ್ನೂ ಮದುವೆಯಾಗದೇ ಇರೋದಕ್ಕೆ ಇದೇ ಕಾರಣವಂತೆ! ತಂದೆ ಸಲೀಂ ಖಾನ್ ಹೇಳಿದ್ದೇನು?

ಕ್ಲ್ಯಾಶ್ ಇಷ್ಟಪಡದ ಸಲ್ಮಾನ್ ಖಾನ್

ಮೂಲಗಳ ಪ್ರಕಾರ, "ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿದರೂ ಸಹ, ಈಗ ಒಂದು ಉತ್ತಮ ಬಿಡುಗಡೆ ದಿನಾಂಕವನ್ನು ಪಡೆಯುವುದು ಕಷ್ಟ. ಏಕೆಂದರೆ ಬಹುತೇಕ ಪ್ರಮುಖ ರಿಲೀಸ್‌ ಡೇಟ್‌ಗಳನ್ನು ಈಗಾಗಲೇ ಇತರ ಸಿನಿಮಾಗಳು ಕಾಯ್ದಿರಿಸಿವೆ. ಚಿತ್ರರಂಗದಲ್ಲಿ ಒಬ್ಬ ನಟ ಅಥವಾ ನಿರ್ದೇಶಕರು ಮತ್ತೊಂದು ಸಿನಿಮಾ ಕಾಯ್ದಿರಿಸಿದ ದಿನಾಂಕವನ್ನು ಕಿತ್ತುಕೊಳ್ಳುವುದು ಸಾಮಾನ್ಯವಾದರೂ, ಸಲ್ಮಾನ್ ಖಾನ್ ಇದಕ್ಕೆ ಅಪವಾದ. ಅವರು ತುಂಬಾ ಪ್ರಾಮಾಣಿಕರಾಗಿದ್ದು, ಅನಗತ್ಯವಾಗಿ ಮತ್ತೊಂದು ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗುವುದನ್ನು ಇಷ್ಟಪಡುವುದಿಲ್ಲ. ಒಂದು ವೇಳೆ ಅವರ ಸಿನಿಮಾ ಬರುತ್ತಿದ್ದರೆ, ಅಧಿಕೃತ ಘೋಷಣೆಗೂ ಮುನ್ನ ಎದುರಾಳಿ ಚಿತ್ರತಂಡಕ್ಕೆ ಮುಂಚಿತವಾಗಿಯೇ ಮಾಹಿತಿ ನೀಡುತ್ತಾರೆ" ಎಂದು ಚಿತ್ರರಂಗದ ಆಪ್ತ ಮೂಲಗಳು ತಿಳಿಸಿವೆ.

ದಸರಾ ಹಬ್ಬದ ಮೇಲೆ ಕಣ್ಣು?

ಮತ್ತೊಂದೆಡೆ, ಈ ವರ್ಷ ದಸರಾ ಹಬ್ಬವು ಅಕ್ಟೋಬರ್ 20ರ ಮಂಗಳವಾರದಂದು ಬರಲಿದ್ದು, ಹಬ್ಬದ ಮುಂಚಿನ ದಿನವೂ ಸುದೀರ್ಘ ರಜಾದಿನವಾಗಿರುತ್ತದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಏರಿಕೆ ಕಾಣಲು ಇದು ಸೂಕ್ತ ದಿನವಾಗಿದ್ದು, ಆಗ ರಿಲೀಸ್‌ ಆಗುವ ಚಿತ್ರಕ್ಕೆ ಐದು ದಿನಗಳ ಸುದೀರ್ಘ ವೀಕೆಂಡ್ ಲಾಭ ಸಿಗಬಹುದು. ಬಹುನಿರೀಕ್ಷಿತ ‘ರಾಮಾಯಣ’ ಚಿತ್ರವು ಅಕ್ಟೋಬರ್ 30ಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅದರ ನಂತರ ನವೆಂಬರ್ ಕೊನೆಯ ವಾರದವರೆಗೆ ಯಾವುದೇ ಪ್ರಮುಖ ಚಿತ್ರಗಳ ಬಿಡುಗಡೆ ನಿಗದಿಯಾಗಿಲ್ಲ. ಒಂದುವೇಳೆ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಆ ಸಮಯಕ್ಕೆ ‘ಮಾತೃಭೂಮಿ’ ಚಿತ್ರವನ್ನು ರಿಲೀಸ್‌ ಮಾಡಿದರೆ, ದೊಡ್ಡ ಪ್ಲಸ್‌ ಪಾಯಿಂಟ್‌ ಆಗಬಹುದು ಎಂಬ ಲೆಕ್ಕಾಚಾರವೂ ಇದೆ.

'ಬ್ಯಾಟಲ್ ಆಫ್ ಗಲ್ವಾನ್' ಟೈಟಲ್ ಬದಲಾವಣೆ

ʻಮಾತೃಭೂಮಿʼ ಚಿತ್ರಕ್ಕೆ ಆರಂಭದಲ್ಲಿ ‘ಬ್ಯಾಟಲ್ ಆಫ್ ಗಲ್ವಾನ್’ ಎಂದು ಹೆಸರಿಡಲಾಗಿತ್ತು. ನಂತರ ಅದನ್ನು ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಎಂದು ಬದಲಾಯಿಸಲಾಯಿತು. ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ಅಪೂರ್ವ ಲಖಿಯಾ, "ಶೀರ್ಷಿಕೆ ಬದಲಾವಣೆಯು ಕ್ರಿಯೇಟಿವ್ ಪ್ರಕ್ರಿಯೆಯ ಒಂದು ಭಾಗವೇ ಹೊರತು ಕೊನೆಯ ಕ್ಷಣದ ನಿರ್ಧಾರವಲ್ಲ" ಎಂದು ಸ್ಪಷ್ಟಪಡಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿ ಚಿತ್ರಾಂಗದಾ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.